ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಈ ಬಾರಿಯ ನಾಡಪ್ರಭು ಕೆಂಪೇಗೌಡ ಜಯಂತಿ ವೇಳೆ ಹಮ್ಮಿಕೊಂಡಿದ್ದ ಎಸ್.ಎಂ. ಕೃಷ್ಣ ರಸ್ತೆ ಉದ್ಘಾಟನೆ, ಮಾರಥಾನ್ ಹಾಗೂ 15 ಲಕ್ಷ ಸಸಿ ನೆಡುವಿಕೆ ಕಾರ್ಯಕ್ರಮಕ್ಕೆ ಬರೋಬರಿ 9.50 ಕೋಟಿ ರೂ. ವೆಚ್ಚ ಮಾಡಿದೆ. ಈ ವೇಳೆ ವೇದಿಕೆ ಕಾರ್ಯಕ್ರಮ, ಊಟ-ತಿಂಡಿಗಾಗಿ 5.5 ಕೋಟಿ ರೂ. ಖರ್ಚು ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಜೂ.27ರಂದು ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿರ್ಮಿಸಿರುವ ಮುಖ್ಯ ಆರ್ಟೀರಿಯಲ್ ರಸ್ತೆ (ಎಸ್.ಎಂ. ಕೃಷ್ಣ ರಸ್ತೆ) ಬಳಿ ಸರ್ಕಾರದ ವತಿಯಿಂದ ರಾಜ್ಯ ಮಟ್ಟದ ಕೆಂಪೇಗೌಡ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗಿತ್ತು. ಅದೇ ದಿನ 15 ಲಕ್ಷ ಸಸಿಗಳನ್ನು ನೆಟ್ಟು ವಿಶ್ವದಾಖಲೆ ನಿರ್ಮಿಸುವ ಕಾರ್ಯಕ್ರಮ ಮತ್ತು ಮ್ಯಾರಥಾನ್ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಸ್ವತ: ಸಿಎಂ ಡಿ.ಕೆ. ಶಿವಕುಮಾರ್ ಉದ್ಘಾಟಿಸಿದ್ದರು.
ಇಡೀ ಸಮಾರಂಭಕ್ಕೆ ಬಿಡಿಎ ವೆಚ್ಚ ಮಾಡಿದ್ದ ಹಣಕ್ಕೆ ಮೂರು ಕಡತಗಳನ್ನು ಸೃಷ್ಟಿಸಿ ಅನುಮೋದನೆ ಕೋರಿ ನಗರಾಭಿವೃಧ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಜತೆಗೆ ಖರ್ಚು ಮಾಡಲಾದ ಮೊತ್ತಕ್ಕೆ ಕೆಟಿಪಿಪಿ ಕಾಯ್ದೆ ಅಡಿಯಲ್ಲಿ 4ಜಿ ವಿನಾಯ್ತಿ ನೀಡುವಂತೆ ಬಿಡಿಎ ಮನವಿ ಮಾಡಿತ್ತು. ಕಡತ ಪರಿಶೀಲಿಸಿರುವ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು 9.50 ಕೋಟಿ ರೂ. ಬಿಲ್ ಪಾವತಿಗೆ ಒಪ್ಪಿಗೆ ಸೂಚಿಸಿರುವುದು ಆರ್ಟಿಐ ಅರ್ಜಿಗೆ ಪ್ರಾಧಿಕಾರ ಮಾಹಿತಿ ನೀಡಿದೆ.
ವಿಶೇಷವೆಂದರೆ, ಸಮಾರಂಭಕ್ಕಾಗಿ ಅಂದು ನಿರ್ಮಿಸಿದ್ದ ವೇದಿಕೆ, ಜರ್ಮನ್ ಟೆಂಟ್, ಎ.ಸಿ. ವ್ಯವಸ್ಥೆ, ಶಾಲು, ಹಾರ, ಸ್ಮರಣಿಕೆ, ವಿಐಪಿ ಆಸನ ವ್ಯವಸ್ಥೆ, ನೆಲಹಾಸು, ಮೊಬೈಲ್ ಶೌಚಾಲಯ, ವಿವಿಐಪಿ ಫುಡ್ ಕೋರ್ಟ್ ಸೇರಿ ಇತರ ಅಗತ್ಯ ಸೇವೆಗಾಗಿ 5.5 ಕೋಟಿ ರೂ. ಖರ್ಚು ಮಾಡಲಾಗಿದೆ. ಈ ಮೊತ್ತದಲ್ಲಿ 1.55 ಕೋಟಿ ರೂ. ಹಣವನ್ನು ಪ್ರಾಧಿಕಾರದ ಅಧಿಕಾರಿ/ಸಿಬ್ಬಂದಿ, ಪೊಲೀಸ್, ಕಲಾವಿದರು, ಅತಿಥಿಗಳು ಹಾಗೂ ಸಸಿ ನೆಡಲು ಆಗಮಿಸಿದ್ದ 40 ಸಾವಿರ ಮಂದಿಗೆ ಊಟ-ತಿಂಡಿಗಾಗಿಯೇ 1.55 ಕೋಟಿ ರೂ. ವ್ಯಯ ಮಾಡಲಾಗಿದೆ.
