school-textbook 
ಬೆಂಗಳೂರು

ಶಾಲಾ ಪಠ್ಯಪುಸ್ತಕ ಮುದ್ರಕರಿಗೆ ಸಿಗದ ಹಣ

ಪ್ರಮುಖ ಮುಖ್ಯಾಂಶಗಳು

  • 1-12ನೇ ತರಗತಿ ವಿದ್ಯಾರ್ಥಿಗಳಿಗೆ ದಾಖಲೆ ಅವಧಿಯಲ್ಲಿ ಪ್ರಿಂಟ್ ಮಾಡಿ ಪೂರೈಕೆ
  • ಹಣಕಾಸು ಇಲಾಖೆ ಅನುಮೋದನೆ ಬಳಿಕವೂ ಅನುದಾನ ಬಿಡುಗಡೆ ವಿಳಂಬ
ಬೆಂಗಳೂರು: ರಾಜ್ಯ ಸರ್ಕಾರಿ ಶಾಲಾ-ಕಾಲೇಜುಗಳ ವಿದ್ಯಾರ್ಥಿ ವೃಂದಕ್ಕೆ ಅಗತ್ಯವಿರುವ ಪಠ್ಯಪುಸ್ತಕಗಳನ್ನು 60 ದಿನಗಳ ದಾಖಲೆ ಅವಧಿಯೊಳಗೆ ಮುದ್ರಿಸಿ ಪೂರೈಕೆ ಮಾಡಲಾಗಿದೆ. ಆದರೆ, ಇದಕ್ಕಾಗಿ ನಿತ್ಯವೂ ಮೂರು ಪಾಳಿಯಲ್ಲಿ ಪಠ್ಯ ಮುದ್ರಿಸಿ ಶೈಕ್ಷಣಿಕ ಚಟುವಟಿಕೆಗೆ ಅಡ್ಡಿಯಾಗದಂತೆ ಕೆಲಸ ನಿಭಾಯಿಸಿದ್ದರೂ, ಸರ್ಕಾರವು ಮುದ್ರಕರಿಗೆ ಹಣ ಬಿಡುಗಡೆ ಮಾಡಲು ಮೀನಮೇಷ ಎಣಿಸುತ್ತಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.
2026-27ನೇ ಶೈಕ್ಷಣಿಕ ಸಾಲಿಗೆ 1-12ನೇ ತರಗತಿಯ ವಿದ್ಯಾರ್ಥಿಗಳಿಗೆ ಒಟ್ಟು 980 ಶೀರ್ಷಿಕೆ ಅಡಿಯಲ್ಲಿ 9 ಕೋಟಿಗೂ ಅಧಿಕ ಪುಸ್ತಕಗಳಿಗೆ ಕರ್ನಾಟಕ ಪಠ್ಯಪುಸ್ತಕ ಸಂಘ ಟೆಂಡರ್ ಆಹ್ವಾನಿಸಿತ್ತು. ಕಳೆದ ಫೆಬ್ರವರಿಯಲ್ಲಿ ಆಹ್ವಾನಿಸಿದ್ದ ಟೆಂಡರ್‌ಅನ್ನು ಮಾರ್ಚ್ ಕೊನೆಯಲ್ಲಿ ಅಂತಿಮಗೊಳಿಸಿ ಕಾರ್ಯಾದೇಶ ನೀಡಲಾಯಿತು. ಇದರಿಂದ ವಾಡಿಕೆಯಂತೆ 3-4 ತಿಂಗಳು ಕಾಲ ಮುದ್ರಣಕ್ಕೆ ನೀಡುವ ಅವಧಿಯನ್ನು ಮೊಟಕುಗೊಳಿಸಿದ್ದರಿಂದ ಎರಡೇ ತಿಂಗಳಲ್ಲಿ ಪಠ್ಯಪುಸ್ತಕ ಮುದ್ರಿಸುವ ಹೊಣೆಯನ್ನು ಮುದ್ರಕರಿಗೆ ವಹಿಸಲಾಗಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ್ದ 23 ಮುದ್ರಕರು ಕಚ್ಛಾವಸ್ತು ಕ್ರೋಡೀಕರಿಸಿ ಮೇ ತಿಂಗಳಾಂತ್ಯದೊಳಗೆ ಮುದ್ರಿಸಿ 206 ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ (ಬಿಇಒ) ತಲುಪಿಸಲಾಗಿದೆ.
ಇದರಿಂದಾಗಿ ಶಾಲಾರಂಭದಲ್ಲೇ ವಿದ್ಯಾರ್ಥಿಗಳಿಗೆ ಶೇ.98 ಪಠ್ಯಪುಸ್ತಕಗಳನ್ನು ವಿತರಿಸಲು ಸಾಧ್ಯವಾಗಿದೆ. ಭಾಷಾ ಅಲ್ಪಸಂಖ್ಯಾತ ಶಾಲೆಗಳಿಗೆ ಮಾತ್ರ ಬಿಇಒಗಳಿಂದ ಪಠ್ಯಪುಸ್ತಕ ರವಾನೆ ಬಾಕಿ ಇದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಪ್ರಕಾರ 40 ಸಾವಿರಕ್ಕೂ ಹೆಚ್ಚು ಶಾಲಾ-ಕಾಲೇಜುಗಳ 36 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ಹಾಗೂ ಲೇಖನ ಸಾಮಗ್ರಿ ವಿತರಿಸಲಾಗಿದೆ.


