saplings 
ಬೆಂಗಳೂರು

ಸಸಿ ನೆಡಲು ವೈಜ್ಞಾನಿಕ ಕ್ರಮ ಅನುಸರಿಸಬೇಕು

ಆರ್.ತುಳಸಿಕುಮಾರ್

ಪ್ರಮುಖ ಮುಖ್ಯಾಂಶಗಳು

  • ಪ್ರಕೃತಿ ಮತ್ತು ಕೃಷಿ ಒಂದೇ ನಾಣ್ಯದ ಎರಡು ಮುಖ
  • ಬೆಂ. ಕೃಷಿ ವಿವಿ ಕುಲಪತಿ ಡಾ. ಎಸ್.ವಿ.ಸುರೇಶ್ ಹೇಳಿಕೆ
ಬೆಂಗಳೂರು: ಮಹಾನಗರದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ವೈಜ್ಞಾನಿಕವಾಗಿ ರೂಪಿಸಬೇಕಿದ್ದು, ದೇಸಿ ಪ್ರಭೇದದ ಗಿಡಗಳನ್ನು ನೆಟ್ಟಲ್ಲಿ ಪರಿಸರ ಹೆಚ್ಚಳದ ಜತೆಗೆ ತಂಪು ವಾತಾವರಣ ಕಾಣಲು ಸಾಧ್ಯ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ವಿ. ಸುರೇಶ್ ತಿಳಿಸಿದರು.
ಕೃಷಿ ವಿವಿ ಕ್ಯಾಂಪಸ್ ಜಿಕೆವಿಕೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಪ್ರಕೃತಿಯೊಡನೆ ನಡಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೊಮ್ಮೆ ಬೆಂಗಳೂರು ಉದ್ಯಾನಗಳ ನಗರ ಎಂಬ ಪ್ರಖ್ಯಾತಿ ಪಡೆದಿತ್ತು. ರಸ್ತೆ, ಪಾದಚಾರಿ ಮಾರ್ಗ ಸೇರಿ ವಿವಿಧೆಡೆ ದೇಸಿ ಪ್ರಭೇದಗಳ ಸಸಿಗಳನ್ನು ನೆಡಲಾಗುತ್ತಿತ್ತು. ಆದರೀಗ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸುವ ಸ್ಪರ್ಧೆಯಿಂದಾಗಿ ಇಲ್ಲಿನ ಹವಾಗುಣಕ್ಕೆ ಹೊಂದಿಕೊಳ್ಳದ ಮರಗಳನ್ನು ಬೆಳೆಸಲಾಗುತ್ತಿದೆ. ಇದರಿಂದ ಭಾರಿ ಮಳೆ, ಗಾಳಿಗೆ ಸಿಲುಕುವ ಇಂತಹ ಮರಗಳು ನೆಲಕ್ಕುರುಳಿಸಿ ಅನಾಹುತ ಸಂಭವಿಸುತ್ತಿದೆ. ಈ ಸತ್ಯವನ್ನು ಅಧಿಕಾರಿಗಳು ಹಾಗೂ ಪರಿಸರ ತಜ್ಞರು ಅರಿತು ಮುನ್ನಡೆಯಬೇಕಿದೆ ಎಂದು ಕಿವಿಮಾತು ಹೇಳಿದರು.
ಪ್ರಕೃತಿ ಮತ್ತು ಕೃಷಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪರಿಸರವನ್ನು ಕಾಪಾಡುವುದು ಎಂದರೆ ಕೃಷಿಯನ್ನು ಮತ್ತು ಮಾನವ ಜೀವನವನ್ನು ಕಾಪಾಡಿದಂತೆಯೇ ಸರಿ. ಜತೆಗೆ ಜಲ ಸಂರಕ್ಷಣೆ, ಪ್ಲಾಸ್ಟಿಕ್ ನಿಯಂತ್ರಣ ಮತ್ತು ಇಂಧನ ಮಿತವ್ಯಯ ಚಟುವಟಿಕೆಗಳು ಒಂದು ದಿನದ ಆಚರಣೆಯಾಗದೇ ನಮ್ಮ ದಿನನಿತ್ಯದ ಬದುಕಿನ ಭಾಗವಾಗಬೇಕು ಎಂದು ಹೇಳಿದರು.
25 ಸಾವಿರ ಸಸಿ ನೆಟ್ಟು ಪೋಷಣೆ:
ಜಿಕೆವಿಕೆಯಲ್ಲಿ ಹಿಂದಿನ ವರ್ಷ 25 ಸಾವಿರ ಸಸಿಗಳನ್ನು ನೆಡಲಾಗಿತ್ತು. ಈ ಪೈಕಿ ಶೇ.80 ಉಳಿದುಕೊಂಡಿದ್ದು, ಬೆಳವಣಿಗೆ ಕಾಣುತ್ತಿವೆ. ಈ ವರ್ಷವೂ ಮತ್ತೆ 25 ಸಾವಿರ ಸಸಿಗಳನ್ನು ನೆಡಲು ಗುರಿ ಹೊಂದಲಾಗಿದ್ದು, ಶೇ.90 ಗಿಡಗಳನ್ನು ಸಂರಕ್ಷಿಸಿಕೊಳ್ಳುವ ಗುರಿ ಹೊಂದಲಾಗಿದೆ ಎಂದು ಕುಲಪತಿ ಡಾ. ಎಸ್.ವಿ. ಸುರೇಶ್ ವಿವರಿಸಿದರು.
ವಿದ್ಯಾರ್ಥಿಗಳಿಂದ ಪ್ರತಿಜ್ಞಾ ವಿಧಿ ಸ್ವೀಕಾರ:
ಇದೇ ವೇಳೆ ನಗರದ ವಿವಿಧ ಶಾಲೆಗಳಿಂದ ಆಗಮಿಸಿದ್ದ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಕೃತಿಯನ್ನು ಕಾಪಾಡುತ್ತೇವೆ ಮತ್ತು ಹೆಚ್ಚು ಗಿಡಗಳನ್ನು ನೆಡುತ್ತೇವೆ ಎಂದು ಸಂಕಲ್ಪ ಕೈಗೊಂಡರು.
ಕಾರ್ಯಕ್ರಮದಲ್ಲಿ ಕೃಷಿ ವಿವಿಯ ಸಂಶೋಧನಾ ನಿರ್ದೇಶಕ ಡಾ. ಮೂಡಲಗಿರಯಪ್ಪ, ವಿಸ್ತರಣಾ ನಿರ್ದೇಶಕ ಡಾ. ವೈ.ಎನ್. ಶಿವಲಿಂಗಯ್ಯ, ಅರಣ್ಯ/ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಭೌಸಾಹೇಬ್ ತಾಂಬಟ್ ಸೇರಿ ವಿವಿಯ ವಿಜ್ಞಾನಿಗಳು ಹಾಗೂ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
"

