- ಹಂತ3ಎ ವಿಸ್ತರಣೆಯ ಭಾಗ ಅನುಮೋದನೆ ಸ್ಥಗಿತ
- ಮರುಪರಿಶೀಲಿಸಿ ಹೊಸ ಪ್ರಸ್ತಾವ ಸಲ್ಲಿಕೆಗೆ ಸೂಚನೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಮ್ಮ ಮೆಟ್ರೋದ ಹಂತ3ಎ ವಿಸ್ತರಣೆಯ ಭಾಗವಾದ ಹೆಬ್ಬಾಳ& ಸರ್ಜಾಪುರ ಮೆಟ್ರೋ ಕೆಂಪು ಮಾರ್ಗ ಯೋಜನೆಗೆ ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ಅನುಮೋದನೆ ಸ್ಥಗಿತಗೊಳಿಸಿ, ಯೋಜನೆಯನ್ನು ಮರುಪರಿಶೀಲಿಸುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತಕ್ಕೆ (ಬಿಎಂಆರ್ಸಿಎಲ್) ತಿಳಿಸಿದೆ.
ರಾಜಧಾನಿಯಲ್ಲಿ ಮೆಟ್ರೋ ಪ್ರಯಾಣ ದರ ಏರಿಕೆ ವಿಚಾರವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ಜಟಾಪಟಿ ನಡೆಯುತ್ತಿರುವ ಬೆನ್ನಲ್ಲೇ ಕೆಂಪು ಮಾರ್ಗದಲ್ಲಿ ಮೆಟ್ರೋ ಮಾರ್ಗದ ಜತೆಗೆ ಡಬಲ್ ಡೆಕ್ಕರ್ ಯೋಜನೆಗೆ ಕೇಂದ್ರ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಬಗ್ಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ. ಮೋಹನ್ "ಎಕ್ಸ್' ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಹೆಬ್ಬಾಳದಿಂದ ಸರ್ಜಾಪುರದ ವರೆಗೆ ಮೆಟ್ರೋ ಮಾರ್ಗವನ್ನು ಡಬಲ್ ಡೆಕ್ಕರ್ ಮೇಲ್ಸೇತುವೆ ಜತೆ ಸಂಯೋಜಿತ ಯೋಜನೆಯಾಗಿ ರೂಪಿಸಲು ರಾಜ್ಯ ಸರ್ಕಾರ ಯೋಜಿಸಿತ್ತು. ಆದರೆ, ಈ ವ್ಯವಸ್ಥೆಯಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಿಸಿದ್ದು, ಆಯ್ದ ಜಂಕ್ಷನ್ಗಳಲ್ಲಿ ಮಾತ್ರ ಡಬಲ್ ಡೆಕ್ಕರ್ಗೆ ಅವಕಾಶ ನೀಡಬಹುದು ಎಂದು ಹೇಳಿದೆ.
28,405 ಕೋಟಿ ಡಿಪಿಆರ್ಗೆ ಬ್ರೇಕ್:: ಯೋಜನೆಗೆ ಸುಮಾರು 28,405 ಕೋಟಿ ರೂ. ವೆಚ್ಚದ ಯೋಜನಾ ವರದಿಯನ್ನು (ಡಿಪಿಆರ್) ರಾಜ್ಯ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿತ್ತು. ಆದರೆ, ಯೋಜನಾ ವೆಚ್ಚ ಹೆಚ್ಚಾಗಿದೆ ಮತ್ತು ಡಬಲ್ ಡೆಕ್ಕರ್ ಸಂಯೋಜನೆಯಿಂದ ಯೋಜನೆಯ ಉದ್ದೇಶಕ್ಕೆ ಧಕ್ಕೆ ಉಂಟಾಗಬಹುದು ಎಂಬ ನಿಟ್ಟಿನಲ್ಲಿ ಆ ಡಿಪಿಆರ್ ಅನ್ನು ಹಿಂದಿರುಗಿಸಲಾಗಿತ್ತು. ಇದೀಗ ಮತ್ತೊಮ್ಮೆ ಅದೇ ನಡೆ ಅನುಸರಿಸಿದ್ದು, ಯೋಜನೆಯನ್ನು ಸಂಪೂರ್ಣವಾಗಿ ಮರುಪರಿಶೀಲಿಸಿ ಹೊಸ ಪ್ರಸ್ತಾವ ಸಲ್ಲಿಸುವಂತೆ ಸೂಚಿಸಿದೆ.
2031ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ
ನಮ್ಮ ಮೆಟ್ರೋದ ಕೆಂಪು ಮಾರ್ಗ ಬೆಂಗಳೂರು ಉತ್ತರ ಭಾಗವನ್ನು ದಕ್ಷಿಣ-ಪೂರ್ವ ಭಾಗದೊಂದಿಗೆ ನೇರವಾಗಿ ಸಂಪರ್ಕಿಸುವ ಪ್ರಮುಖ ಕಾರಿಡಾರ್ ಆಗಿದೆ. ಯೋಜನೆ ಅನುಷ್ಠಾನಗೊಂಡರೆ ಐಟಿ ಕಾರಿಡಾರ್, ಟೆಕ್ ಪಾರ್ಕ್ಗಳು ಮತ್ತು ವಸತಿ ಪ್ರದೇಶಗಳಿಗೆ ಭಾರೀ ಅನುಕೂಲವಾಗಲಿದೆ ಎಂಬ ನಿರೀಕ್ಷೆ ಹೊಂದಲಾಗಿದೆ. ಈ ಯೋಜನೆ 2031ರಲ್ಲಿ ಪೂರ್ಣಗೊಳ್ಳುವ ನಿರೀೆ ಇದ್ದು, ಸರ್ಜಾಪುರ& ಹೆಬ್ಬಾಳವರೆಗೆ 36.59 ಕಿಮೀ ಉದ್ದ ಹೊಂದಿರಲಿದೆ. ಹೆಬ್ಬಾಳ, ಗಂಗಾನಗರ, ಪಶುವೈದ್ಯಕಿಯ ಕಾಲೇಜು, ಮೇಖ್ರಿ ಸರ್ಕಲ್, ಗಾಲ್ಫ್ ಕ್ಲಬ್, ಪ್ಯಾಲೇಸ್ ಗುಟ್ಟಹಳ್ಳಿ, ಬಸವೇಶ್ವರ ವೃತ್ತ, ಕೆ.ಆರ್. ಸರ್ಕಲ್, ಪುರಭವನ, ಶಾಂತಿನಗರ, ನಿಮ್ಹಾನ್ಸ್, ಡೇರಿ ಸರ್ಕಲ್, ಕೋರಮಂಗಲ 2ನೇ ಬ್ಲಾಕ್, ಕೋರಮಂಗಲ 3ನೇ ಬ್ಲಾಕ್, ಜಕ್ಕಸಂದ್ರ, ಅಗರ, ಇಬ್ಬಲೂರು, ಬೆಳ್ಳಂದೂರು ಗೇಟ್, ಕೈಕೊಂಡೂರು, ದೊಡ್ಡಕನ್ನಳ್ಳಿ, ಕಾರ್ಮೆಲರಾಂ, ದೊಡ್ಡಕನ್ನಳ್ಳಿ, ಅಗ್ರಹಾರ ರಸ್ತೆ ಮತ್ತು ಸರ್ಜಾಪುರಗಳಲ್ಲಿ ನಿಲ್ದಾಣಗಳಿರಲಿವೆ.