315 ಕೋಟಿ ರೂ. ಮೊತ್ತಕ್ಕೆ ಟೆಂಡರ್:

ಈ ಸಾಲಿನ ಪಠ್ಯಪುಸ್ತಕಗಳ ಮುದ್ರಣಕ್ಕೆ 433 ಕೋಟಿ ರೂ. ವೆಚ್ಚದ ಟೆಂಡರ್ ಆಹ್ವಾನಿಸಿ 315 ಕೋಟಿ ರೂ. ಮೊತ್ತಕ್ಕೆ 23 ಪ್ಯಾಕೇಜ್‌ಗಳಡಿ ಕಾರ್ಯಾದೇಶವನ್ನು ಮುದ್ರಕರಿಗೆ ನೀಡಲಾಗಿತ್ತು. ಕಾರ್ಯಾದೇಶ ನೀಡಿದ ಬೆನ್ನಲ್ಲೇ ಉದ್ಭವಿಸಿದ ಕೊಲ್ಲಿ ಯುದ್ಧದಿಂದಾಗಿ ಕಾಗದ, ಇಂಕ್ ಸೇರಿ ಕಚ್ಛಾವಸ್ತುಗಳ ದರ ಗಗನಕ್ಕೇರಿತು. ಆದರೂ, ಲಭ್ಯ ಸಂಪನ್ಮೂಲವನ್ನು ಸಂಗ್ರಹಿಸಿ ಹಗಲುರಾತ್ರಿ ಮುದ್ರಣ ಕಾರ್ಯ ಪೂರ್ಣಗೊಳಿಸಿ ಪಠ್ಯಪುಸ್ತಕ ಸಂಘದ ಸೂಚನೆಯಂತೆ ಬಿಇಒ ಕಚೇರಿಗಳಿಗೆ ತಲುಪಿಸಲಾಗಿದೆ.
ಸದ್ಯ ಪಠ್ಯಪುಸ್ತಕ ಮದ್ರಣ ಹಾಗೂ ಪೂರೈಕೆ ಸಂಬಂಧ ಹಣಕಾಸು ಇಲಾಖೆಯು ಮೊದಲ ಬಿಲ್‌ನ ಶೇ.80 ಹಣವನ್ನು ಬಿಡುಗಡೆ ಮಾಡಲು ಅನುಮೋದಿಸಿದೆ. ಜತೆಗೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ನಮೂದಿಸಿರುವಂತೆ ಲಭ್ಯ ಅನುದಾನ ಬಳಸಿಕೊಳ್ಳುವಂತೆಯೂ ಸೂಚಿಸಿದೆ. ಇದನ್ನಾಧರಿಸಿ ಕಡತವನ್ನು ಶಿಕ್ಷಣ ಇಲಾಖೆಗೆ ರವಾನಿಸಿದ್ದರೂ, ಈವರೆಗೂ ಫೈಲ್ ಮುಂದಡಿ ಇಟ್ಟಿಲ್ಲ. ಇದರಿಂದಾಗಿ ಮುದ್ರಣಕ್ಕೆ ಬಂಡವಾಳ ಹೂಡಿದ್ದ ಹಣಕ್ಕೆ ಅಧಿಕ ಬಡ್ಡಿ ಪಾವತಿಸುವಂತಾಗಿದ್ದು, ಅನಗತ್ಯ ಹೊರೆ ಹೇರಿಕೊಂಡಂತಾಗಿದೆ ಎನ್ನುತ್ತಾರೆ ಮದ್ರಕರು.

