athletes 
ಬೆಂಗಳೂರು

ಸಾಧಕ ಕ್ರೀಡಾಳುಗಳಿಗೆ ಸರಕಾರಿ ಉದ್ಯೋಗದಲ್ಲಿ ಮೀಸಲು

ಪ್ರಮುಖ ಮುಖ್ಯಾಂಶಗಳು

  • ಬಸವನಗುಡಿ ಶಾಸಕ ಎಲ್.ಎ. ರವಿಸುಬ್ರಹ್ಮಣ್ಯ ಹೇಳಿಕೆ
  • ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತರಿಗೆ ಗೌರವ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಲ್ಲ ಬಗೆಯ ಕ್ರೀಡೆಗಳಿಗೆ ಆದ್ಯತೆ ನೀಡಿದ್ದು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಕ್ರೀಡಾಳುಗಳಿಗೆ ಸರಕಾರಿ ಉದ್ಯೋಗದಲ್ಲಿ ಮೀಸಲು ಕಲ್ಪಿಸಿದ್ದಾರೆ. ಇದರ ಸದುಪಯೋಗವನ್ನು ಯುವ ಕ್ರೀಡಾಪಟುಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಎಲ್.ಎ. ರವಿಸುಬ್ರಹ್ಮಣ್ಯ ಹೇಳಿದರು.

ನಗರದ ಚೆನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿನ ವಿದ್ಯಾಪೀಠ ಟೇಕ್ವಾಂಡೋ ಕೇಂದ್ರವು ವಿದ್ಯಾಪೀಠ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಇತ್ತೀಚಿಗೆ ಹರಿಯಾಣದಲ್ಲಿ ನಡೆದ ‘13ನೇ ಸ್ಟೂಡೆಂಟ್ಸ್ ಒಲಂಪಿಕ್ ನ್ಯಾಷನಲ್ ಗೇಮ್ಸ್ ಕ್ರೀಡಾಕೂಟ-2026’ರಲ್ಲಿ ಚಿನ್ನದ ಪದಕ ಪಡೆದ ವಿಜೇತರನ್ನು ಅಭಿನಂದಿಸಿ ಮಾತನಾಡಿದರು.
ಕ್ರೀಡಾಪಟುಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಿದರೆ ಸರಕಾರಿ ಉದ್ಯೋಗ ಪಡೆಯಲು ಅವಕಾಶವಿದೆ. ಹಾಗಾಗಿ ಮಕ್ಕಳು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಸಮಯ, ಶ್ರಮ ವ್ಯರ್ಥ ಎಂಬ ಮನೋಭಾವದಿಂದ ಪೋಷಕರು ಹೊರಬರಬೇಕು. ಯುವ ಕ್ರೀಡಾಪಟುಗಳು ಶ್ರದ್ಧೆಯಿಂದ ಅಭ್ಯಾಸ ನಡೆಸಿ ಉತ್ತಮ ಸಾಧನೆ ಮಾಡಲು ಶ್ರಮಿಸಬೇಕು ಎಂದು ಅವರು ಕಿವಿಮಾತು ಹೇಳಿದರು.
ತರಬೇತುದಾರ ಎಂ. ಪ್ರಕಾಶ್ ಅವರು ಪೊಲೀಸ್ ಹುದ್ದೆ ತೊರೆದು ತಮ್ಮ ಕ್ರೀಡಾ ಕಲೆಯನ್ನು ಮಕ್ಕಳಿಗೆ ಧಾರೆ ಎರೆಯುತ್ತಿರುವುದು ಶ್ಲಾಘನೀಯ. ಮಕ್ಕಳು ಇದೇ ರೀತಿ ಹೆಚ್ಚಿನ ಅಭ್ಯಾಸ ನಡೆಸಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಸಾಧನೆ ಮಾಡುವ ಮೂಲಕ ನಮ್ಮ ಕ್ಷೇತ್ರ, ರಾಜ್ಯ, ದೇಶದ ಕೀರ್ತಿಯನ್ನು ಬೆಳಗಲಿ ಎಂದು ಶಾಸಕ ರವಿಸುಬ್ರಹ್ಮಣ್ಯ ಆಶಿಸಿದರು.
ಕಾರ್ಯಕ್ರಮದಲ್ಲಿ ಬಿಬಿಎಂಪಿ ಮಾಜಿ ಸದಸ್ಯ ಸಂಗಾತಿ ವೆಂಕಟೇಶ್, ಟೇಕ್ವೊಂಡೋ ತರಬೇತುದಾರರಾದ ಎಂ.ಪ್ರಕಾಶ್, ಪ್ರಭಾಕರ್, ಸ್ಥಳೀಯ ಮುಖಂಡ ಅನಿಲ್ ಹಾಜರಿದ್ದರು.