ಬೆಂಗಳೂರು: ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು 2026-27ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಗ್ರೂಪ್-ಎ 117 ಮತ್ತು ಗ್ರೂಪ್-ಬಿ ವೃಂದದ 202 ಹುದ್ದೆಗಳ ನೇಮಕಾತಿ ಮಾಡುವಂತೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸೂಚನೆ ನೀಡಿದೆ. ಕರ್ನಾಟಕ ಗೆಜೆಟೆಡ್ ಪ್ರೊಬೇಷನರುಗಳು ನೇಮಕಾತಿ(ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕ) ನಿಯಮಗಳು-1997ರಡಿ ಮೀಸಲಾತಿ ನಿಯಮಗಳಂತೆ ವರ್ಗೀಕರಣ ಮಾಡಲಾಗಿದೆ.
ಗ್ರೂಪ್-ಎನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸಹಾಯಕ ಆಯುಕ್ತರು (ಕಿರಿಯ ಶ್ರೇಣಿ) 39 ಹುದ್ದೆ, ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರು-50, ಖಜಾನೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕ-2, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ನಿರ್ದೇಶಕ-15, ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಹಾಯಕ ನಿರ್ದೇಶಕ ಗ್ರೇಡ್-1ನಲ್ಲಿ 11 ಹುದ್ದೆಗಳ ನೇಮಕಾತಿಗೆ ಮನವಿ ಮಾಡಲಾಗಿದೆ.
ಗ್ರೂಪ್-ಬಿ ವಿಭಾಗದಲ್ಲಿ ಕಂದಾಯ ಇಲಾಖೆಯ ತಹಸೀಲ್ದಾರ್(ಗ್ರೇಡ್-2) 25 ಹುದ್ದೆಗಳು, ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ತೆರಿಗೆ ಅಧಿಕಾರಿ-74 ಹುದ್ದೆಗಳು, ಒಳಾಡಳಿತ ಇಲಾಖೆ(ಕಾರಾಗೃಹ) ಸಹಾಯಕ ಅಧೀಕ್ಷಕ-6 ಹುದ್ದೆಗಳು, ಸಹಕಾರ ಇಲಾಖೆಯ ಸಹಕಾರ ಸಂಘಗಳ ಸಹಾಯಕ ನಿಂಬಂಧಕರು 21 ಹುದ್ದೆ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ನಿರ್ದೇಶಕ 12 ಹುದ್ದೆ, ಆರ್ಥಿಕ ಇಲಾಖೆ(ಅಬಕಾರಿ) ಉಪ ಅಧೀಕ್ಷಕರು- 5 ಹುದ್ದೆ, ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಲಯ ಇಲಾಖೆಯ ಉದ್ಯೋಗಾಧಿಕಾರಿ-3, ನಗರಾಭಿವೃದ್ಧಿ ಇಲಾಖೆಯ ಮುಖ್ಯಾಧಿಕಾರಿ(ಗ್ರೇಡ್-1) 20 ಹುದ್ದೆಗಳು, ಆರ್ಥಿಕ ಇಲಾಖೆಯ ಸಹಾಯಕ ಖಜಾನಾಧಿಕಾರಿ-12, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕ-4 ಮತ್ತು
ಸರ್ಕಾರದ ಸಚಿವಾಲಯದ ಶಾಖಾಧಿಕಾರಿ-5, ಕರ್ನಾಟಕ ಲೋಕಸೇವಾ ಆಯೋಗದ ಶಾಖಾಧಿಕಾರಿ-4 ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ(ಗ್ರೇಡ್-2) 11 ಹುದ್ದೆಗಳು ಸೇರಿ 202 ಗ್ರೂಪ್-ಬಿ ಹುದ್ದೆಗಳ ನೇಮಕಾತಿಗೆ ಸರ್ಕಾರ ಸೂಚಿಸಿದೆ. ಈ ರಿಕ್ತ ಸ್ಥಾನಗಳು ತಾತ್ಕಾಲಿಕವಾಗಿದ್ದು, ಬದಲಾವಣೆಗೆ ಒಳಪಟ್ಟಿರುತ್ತದೆ. ಮೀಸಲಾತಿ ವರ್ಗೀಕರಣವು ಬದಲಾವಣೆಗೆ ಒಳಪಟ್ಟಿರುತ್ತವೆ ಎಂದು ಇಲಾಖೆ ಪತ್ರದಲ್ಲಿ ಉಲ್ಲೇಖಿಸಿದೆ.