- ಆಕ್ರಮಣಕಾರಿ ಶ್ವಾನಗಳ ಸಾಕಣೆಗೆ ನಿಷೇಧ
- ಇನ್ಮುಂದೆ ಹೊಸ ರೂಲ್ಸ್
- ಪರವಾನಗಿ ಕಡ್ಡಾಯ ಸೇರಿ ವಿವಿಧ ಮಾನದಂಡ ಜಾರಿಗೆ ಸಿದ್ಧತೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ರಾಜಧಾನಿಯಲ್ಲಿ ಬೀದಿನಾಯಿ ಸಮಸ್ಯೆ ತೀವ್ರವಾಗುತ್ತಿರುವ ಹಿನ್ನೆಲೆ ಸಾಕು ನಾಯಿಗಳನ್ನು ನಿಯಂತ್ರಣದಲ್ಲಿ ಇಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಂದಾಗಿದೆ. ಪರವಾನಗಿ ಕಡ್ಡಾಯ ಸೇರಿ ಕೆಲ ಮಾನದಂಡಗಳನ್ನು ತರುವ ಮೂಲಕ ಜಿಬಿಎ ಹೊಸ ಕಾಯ್ದೆ ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ.
ಈಗಾಗಲೇ ನಗರದಲ್ಲಿ ಬೀದಿ ನಾಯಿಗಳ ಹಾವಳಿ ತಡೆಯುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಕೂಡ ಕೆಲ ನಿಯಮಗಳನ್ನು ಅನುಸರಿಸಲು ಸ್ಥಳಿಯ ಸಂಸ್ಥೆಗಳಿಗೆ ಸೂಚನೆ ನೀಡಿತ್ತು. ಅದಾಗ್ಯೂ ಸಾಕು ನಾಯಿಗಳಿಂದ ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ತೀವ್ರ ಸಮಸ್ಯೆ ಉಂಟಾಗುತ್ತಿದೆ ಎಂದು ಜನರು ಜಿಬಿಎಗೆ ದೂರು ನೀಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪಾಲಿಕೆ, ಕೆಲ ಮಾನದಂಡ ಅನುಸರಿಸಿ ಸಾಧು ಸ್ವಭಾವದ ಹಾಗೂ ಅಕ್ರಮ ಸ್ವಭಾವದ ನಾಯಿಗಳನ್ನು ಸಾಕುವುದಕ್ಕೆ ಹಾಗೇ ವಸತಿ ಸಮುಚ್ಚಯಗಳಲ್ಲಿ ಹಾಗೂ ಮನೆಗಳಲ್ಲಿ ಪಾಲಿಸುವುದಕ್ಕೆ ಹೊಸ ನಿಯಮ ಜಾರಿಗೆ ತರುವಂತೆ ಜಿಬಿಎ ಮುಖ್ಯ ಅಯುಕ್ತ ಎಂ. ಮಹೇಶ್ವರ ರಾವ್ ಅವರು 5 ಪಾಲಿಕೆ ಅಯುಕ್ತರಿಗೆ ಸೂಚನೆ ನೀಡಿದ್ದಾರೆ.
ಷರತ್ತು ಅನ್ವಯ: ಕಳೆದ ಸಾಲಿನಲ್ಲಿ ಜಿಬಿಎ ಪಶುಪಾಲನೆ ಇಲಾಖೆಯು ಸಾಕು ನಾಯಿಗಳ ಸಮೀೆ ನಡೆಸಿದಾಗ, ಸುಮಾರು 1.15 ಲಕ್ಷ ಸಾಕು ನಾಯಿಗಳ ಮಾಹಿತಿ ಕಲೆಹಾಕಲಾಗಿತ್ತು. ಇವುಗಳ ಪಾಲನೆಗೆಂದು ಪ್ರಾಣಿ ಹಿಂಸೆ 1960ರ ಕಾಯ್ದೆ ಪ್ರಕಾರ ಕೆಲ ಷರತ್ತುಗಳನ್ನು ವಿಧಿಸಿ, ಸಾರ್ವಜನಿಕರು ಮನೆಯಲ್ಲಿ ಸಾಕುವುದಕ್ಕೆ ಅವಕಾಶವಿದೆ. ಇನ್ಮುಂದೆ ಹೊಸ ಕಾಯ್ದೆಯಲ್ಲಿ ಸಾಕು ನಾಯಿಗಳನ್ನು ಸಾಕುವುದಕ್ಕೆ ಜಿಬಿಎ ಪಶುಪಾಲನೆ ಇಲಾಖೆಯಿಂದ ಪರವಾನಗಿ ಪಡೆಯಬೇಕು. ವಾರ್ಷಿಕವಾಗಿ ಜಿಬಿಎಗೆ ಇಂತ್ತಿಷ್ಟು ಅಂತ ಹಣ ಪಾವತಿ ಮಾಡಿ, ಪ್ರತಿವರ್ಷ ಪರವಾನಗಿ ನವೀಕರಣ ಮಾಡಿಸಿಕೊಳ್ಳಬೇಕು. ಹಾಗೆಯೆ ಕ್ರೂರ ಸ್ವಭಾವ ನಾಯಿಗಳನ್ನು ಸಾಕುವುದು ನಿಷೇಧ ಮಾಡಲಾಗುವುದು ಎಂದು ತಿಳಿಸಿದೆ.
