ಹೈಕಮೀಷನರ್ ಪೆರಿಯಸಾಮಿ ಕುಮಾರನ್ ಬಳಿ ಜೈವಿಕ ಇಂಧನ ಕುರಿತು ಚರ್ಚೆ ನಡೆಸಿದ ಎಸ್.ಈ .ಸುಧೀಂದ್ರ
ಹೈಕಮೀಷನರ್ ಪೆರಿಯಸಾಮಿ ಕುಮಾರನ್ ಬಳಿ ಜೈವಿಕ ಇಂಧನ ಕುರಿತು ಚರ್ಚೆ ನಡೆಸಿದ ಎಸ್.ಈ .ಸುಧೀಂದ್ರ.
ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾದ ಎಸ್.ಈ.ಸುಧೀಂದ್ರ ಅವರು ತಮ್ಮ ಆಮೆರಿಕ ದೇಶದ ಪ್ರವಾಸದ ಮಾರ್ಗಮಧ್ಯೆ ಲಂಡನ್‌ನ ವಿಮಾನ ನಿಲ್ಡಾಣದಲ್ಲಿ ಭಾರತದ ಹೈಕಮಿಷನರ್ ಪೆರಿಯಸಾಮಿ ಕುಮಾರನ್ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ಅನುಷ್ಟಾನಗೊಳಿಸಿರುವ ಹಾಗೂ ಮುಂದಿನ ಉದ್ದೇಶಿತ ಕಾರ್ಯಯೋಜನೆಗಳ ಕುರಿತು ಚರ್ಚಿಸಿದರು.
ಕರ್ನಾಟಕ ರಾಜ್ಯ ಸರ್ಕಾರದ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಈಗಿನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರುಗಳು ನೂತನ ಮತ್ತು ಪುನರ್ ಉತ್ಪಾದಿಸಲ್ಪಡುವ ಇಂಧನ ಕ್ಷೇತ್ರದಲ್ಲಿ ಬಹುಮುಖ್ಯವಾದ ಜೈವಿಕ ಇಂಧನ ಕ್ಷೇತ್ರದ ಉನ್ನತೀಕರಣ ಹಾಗೂ ವಾಣಿಜ್ಯೀಕರಣದಲ್ಲಿ ಹಲವಾರು ಕಾರ್ಯಯೋಜನೆಗಳನ್ನು ರೂಪಿಸಲು ಪ್ರೋತ್ಸಾಹ ನೀಡಿರುವುದನ್ನು ವಿವರಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಅವರು ನೂತನ ಜೈವಿಕ ಇಂಧನ ನೀತಿಯ ರಚನೆಯ ಮಾರ್ಗದರ್ಶಕರಾಗಿದ್ದು, ಈ ಉದ್ದೇಶಿತ ನೀತಿಯ ಅನಷ್ಟಾನದಿಂದ ರಾಜ್ಯದಲ್ಲಿ ಬಯೋಪಿಲೆಟ್ಸ್, ಬಯೋಚಾರ್, ಬಯೋಕೋಲ್, ಬಯೋಡೀಸಲ್, 2ಜಿ ಎಥನಾಲ್, ಕಂಪ್ರೆಸ್ಡ್ ಬಯೋಗ್ಯಾಸ್, ಗ್ರೀನ್ ಹೈಡ್ರೋಜನ್ ಉತ್ಪಾದನಾ ಘಟಕಗಳ ನಿರ್ಮಾಣದಿಂದ ಜೈವಿಕ ಇಂಧನ ಕ್ಷೇತ್ರದಲ್ಲಿ ಉನ್ನತೀಕರಣ ಹಾಗೂ ವಾಣಿಜ್ಯೀಕರಣಗೊಳಿಸುವುದಕ್ಕೆ ಅಗತ್ಯ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಪೂರಕ ವಾತಾವರಣ ಸೃಜನೆಯಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಭಾರತದ ಹೈಕಮಿಷನರ್ ಪೆರಿಯಸಾಮಿ ಕುಮಾರನ್ ಅವರು ಕರ್ನಾಟಕ ರಾಜ್ಯದ ಜೈವಿಕ ಇಂಧನ ಕ್ಷೇತ್ರದಲ್ಲಿನ ಅವಕಾಶಗಳ ಕುರಿತು ಯುನೈಟೆಡ್ ಕಿಂಗಡಮ್ ದೇಶದಲ್ಲಿನ ಸಂಬಂದಿಸಿದ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ವಿನೋದ್ ಕುಮಾರ್ ಲಂಡನ್‌ನಲ್ಲಿನ ಭಾರತದ ಹೈಕಮಿಷನ್ ಕಛೇರಿಯ ಅಧಿಕಾರಿ ಸಹ ಈ ಸಂದರ್ಭದಲ್ಲಿ ಹಾಜರಿದ್ದರು.