- ಮಳಿಗೆಗಳ ನಾಮಫಲಕ ಕಿತ್ತುಹಾಕಿದ್ದಕ್ಕೆ ವ್ಯಾಪಾರಿಗಳ ಆಕ್ಷೇಪ
- ಉತ್ತರ, ದಕ್ಷಿಣ, ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಷ್ಟೇ ಕಾರ್ಯಾಚರಣೆ
ಬೆಂಗಳೂರು: ವಾರಾಂತ್ಯದ ರಜೆ ಬಳಿಕ ಉತ್ತರ, ದಕ್ಷಿಣ ಹಾಗೂ ಕೇಂದ್ರ ನಗರ ಪಾಲಿಕೆಗಳು ತಮ್ಮ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಪುನರಾರಂಭಿಸಿದ್ದು, ಮಂಗಳವಾರ ಪ್ರಮುಖ ವ್ಯಾಪಾರ ಕೇಂದ್ರವಾದ ಜನನಿಬಿಡ ಅವೆನ್ಯೂ ರಸ್ತೆಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಯಿತು. ಈ ವೇಳೆ ಪಾಲಿಕೆ ಸಿಬ್ಬಂದಿ ಹಾಗೂ ವ್ಯಾಪಾರಿಗಳ ನಡುವೆ ವಾಗ್ವಾದ ನಡೆದು ಹೈಡ್ರಾಮಾ ನಡೆಯಿತು.
ಅವೆನ್ಯೂ ರಸ್ತೆಯನ್ನು ಎರಡು ವರ್ಷದ ಹಿಂದೆ ವೈಟ್ ಟಾಪಿಂಗ್ ಮಾಡಲಾಗಿದೆ. ಆ ವೇಳೆ ಪ್ರಮುಖ ಕಡೆಗಳಲ್ಲಿ ಫುಟ್‌ಪಾತ್‌ನಲ್ಲಿದ್ದ ಅಡೆತಡೆಯನ್ನು ತೆಗೆದುಹಾಕಲಾಗಿತ್ತು. ಹೀಗಿದ್ದರೂ, ಪಾದಚಾರಿ ಮಾರ್ಗದ ಮೇಲೆ ಒತ್ತುವರಿ ಭಾಗ ಇಲ್ಲದಿದ್ದರೂ, ಮಳಿಗೆಗಳ ನಾಮಫಲಕಗಳನ್ನು ಕಿತ್ತೆಸೆಯಲಾಗಿದೆ. ತೆರವು ಕಾರ್ಯ ಬದಲು ವ್ಯಾಪಾರಿಗಳಿಗೆ ಕಿರುಕುಳ ನೀಡುತ್ತಿದ್ದು, ಪಾಲಿಕೆ ಅಧಿಕಾರಿಗಳು ಪಾರದರ್ಶಕವಾಗಿ ಕೆಲಸ ಮಾಡುವಂತೆ ಮಳಿಗೆದಾರರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಮಾತಿನ ಚಕಮಕಿ ನಡೆಯಿತಾದರೂ, ಪೊಲೀಸರ ಮಧ್ಯಪ್ರವೇಶದಿಂದ ದೊಡ್ಡ ಗಲಾಟೆ ಆಗಲಿಲ್ಲ. ಮುಂಜಾಗ್ರತಾ ಕ್ರಮವಾಗಿ ತೆರವು ವೇಳೆ ಅವೆನ್ಯೂ ರಸ್ತೆ ಉದ್ದಕ್ಕೂ ಇದ್ದ ಮಳಿಗೆಗಳನ್ನು ಮುಚ್ಚಿಸಲಾಗಿತ್ತು. ಕಾರ್ಯಾಚರಣೆ ವೇಳೆ ಬಹುತೇಕ ಮಳಿಗೆಗಳ ಮೇಲೆ ಅಳವಡಿಸಿದ್ದ ನಾಮಫಲಕಗಳನ್ನು ಕಿತ್ತೆಸೆಯಲಾಯಿತು. ಬೆರಳೆಣಿಕೆಯಷ್ಟು ಕಡೆಗಳಲ್ಲಿ ಮಾತ್ರ ಫುಟ್‌ಪಾತ್ ಮೇಲಿದ್ದ ಮೆಟ್ಟಿಲುಗಳನ್ನು ಜೆಸಿಬಿ ಯಂತ್ರದಿಂದ ತೆರವು ಮಾಡಲಾಗಿದೆ.