* ಎಲ್ಲ ಸಾಕು ನಾಯಿಗಳಿಗೆ ರೇಬೀಸ್ ಲಸಿಕೆ ಹಾಕಿಸುವುದು
* ಲಸಿಕೆ ಹಾಕಿದ ಬಗ್ಗೆ ನೊಂದಾಯಿತ ಪಶುವೈದ್ಯರಿಂದ ದೃಢೀಕರಣ ಅಗತ್ಯ
* 12 ತಿಂಗಳಿಗಿಂತ ಹೆಚ್ಚಿನ ವಯಸ್ಸಿನ ನಾಯಿಗೆ ಸಂತಾನಹರಣ ಚಿಕಿತ್ಸೆ ಕಡ್ಡಾಯ
* ಸಾಕುನಾಯಿ ಮಾಲೀಕರು ತಮ್ಮ ನಾಯಿಗಳಿಗೆ ಸ್ವಂತ ಹಣದಲ್ಲಿ ಮೈಕ್ರೋ ಚಿಪ್ ಅಳವಡಿಸಬೇಕು
* ನೆರೆಹೊರೆಯವರಿಗೆ ತೊಂದರೆ ಅಗದಂತೆ ಸಾಕಬೇಕು
* ಮೂರು ನಾಯಿಗಳಿಗಿಂತ ಹೆಚ್ಚಾಗಿ ಸಾಕಿದರೆ, ಅಂತಹ ನಾಯಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದು ಪ್ರಾಣಿ ಕೇಂದ್ರಕ್ಕೆ ಕಳುಹಿಸಲಾಗುತ್ತದೆ
* ನಗರ ಪಾಲಿಕೆ ಬೈಲಾಗಳ ಪ್ರಕಾರ ನಾಯಿಗಳನ್ನು ಸಾಕಬೇಕು
* ಒಂದು ವೇಳೆ ಬೈಲಾ ನಿಯಮ ಉಲ್ಲಂಘನೆ ಮಾಡಿದರೆ, ಕಾನೂನು ಕ್ರಮ
* ಸಾಕು ನಾಯಿ ತಪ್ಪಿಸಿಕೊಂಡಲ್ಲಿ ಪಾಲಿಕೆ ಅಧಿಕಾರಿಗಳು ವಶಕ್ಕೆ ಪಡೆದರೆ, ದಂಡ ಪಾವತಿಸಿ ಬಿಡಿಸಿಕೊಳ್ಳಬೇಕು
* 72 ಗಂಟೆಯೊಳಗೆ ಬಿಡಿಸಿಕೊಂಡರೆ ಸಾವಿರ ರೂ., ನಂತರದ ಸಮಯಕ್ಕೆ ನಿತ್ಯ 200 ರೂ. ದಂಡ
* ಒಂದು ವೇಳೆ ಬಿಡಿಸಿಕೊಳ್ಳದೆ ಹೋದರೆ ನಾಯಿಯನ್ನು ಪ್ರಾಣಿ ದಯಾ ಸಂಘಕ್ಕೆ ಹಸ್ತಾಂತರ
* ನಾಯಿಗಳನ್ನು ವಾಕಿಂಗ್ ಕರೆದುಕೊಂಡು ಹೊದಾಗ ನಾಯಿಯ ಕತ್ತಿಗೆ ಹಗ್ಗ/ಚೈನ್ ಅಳವಡಿಕೆ ಕಡ್ಡಾಯ
* ವಾಕಿಂಗ್ ವೇಳೆಯಲ್ಲಿ ನಾಯಿ ರಸ್ತೆಯಲ್ಲಿ ಗಲೀಜು ಮಾಡಿದರೆ, ಅದನ್ನು ಮಾಲೀಕರೇ ಸ್ವಚ್ಛಗೊಳಿಸಬೇಕು
* ಅಪಾರ್ಟ್ಮೆಂಟ್ಗಳಲ್ಲಿ ಉಗ್ರ ಸ್ವರೂಪದ ನಾಯಿಗಳ ಸಾಕಣೆಗೆ ನಿಷೇಧ
* ಜರ್ಮನ್ ಶಪಾರ್ಡ್, ರೊಟ್ರೇಲರ್, ಡಾಬರ್ಮನ್, ಹೌಂಡ ನಾಯಿ ಸಾಕಣೆಗೆ ನಿಷೇಧ
* ನಿಷೇಧಿತ ನಾಯಿಗಳನ್ನು ಸಾಕಿದರೆ, ಸಾರ್ವಜನಿಕರು ಓಡಾಡುವ ಪ್ರದೇಶದಲ್ಲಿ ಪ್ರವೇಶ ನಿಷೇಧ.