ಪರಿಸರ ಸಂರಕ್ಷಣೆಯು ಸರ್ಕಾರ ಅಥವಾ ಕೆಲವು ಸಂಸ್ಥೆಗಳ ಹೊಣೆಗಾರಿಕೆಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಇಂದಿನ ವಿದ್ಯಾರ್ಥಿಗಳು ಮೊಬೈಲ್ ಮತ್ತು ಡಿಜಿಟಲ್ ಜಗತ್ತಿನಿಂದ ಹೊರಬಂದು ಪ್ರಕೃತಿಯೊಂದಿಗೆ ಹೆಚ್ಚು ಸಮಯ ಕಳೆಯಬೇಕು. ಪ್ರಕೃತಿಯಿಂದಲೇ ನಾವು ನಿಜವಾದ ಸ್ಫೂರ್ತಿ, ಆರೋಗ್ಯ ಮತ್ತು ಜೀವನ ಮೌಲ್ಯಗಳನ್ನು ಕಲಿಯಲು ಸಾಧ್ಯ.

- ರಾಜೇಶ್ ಎಸ್. ಕಲಾಜೆ, ಸಂಶೋಧನಾ ಸಂಯೋಜಕರು, ರಾಷ್ಟ್ರೀಯ ಮರ ವಿಜ್ಞಾನ ಸಂಶೋಧನಾ ಕೇಂದ್ರ