ಅವೆನ್ಯೂ ರಸ್ತೆಯ ಒಂದು ಬದಿ ಗಾಂಧಿನಗರ ಮತಕ್ಷೇತ್ರ ಮತ್ತೊಂದು ಬದಿ ಚಿಕ್ಕಪೇಟೆ ಮತಕ್ಷೇತ್ರಕ್ಕೆ ಒಳಪಟ್ಟಿದೆ. ಈ ಎರಡೂ ಕ್ಷೇತ್ರಗಳ ಗಡಿ ಪ್ರದೇಶದಲ್ಲಿ ತಾರತಮ್ಯ ಆಗದಿರಲು ಪಾಲಿಕೆ ಸಿಬ್ಬಂದಿ ಎರಡೂ ಕಡೆಗಳಲ್ಲಿ ತೆರವು ಕಾರ್ಯ ನಡೆಸಿತು. ಈ ಪ್ರದೇಶದಲ್ಲಿ 1.6 ಕಿ.ಮೀ. ಉದ್ದಕ್ಕೂ 4 ಪೆಟ್ಟಿ ಅಂಗಡಿಗಳು, 51 ಕೆನೋಪಿ, 10 ನಾಮಫಲಕ, 40 ಮೆಟ್ಟಿಲುಗಳ ಭಾಗ ಹಾಗೂ 24 ಟನ್ ಕಟ್ಟಡ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಅವೆನ್ಯೂ ರಸ್ತೆಯ ಕೆಲ ಅಡ್ಡರಸ್ತೆಗಳಲ್ಲೂ ತೆರವು ಕಾರ್ಯಾಚರಣೆ ಕೈಗೊಂಡಿದ್ದಕ್ಕೆ ವಣಿಕ ಸಮುದಾಯ ಆಕ್ರೋಶ ವ್ಯಕ್ತಪಡಿಸಿತು.
ಕೇಂದ್ರ ಪಾಲಿಕೆಯ ವಿವಿಧ ಭಾಗಗಳಲ್ಲಿ ಈವರೆಗೆ ಒಟ್ಟು 240 ಕಿ.ಮೀ. ಪಾದಚಾರಿ ಮಾರ್ಗಗಳಲ್ಲಿ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಯನಗರದಲ್ಲೂ ತೆರವು ಕಾರ್ಯ:
ದಕ್ಷಿಣ ಪಾಲಿಕೆ ವ್ಯಾಪ್ತಿಯ ಜಯನಗರ 8ನೇ ಬ್ಲಾಕ್‌ನ ಕನಕಪುರ ರಸ್ತೆ, ಪದ್ಮನಾಭನಗರದ ಕೆ.ಎಸ್. ಲೇಔಟ್‌ನ ವ್ಯಾಸರಾಯ ಬಲ್ಲಾಳ ರಸ್ತೆ, ಮಂಗಳಮ್ಮನಪಾಳ್ಯ ಮುಖ್ಯರಸ್ತೆ ಸೇರಿ ಒಟ್ಟು 4.50 ಕಿ.ಮೀ. ಉದದಷ್ಟು ತೆರವು ಕಾರ್ಯ ಕೈಗೊಳ್ಳಲಾಯಿತು. ಈ ವೇಳೆ 20 ಅಂಗಡಿಗಳು, 20 ಕೈಗಾಡಿಗಳು, 11 ಎಸಿ ಶೀಟ್ ಪ್ರೊಜೆಕ್ಷನ್/ಕ್ಯಾನೋಪಿ, 13 ಮೆಟ್ಟಿಲು, 19 ಜಾಹೀರಾತು ಕಂಬ ಸೇರಿ 2 ಟನ್ ಕಟ್ಟಡ ತ್ಯಾಜ್ಯವನ್ನು ತೆರವುಗೊಳಿಸಿದ್ದು, ಕಾರ್ಪೋರೇಷನ್ ವ್ಯಾಪ್ತಿಯಲ್ಲಿ ಈವರೆಗೆ ಒಟ್ಟಾರೆ 155 ಕಿ.ಮೀ. ಉದ್ದದಷ್ಟು ಫುಟ್‌ಪಾತ್‌ಅನ್ನು ಅತಿಕ್ರಮಣಮುಕ್ತ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
12 ಟನ್ ಕಟ್ಟಡ ತ್ಯಾಜ್ಯ ತೆರವು:
ಉತ್ತರ ಪಾಲಿಕೆಯ ವಿದ್ಯಾರಣಪುರ ಮತ್ತು ದಾಸರಹಳ್ಳಿ ವಿಭಾಗಗಳಲ್ಲಿ ಮಂಗಳವಾರ 2.70 ಕಿ.ಮೀ. ಉದ್ದದಷ್ಟು ಫುಟ್‌ಪಾತ್ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು. ವಿದ್ಯಾರಣ್ಯಪುರ ವಿಭಾಗದಲ್ಲಿ ದೊಡ್ಡಬೊಮ್ಮಸಂದ್ರ ಸ್ವಾಗತ ಕಮಾನಿನಿಂದ ಭದ್ರಪ್ಪ ಲೇಔಟ್ ರಸ್ತೆವರೆಗೆ ಹಾಗೂ ದಾಸರಹಳ್ಳಿ ವಿಭಾಗದಲ್ಲಿ ಎಂ.ಎಸ್. ರಾಮಯ್ಯ ರಸ್ತೆಯಲ್ಲಿ ತೆರವು ಕಾರ್ಯ ನಡೆಯಿತು. ಈ ವೇಳೆ 3 ಅಂಗಡಿ, 12 ತಳ್ಳುವ ಗಾಡಿ, 15 ಎಸಿ ಶೀಟ್/ಕ್ಯಾನೋಪಿ, 40 ಜಾಹೀರಾತು ಕಂಬ, 3 ಮೆಟ್ಟಿಲುಗಳ ಭಾಗ ಸೇರಿ 12 ಟನ್ ಕಟ್ಟಡ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಈವರೆಗೆ ಒಟ್ಟು 240 ಕಿ.ಮೀ. ಉದ್ದದ ಫುಟ್‌ಪಾತ್ ಒತ್ತುವರಿಮುಕ್ತಗೊಳಿಸಲಾಗಿದೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.