ರೈನಥಾನ್​ ಕಾರ್ಯಕ್ರಮದ ಬಗ್ಗೆ ನಡೆಸುತ್ತಿರುವ ಅಪಪ್ರಚಾರ ಕುರಿತು ನಡೆಸಿದ ಸುದ್ದಿಗೋಷ್ಠಿಯಲ್ಲಿ ರೈನಥಾನ್​ ಆಯೋಜಕ ತಂಡದ ಕೃಷ್ಣಮೂರ್ತಿ ಪಟವರ್ಧನ್, ಆಪ್ತಿ​ ಪಟವರ್ಧನ್ ಇದ್ದರು. 
ಬೆಂಗಳೂರು

ಅಪಪ್ರಚಾರ ಮಾಡಿ ರೈನಥಾನ್​ಗೆ ಅಡ್ಡಿ

ಪವನ್ ಆಚಾರ್ಯ ನೀರ್ಚಾಲು
ವಿಜಯವಾಣಿ ಸುದ್ದಿಜಾಲ ಬೆಂಗಳೂರು 
ರೈನಥಾನ್​(ಮಳೆ ನಡಿಗೆ) ಕಾರ್ಯಕ್ರಮ 15 ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಾ ಬಂದಿದ್ದು, ಪರಿಸರಕ್ಕೆ ಪೂರಕ ಮತ್ತು ಆರೋಗ್ಯಕ್ಕೆ ಯಾವುದೇ ಹಾನಿ ಇಲ್ಲದ ಕಾರ್ಯಕ್ರಮವಾಗಿದೆ. ಕೆಲವರು  ಅಪಪ್ರಚಾರ ಮಾಡುತ್ತಿದ್ದಾರೆ ಎಂದು ರೈನಥಾನ್​ ಆಯೋಜಕ ತಂಡದ ಕೃಷ್ಣಮೂರ್ತಿ ಪಟವರ್ಧನ್​ ತಿಳಿಸಿದ್ದಾರೆ. 
ಅಪಪ್ರಚಾರದ ಕುರಿತು ಸುದ್ದಿಗಾರರೊಂದಿಗೆ ಚರ್ಚೆ ನಡೆಸಿದ ಅವರು, ಸುಳ್ಳು ಆರೋಪ ಬಂದಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಉಡುಪಿ ಜಿಲ್ಲೆಯ ಹೆಬ್ರಿಯ ಕಬ್ಬಿನಾಲೆ ಗ್ರಾಮದಲ್ಲಿ ಆ.1 ರಂದು ಹಮ್ಮಿಕೊಳ್ಳಲಾಗಿದ್ದ ಮಳೆ ನಡಿಗೆ ಕಾರ್ಯಕ್ರಮ ಮುಂದೂಡಲಾಗಿದೆ. ಆದರೆ ಎಲ್ಲರ ವಿಶ್ವಾಸ ತೆಗೆದುಕೊಂಡು ಮತ್ತೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಕೆಲವು ಕಾರ್ಯಕ್ರಮದ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಮಳೆನಡಿಗೆಯಿಂದಾಗಿ ವನ್ಯಜಿವಿಗಳಿಗೆ ತೊಂದರೆಯಾಗುತ್ತದೆ, ಗದ್ದೆಗಳಲ್ಲಿನ ಕ್ರಿಮಿಕೀಟಗಳು ಹಾಗೂ ಕಪ್ಪೆಗಳ ಮೊಟ್ಟೆಗಳಿಗೆ ಹಾನಿಯಾಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ಯಾವ ರೀತಿಯ ತೊಂದರೆಯೂ ನಮ್ಮ ಕಾರ್ಯಕ್ರಮದಿಂದ ಆಗುವುದಿಲ್ಲ. ಪ್ಲಾಸ್ಟಿಕ್​ಮುಕ್ತ ಹಾಗೂ ಪರಿಸರ ಸ್ನೇಹಿ ಕಾರ್ಯಕ್ರಮ ಇದಾಗಿದ್ದು, ಪ್ರಕೃತಿ ಕಾಳಜಿಯ ಈ ಕಾರ್ಯಕ್ರಮವನ್ನು ತೇಜೋವಧೆ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿ ಆವೃತ್ತಿಯಲ್ಲೂ ಸ್ಥಳಿಯ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಹಾಗೂ ಸೀಡ್​ ಬಾಲ್​ ಹಾಕುವ ಕಲ್ಪನೆಗಳನ್ನೂ ಈ ಕಾರ್ಯಕ್ರಮ ಒಳಗೊಂಡಿದೆ. ಆಸ್ತಮಾ ರೋಗಿಗಳು, ಕಾಲಿನ ಶಸಚಿಕಿತ್ಸೆಗೆ ಒಳಗಾದವರು ಹಾಗೂ 81 ವರ್ಷದ ಹಿರಿಯರು ಸಹ ಇದರಲ್ಲಿ ಭಾಗವಹಿಸಿ ಯಶಸ್ವಿಯಾಗಿ 15 ರಿಂದ 22 ಕಿ.ಮೀ. ನಡೆದಿರುವ ಉದಾಹರಣೆಗಳಿವೆ. ಇದುವರೆಗೆ ಯಾರಿಗೂ ಆರೋಗ್ಯ ಸಮಸ್ಯೆ ಎದುರಾಗಿಲ್ಲ. ಆದರೆ ಬೇಕಂತಲೇ ಕೆಲವು ಮಂದಿ ವಿರೋಧಿಸುತ್ತಿದ್ದಾರೆ. ಅವರ ಆರೋಪಗಳು ನಿರಾಧಾರ ಎಂದು ತಿಳಿಸಿದರು.