Shivashakarppa, Geeta  
ಬೆಂಗಳೂರು

ಸಾಹುಕಾರ್, ಗೀತಾ 14ದಿನ ಇ.ಡಿ ಕಸ್ಟಡಿಗೆ

ಬಿಪಿ, ಶುಗರ್, ನವರಾತ್ರಿ ಉಪವಾಸದ ಕಾರಣ ಹೇಳಿದ ಆರೋಪಿಗಳು, ಇಬ್ಬರ ಪ್ರತ್ಯೇಕ ವಿಚಾರಣೆಗೆ ಮುಂದಾದ ಇಡಿ, ಓರ್ವ ಅಭ್ಯರ್ಥಿಯಿಂದ ಶಿವಶಂಕರಪ್ಪ 50 ಲಕ್ಷಕ್ಕೆ ಡೀಲ್

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ಪರೀಕ್ಷಾ ಹಗರಣದ ಕುರಿತು ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಬಿ.ವಿ.ಗೀತಾ ಅವರನ್ನು 12ದಿನ ಇಡಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಮಾಡಿದೆ.

ಇಡಿ ಅಧಿಕಾರಿಗಳು ಬುಧವಾರ ಮಧ್ಯಾಹ್ನ ಆರೋಪಿಗಳಿಬ್ಬರನ್ನು ನಗರದ 4ನೇ ಸಿಸಿಹೆಚ್ ಕೋರ್ಟ್ ಮುಂದೆ ಹಾಜರು ಪಡಿಸಿದ್ದರು. ಇ.ಡಿ ಪರವಾಗಿ ಹಾಜರಾದ ವಿಶೇಷ ಸಾರ್ವಜನಿಕ ಅಭಿಯೋಜಕ ಮಧು ಎನ್.ರಾವ್, ಇಬ್ಬರೂ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ 14 ದಿನಗಳ ಕಾಲ ಕಸ್ಟಡಿಗೆ ನೀಡಬೇಕೆಂದು ಮನವಿ ಮಾಡಿ, ಹಲವು ಅಭ್ಯರ್ಥಿಗಳಿಗೆ 40 ಲಕ್ಷ, 60 ಲಕ್ಷ ಹಾಗೂ 80 ಲಕ್ಷ ರೂಪಾಯಿಗಳಿಗೆ ಪ್ರಶ್ನೆ ಪತ್ರಿಕೆ ಮಾರಾಟ ಮಾಡಲಾಗಿದೆ. ಕೊನೆಯ ಕ್ಷಣದಲ್ಲಿ 5 ಲಕ್ಷ ರೂಪಾಯಿಗೂ ಪ್ರಶ್ನೆಪತ್ರಿಕೆ ಹಂಚಿಕೆ ವ್ಯವಹಾರ ನಡೆದಿದೆ. ಈ ಅಕ್ರಮಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಂದ ಪಡೆದಿದ್ದ ಬ್ಯಾಂಕ್ ಚೆಕ್‌ಗಳು, ಪ್ರಾಮಿಸರಿ ನೋಟ್‌ಗಳು ಹಾಗೂ ಸಹಿ ಮಾಡಲಾದ ದಾಖಲೆಗಳನ್ನು ಇ.ಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು.

ನವರಾತ್ರಿ ಉಪವಾಸ, ಆರೋಗ್ಯ ಸಮಸ್ಯೆ:

ಇ.ಡಿ ಇಕ್ಕಳದಿಂದ ತಪ್ಪಿಸಿಕೊಳ್ಳಲು ಇಬ್ಬರು ಆರೋಪಿಗಳು, ಇಡಿ ಬಂಧನ ಪ್ರಶ್ನಿಸಿ 4ನೇ ಸಿಸಿಹೆಚ್ ಕೋರ್ಟ್‌ಗೆ ಮಧ್ಯಂತರ ಜಾಮೀನು ಅರ್ಜಿ ಸಲ್ಲಿಸಿದ್ದರು. ಶಿವಶಂಕರಪ್ಪ ಪರ ವಕೀಲರು ವಾದ ಮಂಡಿಸಿ ನಮ್ಮ ಕಕ್ಷಿದಾರರು ಹಿರಿಯ ನಾಗರಿಕರಾಗಿದ್ದಾರೆ. ಅವರಿಗೆ ಬಿ.ಪಿ, ಶುಗರ್ ಇದೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ವಿಶ್ರಾಂತಿಯ ಅವಶ್ಯಕತೆ ಇದೆ. ಈಗಾಗಲೇ ಇಡಿ ಅಧಿಕಾರಿಗಳು ಸಾಹುಕಾರ್ ನಿವಾಸದ ಮೇಲೆ ಸತತ ಎರಡು ದಿನಗಳ ಕಾಲ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಆ ವೇಳೆ ಪರೀಕ್ಷಾ ಅಕ್ರಮದ ಬಗ್ಗೆ ಯಾವುದೇ ದಾಖಲೆಗಳು ದೊರೆತಿಲ್ಲ. ಈಗ ಉದ್ದೇಶ ಪೂರ್ವಕವಾಗಿ ಬಂದಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.

ಸದಸ್ಯೆ ಬಿ.ವಿ.ಗೀತಾ ತಾನು ನವರಾತ್ರಿಗೆ ಪೂಜೆ ಸಲ್ಲಿಸಲು ಉಪವಾಸ ಇರಬೇಕು. ಆದ್ದರಿಂದ ಜಾಮೀನು ನೀಡಬೇಕೆಂದು ಮನವಿ ಮಾಡಿದರು. ವಾದ ಪ್ರತಿವಾದ ಆಲಿಸಿದ ಕೋರ್ಟ್, ಪ್ರಕರಣದ ಗಂಭೀರತೆ ಅರಿತು ಆರೋಪಿಗಳ ಮಂಧ್ಯಂತರ ಜಾಮೀನು ಅರ್ಜಿ ವಜಾಗೊಳಿಸಿತು. ಸಾಹುಕಾರ್ ಮತ್ತು ಗೀತಾ ಅವರನ್ನು ಅಕ್ಟೋಬರ್ 19ರ ವರೆಗೆ ಇಡಿ ಕಸ್ಟಡಿಗೆ ನೀಡಿ ಆದೇಶಿಸಿತ್ತು. ಇಡಿ ತನಿಖೆಗೆ ಸಹಕರಿಸಬೇಕು. ಅಧಿಕಾರಿಗಳು ಕೂಡ ಆರೋಪಿಗಳ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಎಂದು ಸೂಚನೆ ನೀಡಿತು.

ಜ್ಞಾನೇಂದ್ರ ಸ್ಫೋಟಕ ಹೇಳಿಕೆ ಸಾಹುಕಾರ್‌ಗೆ ಇಡಿ ಕುಣಿಕೆ:

ಐಎಎಸ್ ಅಧಿಕಾರಿ ಹಾಗೂ ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕನಾಗಿದ್ದ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಇಡಿ ವಿಚಾರಣೆ ವೇಳೆ 400 ಪಶುವೈದ್ಯಾಧಿಕಾರಿಗಳ ಹುದ್ದೆ, ವಿಸ್ತರಣಾಧಿಕಾರಿಗಳ ನೇಮಕಾತಿ ವೇಳೆ ಸಾಹುಕಾರ್ ತಮ್ಮನ್ನ ಸಂಪರ್ಕಿಸಿ ಅಕ್ರಮದ ಕುರಿತು ಚರ್ಚಿಸಿರುವುದು ಹಾಗೂ ಬಿ.ವಿ ಗೀತಾ ತಮ್ಮ ಕಚೇರಿಗೆ ಆಗಮಿಸಿ 5-6 ಅಭ್ಯರ್ಥಿಗಳನ್ನು ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಆಯ್ಕೆ ಮಾಡಬೇಕೆಂದು ಹೆಸರು ಸಮೇತ ನೀಡಿರುವ ಸ್ಫೋಟಕ ಮಾಹಿತಿಯನ್ನು ಜ್ಞಾನೇಂದ್ರ ಇಡಿ ಮುಂದೆ ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ.

