- ಜೆಸಿಬಿ ತರಿಸಿ ತೆರವುಗೊಳಿಸಿದ ದಕ್ಷಿಣ ಪಾಲಿಕೆ ಆಯುಕ್ತ
- ಎಚ್‌ಎಸ್‌ಆರ್ ಲೇಔಟ್‌ನ 6ನೇ ಸೆಕ್ಟರ್‌ನಲ್ಲಿ ಒತ್ತುವರಿ ತೆರವಿಗೆ ಆದೇಶ
ಬೆಂಗಳೂರು: ಫುಟ್‌ಪಾತ್ ಮೇಲೆ ನಿರ್ಮಿಸಿದ್ದ ಅನಧಿಕೃತ ಕಟ್ಟಡವನ್ನು ದೃಢಪಡಿಸಿಕೊಂಡ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಜೆಸಿಬಿ ಯಂತ್ರವನ್ನು ತರಿಸಿದ ದಕ್ಷಿಣ ಪಾಲಿಕೆಯ ಆಯುಕ್ತರು, ಇಂತಹ ಕಟ್ಟಡಗಳು ಕಂಡುಬಂದಲ್ಲಿ ತಕ್ಷಣವೇ ತೆರವುಗೊಳಿಸುವ ಎಚ್ಚರಿಕೆಯನ್ನು ರವಾನಿಸಿದ್ದಾರೆ.
ಮಂಗಳವಾರ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ವೇಳೆ ಎಚ್‌ಎಸ್‌ಆರ್ ಲೇಔಟ್‌ನ 6ನೇ ಸೆಕ್ಟರ್‌ನ 17ನೇ ಅಡ್ಡರಸ್ತೆಯ ಸೂಪರ್ ಮಾರ್ಕೆಟ್ ಎದುರುಗಡೆ ಹೊಸದಾಗಿ ಕಟ್ಟಡ ನಿರ್ಮಾಣ ಕೆಲಸ ನಡೆಯುತ್ತಿತ್ತು. ಆ ಕಟ್ಟಡದ ಮುಂದಿನ ಚರಂಡಿ ಮೇಲೆ ಶೆಡ್ ರೂಪದ ಕಟ್ಟಡವನ್ನು ಅನಧಿಕೃತವಾಗಿ ನಿರ್ಮಿಸಿದ್ದನ್ನು ಕಂಡು ಆಯುಕ್ತ ಕೆ.ಎನ್. ರಮೇಶ್ ಅಧಿಕಾರಿಗಳ ಬಳಿ ವಿಚಾರಿಸಿದರು. ಶೆಡ್‌ಅನ್ನು ಚರಂಡಿ ಮೇಲೆ ನಿರ್ಮಿಸಿದ್ದನ್ನು ಆಕ್ಷೇಪಿಸಿ ತಕ್ಷಣವೇ ಸ್ಥಳಕ್ಕೆ ಜೆಸಿಬಿ ತರಿಸಿ ಆ ಕಟ್ಟಡದ ಭಾಗವನ್ನು ತೆರವುಗೊಳಿಸಲಾಯಿತು. ಜತೆಗೆ 6ನೇ ಸೆಕ್ಟರ್‌ನ ಚರಂಡಿಗಳಲ್ಲಿ ತುಂಬಿರುವ ಹೂಳನ್ನು ಒಂದು ವಾರದೊಳಗೆ ತೆಗೆಯಬೇಕು ಎಂದು ಗಡುವು ನೀಡಿದರು.
ವೈಟ್ ಟಾಪಿಂಗ್ ಕಾಮಗಾರಿ ಪರಿಶೀಲನೆ:
ಹೊಸೂರು ಮುಖ್ಯರಸ್ತೆಯ ಫುಟ್‌ಪಾತ್ ಹಾಗೂ ಆಡುಗೋಡಿ ಪೊಲೀಸ್ ಠಾಣೆ ಮುಂಭಾಗದ ವೈಟ್ ಟಾಪಿಂಗ್ ರಸ್ತೆಗಳನ್ನು ಆಯುಕ್ತರು ಪರಿಶೀಲಿಸಿದರು. ಈ ರಸ್ತೆಯಲ್ಲಿನ ಚರಂಡಿಯು ಹೂಳಿನಿಂದ ತುಂಬಿದ್ದು, ಅದನ್ನು ಶೀಘ್ರವೇ ತೆರವುಗೊಳಿಸಬೇಕು. ಜತೆಗೆ ಚರಂಡಿಗಳಲ್ಲಿ ಅಳವಡಿಸಿರುವ ಅನಧಿಕೃತ ಒಎ್ಸಿ ಕೇಬಲ್‌ಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಈ ವೇಳೆ ಬೊಮ್ಮನಹಳ್ಳಿ ವಲಯದ ಮುಖ್ಯ ಅಭಿಯಂತರ ಕೆ.ವಿ. ರವಿ, ಕಾರ್ಯಪಾಲಕ ಅಭಿಯಂತರರಾದ ಅನಿಲ್ ಹಾಗೂ ವೈ.ಎಂ ರಾಜು ಉಪಸ್ಥಿತರಿದ್ದರು.
ತಗ್ಗು ಪ್ರದೇಶಗಳ ಕಾಮಗಾರಿ ತ್ವರಿತಗೊಳಿಸಿ:
ಎಚ್‌ಎಸ್‌ಆರ್ ಲೇಔಟ್‌ನ 7ನೇ ಸೆಕ್ಟರ್ ತಗ್ಗು ಪ್ರದೇಶಗಳ ರಸ್ತೆಗಳ ಮೇಲೆ ಹಾಗೂ ಚರಂಡಿಗಳಲ್ಲಿ ನೀರು ನಿಲ್ಲುತ್ತಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮದ ಅನುದಾನದಲ್ಲಿ ಕೈಗೊಂಡಿದ್ದ ರಸ್ತೆ ಹಾಗೂ ಚರಂಡಿ ಎತ್ತರಿಸಿ ಡಾಂಬರೀಕರಣ ಮಾಡುವ ಕಾಮಗಾರಿಯನ್ನು ಆಯುಕ್ತರು ಪರಿಶೀಲಿಸಿದರು. ತುರ್ತಾಗಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿ ಚರಂಡಿಯಲ್ಲಿ ನೀರು ನಿಲ್ಲದಂತೆ ಕ್ರಮವಹಿಸಲು ಅಧಿಕಾರಿಗಳಗೆ ಸೂಚನೆ ನೀಡಿದರು.