ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ 
ಬೆಂಗಳೂರು

ರಾಜಕೀಯ ಭವಿಷ್ಯಕ್ಕಾಗಿ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ

ಡಿಸಿಎಂ ಡಾ.ಜಿ. ಪರಮೇಶ್ವರ್ ಕಳವಳ

ಬೆಂಗಳೂರು: ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಏಕರೂಪವಾಗಿ ಶೇ.50 ಹೆಚ್ಚಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿರುವುದು ಭಾರತದ ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆ ಮತ್ತು ಸಮಾನ ರಾಜಕೀಯ ಪ್ರಾತಿನಿಧ್ಯದ ದೃಷ್ಟಿಯಿಂದ ಗಂಭೀರ ಆತಂಕಗಳನ್ನು ಹುಟ್ಟುಹಾಕಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಪ್ರಶ್ನಿಸಿದ್ದಾರೆ.

ಕ್ಷೇತ್ರಗಳ ಸಂಖ್ಯೆಯನ್ನು ನಿಖರವಾಗಿ ಶೇ.50 ಹೆಚ್ಚಿಸಲು ಆಧಾರವೇನು ? ಇದಕ್ಕೆ ವೈಜ್ಞಾನಿಕ, ಜನಸಂಖ್ಯಾ ಅಥವಾ ಸಾಂವಿಧಾನಿಕ ಸಮರ್ಥನೆ ಏನು ? ಇಷ್ಟು ಮಹತ್ವದ ಸಾಂವಿಧಾನಿಕ ಬದಲಾವಣೆಯನ್ನು ಕೈಗೊಳ್ಳುವ ಮುನ್ನ ಸರ್ವಪಕ್ಷ ಸಭೆ ಕರೆಯದೆ, ಅಂತಾರಾಜ್ಯ ಮಂಡಳಿಯ ಮೂಲಕ ರಾಜ್ಯಗಳ ಅಭಿಪ್ರಾಯ ಪಡೆಯದೆ ಇಷ್ಟೊಂದು ಆತುರದಿಂದ ಮುಂದುವರಿಯುತ್ತಿರುವುದು ಏಕೆ?

ಈ ಪ್ರಕ್ರಿಯೆಗೆ ಮುಂದಾಗಿರುವ ಸಮಯ ಮತ್ತು ಅನುಸರಿಸುತ್ತಿರುವ ವಿಧಾನವು, ಆಡಳಿತ ಮತ್ತು ಸಾಧನೆಗಳ ಮೂಲಕ ಜನರ ಹೊಸ ಜನಾದೇಶ ಪಡೆಯುವ ಬದಲು, ಭಾರತದ ಚುನಾವಣಾ ವ್ಯವಸ್ಥೆಯನ್ನೇ ಬದಲಾಯಿಸುವ ಮೂಲಕ ಬಿಜೆಪಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ ಎಂಬ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಪ್ರಸ್ತಾವಿತ ಸೂತ್ರದ ಪ್ರಕಾರ ಕರ್ನಾಟಕದ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಈಗಿನ 28 ರಿಂದ 42ಕ್ಕೆ ಏರಿಕೆಯಾಗಲಿದೆ. ಅದೇ ರೀತಿ ಉತ್ತರ ಪ್ರದೇಶದ ಕ್ಷೇತ್ರಗಳ ಸಂಖ್ಯೆ 80ರಿಂದ 120ಕ್ಕೆ ಮತ್ತು ಬಿಹಾರದ ಕ್ಷೇತ್ರಗಳ ಸಂಖ್ಯೆ 40ರಿಂದ 60ಕ್ಕೆ ಹೆಚ್ಚಾಗಲಿದೆ. ಕರ್ನಾಟಕ ಮತ್ತು ಉತ್ತರ ಪ್ರದೇಶಗಳ ನಡುವಿನ ಸಂಸದೀಯ ಪ್ರಾತಿನಿಧ್ಯದ ಅಂತರ ಈಗಿರುವ 52 ಸ್ಥಾನಗಳಿಂದ 78 ಸ್ಥಾನಗಳಿಗೆ ವಿಸ್ತರಣೆಯಾಗಲಿದೆ. ಅಚ್ಚರಿಯ ಸಂಗತಿಯೆಂದರೆ, ಉತ್ತರ ಪ್ರದೇಶವೊಂದಕ್ಕೆ ಹೆಚ್ಚುವರಿಯಾಗಿ ದೊರೆಯುವ ಸ್ಥಾನಗಳ ಸಂಖ್ಯೆಯೇ ವಿಸ್ತರಿತ ಲೋಕಸಭೆಯಲ್ಲಿ ಕರ್ನಾಟಕದ ಒಟ್ಟು ಪ್ರಾತಿನಿಧ್ಯಕ್ಕೆ ಸರಿಸಮನಾಗಿರಲಿದೆ.