ಬಿಡಿಎ ಕೆಂಪೇಗೌಡ ಲೇಔಟ್, ಡಾ. ಶಿವರಾಮ ಕಾರಂತ ಲೇಔಟ್ ಹಾಗೂ ಬನಶಂಕರಿ 6ನೇ ಹಂತದ ಬಡಾವಣೆಯಲ್ಲಿ ಒಟ್ಟು 15 ಲಕ್ಷ ಸಸಿಗಳನ್ನು ನೆಡುವ ಬೃಹತ್ ಮಟ್ಟದ ಕಾರ್ಯಕ್ರಮವನ್ನು ನಡೆಸಿತು. ಇದಕ್ಕಾಗಿ 2.61 ಕೋಟಿ ರೂ. ವೆಚ್ಚ ಮಾಡಿದೆ. ಈ ಹಣವನ್ನು ವೇದಿಕೆ ನಿರ್ಮಾಣ/ಆಸನ ವ್ಯವಸ್ಥೆಗೆ 10 ಲಕ್ಷ ರೂ., ಉಪಾಹಾರ/ಊಟದ ವ್ಯವಸ್ಥೆಗೆ 30 ಲಕ್ಷ ರೂ., ಛಾಯಾಚಿತ್ರೀಕರಣ / ವಿಡಿಯೋ / ಡ್ರೋನ್ ಸೇವೆಗೆ 13 ಲಕ್ಷ, ದಿಕ್ಸೂಚಿ ನಾಮಲಕಕ್ಕೆ 10.05 ಲಕ್ಷ ರೂ. ಹಾಗೂ ಮೊಬೈಲ್ ಶೌಚಾಲಯ/ನೀರಿನ ಟ್ಯಾಂಕರ್ ಸೇವೆಗೆ 14 ಲಕ್ಷ ರೂ. ಬಿಲ್ ಮಾಡಲಾಗಿದೆ.
ರಾಜ್ಯ ಸರ್ಕಾರ ಆಚರಿಸಿದ ಕೆಂಪೇಗೌಡ ಜಯಂತಿಯನ್ನು ಬಿಡಿಎ ಹಣದ ಕೈಗೊಳ್ಳಲಾಗಿದೆ. ಕಾರ್ಯಕ್ರಮ ಸ್ವಾಗತಾರ್ಹವಾದರೂ, ವೇದಿಕೆ, ಊಟ-ತಿಂಡಿ ಹಾಗೂ ಇತರ ಬಾಬ್ತಿಗಾಗಿ ದುಂದುವೆಚ್ಚ ಮಾಡಿರುವುದು ಸರಿಯಲ್ಲ. ಭವಿಷ್ಯದಲ್ಲಾದರೂ ಪ್ರಾಧಿಕಾರವು ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಬೇಕು ಎಂದು ಆರ್ಟಿಐ ಅಡಿಯಲ್ಲಿ ಮಾಹಿತಿ ಸಂಗ್ರಹಿಸಿರುವ ಜಯಪ್ರಕಾಶ್ ನಾರಾಯಣ ವಿಚಾರ ವೇದಿಕೆಯ ಅಧ್ಯಕ್ಷ ಬಿ.ಎಂ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಎಸ್.ಎಂ. ಕೃಷ್ಣ ರಸ್ತೆ ಹಾಗೂ ಸಸಿ ನೆಡುವಿಕೆ ಕಾರ್ಯಕ್ರಮಕ್ಕೆ ಸಾರ್ವಜನಿಕರು ಮತ್ತು ಸ್ವಯಂಸೇವಕರನ್ನು ಕರೆತರಲು ಬಿಡಿಎಯು ಬಸ್ ವ್ಯವಸ್ಥೆ ಮಾಡಿತ್ತು. ಇದಕ್ಕಾಗಿ ಬಿಎಂಟಿಸಿಯಿಂದ 1,319 ಬಸ್ಗಳನ್ನು ಬಾಡಿಗೆಗೆ ಪಡೆಯಲಾಗಿತ್ತು. ಪ್ರತಿ ಬಸ್ಗೆ 12,400 ರೂ.ನಂತೆ ಬಾಡಿಗೆಯಂತೆ ಒಟ್ಟು 1.62 ಕೋಟಿ ರೂ. ಬಿಲ್ ಪಾವತಿಸಲಾಗಿದೆ.