orr road 
ಬೆಂಗಳೂರು

ಒಆರ್‌ಆರ್ ಟೆಕ್ ಕಾರಿಡಾರ್‌ನಲ್ಲಿ ರಸ್ತೆ ಅಭಿವೃದ್ಧಿ

ಆರ್.ತುಳಸಿಕುಮಾರ್

ಪ್ರಮುಖ ಮುಖ್ಯಾಂಶಗಳು

  • 450 ಕೋಟಿ ವೆಚ್ಚದಲ್ಲಿ ಪುನರ್ ಅಭಿವೃದ್ಧಿಗೆ ಜಿಬಿಎ ಒಪ್ಪಿಗೆ
  • 17.1 ಕಿ.ಮೀ. ಮಾರ್ಗದುದ್ದಕ್ಕೂ ಜಾಗತಿಕ ಮಟ್ಟದ ಸೌಕರ್ಯ
ಬೆಂಗಳೂರು: ಮಹಾನಗರದ ಟೆಕ್ ಕಾರಿಡಾರ್ ಎಂದೇ ಕರೆಯಲ್ಪಡುವ ಕೆ.ಆರ್.ಪುರ - ಸಿಲ್ಕ್ ಬೋರ್ಡ್ ನಡುವಣ ಹೊರವರ್ತುಲ ರಸ್ತೆ (ಒಆರ್‌ಆರ್) ಮಾರ್ಗವನ್ನು ಜಾಗತಿಕ ಮಟ್ಟದಲ್ಲಿ ಪುನರ್ ಅಭಿವೃದ್ಧಿಗೊಳಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಿರ್ಧರಿಸಿದೆ.
ದಶಕದಿಂದ ಸಂಚಾರ ಸಿಕ್ಕುಗೆ ಕುಖ್ಯಾತಿ ಪಡೆದಿರುವ ಈ ಮಾರ್ಗದ ಆಸುಪಾಸಿನಲ್ಲಿ ನೂರಾರು ಸಂಖ್ಯೆಯಲ್ಲಿ ಐಟಿ ಕಂಪನಿಗಳು ಕಾರ್ಯಚರಿಸುತ್ತಿವೆ. ಇವುಗಳಲ್ಲಿ ಕಾರ್ಯನಿರ್ವಹಿಸುವ ಟೆಕ್ಕಿಗಳು 5-6 ಲಕ್ಷದಷ್ಟಿದ್ದಾರೆ. ಟೆಕ್ಕಿಗಳು ಸೇರಿ ಈ ಭಾಗದಲ್ಲಿ ಹಾದುಹೋಗುವವರ ಸಂಖ್ಯೆ 8 ಲಕ್ಷ್ವಇದ್ದು, ಅಂದಾಜು 4 ಲಕ್ಷ ವಾಹನಗಳು ಸಂಚರಿಸುತ್ತದೆ. ಹಾಗಾಗಿ ಲಕ್ಷಾಂತರ ಮಂದಿ ಕೆ.ಆರ್.ಪುರ-ಸಿಲ್ಕ್ ಬೋರ್ಡ್ ದಾರಿ ದುರ್ಗಮ ಹಾದಿ ಸವೆಸಲು ನರಕಯಾತನೆಗೆ ಒಳಗಾಗಬೇಕಿದೆ. ಒಟ್ಟು 17.1 ಕಿ.ಮೀ. ಉದ್ದವಿರುವ ಈ ಮಾರ್ಗದಲ್ಲಿ ದಟ್ಟಣೆ ವೇಳೆ ಸಂಚರಿಸಲು 1-1.5 ತಾಸು ಬೇಕಾಗುತ್ತದೆ. ಟ್ರಾಫಿಕ್ ಜಾಮ್ ಆದಲ್ಲಿ ಇದರ ದುಪಟ್ಟು ಸಮಯವಾಗುತ್ತದೆ. ಪಾಲಿಕೆ ಹಾಗೂ ಸಂಚಾರ ಪೊಲೀಸರು ಕೈಗೊಂಡಿರುವ ಕ್ರಮಗಳು ಇಲ್ಲಿ ಸಂಚಾರ ಸುಧಾರಣೆ ಫಲ ನೀಡಿಲ್ಲ. ಹಾಗಾಗಿ ವಿಶೇಷ ಯೋಜನೆಯಡಿ ಈ ಮಾರ್ಗಕ್ಕೆ ಹೊಸ ರೂಪ ನೀಡಲು ರಾಜ್ಯ ಸರ್ಕಾರ ಕೂಡ ಸಹಮತ ವ್ಯಕ್ತಪಡಿಸಿದೆ.