ಕರ್ನಾಟಕಕ್ಕೆ ಹೆಚ್ಚಿನ ಸಂಸದರು ಸಿಗಬಹುದು. ಆದರೆ, ರಾಷ್ಟ್ರೀಯ ನೀತಿಗಳನ್ನು ರೂಪಿಸುವಲ್ಲಿ, ಶಾಸಕಾಂಗದ ಆದ್ಯತೆಗಳನ್ನು ನಿರ್ಧರಿಸುವಲ್ಲಿ ಮತ್ತು ನಾಡಿನ ಜನರ ಮೇಲೆ ಪರಿಣಾಮ ಬೀರುವ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಕರ್ನಾಟಕದ ಧ್ವನಿ ಮಾತ್ರ ಸೀಮಿತವಾಗಿಯೇ ಉಳಿಯಲಿದೆ. ಏಕರೂಪದ ಶೇ.50 ಹೆಚ್ಚಳವು ಈಗಿರುವ ಅನುಪಾತದ ಪ್ರಾತಿನಿಧ್ಯವನ್ನು ಹಾಗೆಯೇ ಉಳಿಸಬಹುದೇ ಹೊರತು, ಸಂಸದೀಯ ಪ್ರಾತಿನಿಧ್ಯದಲ್ಲಿನ ಅಸಮಾನತೆಯನ್ನು ಕಡಿಮೆ ಮಾಡುವುದಿಲ್ಲ. ಕರ್ನಾಟಕಕ್ಕೆ ಎಷ್ಟು ಹೆಚ್ಚುವರಿ ಸ್ಥಾನಗಳು ದೊರೆಯುತ್ತವೆ ಎಂಬುದಷ್ಟೇ ಇಲ್ಲಿನ ಪ್ರಶ್ನೆಯಲ್ಲ, ರಾಷ್ಟ್ರೀಯ ಹಿತಾಸಕ್ತಿಯ ನಿರ್ಧಾರಗಳನ್ನು ರೂಪಿಸುವಲ್ಲಿ ಕರ್ನಾಟಕದ ಧ್ವನಿಗೆ ಎಷ್ಟು ಮಹತ್ವ ಸಿಗುತ್ತದೆ ಎಂಬುದೇ ಮೂಲಭೂತ ಪ್ರಶ್ನೆ.

2051ರವರೆಗೆ ರಾಜ್ಯಗಳ ಈಗಿನ ಅನುಪಾತದ ಪ್ರಾತಿನಿಧ್ಯವನ್ನು ರಕ್ಷಿಸುವ ನಿರ್ಧಾರ ವರದಿಯಾಗಿರುವುದು, ದಕ್ಷಿಣ ಭಾರತದ ರಾಜ್ಯಗಳು ಎತ್ತಿರುವ ನ್ಯಾಯಸಮ್ಮತ ಆತಂಕಗಳನ್ನು ಕೇಂದ್ರ ಸರ್ಕಾರವೂ ಗುರುತಿಸಿದೆ ಎಂಬುದನ್ನು ಸೂಚಿಸುತ್ತದೆ. ಸಾಂವಿಧಾನಿಕ ಸವಾಲೊಂದನ್ನು ಮುಂದೂಡುವುದಕ್ಕೂ ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಅನಿರ್ದಿಷ್ಟ ಕಾಲಮಿತಿಗಳ ಬದಲಿಗೆ, ಒಕ್ಕೂಟ ವ್ಯವಸ್ಥೆಯಲ್ಲಿನ ಸಮಾನತೆಯನ್ನು ಕಾಪಾಡುವ ಮತ್ತು ರಾಷ್ಟ್ರೀಯ ಅಭಿವೃದ್ಧಿಯ ಗುರಿಗಳನ್ನು ಯಶಸ್ವಿಯಾಗಿ ಈಡೇರಿಸಿದ ರಾಜ್ಯಗಳಿಗೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳುವ ಶಾಶ್ವತ ಹಾಗೂ ತಾತ್ವಿಕ ಚೌಕಟ್ಟನ್ನು ಭಾರತ ರೂಪಿಸಬೇಕಿದೆ.

