ಬೆಂಗಳೂರು: ಬೆಂಗಳೂರಿನ ಕೆ.ಜಿ. ಹಳ್ಳಿ ಪೊಲೀಸ್ ಠಾಣೆಗೆ ದಾಳಿ ಮಾಡಿ, ವಾಹನಗಳಿಗೆ ಬೆಂಕಿ ಹಚ್ಚಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ಸಲ್ಲಿಸಿರುವ ಚಾರ್ಜ್ಶೀಟ್ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಚಾರ್ಜ್ಶೀಟ್ ರದ್ದುಪಡಿಸಲು ನಿರಾಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಗೋವಿಂದಪುರದ ಸೈಯದ್ ಅಬ್ಬಾಸ್ ಸೇರಿ 15 ಮಂದಿ ಆರೋಪಿಗಳು ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳನ್ನು ವಜಾಗೊಳಿಸಿರುವ ನ್ಯಾಯಮೂರ್ತಿಗಳಾದ ಎಚ್.ಪಿ. ಸಂದೇಶ್ ಮತ್ತು ಬಿ. ಪ್ರಮೋದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.
ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲರು, ಈ ಪ್ರಕರಣದಲ್ಲಿ ಯುಎಪಿಎ ಅಡಿಯಲ್ಲಿ ಆರೋಪ ಹೊರಿಸಲು ಅಗತ್ಯವಾದ ಅಂಶಗಳು ಇಲ್ಲ. ರಾಜ್ಯ ಪೊಲೀಸರು ಮತ್ತು ಎನ್ಐಎ ತನಿಖೆಯಲ್ಲಿ ಗುರುತಿಸಲಾದ ಆರೋಪಿಗಳಲ್ಲಿ ವ್ಯತ್ಯಾಸವಿದೆ. ಆರೋಪಿಗಳು ಗಲಭೆಯಲ್ಲಿ ಮತ್ತು ವಾಹನಕ್ಕೆ ಬೆಂಕಿ ಹಚ್ಚುವ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂಬ ವಿಡಿಯೋ ದಾಖಲೆಗಳು ಸ್ಪಷ್ಟವಾಗಿದೆ. ಪೊಲೀಸರು ದಾಖಲಿಸಿದ್ದ ನಾಲ್ಕು ಪ್ರತ್ಯೇಕ ಎಫ್ಐಆರ್ಗಳ ಆರೋಪಿಗಳನ್ನು ಒಂದು ಸೇರಿಸಿ ಎನ್ಐಎ ಚಾರ್ಜ್ಶೀಟ್ ಸಲ್ಲಿಸಿದೆ. ಅರ್ಜಿದಾರರ ವಿರುದ್ಧ ಭಯೋತ್ಪಾದನೆಯ ಆರೋಪ ಹೊರಿಸಲಾಗಿದೆ. ಆದರೆ, ಅದಕ್ಕೆ ಪೂರಕ ಸಾಕ್ಷ್ಯಗಳಿಲ್ಲ ಎಂದು ಚಾರ್ಜ್ಶೀಟ್ ರದ್ದುಮಾಡುವಂತೆ ಕೋರಿದ್ದರು.
ಗಲಭೆ ನಡೆಸಲು ಸಂಚು:
ಆರೋಪಿಗಳು ಒಟ್ಟು ಸೇರಿ ಗಲಭೆ ನಡೆಸಲು ಸಂಚು ಹೂಡಿದ್ದರು ಎಂಬುದಕ್ಕೆ ಪೂರಕ ಸಾಕ್ಷ್ಯಗಳಿವೆ ಎಂದು ಸಿಡಿಆರ್ ಕರೆಗಳ ದಾಖಲೆಗಳನ್ನು ನ್ಯಾಯಾಲಯಕ್ಕೆ ಎನ್ಐಎ ಸಲ್ಲಿಸಿದ್ದರು. ಕಲ್ಲು, ಕಬ್ಬಿಣದ ರಾಡ್ಗಳು ಮತ್ತು ದೊಣ್ಣೆಯಿಂದ ಪೊಲೀಸ್ ಠಾಣೆ ಆವರಣದಲ್ಲಿ ದಾಳಿ ನಡೆಸಲಾಗಿದೆ. ಈ ಕೃತ್ಯಗಳಿಂದ ಜನರ ನಡುವ ಭಯ ಸೃಷ್ಟಿಸುವ ಇರಾದೆ ಆರೋಪಿಗಳಿಗಿತ್ತು. ಆರೋಪಿಗಳ ವೈಯಕ್ತಿಕ ಪಾತ್ರದ ಬಗ್ಗಯೂ ಸಾಕಷ್ಟು ಪೂರಕ ಸಾಕ್ಷ$್ಯಗಳಿವೆ. ಸಾಗಳಲ್ಲಿ ವ್ಯತ್ಯಾಸವಿದೆಯೇ ಎಂಬ ಬಗ್ಗೆ ಚಾರ್ಜ್ಶೀಟ್ ಅನ್ನು ವಿಚಾರಣೆಗೆ ಅಂಗೀಕರಿಸುವ ಮೊದಲು ಮಿನಿ ಟ್ರಯಲ್ ನಡೆಸುವ ಅಗತ್ಯವಿಲ್ಲ. ಇದೆಲ್ಲವೂ ಅಂತಿಮ ವಿಚಾರಣೆಯಲ್ಲಿ ತಿಳಿದುಬರಬೇಕಾದ ವಿಷಯಗಳು ಎಂದು ಎನ್ಐಎ ಪರ ವಕೀಲರು ವಾದಿಸಿದ್ದರು. ಈ ವಾದಗಳನ್ನು ಹೈಕೋರ್ಟ್ ಪರಿಗಣಿಸಿದೆ.
ಫೇಸ್ಬುಕ್ನಲ್ಲಿ ಮುಸ್ಲಿಂರ ವಿರುದ್ಧ ವಿವಾದಾತ್ಮಕ ಪೋಸ್ಟ್ ಮಾಡಿದ ಆರೋಪದ ಹಿನ್ನಲೆಯಲ್ಲಿ ಕೆ.ಜಿ. ಹಳ್ಳಿ ಮತ್ತು ಡಿ.ಜೆ. ಹಳ್ಳಿ ವ್ಯಾಪ್ತಿಯಲ್ಲಿ 2020ರ ಗಲಭೆ ಉಂಟಾಗಿತ್ತು. ಪೋಸ್ಟ್ ಮಾಡಿದ್ದ ನವೀನ್ ಎಂಬಾತನ ಮೇಲೆ ದೂರು ನೀಡಲು ಠಾಣೆಯ ಮುಂದೆ ಗುಂಪು ಜಮಾಯಿಸಿತ್ತು. ನಂತರ ಉದ್ವಿಗ್ನತೆ ಹೆಚ್ಚಾಗಿ ಗುಂಪು ಹಿಂಸಾಚಾರ ನಡೆದಿತ್ತು. ಅಂದಿನ ಪುಲಿಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಯೂ ಗಲಭೆಕೋರರ ದಾಳಿಗೆ ಒಳಗಾಗಿತ್ತು. ಆರಂಭದಲ್ಲಿ ರಾಜ್ಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ನಂತರ ತನಿಖೆಯು ಎನ್ಐಎಗೆ ವರ್ಗಾವಣೆಯಾಗಿತ್ತು.