ಜಿಎಸ್‌ಟಿ ಹೊರೆ:

ಪಠ್ಯಪುಸ್ತಕಗಳ ಮುದ್ರಣಕ್ಕೆ ಶೇ.18 ಜಿಎಸ್‌ಟಿ ಪಾವತಿಸಬೇಕಿದೆ. ಜಿಎಸ್‌ಟಿ ನಿಯಮದಂತೆ ಬಿಲ್ ಪಾವತಿಸಿದ ಆ ತಿಂಗಳಿನ 20ನೇ ತಾರೀಖಿನೊಳಗೆ ಹಣ ಪಾವತಿಸಬೇಕು. ತಪ್ಪಿದರೆ ಶೇ.10ರಷ್ಟು ದಂಡ ಪಾವತಿಸಬೇಕಿದೆ. ಈಗ ಬಿಲ್ ಪಾವತಿಯಾಗದ ಕಾರಣ ಜಿಎಸ್‌ಟಿ ಮೊತ್ತವೂ ಮುದ್ರಕರಿಗೆ ಹೊರೆಯಾಗಲಿದೆ. ಇದರ ಹೊರತಾಗಿಯೂ ಈ ಬಾರಿ ಪಠ್ಯಪುಸ್ತಕಗಳ ಟೆಂಡರ್ ಮೊತ್ತಕ್ಕೆ ಸರ್ಕಾರಕ್ಕೆ 56.70 ಕೋಟಿ ರೂ. ಜಿಎಸ್​​ಟಿ ಪಾವತಿಯಾಗಲಿದೆ.
"

2026-27ನೇ ಶೈಕ್ಷಣಿಕ ಸಾಲಿನಲ್ಲಿ ಶೇ.98 ಪಠ್ಯಪುಸ್ತಕಗಳು ವಿದ್ಯಾರ್ಥಿಗಳಿಗೆ ತಲುಪಿಸಲಾಗಿದೆ. ಭಾಷಾ ಅಲ್ಪಸಂಖ್ಯಾತರ ಶಾಲೆಗಳಿಗೆ ಮಾತ್ರ ಭಾಗ-2ರ ಪುಸ್ತಕ ರವಾನಿಸಬೇಕಿದೆ. ಮುದ್ರಕರಿಗೆ ಬಿಲ್​ ಪಾವತಿ ಸಂಬಂಧ ಸರ್ಕಾರದಿಂದ ಹಣ ಬಿಡುಗಡೆಯಾದಲ್ಲಿ ತಕ್ಷಣವೇ ಪಾವತಿ ಪ್ರಕ್ರಿಯೆ ಆರಂಭವಾಗುತ್ತದೆ.

- ವಿಕಾಸ್ ಕಿಶೋರ್ ಸುರಳ್ಕರ್, ಆಯುಕ್ತ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