ಅಗತ್ಯವಾದರೂ ಏನಿದೆ? 1976ರಲ್ಲಿ ಇಂದಿರಾ ಗಾಂಧಿ ಅವರ ನಾಯಕತ್ವದಲ್ಲಿ, ಜನಸಂಖ್ಯೆ ನಿಯಂತ್ರಣದ ರಾಷ್ಟ್ರೀಯ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವ ರಾಜ್ಯಗಳಿಗೆ ರಾಜಕೀಯವಾಗಿ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ ಸಂಸತ್ತು ರಾಜ್ಯಗಳ ನಡುವಿನ ಸಂಸದೀಯ ಸ್ಥಾನಗಳ ಹಂಚಿಕೆಯನ್ನು ಸ್ಥಗಿತಗೊಳಿಸಿತ್ತು. 2001ರಲ್ಲಿ 84ನೇ ಸಂವಿಧಾನ ತಿದ್ದುಪಡಿಯ ಮೂಲಕ ಈ ತತ್ವವನ್ನು ಮತ್ತೊಮ್ಮೆ ದೃಢಪಡಿಸಲಾಯಿತು. ಅಂದು ಈ ಸಾಂವಿಧಾನಿಕ ನಿರ್ಧಾರಗಳನ್ನು ಕೈಗೊಳ್ಳಲು ಕಾರಣವಾದ ಆಶಯಗಳು ಇಂದಿಗೂ ಅಷ್ಟೇ ಪ್ರಸ್ತುತವಾಗಿವೆ. ಕೇಂದ್ರ ಸರ್ಕಾರದ 2023ರ ಅಧಿಕೃತ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಒಟ್ಟು ಜನನ ದರ 1.9ರಷ್ಟಿದ್ದು, ಜನಸಂಖ್ಯೆಯ ಬದಲಾವಣೆಗೆ ಅಗತ್ಯವಾದ 2.1ರ ಬದಲಿ ದರಕ್ಕಿಂತ ಕಡಿಮೆಯಿದೆ. ಕರ್ನಾಟಕದ ಜನನ ದರ 1.5ರಷ್ಟಿದೆ. ದಕ್ಷಿಣ ಭಾರತದ ಐದೂ ರಾಜ್ಯಗಳಲ್ಲಿ ಈ ದರ 1.5 ಅಥವಾ ಅದಕ್ಕಿಂತ ಕಡಿಮೆಯಿದೆ. ಆದರೆ, ಉತ್ತರ ಪ್ರದೇಶದಲ್ಲಿ 2.6 ಮತ್ತು ಬಿಹಾರದಲ್ಲಿ 2.8ರಷ್ಟಿದೆ. ದಕ್ಷಿಣದ ರಾಜ್ಯಗಳ ಈ ಸಾಧನೆಗಳು ಮಹಿಳಾ ಶಿಕ್ಷಣ, ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆ, ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಹಾಗೂ ಕುಟುಂಬ ಕಲ್ಯಾಣ ಕಾರ್ಯಕ್ರಮಗಳಲ್ಲಿ ದಶಕಗಳ ಕಾಲ ಮಾಡಿರುವ ಹೂಡಿಕೆ ಮತ್ತು ಪರಿಶ್ರಮದ ಫಲವಾಗಿವೆ.ಜನಸಂಖ್ಯೆ ನಿಯಂತ್ರಣದ ರಾಷ್ಟ್ರೀಯ ಗುರಿಗಳನ್ನು ಯಶಸ್ವಿಯಾಗಿ ಈಡೇರಿಸಿರುವ ರಾಜ್ಯಗಳಿಗೆ ಆ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದಕ್ಕಾಗಿ ರಾಜಕೀಯವಾಗಿ ಯಾವುದೇ ಅನ್ಯಾಯವಾಗಬಾರದು. ತೆರಿಗೆ ಹಂಚಿಕೆ ಮತ್ತು ಸಂಪನ್ಮೂಲಗಳ ಹಂಚಿಕೆಯಲ್ಲಿ ಈಗಾಗಲೇ ಕರ್ನಾಟಕ ಅಸಮಾನತೆಯ ವಿರುದ್ಧ ತನ್ನ ದನಿ ಎತ್ತಿದೆ. ರಾಜಕೀಯ ಪ್ರಾತಿನಿಧ್ಯದಲ್ಲಿನ ಉತ್ತರವಿಲ್ಲದ ಪ್ರಶ್ನೆಗಳಿಂದ ಈ ಅಸಮಾನತೆ ಮತ್ತಷ್ಟು ಹೆಚ್ಚಾಗಬಾರದು. ಹೊಸ ಜನಗಣತಿ ಪ್ರಕ್ರಿಯೆ ನಡೆಯುತ್ತಿರುವಾಗ, ಹದಿನೈದು ವರ್ಷಗಳಷ್ಟು ಹಳೆಯದಾದ ಜನಸಂಖ್ಯಾ ದತ್ತಾಂಶವನ್ನು ಆಧರಿಸಿ ಕ್ಷೇತ್ರಗಳ ಪುನರ್‌ವಿಂಗಡಣೆ ಮಾಡುವ ಅಗತ್ಯವಾದರೂ ಏನಿದೆ?
