rajakaluve 
ಬೆಂಗಳೂರು

ಐಟಿ ಕಂಪನಿಗಾಗಿ ರಾಜಕಾಲುವೆ ಪಥ ಬದಲು

ಪ್ರಮುಖ ಮುಖ್ಯಾಂಶಗಳು

  • ನಾಗವಾರದ ಬಳಿ ಉತ್ತರ ನಗರ ಪಾಲಿಕೆ ಭಾನಗಡಿ
  • ಕವಲೊಡೆಯುವ ಮಾದರಿ ಉಪಕಾಲುವೆ ನಿರ್ಮಾಣ
ಬೆಂಗಳೂರು: ರಾಜಧಾನಿ ಬೆಂಗಳೂರು ಮಹಾನಗರದ ತಗ್ಗು ಪ್ರದೇಶಗಳನ್ನು ಪ್ರವಾಹಮುಕ್ತಗೊಳಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ದೊಡ್ಡ ಮಟ್ಟದ ಯೋಜನೆ ಕೈಗೆತ್ತಿಕೊಂಡಿರುವಾಗಲೇ, ಇತ್ತ ನಾಗವಾರದ ಬಳಿ ನಿರ್ಮಾಣಗೊಂಡಿರುವ ಟೆಕ್ ಪಾರ್ಕ್ ಜಾಗ ಉಳಿಸಲು ರಾಜಕಾಲುವೆ ಪಥವನ್ನೇ ಬದಲಿಸಲು ಉತ್ತರ ನಗರ ಪಾಲಿಕೆ ಮುಂದಾಗಿದೆ.
ಹೊರ ವರ್ತುಲ ರಸ್ತೆಗೆ (ಒಆರ್‌ಆರ್) ಹೊಂದಿಕೊಂಡಿರುವ ಎರಡು ಪ್ರತಿಷ್ಠಿತ ಐಟಿ ಕಂಪನಿಗಳ ಜಾಗದಲ್ಲಿ ರಾಜಕಾಲುವೆ ಹರಿವನ್ನು ಮನಸೋ ಇಚ್ಛೆ ವಿನ್ಯಾಸ ಬದಲಿಸಿ ಅದಕ್ಕೆ ನಿಯಮ ಮೀರಿ ಪಾಲಿಕೆ ಹಾಗೂ ಕೆಐಎಡಿಬಿ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಬೃಹತ್ ರಾಜಕಾಲುವೆಯನ್ನು ಅನಗತ್ಯವಾಗಿ ತಿರುವುಗೊಳಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಆದರೆ, ಕಾರ್ಪೋರೇಷನ್ ಅಧಿಕಾರಿಗಳು ರಾಜಕಾಲುವೆಯ ಅಗಲದಷ್ಟು ಎರಡು ಉಪ ಕಾಲುವೆಗಳಾಗಿ ಕವಲೊಡೆಯುವ ಮಾದರಿಯಲ್ಲಿ ಹೊಸದಾಗಿ ನಿರ್ಮಿಸಿಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ. ವಿಶೇಷವೆಂದರೆ ಈ ಭಾನಗಡಿ ವಿಚಾರವಾಗಿ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದ್ದು, ವಿಚಾರಣೆ ವೇಳೆ ಎರಡು ಸಣ್ಣ ಕಾಲುವೆ ನಿರ್ಮಿಸುವುದರಿಂದ ಯಾವುದೇ ರೀತಿಯಲ್ಲೂ ಪ್ರವಾಹ ಉಂಟಾಗದು. ಸಾರ್ವಜನಿಕರ ಹಿತಾಸಕ್ತಿ ಹಾಗೂ ಕಂಪನಿಯು ಸ್ವಂತ ಹಣದಲ್ಲಿ ನಿರ್ಮಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದು ಪ್ರಮಾಣಪತ್ರ ನೀಡಿರುವುದು ಅಚ್ಚರಿಯ ಸಂಗತಿಯಾಗಿದೆ.