17.1 ಕಿ.ಮೀ. ಉದ್ದದ ಟೆಕ್ ಕಾರಿಡಾರ್:
ಕೆ.ಆರ್.ಪುರ - ಸಿಲ್ಕ್ ಬೋರ್ಡ್ ಟೆಕ್ ಕಾರಿಡಾರ್ 17.1 ಕಿ.ಮೀ. ಉದ್ದವಿದೆ. ಪ್ರತಿ ಕಿ.ಮೀ. ವ್ಯಾಪ್ತಿಯಲ್ಲಿ ನೂರಾರು ಸಂಖ್ಯೆಯ ಐಟಿ ಹಾಗೂ ವಾಣಿಜ್ಯ ಕಂಪನಿಗಳು ಇವೆ. ಈ ಕಂಪನಿಗಳಿಂದಾಗಿ ಕೆ.ಆರ್.ಪುರ, ಮಹದೇವಪುರ, ದೊಡ್ಡನೆಕ್ಕುಂದಿ, ಮಾರತ್‌ಹಳ್ಳಿ, ಕಾಡುಬೀಸನಹಳ್ಳಿ, ಬೆಳ್ಳಂದೂರು, ಇಬ್ಬಲೂರು, ಅಗರ, ಎಚ್‌ಎಸ್‌ಆರ್ ಲೇಔಟ್, ಸಿಲ್ಕ್ ಬೋರ್ಡ್ ಸ್ಥಳಗಳು ದಟ್ಟಣೆಯ ಸ್ಪಾಟ್‌ಗಳಾಗಿ ಬದಲಾಗಿವೆ. ಈ ಮಾರ್ಗವನ್ನು ಸುಗಮ ಸಂಚಾರವನ್ನಾಗಿಸಲು ಅಡೆತಡೆ ಇಲ್ಲದಂತೆ ರಸ್ತೆಯನ್ನು ವಿಶ್ವದರ್ಜೆ ಮಟ್ಟಕ್ಕೇರಿಸಲಾಗುತ್ತದೆ. ಮುಖ್ಯ ಕ್ಯಾರೇಜ್, ಸರ್ವಿಸ್ ರಸ್ತೆ ಜತೆಗೆ ಪುಟ್‌ಪಾತ್, ಬೀದಿ ದೀಪ, ಒಳಚರಂಡಿ ಮಾರ್ಗ, ಕೇಬಲ್ ಅಳವಡಿಕೆಗೆ ಪ್ರತ್ಯೇಕ ಭೂಗತ ಮಾರ್ಗ, ಮಳೆನೀರು ಹಾದುಹೋಗಲು ಪ್ರತ್ಯೇಕ ಕಾಲುವೆ ನಿರ್ಮಿಸಲಾಗುತ್ತದೆ. ಜತೆಗೆ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಬಸ್‌ನಿಲ್ದಾಣಗಳಿಗೆ ಸ್ಥಳಾವಕಾಶ ಅಥವಾ ಬಸ್ ಬೇ ನಿರ್ಮಿಸಲಾಗುತ್ತದೆ. ಮಾರ್ಗದುದ್ದಕ್ಕೂ ವಾಹನ ನಿಲುಗಡೆಗೆ ನಿಷೇಧ ಹೇರಲಾಗುತ್ತದೆ. ಈ ಎಲ್ಲ ಸೌಲಭ್ಯ ಒದಗಿಸಲು ಪ್ರತೀ ಕಿ.ಮೀ.ಗೆ 26.27 ಕೋಟಿ ರೂ. ವೆಚ್ಚ ಮಾಡಲಾಗುತ್ತದೆ.