ಮಹಿಳಾ ಮೀಸಲಾತಿಗೆ ಸಂಪೂರ್ಣ ಬದ್ಧರಾಗಿದ್ದೇವೆ ಮಹಿಳಾ ಮೀಸಲಾತಿಗೆ ನಾವು ಸಂಪೂರ್ಣ ಬದ್ಧರಾಗಿದ್ದೇವೆ. 2008ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿ, 2010ರಲ್ಲಿ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಆದರೆ, 2023ರಲ್ಲಿ ಮಹಿಳಾ ಮೀಸಲಾತಿಯ ಅನುಷ್ಠಾನವನ್ನು ಜನಗಣತಿ ಮತ್ತು ಕ್ಷೇತ್ರ ಪುನರ್‌ವಿಂಗಡಣೆಗೆ ಜೋಡಿಸಿದ್ದು ಬಿಜೆಪಿ ಸರ್ಕಾರವೇ. ಮಹಿಳಾ ಸಬಲೀಕರಣವನ್ನು ಚುನಾವಣಾ ಸರಕಾಗಬಾರದು. ಅಗತ್ಯವಾದ ಸಾಂವಿಧಾನಿಕ ತಿದ್ದುಪಡಿಯನ್ನು ತಂದು, ಈಗಿರುವ ಸಂಸತ್ತಿನ ಸ್ಥಾನಗಳ ಸಂಖ್ಯೆಯಲ್ಲಿಯೇ ಶೇ.33ರಷ್ಟು ಮಹಿಳಾ ಮೀಸಲಾತಿಯನ್ನು ಜಾರಿಗೆ ತಂದು, 2029ರ ಚುನಾವಣೆಯಿಂದಲೇ ಅದನ್ನು ಅನುಷ್ಠಾನಗೊಳಿಸಬೇಕು. ಕ್ಷೇತ್ರ ಪುನರ್‌ವಿಂಗಡಣೆಗೆ ಸಂಬಂಧಿಸಿದ ವೈಜ್ಞಾನಿಕ ಆಧಾರಗಳನ್ನು ಕೇಂದ್ರ ಸರ್ಕಾರ ಸಾರ್ವಜನಿಕವಾಗಿ ಪ್ರಕಟಿಸಬೇಕು, ಎಲ್ಲ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಬೇಕು ಮತ್ತು ನ್ಯಾಯಸಮ್ಮತವಾದ, ದೀರ್ಘಕಾಲಿಕ ಚೌಕಟ್ಟನ್ನು ರೂಪಿಸಬೇಕು ಎಂದು ನಾವು ಆಗ್ರಹಿಸುತ್ತೇವೆ. ಭಾರತಕ್ಕೆ ಬಲಿಷ್ಠ ಸಂಸತ್ತು, ಬಲಿಷ್ಠ ಒಕ್ಕೂಟ ವ್ಯವಸ್ಥೆ ಮತ್ತು ಪ್ರತಿಯೊಂದು ರಾಜ್ಯಕ್ಕೂ ಅರ್ಥಪೂರ್ಣ ರಾಜಕೀಯ ಪ್ರಾತಿನಿಧ್ಯ ದೊರೆಯುವ ಪ್ರಜಾಪ್ರಭುತ್ವದ ಅಗತ್ಯವಿದೆ. ಭಾರತದ ರಾಜಕೀಯ ಭವಿಷ್ಯವನ್ನು ನಿರ್ಧರಿಸಬೇಕಾದದ್ದು ಭಾರತದ ಸಂವಿಧಾನವೇ ಹೊರತು, ಯಾವುದೇ ರಾಜಕೀಯ ಪಕ್ಷದ ಭವಿಷ್ಯಕ್ಕಾಗಿ ಭಾರತದ ಸಂವಿಧಾನವನ್ನು ಬದಲಾಯಿಸಬಾರದು ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ ಅಭಿಪ್ರಾಯ ತಿಳಿಸಿದ್ದಾರೆ.