ಏನಿದು ಪ್ರಕರಣ?:

ನಾಗವಾರ ಬಳಿ ವರ್ತುಲ ರಸ್ತೆ ಬದಿಯಲ್ಲೇ ಕಾರ್ಲೆ ಕಂಪನಿ ಬೃಹತ್ ಟೆಕ್ ಪಾರ್ಕ್ ನಿರ್ಮಿಸಿದೆ. ಈ ಜಾಗದ ಒಂದು ಬದಿ ರಾಜಕಾಲುವೆ ಹಾದುಹೋಗಿದೆ. ಹೆಬ್ಬಾಳ ಹಾಗೂ ವಿ.ನಾಗೇನಹಳ್ಳಿ ಭಾಗದ ಮಳೆನೀರು ಹರಿದುಬಂದು ಹಾಲಿ ರಾಜಕಾಲುವೆ ಮೂಲಕ ನಾಗವಾರ ಕೆರೆಯ ಹೊರಹರಿವು ಮುಖ್ಯ ನೀರುಗಾಲುವೆಯನ್ನು ಸಂಪರ್ಕಿಸುತ್ತದೆ. ಆದರೆ, ಕೆಲ ವರ್ಷದಿಂದ ಈ ರಾಜಕಾಲುವೆ ನಿರ್ವಹಣೆ ಇಲ್ಲದೆ ಮಳೆಗಾಲದಲ್ಲಿ ಸಮಸ್ಯೆಯನ್ನು ತಂದೊಡ್ಡಿದೆ. ಟೆಕ್ ಪಾರ್ಕ್ ನಿರ್ಮಾಣಗೊಂಡ ಬಳಿ ರಾಜಕಾಲುವೆಯಲ್ಲಿ ಮಳೆನೀರು ಹರಿವಿಗೆ ಅವಕಾಶ ಇಲ್ಲದಂತಾಗಿ ಸುತ್ತಲಿನ ಪ್ರದೇಶಕ್ಕೆ ನುಗ್ಗುತ್ತಿದೆ. ಈ ಸಮಸ್ಯೆಯನ್ನು ನಿವಾರಿಸಬೇಕಿದ್ದ ಪಾಲಿಕೆಯ ಅಧಿಕಾರಿಗಳು ರಾಜಕಾಲುವೆ ಪಥ ಬದಲಿ ಪರಿಹಾರ ಒದಗಿಸಿದ್ದೇವೆ ಎಂದು ಬೀಗುತ್ತಿದ್ದಾರೆ.
ಸರಿಸುಮಾರು 10 ಮೀಟರ್ ಅಗಲವಿರುವ ರಾಜಕಾಲುವೆಯನ್ನು ಕಾಲಕಾಲಕ್ಕೆ ನಿರ್ವಹಿಸದ ಕಾರಣ ಒತ್ತುವರಿಗೆ ಒಳಗಾಗಿದೆ. ಒಂದು ಬದಿ ಕಟ್ಟಡಗಳಿಲ್ಲದ ಕಾರಣ ಖಾಲಿ ಜಾಗ ಬಿಡಲಾಗಿದ್ದರೂ, ಮಣ್ಣನ್ನು ರಾಜಕಾಲುವೆಗೆ ತುಂಬುತ್ತಾ ಬರಲಾಗಿದೆ. ಪ್ರಸ್ತುತ ಕಡಿಮೆ ನೀರು ಹರಿಯುತ್ತಿದೆ ಎಂಬ ನೆಪ ಮಾಡಿ ರಾಜಕಾಲುವೆಗೆ ಸಮಾನಾಂತರವಾಗಿ ತಲಾ 3 ಮೀ. ಅಗಲದ ಎರಡು ಉಪ ಕಾಲುವೆಗಳನ್ನು ನಿರ್ಮಿಸಲು ಟೆಕ್ ಕಂಪನಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ವಿಶೇಷವೆಂದರೆ, 250 ಮೀ.ಗೂ ಅಧಿಕ ದೂರದವರೆಗೆ ಉಪಕಾಲುವೆಗಳನ್ನು ಸ್ವಂತ ಹಣ ಹೂಡಿ ಕಾಮಗಾರಿ ಕೈಗೊಳ್ಳಲು ವಿನ್ಯಾಸ ಅನುಮೋದಿಸಿ ಒಪ್ಪಿಗೆ ನೀಡಲಾಗಿದೆ. ಪಾಲಿಕೆ ನಿಯಮಗಳ ಪ್ರಕಾರ ನೈಸರ್ಗಿಕ ಹರಿವಿರುವ ರಾಜಕಾಲುವೆಗಳನ್ನು ಕಾರ್ಪೋರೇಷನ್ ಅಭಿವೃದ್ಧಿಪಡಿಸಿ ನಿರ್ವಹಿಸಬೇಕು. ಆದರೆ, ಈ ಪ್ರಕರಣದಲ್ಲಿ ರಸ್ತೆ, ಸ್ಕೈವಾಕ್ ನಿರ್ಮಿಸಲು ನೀಡುವ ಅನುಮತಿ ರೀತಿ ರಾಜಕಾಲುವೆ ಅಭಿವೃದ್ಧಿ ಕಾರ್ಯವನ್ನು ಖಾಸಗಿ ಕಂಪನಿಗೆ ವಹಿಸಿರುವುದು ಚರ್ಚೆಗೆ ಗ್ರಾಸ ಒದಗಿಸಿದೆ.
ಅಚ್ಚರಿಯ ವಿಷಯವೆಂದರೆ, ಕಾರ್ಲೆ ಟೆಕ್ ಪಾರ್ಕ್‌ನಲ್ಲಿ ಹಾದುಹೋಗಿರುವ ರಾಜಕಾಲುವೆಯ ಪಥ ಬದಲಿಸಲು ನೆರೆಯ ಮಾನ್ಯತಾ ಟೆಕ್ ಪಾರ್ಕ್ ಜಾಗದಲ್ಲಿ ಉಪ ಕಾಲುವೆ ನಿರ್ಮಿಸಲು ಸ್ಥಳ ಒದಗಿಸಲಾಗಿದೆ. ಇದಕ್ಕೆ ಹಿಂದಿನ ಬಿಬಿಎಂಪಿ ಹಾಗೂ ಹಾಲಿ ಉತ್ತರ ಪಾಲಿಕೆಯ ನೀರುಗಾಲುವೆ ವಿಭಾಗದ ಹಿರಿ/ಕಿರಿ ಇಂಜಿನಿಯರ್‌ಗಳು ಮತ್ತು ಅಧಿಕಾರಿಗಳು ಕಣ್ಣುಚ್ಚಿ ಅನುಮತಿ ನೀಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ರಾಜಕಾಲುವೆ ಹರಿವು ತಡೆಗಿಲ್ಲ ಅಧಿಕಾರ:

ಬೆಂಗಳೂರು ನಗರದಲ್ಲಿ 200ಕ್ಕೂ ಹೆಚ್ಚಿನ ಕೆರೆಗಳಿದ್ದು, ಬಹುತೇಕ ಒಂದಕ್ಕೊಂದು ಸಂಪರ್ಕಿಸುವ ರೀತಿ ಕೆರೆ ಜಾಲ ಇದೆ. ಇವುಗಳು ರಾಜಕಾಲುವೆ ಮೂಲಕವೇ ಬೆಸೆದುಕೊಂಡಿವೆ. ನೈಸರ್ಗಿಕವಾಗಿರುವ ಈ ನೀರುಗಾಲುವೆಗಳ ಹರಿವಿಗೆ ತಡೆಯೊಡ್ಡುವುದಾಗಲಿ ಅಥವಾ ಒತ್ತುವರಿಗೆ ಅವಕಾಶ ಇಲ್ಲ. ಜತೆಗೆ ಬಫರ್ ಜಾಗವನ್ನೂ ಮೀಸಲಿಡಲಾಗಿರುತ್ತದೆ. ಹಾಗಾಗಿ ರಾಜಕಾಲುವೆ ಹರಿವನ್ನು ಬದಲಿಸಲು ಪಾಲಿಕೆ ಅಥವಾ ಆಫೀಸರ್ಸ್‌ಗೆ ಅಧಿಕಾರ ಇರುವುದಿಲ್ಲ. ಆದರೂ, ನಾಗವಾರ ಪ್ರಕರಣದ ರೀತಿ ನಗರದ ಕೆಲವೆಡೆ ರಾಜಕಾಲುವೆಗಳ ಮಾರ್ಗವನ್ನು ಬದಲಿಸುವ ಯತ್ನ ನಡೆದಿದೆ.