ಸೆ.26ರಿಂದ ಅ.3ರವರೆಗೆ ಇ.ಡಿ ಕಸ್ಟಡಿಯಲ್ಲಿದ್ದ ಜ್ಞಾನೇಂದ್ರನಿಂದ ಪಡೆದ ಹಲವು ಮಾಹಿತಿ ಹಾಗೂ ಸಾಕ್ಷಾೃಧಾರಗಳನ್ನು ಕಲೆ ಹಾಕಿರುವ ಅಧಿಕಾರಿಗಳು ಅ.6ರಂದು ಸಾಹುಕಾರ್ ಹಾಗೂ ಗೀತಾ ಮನೆ ಮೇಲೆ ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎರಡು ತಂಡಗಳಿಂದ ಅಕ್ರಮ!

ಸರ್ಕಾರದ ವಿವಿಧ ಇಲಾಖೆಯಲ್ಲಿನ ಖಾಲಿ ಹುದ್ದೆಗಳ ನೇಮಕಾತಿ ಹೊಣೆ ಹೊತ್ತಿರುವ ಕೆಪಿಎಸ್ಸಿಯಲ್ಲಿ ಎರಡು ಗುಂಪುಗಳಾಗಿ ಭ್ರಷ್ಟಾಚಾರ, ಅನರ್ಹರಿಂದ ಲಕ್ಷ ಲಕ್ಷ ರೂಪಾಯಿ ಪಡೆದು ಸರ್ಕಾರಿ ಹುದ್ದೆಗಳಿಗೆ ನೇಮಕ ಮಾಡುತ್ತಿದ್ದರು ಎಂಬ ಮಾಹಿತಿ ಇ.ಡಿಗೆ ಲಭ್ಯವಾಗಿದೆ. ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಸೇರಿ ಕೆಲ ಸದಸ್ಯರ ಒಂದು ಗಂಪಾಗಿದ್ದರೆ, ಜ್ಞಾನೇಂದ್ರ, ಮಧ್ಯವರ್ತಿ ಬಸವರಾಜ್ ಕನ್ನಾಳೆ ಸೇರಿ ಕೆಲ ಏಜೆಂಟರ್‌ಗಳು ಆಯೋಗದಿಂದ ನಡೆಯುವ ಬಹುತೇಕ ನೇಮಕಾತಿಗಳಲ್ಲಿ ಅಕ್ರಮ ಎಸಗಿದ್ದಾರೆ. ಅಕ್ರಮದ ಹಣವನ್ನು ಸಕ್ರಮದ ರೀತಿಯಲ್ಲಿ ವರ್ಗಾವಣೆ, ಆಸ್ತಿ, ಅಪಾರ್ಟಮೆಂಟ್, ವಿಲ್ಲಾ ಖರೀದಿಗೆ ಬಳಕೆ ಮಾಡಿಕೊಂಡಿರುವ ಬೆನ್ನು ಬಿದ್ದಿರುವ ಇಡಿ ತನಿಖೆ ಮುಂದುವರೆಸಿದೆ. ಬಂಧಿತ ಸಾಹಕಾರ್, ಬಿ.ವಿ ಗೀತಾ ಹೇಳಿಕೆ ಆಧಾರದ ಮೇಲೆ ಕೆಪಿಎಸ್ಸಿಯಲ್ಲಿ ನಡೆದಿರುವ ಇನ್ನಷ್ಟು ಕರ್ಮಕಾಂಡ ಬಳಕಿಗೆ ಬರಲಿವೆ.

