- ಮುಸ್ಲಿಂ ವ್ಯಕ್ತಿಯ ವಿಚ್ಛೇದನ ಅರ್ಜಿ ವಜಾ
- ವಿಶೇಷ ವಿವಾಹ ಕಾಯ್ದೆ ಅಡಿ ನೋಂದಾಯಿಸಿದ್ದರೂ, ವೈಯಕ್ತಿಕ ಕಾನೂನು ಅನ್ವಯ
ಬೆಂಗಳೂರು:
ಶರಿಯತ್ ಕಾನೂನು ಮತ್ತು ಮುಸ್ಲಿಂ ಸಮುದಾಯದ ಸಂಪ್ರದಾಯದ ಪ್ರಕಾರ ನೆರವೇರಿದ ಮದುವೆಯನ್ನು, ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ನಂತರ ನೋಂದಾಯಿಸಿದ್ದರೂ ಮದುವೆಯ ಧಾರ್ಮಿಕ ಸ್ವರೂಪ ಬದಲಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ವಿಚ್ಛೇದನ ಕೋರಿಕೆ ತಿರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮುಸ್ಲಿಂ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ಟಿ.ಎಂ. ನದಾಫ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.
ವಿದೇಶಕ್ಕೆ ತೆರಳುವ ಉದ್ದೇಶದಿಂದ ದಂಪತಿಯು 2015ರ ಡಿಸೆಂಬರ್ನಲ್ಲಿ ತಮ್ಮ ಮದುವೆಯನ್ನು ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ನೋಂದಾಯಿಸಿಕೊಂಡಿದ್ದರು. ಆದರೆ, ಕೇವಲ ನೋಂದಣಿ ಮಾಡಿಸಿಕೊಂಡ ಕಾರಣಕ್ಕೆ ಶರಿಯತ್ ಕಾನೂನಿನ ಅಡಿಯಲ್ಲಿ ಜರುಗಿದ ಮದುವೆಯ ಧಾರ್ಮಿಕ ಸ್ವರೂಪ ಬದಲಾಗಿ ವೈಯಕ್ತಿಕ ಕಾನೂನಿನ ಚೌಕಟ್ಟನ್ನು ಕಳೆದುಕೊಳ್ಳುವುದಿಲ್ಲ. ಆದ್ದರಿಂದ, ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ನೋಂದಣಿ ಮಾಡಲಾಗಿದೆ ಎಂದು ಆ ಕಾಯ್ದೆ ಅಡಿಯಲ್ಲಿ ವಿಚ್ಛೇದನ ಕೋರಲು ಅವಕಾಶವಿಲ್ಲ ಎಂದು ಕೌಟುಂಬಿಕ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದೆ.
ಪತಿಯ ವಾದವೇನಿತ್ತು?:
ಪತಿಯ ಪರ ವಾದಿಸಿದ ವಕೀಲರು, ಒಮ್ಮೆ ಮದುವೆಯನ್ನು ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ನೋಂದಾಯಿಸಲ್ಪಟ್ಟರೆ, ಅದು ಮುಸ್ಲಿಂ ವಿವಾಹದ ಸ್ವರೂಪವನ್ನು ಕಳೆದುಕೊಳ್ಳುತ್ತದೆ ಮತ್ತು ವಿಶೇಷ ವಿವಾಹ ಕಾಯ್ದೆಯ ನಿಯಮಗಳನ್ನು ಬಳಸಿ ವಿಚ್ಛೇದನ ಕೋರಬಹುದು. ದೆಹಲಿ ಹೈಕೋರ್ಟ್ ಕೂಡ ಈ ವಾದಕ್ಕೆ ಪೂರಕವಾದ ತೀರ್ಪು ನೀಡಿದೆ ಎಂದು ವಾದಿಸಿದ್ದರು.
