darshan 
ಬೆಂಗಳೂರು

ರೇಣುಕಸ್ವಾಮಿ ಕೊಲೆ ಪ್ರಕರಣ, ದರ್ಶನ್‌ಗೆ ಮತ್ತೊಮ್ಮೆ ಹಿನ್ನಡೆ

ಮಾಫಿ ಸಾಕ್ಷಿ ಹೇಳಿಕೆ ಮುಂದೂಡುವಂತೆ ಕೋರಿದ್ದ ಆರೋಪಿ ನಟ ದರ್ಶನ್ ಅರ್ಜಿ ವಜಾ..!

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಮಾಫಿ ಸಾಕ್ಷಿ ಹೇಳಿಕೆಯನ್ನು ಕೆಲ ದಿನಗಳ ಕಾಲ ಮುಂದೂಡಬೇಕೆಂದು ಕೋರಿದ್ದ ಆರೋಪಿ ನಟ ದರ್ಶನ್ ಅರ್ಜಿಯನ್ನು 59ನೇ ಸಿಸಿಎಚ್ ನ್ಯಾಯಾಲಯ ಶನಿವಾರ ವಜಾಗೊಳಿಸಿದೆ.

ಪ್ರಕರಣದ ವಿಚಾರಣೆ ಶನಿವಾರವೂ ನಡೆದಿದ್ದು, ಈ ವೇಳೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು, ‘ಹೈಕೋರ್ಟ್ ಆದೇಶದಂತೆ ಪ್ರಾಸಿಕ್ಯೂಷನ್ ತನ್ನಿಷ್ಟದಂತೆ ಹಾಗೂ ಕಾನೂನುಬದ್ಧವಾಗಿ ಸಾಕ್ಷಿಗಳನ್ನು ವಿಚಾರಣೆ ನಡೆಸಲು ಸಂಪೂರ್ಣ ಸ್ವಾತಂತ್ರ್ಯವಿದೆ’ ಎಂದು ಸ್ಪಷ್ಟಪಡಿಸಿತು.

ಆರೋಪಿ ನಟ ದರ್ಶನ್ ಪರ ವಕೀಲರು, ಮಾಫಿ ಸಾಕ್ಷಿ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬೇಕಿದೆ. ಈಗಾಗಲೇ ಹೈಕೋರ್ಟ್‌ನಲ್ಲಿ ಅರ್ಜಿ ವಜಾಗೊಂಡಿರುವ ಆದೇಶ ಪ್ರತಿ ನಮ್ಮ ಕೈಗೆ ಸಿಕ್ಕಿಲ್ಲ. ಅದು ಸಿಕ್ಕ ಬಳಿಕ ಮೇಲ್ಮನವಿ ಸಲ್ಲಿಸುತ್ತೇವೆ. ಅಲ್ಲಿಯ ತನಕ ಮಾಫಿ ಸಾಕ್ಷಿ ಪ್ರದೋಷ್ ಹೇಳಿಕೆಯನ್ನು ಮುಂದೂಡುವಂತೆ ಮನವಿ ಮಾಡಿಕೊಂಡರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್, ಈ ಹಿಂದೆ ಸುಪ್ರೀಂ ಕೋರ್ಟ್, ‘1 ವರ್ಷದಲ್ಲಿ 60 ಸಾಕ್ಷಿಗಳನ್ನು ವಿಚಾರಣೆ ಮಾಡಿ ಮುಗಿಸಬೇಕೆಂದು ನಿರ್ದೇಶನ ನೀಡಿದೆ’. ಇದೀಗ ಪದೆಪದೇ ಸಮಯ ಕೇಳಿ ಟೈಮ್ ವ್ಯರ್ಥ ಮಾಡುತ್ತಿದ್ದಾರೆ ಎಂದು ವಾದ ಮಂಡಿಸಿದರು.

ಮುಂದುವರಿದು ‘ಆರೋಪಿಯೊಬ್ಬ ಮಾಫಿ ಸಾಕ್ಷಿ ಆಗುವಾಗ ಅದನ್ನು ತಡೆಯಲು ಅಥವಾ ಪ್ರಶ್ನಿಸಲು ಸಹ ಆರೋಪಿಗೆ ಅಧಿಕಾರ ಇರುವುದಿಲ್ಲ ಎಂದು ಹೈಕೋರ್ಟ್ 2 ಸಲ ಹೇಳಿದೆ. ಸುಪ್ರೀಂ ಕೋರ್ಟ್ ಸಹ ಬೇರೆ-ಬೇರೆ ಪ್ರಕರಣಗಳಲ್ಲಿ ಈ ಮಾತನ್ನು ಉಲ್ಲೇಖಿಸಿದೆ. ಹಾಗಾಗಿ ಸೋಮವಾರವೇ ಮಾಫಿ ಸಾಕ್ಷಿ ವಿಚಾರಣೆ ನಡೆಸಬೇಕು. ಮುಂದೂಡಬೇಡಿ ಎಂದು ನ್ಯಾಯಾಧೀಶರಿಗೆ ಮನವಿ ಮಾಡಿದರು.

ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು, ಆರೋಪಿ ನಟ ದರ್ಶನ್ ಅರ್ಜಿಯನ್ನು ತಿರಸ್ಕರಿಸಿ, ‘ಮಾಫಿ ಸಾಕ್ಷಿ ಹೇಳಿಕೆ ದಾಖಲು ಸೋಮವಾರವೇ (ಸೆ.28ರಂದು) ನಡೆಯಲಿದೆ. ಅಂದು ಪ್ರದೋಷ್‌ನನ್ನು ಕಡ್ಡಾಯವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು’ ಪೊಲೀಸರಿಗೆ ಸೂಚನೆ ನೀಡಿದರು.