ಶಿವಶಂಕರಪ್ಪ 50 ಲಕ್ಷಕ್ಕೆ ಡೀಲ್ !

ವಿನುತಾ ಎಂಬ ಅಭ್ಯರ್ಥಿಯ ತಂದೆ ಮಲ್ಲಪ್ಪ ಅವರ ಮೂಲಕ ಶಿವಶಂಕರಪ್ಪ ಸಾಹುಕಾರ್ 50 ಲಕ್ಷ ರೂಗೆ ಡೀಲ್ ಮಾಡಿದ್ದರು. ಆರಂಭದಲ್ಲಿ 50 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟು, ಅಂತಿಮವಾಗಿ 20 ಲಕ್ಷ ರೂಪಾಯಿಗೆ ವ್ಯವಹಾರ ಮುಗಿಸಲಾಗಿತ್ತು ಹಾಗೂ 10 ಲಕ್ಷ ರೂಪಾಯಿ ಮುಂಗಡ ಹಣ ಪಡೆಯಲಾಗಿದೆ ಎಂಬ ಸತ್ಯವನ್ನು ವಿನುತಾ ಅವರ ತಂದೆ ಮಲ್ಲಪ್ಪ ಅವರು ಹೇಳಿಕೆಯಲ್ಲಿ ದಾಖಲಿಸಿದ್ದಾರೆ ಎಂದು ನ್ಯಾಯಾಲಯದ ಮುಂದೆ ಎಸ್‌ಪಿಪಿ ನ್ಯಾಯಾಲಯದ ಮುಂದೆ ವಿವರಿಸಿದರು. ಅದೇ ರೀತಿ, ನಂದೀಶ್ ಎಂಬ ಅಭ್ಯರ್ಥಿಯ ತಂದೆ ಬಸವರಾಜಪ್ಪ ಅವರು ಕೆಪಿಎಸ್‌ಸಿ ಸದಸ್ಯೆ ಬಿ.ವಿ.ಗೀತಾ ಅವರೊಂದಿಗೆ ನೇರ ಸಂಪರ್ಕದಲ್ಲಿದ್ದುಕೊಂಡು ವಾಟ್ಸ್‌ಪ್ ಮೂಲಕ ಮಾತುಕತೆ ನಡೆಸಿದ್ದರು. ಅಲ್ಲಿಯೂ 50 ಲಕ್ಷ ರೂಪಾಯಿ ಬೇಡಿಕೆಯಿಟ್ಟು, 40 ಲಕ್ಷಕ್ಕೆ ಡೀಲ್ ಕುದುರಿಸಿ ಈಗಾಗಲೇ 20 ಲಕ್ಷ ರೂಪಾಯಿ ಹಣ ವರ್ಗಾವಣೆಯಾಗಿರುವುದು ತನಿಖೆಯಲ್ಲಿ ದೃಢಪಟ್ಟಿದೆ.

ಸಾಹುಕಾರ್ ಪಿಎ ಖಾತೆಯಿಂದ ಹಣ ವರ್ಗಾವಣೆ

ಕೆಪಿಎಸ್‌ಸಿ ಕಚೇರಿ ಪರಿಶೀಲನೆ ವೇಳೆ ಹಾಗೂ ಶಿವಶಂಕರಪ್ಪ ಅವರ ಪಿಎ ಬಳಿ ಬ್ಯಾಂಕ್ ಡೆಪಾಸಿಟ್ ರಶೀದಿಗಳು ಪತ್ತೆಯಾಗಿವೆ. ಗೀತಾ ಅವರು ತಮ್ಮ ಸಂಬಂಧಿಕರ ಖಾತೆಗಳ ಮೂಲಕ ನಗದು ಡೆಪಾಸಿಟ್ ಮಾಡಿಸಿಕೊಂಡಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ವಕೀಲರು ತಿಳಿಸಿದ್ದಾರೆ.