ಸಿಎಂ, ಡಿಸಿಎಂ ಸೂಚನೆಗಿಲ್ಲ ಕಿಮ್ಮತ್ತು!:

ಕಳೆದ ವರ್ಷಾಂತ್ಯದ ವೇಳೆ ಸಿಎಂ ಹಾಗೂ ಡಿಸಿಎಂ ನಗರ ಪ್ರದಕ್ಷಿಣೆ ಕೈಗೊಂಡಿದ್ದ ಸಂದರ್ಭದಲ್ಲಿ ನಾಗವಾರದ ರಾಜಕಾಲುವೆ ಬಳಿ ಉದ್ಭವಿಸಿರುವ ಸಮಸ್ಯೆಯನ್ನು ಖುದ್ದು ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದರು. ಆ ವೇಳೆ ರಾಜಕಾಲುವೆ ಹೂಳಿನಿಂದ ತುಂಬಿಕೊಂಡು ಸುತ್ತಲಿನ ಪ್ರದೇಶಕ್ಕೆ ನೀರು ನುಗ್ಗುತ್ತಿತ್ತು. ಇದನ್ನು ಕಂಡು ರಾಜಕಾಲುವೆ ಸ್ವಚ್ಛಗೊಳಿಸಿ ಮಳೆನೀರು ಸರಾಗ ಹರಿವಿಗೆ ಅವಕಾಶ ಮಾಡಿಕೊಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಆನಂತರ ಇನ್ನೊಮ್ಮೆ ಡಿಸಿಎಂ ಪ್ರತ್ಯೇಕವಾಗಿ ಇದೇ ಜಾಗವನ್ನು ಪರಿಶೀಲಿಸಿ ರಾಜಕಾಲುವೆ ಪುನಶ್ಚೇತನ ಕೈಗೊಳ್ಳುವಂತೆ ಸೂಚಿಸಿದ್ದರು. ಆದರೆ, ಈವರೆಗೂ ಇಲ್ಲಿ ಕಾಮಗಾರಿ ಆರಂಭಿಸದೆ ಬೇರೊಂದು ಜಾಗದಲ್ಲಿ ಕೆಲಸ ಕೈಗೆತ್ತಿಕೊಳ್ಳಲಾಗಿದೆ.
"

ಜೋರಾದ ಮಳೆಬಂದಲ್ಲಿ ಹೆಬ್ಬಾಳ ಹಾಗೂ ನಾಗವಾರ ಜಂಕ್ಷನ್‌ಗಳಲ್ಲಿ ಪ್ರವಾಹ ರೀತಿ ಮಳೆನೀರು ಹರಿದು ಸಮಸ್ಯೆ ಉಂಟಾಗುತ್ತಿದೆ. ಟೆಕ್ ಪಾರ್ಕ್ ಬದಿ ಹರಿಯುವ ರಾಜಕಾಲುವೆ 20 ವರ್ಷದಿಂದ ಅಭಿವೃದ್ಧಿಯಾಗಿಲ್ಲ. ಹೆಬ್ಬಾಳ ಕಣಿವೆ ವ್ಯಾಪ್ತಿಯಲ್ಲಿ ಯಾವುದೇ ಪುನಶ್ಚೇತನ ಕೆಲಸ ಆಗುತ್ತಿಲ್ಲ. ಯಾರ ಒತ್ತಡಕ್ಕೂ ಮಣಿಯದೆ ರಾಜಕಾಲುವೆಗಳನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಉತ್ತರ ನಗರ ಪಾಲಿಕೆ ಕೈಗೊಳ್ಳಬೇಕು.

- ಸಿ. ಮುನಿಕೃಷ್ಣ, ಬಿಬಿಎಂಪಿ ಮಾಜಿ ಕಾರ್ಪೋರೇಟರ್