ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಮಾಫಿ ಸಾಕ್ಷಿ ಪ್ರದೋಷ್‌ನನ್ನು ಜೈಲಿನಿಂದ ನ್ಯಾಯಾಲಯಕ್ಕೆ ಸುರಕ್ಷಿತವಾಗಿ ಕರೆತಂದು, ವಾಪಸ್ ಜೈಲಿಗೆ ಕರೆದೊಯ್ಯಲು ಕೇಂದ್ರ ವಲಯದ ಸಶಸ್ತ್ರ ಮೀಸಲು ಪಡೆಗೆ ಕೋರ್ಟ್ ನಿರ್ದೇಶನ ನೀಡಿದೆ.
ಶನಿವಾರವೂ ಪ್ರಕರಣದ ವಿಚಾರಣೆ ನಡೆಯಿತು. ವಿಚಾರಣೆ ವೇಳೆ ನ್ಯಾಯಾಲಯವು ‘ಸಾಕ್ಷಿಯನ್ನು ಹಾಜರುಪಡಿಸುವ ಪ್ರಕ್ರಿಯೆಯಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರ ಯಾವುದೇ ಹಸ್ತಕ್ಷೇಪ ಅಥವಾ ಸಹಾಯ ಇರಬಾರದು’ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಆರೋಪಿ ದರ್ಶನ್ ಪರ ವಕೀಲರು, ಪ್ರದೋಷ್‌ನನ್ನು ಮೊನ್ನೆಯ 3 ದಿನ ಕಾಮಾಕ್ಷಿಪಾಳ್ಯ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ ಆತನ ಮೇಲೆ ಪ್ರಭಾವ ಬೀರಿರುವ ಸಾಧ್ಯತೆಯಿದೆ. ಆದ್ದರಿಂದ ‘ಪ್ರದೋಷ್‌ಗೆ ಸಾಕ್ಷಿ ನುಡಿಯಲು ಹೇಳಿಕೊಟ್ಟಿದ್ದಾರೆ’ ಎಂಬ ಅಂಶವನ್ನು ಸಾಕ್ಷಿ ದಾಖಲೆ ಪಟ್ಟಿಯಲ್ಲಿ ಸೇರಿಸಲು ಮನವಿ ಮಾಡಿದರು.
ಇದಕ್ಕೆ ಆಕ್ಷೇಪಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್, ಪ್ರದೋಷ್‌ಗೆ ಕೋರ್ಟ್‌ಗೆ ಹಾಜರುಪಡಿಸಿ, ಜೈಲಿಗೆ ಕರೆದೊಯ್ಯುವಾಗ ಬಾಡಿವೋರ್ನ್ ಕ್ಯಾಮರಾ ಧರಿಸಿದ್ದ ಜೈಲು ಸಿಬ್ಬಂದಿ ಆತನ ಬಳಿಯೇ ಇದ್ದರು. ಆ ದೃಶ್ಯವನ್ನು ಪರಿಶೀಲಿಸಿದಾಗ ಆತ ಯಾರೊಂದಿಗೂ ಮಾತನಾಡಿರುವುದಿಲ್ಲ. ಈ ತರಹದ ಅನುಮಾನಗಳಿದ್ದರೆ ಅಂದೇ ಆರೋಪಿ ದರ್ಶನ್ ಪ್ರಶ್ನಿಸಬೇಕಿತ್ತು. ಇದೀಗ ಸಾಕ್ಷಿ ಪಟ್ಟಿಯಲ್ಲಿ ‘ಸಾಕ್ಷಿ ನುಡಿಯಲು ಹೇಳಿಕೊಟ್ಟಿದ್ದಾರೆ’ ಎಂದು ಉಲ್ಲೇಖಿಸುವಂತೆ ಮನವಿ ಮಾಡಿಕೊಳ್ಳಲು ಅವರಿಗೆ ಹಕ್ಕಿಲ್ಲ. ಆದರೆ ಪಾಟಿ ಸವಾಲು ವೇಳೆ ಇದನ್ನು ಪ್ರಶ್ನಿಸಬಹುದು ಎಂದು ವಾದಿಸಿದರು.
‘ಪ್ರದೋಷ್‌ನನ್ನು ಕಾಮಾಕ್ಷಿಪಾಳ್ಯ ಪೊಲೀಸರೇ ನ್ಯಾಯಾಲಯಕ್ಕೆ ಕರೆದುಕೊಂಡು ಬರಬೇಕೆಂದಿಲ್ಲ. ಆದರೆ ಆತನನ್ನು ನ್ಯಾಯಾಲಯಕ್ಕೆ ಯಾರೇ ಕರೆತಂದರು ಸುರಕ್ಷಿತವಾಗಿ ಕರೆತರಬೇಕು’ ಎಂದು ಪ್ರಸನ್ನ ಕುಮಾರ್ ಕೋರ್ಟ್‌ಗೆ ಮನವಿ ಮಾಡಿದರು.
ವಾದ-ವಿವಾದಗಳನ್ನು ಆಲಿಸಿದ ನ್ಯಾಯಾಲಯವು ‘ಪ್ರದೋಷ್‌ಗೆ’ ಎಸ್ಕಾರ್ಟ್ ನಿಯೋಜಿಸಿರುವುದು ನಿರ್ದೇಶನವೇ ಹೊರತು, 2ನೇ ಆರೋಪಿ ದರ್ಶನ್ ಮಾಡಿರುವ ಆರೋಪ ಕುರಿತು ನೀಡಿರುವ ನ್ಯಾಯಾಲಯದ ಅಂತಿಮ ಆದೇಶವಲ್ಲ ಎಂದು ತಿಳಿಸಿ ಸೋಮವಾರಕ್ಕೆ ಆದೇಶವನ್ನು ಕಾಯ್ದಿರಿಸಿದೆ.