2 ಪ್ಯಾಕೇಜ್‌ಗಳಲ್ಲಿ ಕಾಮಗಾರಿ:
ಉದ್ದೇಶಿತ ಟೆಕ್ ಕಾರಿಡಾರ್ ಸಮಗ್ರ ಅಭಿವೃದ್ಧಿ ಕಾಮಗಾರಿಯನ್ನು ಎರಡು ಪ್ಯಾಕೇಜ್‌ಗಳಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. ಮೊದಲ ಪ್ಯಾಕೇಜ್ ಸಿಲ್ಕ್ ಬೋರ್ಡ್‌ನಿಂದ ಇಬ್ಬಲೂರು ಜಂಕ್ಷನ್‌ವರೆಗೆ (5.44 ಕಿ.ಮೀ.) ಹಾಗೂ ಎರಡನೇ ಪ್ಯಾಕೇಜ್ ಇಬ್ಬಲೂರು ಜಂಕ್ಷನ್‌ನಿಂದ ಕೆ.ಆರ್.ಪುರದವರೆಗೆ (11.57 ಕಿ.ಮೀ.) ಡಿಪಿಆರ್ ಸಿದ್ಧಪಡಿಸಲಾಗಿದೆ. ಈ ಎರಡೂ ಪ್ಯಾಕೇಜ್‌ಗಳು ಕ್ರಮವಾಗಿ 143 ಕೋಟಿ ರೂ. ಹಾಗೂ 307 ಕೋಟಿ ರೂ. ಮೊತ್ತ ಒಳಗೊಂಡಿರುತ್ತದೆ.
ಟೆಕ್ ಕಾರಿಡಾರ್‌ನ ಪ್ರಮುಖ ಸ್ಥಳಗಳಿವು:
ಕೆ.ಆರ್.ಪುರ, ಮಹದೇವಪುರ, ದೊಡ್ಡನೆಕ್ಕುಂದಿ, ಮಾರತ್‌ಹಳ್ಳಿ, ಕಾಡುಬೀಸನಹಳ್ಳಿ, ಬೆಳ್ಳಂದೂರು, ಇಬ್ಬಲೂರು, ಅಗರ, ಎಚ್‌ಎಸ್‌ಆರ್ ಲೇಔಟ್, ಸಿಲ್ಕ್ ಬೋರ್ಡ್.
ಟೆಕ್ ಕಾರಿಡಾರ್ ಅಭಿವೃದ್ಧಿ ಏಕೆ?:
ನಗರದ ಅತಿ ವಾಹನ ದಟ್ಟಣೆ ಸ್ಥಳಗಳಲ್ಲಿ ಕೆ.ಆರ್.ಪುರ-ಸಿಲ್ಕ್ ಬೋರ್ಡ್ ಕುಖ್ಯಾತಿ ಪಡೆದಿದೆ. ಮಳೆಗಾಲದಲ್ಲಿ ಟ್ರಾಫಿಕ್ ದಟ್ಟಣೆ ಉಂಟಾದರೆ ಮಧ್ಯರಾತ್ರಿವರೆಗೂ ಜನರು ವಾಹನಗಳಲ್ಲಿ ರಸ್ತೆಯಲ್ಲೇ ಇರಬೇಕಾಗುತ್ತದೆ. ಹಾಗಾಗಿ ಇಲ್ಲಿನ ಸಂಚಾರ ಸಿಕ್ಕು ವಿದೇಶಗಳಲ್ಲೂ ಸದ್ದು ಮಾಡಿ ಐಟಿ ಸಿಟಿ ಹೆಸರಿಗೆ ಕಳಂಕ ತಂದಿದೆ. ಈ ವಿಚಾರವಾಗಿ ವರ್ತುಲ ರಸ್ತೆಯ ಐಟಿ ಕಂಪನಿಗಳ ಸಂಘವು ಹಲವು ವರ್ಷಗಳಿಂದ ರಸ್ತೆ ಸಮಸ್ಯೆಗೆ ಮುಕ್ತಿ ನೀಡುವಂತೆ ಸರ್ಕಾರವನ್ನು