ಆದರೆ, ಈ ವಾದಕ್ಕೆ ವ್ಯತಿರಿಕ್ತ ವಾದಾಂಶ ಸಲ್ಲಿಸಿದ್ದ ಅಮಿಕಸ್ ಕ್ಯೂರಿ ವಕೀಲರು, ಯಾವುದೇ ಧಾರ್ಮಿಕ ಕಾನೂನಿನ ಅಡಿಯಲ್ಲಿ ನಡೆಯದ ವಿವಾಹಗಳಿಗೆ ಮಾತ್ರ ವಿಶೇಷ ವಿವಾಹ ಕಾಯ್ದೆಯ ವಿಚ್ಛೇದನ ನಿಯಮಗಳು ಅನ್ವಯಿಸುತ್ತವೆ. ಕೇವಲ ಆಡಳಿತಾತ್ಮಕ ನೋಂದಣಿಯಿಂದ ವೈಯಕ್ತಿಕ ಕಾನೂನಿನಡಿಯಲ್ಲಿ ನಡೆದ ಮದುವೆಯ ಮೂಲ ಸ್ವರೂಪ ಬದಲಾಗುವುದಿಲ್ಲ ಎಂದು ತಿಳಿಸಿದ್ದರು.
⚠️
ಎಲ್ಲ ಧಮೀರ್ಯರಿಗೂ ಅನ್ವಯ
ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ವಿವಾಹ ಕಾಯ್ದೆ ಮತ್ತು ಧಾರ್ಮಿಕ ಸಂಪ್ರದಾಯಗಳ ಪ್ರಕಾರ ನಡೆದ ಮದುವೆಗಳನ್ನು ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ನೋಂದಾಯಿಸಿದ್ದರೂ ವೈಯಕ್ತಿಕ ಕಾನೂನಿನ ವ್ಯಾಪ್ತಿ ಕೊನೆಗೊಳ್ಳುವುದಿಲ್ಲ. ವೈಯಕ್ತಿಕ ಕಾನೂನುಗಳು ಮತ್ತು ವಿಶೇಷ ವಿವಾಹ ಕಾಯ್ದೆಯ ನಡುವಿನ ಸಮನ್ವಯದ ಅರ್ಥೈಸುವಿಕೆ ಅಗತ್ಯವಾಗಿದೆ. ದೆಹಲಿ ಹೈಕೋರ್ಟ್ ನೀಡಿದ ತೀರ್ಪು ಈ ಪ್ರಕರಣದಲ್ಲಿ ಅನ್ವಯವಾಗುವುದಿಲ್ಲ. ಏಕೆಂದರೆ ಆ ಪ್ರಕರಣದಲ್ಲಿ ಮದುವೆಯು ನೆರವಾಗಿ ವಿಶೇಷ ಕಾಯ್ದೆ ಅಡಿಯಲ್ಲಿಯೇ ನಡೆದಿತ್ತು ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ:
ಬೆಂಗಳೂರಿನ ನಿವಾಸಿಗಳಾದ ದಂಪತಿಯ ವಿವಾಹವು ಶರಿಯತ್ ಕಾನೂನು ಮತ್ತು ಮುಸ್ಲಿಂ ಧಾರ್ಮಿಕ ವಿಧಿಗಳ ಮೂಲಕ ಬಸವನಗುಡಿಯ ಮಸೀದಿಯಲ್ಲಿ 2015ರ ಏಪ್ರಿಲ್ನಲ್ಲಿ ನಡೆದಿತ್ತು. ವಿದೇಶಕ್ಕೆ ತೆರಳುವಾಗ ದಾಖಲಾತಿಯ ಅಗತ್ಯಗಳಿಗಾಗಿ ತಮ್ಮ ವಿವಾಹವನ್ನು 2015ರ ಡಿಸೆಂಬರ್ನಲ್ಲಿ ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ನೋಂದಾಯಿಸಿಕೊಂಡಿದ್ದರು. ನಂತರ ವೈವಾಹಿಕ ಭಿನ್ನಾಭಿಪ್ರಾಯದಿಂದಾಗಿ ವಿಚ್ಚೇದನ ಕೋರಿದ್ದ ಪತಿಯು ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಜಾಗೊಂಡಿತ್ತು. ಇದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.