- ಕೆಎಸ್ಆರ್ ಯಾರ್ಡ್ ಕಾಮಗಾರಿ ಪರಿಣಾಮ
ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ರೈಲುನಿಲ್ದಾಣದಲ್ಲಿ ನಡೆಯುತ್ತಿರುವ ಯಾರ್ಡ್ ನವೀಕರಣ ಕಾಮಗಾರಿ ಪರಿಣಾಮವಾಗಿ ಬೆಂಗಳೂರು-& ಕೇರಳಂ ನಡುವಿನ ರೈಲು ಸಂಚಾರದಲ್ಲಿ ವ್ಯತ್ಯಯ ಮುಂದುವರಿದಿದೆ.
ಕಾಮಗಾರಿಯ ಎರಡನೇ ಹಂತ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಮಂಗಳವಾರವೂ ಹಲವು ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಕಂಡುಬಂದಿದ್ದು, ಪ್ರಯಾಣಿಕರು ಅನನುಕೂಲ ಅನುಭವಿಸುವಂತಾಯಿತು.
ಬೆಂಗಳೂರು ಮತ್ತು ತಿರುವನಂತಪುರ ಸೇರಿ ಕೇರಳಂನ ವಿವಿಧ ಭಾಗಗಳಿಗೆ ಸಂಚರಿಸುವ ರೈಲು ಸೇವೆಗಳ ಮೇಲೆ ಕಾಮಗಾರಿಯ ನೇರ ಪರಿಣಾಮ ಬೀಳುತ್ತಿದೆ. ನಿಲ್ದಾಣದ ಯಾರ್ಡ್ ವ್ಯವಸ್ಥೆ ಸುಧಾರಣೆಗಾಗಿ ಹಳಿಗಳ ಮರುಜೋಡಣೆ ಹಾಗೂ ತಾಂತ್ರಿಕ ನವೀಕರಣ ಕಾರ್ಯ ಕೈಗೊಳ್ಳಲಾಗಿದ್ದು, ಈ ಅವಧಿಯಲ್ಲಿ ಕೆಲವು ರೈಲುಗಳ ಮಾರ್ಗ ಬದಲಾವಣೆ, ಸಮಯ ಬದಲಾವಣೆ ಹಾಗೂ ತಾತ್ಕಾಲಿಕ ನಿರ್ಬಂಧಗಳು ಜಾರಿಯಲ್ಲಿವೆ.
ತಾತ್ಕಾಲಿಕವಾಗಿ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದ್ದರೂ ಕಾಮಗಾರಿ ಪೂರ್ಣಗೊಂಡ ಬಳಿಕ ರೈಲುಗಳ ಸಮಯ ಪಾಲನೆ ಹಾಗೂ ಕಾರ್ಯಾಚರಣಾ ಸಾಮರ್ಥ್ಯದಲ್ಲಿ ಗಮನಾರ್ಹ ಸುಧಾರಣೆ ಆಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಜುಲೈ ಅಂತ್ಯದವರೆಗೂ ಕಾಮಗಾರಿ ಹಂತ ಹಂತವಾಗಿ ಮುಂದುವರಿಯುವ ಸಾಧ್ಯತೆ ಇರುವುದರಿಂದ ಪ್ರಯಾಣಿಕರು ರೈಲ್ವೆ ಪ್ರಕಟಣೆಗಳ ಮೇಲೆ ನಿಗಾ ಇಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಮೂಲಸೌಕರ್ಯ ಅಭಿವೃದ್ಧಿ ಧ್ಯೇಯ
ಕೆಎಸ್ಆರ್ ನಿಲ್ದಾಣದ ಮೂಲಸೌಕರ್ಯ ಆಧುನೀಕರಣ ಉದ್ದೇಶದಿಂದ ಈ ಯೋಜನೆ ಜಾರಿಗೊಂಡಿದೆ. ಹಳಿಗಳ ಸಾಮರ್ಥ್ಯ ಹೆಚ್ಚಳ, ರೈಲುಗಳ ಸಂಚಾರ ದಕ್ಷತೆ ಸುಧಾರಣೆ ಹಾಗೂ ಭವಿಷ್ಯದ ಜನದಟ್ಟಣೆಯನ್ನು ಸಮರ್ಥವಾಗಿ ನಿರ್ವಹಿಸುವುದು ಕಾಮಗಾರಿಯ ಪ್ರಮುಖ ಗುರಿಯಾಗಿದೆ ಎಂದು ನೈಋತ್ಯ ರೈಲ್ವೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.