ಬೆಂಗಳೂರು: ಕಾಂಗ್ರೆಸ್ ಸಂಘಟನೆಗೆ ಬಲ ತುಂಬಲು ಬೆಂಗಳೂರು ಕೇಂದ್ರ ಜಿಲ್ಲೆಯಲ್ಲಿ ಸಂಘಟನಾ ಸೃಜನ್ -2 ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ನಾಗರಾಜ್ ಯಾದವ್ ತಿಳಿಸಿದ್ದಾರೆ.
ಶಾಸಕ ಶರತ್ ಬಚ್ಚೇಗೌಡ, ವೆಂಕಟೇಶ್ವರ ಹಾಗೂ ತಮ್ಮನ್ನು ಕಾಂಗ್ರೆಸ್ ಹೈಕಮಾಂಡ್ ಬೆಂಗಳೂರು ಕೇಂದ್ರ ವಿಭಾಗಕ್ಕೆ ವೀಕ್ಷಕರನ್ನಾಗಿ ನೇಮಿಸಿದ್ದು ಬ್ಲಾಕ್ ಮಟ್ಟಕ್ಕೆ ತೆರಳಿ ಸಭೆ ನಡೆಸುತ್ತೇವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮೊದಲ ಹಂತದ ಸಂಘಟನಾ ಸೃಜನ್ ಅಡಿ ಈಗಾಗಲೇ 35 ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಇದೀಗ ಎರಡನೇ ಹಂತದ ಆರಂಭವಾಗಿದೆ.ಪ್ರತಿ ವಿಧಾನಸಭೆ ಕ್ಷೇತ್ರಗಳ ಎರಡು ಬ್ಲಾಕ್ಗಳಿಗೆ ತೆರಳಿ ಸಭೆ ಮಾಡಿ ಕಾರ್ಯಕರ್ತರ ಅಭಿಪ್ರಾಯ ಆಲಿಸುತ್ತೇವೆ.
ಬ್ಲಾಕ್ ಮಟ್ಟದ ಸಭೆಗೆ ಹಾಲಿ-ಮಾಜಿ ಸಚಿವರು, ಶಾಸಕರು- ಮಾಜಿ ಸಚಿವರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಪ್ರಮುಖ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರನ್ನು ಕೂಡ ಆಹ್ವಾನಿಸಲಾಗುತ್ತದೆ. ಕಾರ್ಯಕರ್ತರ ಅಭಿಲಾಷೆ ಹಾಗೂ ಹೈಕಮಾಂಡ್ ಆಶಯಕ್ಕೆ ಅನುಗುಣವಾಗಿ ಬ್ಲಾಕ್ ಮಟ್ಟದಲ್ಲಿ ಅಧ್ಯಕ್ಷರ ನೇಮಕ ಆಗಲಿದೆ ಎಂದರು.
ಮುಂಬರುವ ಸ್ಥಳೀಯ ಸಂಸ್ಥೆಗಳ ಹಾಗೂ ವಿಧಾನಸಭೆ ಚುನಾವಣೆಗೆ ಪೂರಕವಾಗಿ ಬೂತ್ ಮಟ್ಟದಲ್ಲಿ ಪಕ್ಷ ಬಲಪಡಿಸಲು ಸಂಘಟನಾ ಸೃಜನ್- 2 ಆದ್ಯತೆ ನೀಡಲಿದೆ ಎಂದು ತಿಳಿಸಿದರು. ಮಾಜಿ ಸಚಿವೆ ರಾಣಿ ಸತೀಶ್, ಮಾಜಿ ಮೇಯರ್ ರಾಮಚಂದ್ರಪ್ಪ, ವೆಂಕಟೇಶ್ವರ ಇತರರಿದ್ದರು.