ಆಗ್ರಹಿಸುತ್ತಲೇ ಬಂದಿವೆ. ಸರ್ಕಾರ ಹಾಗೂ ಪಾಲಿಕೆ ಪ್ರತೀ ವರ್ಷ ಹತ್ತಾರು ಬಾರಿ ಸಭೆ ನಡೆಸಿದ್ದರೂ, ಪರಿಹಾರ ಮರೀಚಿಕೆ ಆಗಿದೆ. ಈಗ ಸರ್ಕಾರ ಹಾಗೂ ಜಿಬಿಎ ಟೆಕ್ ಕಾರಿಡಾರ್‌ಗೆ ಶಾಶ್ವತ ಪರಿಹಾರ ಒದಗಿಸಲು 450 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ರಸ್ತೆ ಅಭಿವೃದ್ಧಿಗೆ ಮುಂದಾಗಿದೆ.
ಬಜೆಟ್‌ನಲ್ಲಿ ಸೇರಿಸಲು ಕಸರತ್ತು:
ಒಆರ್‌ಆರ್‌ನ ಟೆಕ್ ಕಾರಿಡಾರ್ ರಸ್ತೆ ಅಭಿವೃದ್ಧಿಯನ್ನು ತ್ವರಿತವಾಗಿ ಕೈಗೆತ್ತಿಕೊಂಡು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಜಿಬಿಎ ಇಂಗಿತ ವ್ಯಕ್ತಪಡಿಸಿದೆ. ಇದಕ್ಕಾಗಿ ದೊಡ್ಡ ಮೊತ್ತವನ್ನು ಒಮ್ಮೆಲೇ ಖರ್ಚು ಮಾಡಲು ಪೂರ್ವ ಪಾಲಿಕೆ ಅಥವಾ ಬಿ-ಸ್ಮೈಲ್‌ಗೆ ಸಾಧ್ಯವಾಗದು. ಹಾಗಾಗಿ ಈ ಯೋಜನೆಯನ್ನು 2026-27ನೇ ಸಾಲಿನ ರಾಜ್ಯ ಆಯವ್ಯಯದಲ್ಲಿ ಅಡಕಗೊಳಿಸಿ ಅನುದಾನ ಪಡೆಯುವ ಕಸರತ್ತು ನಡೆಲಾಗಿದೆ. ಬಜೆಟ್‌ನಲ್ಲಿ ಪ್ರಕಟಗೊಂಡಲ್ಲಿ ಈ ವರ್ಷವೇ ಕಾಮಗಾರಿ ಕೈಗೆತ್ತಿಕೊಳ್ಳುವ ಉದ್ದೇಶ ಇದೆ ಎಂದು ಜಿಬಿಎ ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯಾಂಶ:
* ಟೆಕ್ ಕಾರಿಡಾರ್ ರಸ್ತೆ ಉದ್ದ - 17.1 ಕಿ.ಮೀ.
* ರಸ್ತೆ ಮಾರ್ಗ - ಕೆ.ಆರ್.ಪುರ - ಸಿಲ್ಕ್ ಬೋರ್ಡ್
* ಯೋಜನಾ ವೆಚ್ಚ - 450 ಕೋಟಿ ರೂ.
* 1ನೇ ಪ್ಯಾಕೇಜ್ - 5.44 ಕಿ.ಮೀ. (143 ಕೋಟಿ ರೂ.)
* 2ನೇ ಪ್ಯಾಕೇಜ್ - 11.57 ಕಿ.ಮೀ. (307 ಕೋಟಿ ರೂ.)