ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಯಲಹಂಕ ಪುಟ್ಟೇನಹಳ್ಳಿ ಕೆರೆಗೆ ಸೇರುತ್ತಿದ್ದ ಕೊಳಚೆ ನೀರಿನ ಹರಿವನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ) ಮಹತ್ವದ ಕ್ರಮ ಕೈಗೊಂಡಿದೆ.
ಕೆರೆಯ ವಾಕಿಂಗ್ ಟ್ರ್ಯಾಕ್ ಸಮೀಪ 700 ಮಿ.ಮೀ. ವ್ಯಾಸದ ಭೂಗತ ಒಳಚರಂಡಿ ಪೈಪ್ಲೈನ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದ್ದು, ಇದರಿಂದ ಕೆರೆಗೆ ಹರಿದು ಬರುತ್ತಿದ್ದ ಕೊಳಚೆ ನೀರನ್ನು ಸಮೀಪದ ಒಳಚರಂಡಿ ಶುದ್ಧೀಕರಣ ಘಟಕಕ್ಕೆ (ಎಸ್ಟಿಪಿ) ತಿರುಗಿಸಲಾಗುತ್ತದೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ)ಗೆ ಸಲ್ಲಿಸಿರುವ ವರದಿಯಲ್ಲಿ ಈ ಮಾಹಿತಿ ನೀಡಿರುವ ಬಿಡಬ್ಲ್ಯೂಎಸ್ಎಸ್ಬಿ, 2051ರ ವರೆಗೆ (ಮುಂದಿನ 25 ವರ್ಷ) ಈ ಪ್ರದೇಶದಲ್ಲಿ ಉತ್ಪತ್ತಿಯಾಗಲಿರುವ ಕೊಳಚೆ ನೀರಿನ ಪ್ರಮಾಣವನ್ನು ನಿರ್ವಹಿಸುವ ಸಾಮರ್ಥ್ಯ ಈ ಪೈಪ್ಲೈನ್ಗೆ ಇದೆ ಎಂದು ತಿಳಿಸಿದೆ.
ವಿಶ್ವ ಬ್ಯಾಂಕ್ ನೆರವಿನ ಯೋಜನೆಯಡಿ ನಿಮಾರ್ಣವಾಗುತ್ತಿರುವ ಲ್ಯಾಟರಲ್ ಸೀವರ್ ಜಾಲಕ್ಕೆ ಈ ಪೈಪ್ಲೈನ್ ಸಂಪರ್ಕ ಕಲ್ಪಿಸಲಾಗುತ್ತದೆ. ಅಲ್ಲಿಂದ ಕೊಳಚೆ ನೀರು ಯಲಹಂಕ ಒಳಚರಂಡಿ ಶುದ್ಧೀಕರಣ ಘಟಕಕ್ಕೆ ಹರಿಯಲಿದ್ದು, ಘಟಕದ ನಾಗರಿಕ ಕಾಮಗಾರಿ ಅಂತಿಮ ಹಂತದಲ್ಲಿದೆ. 2026ರ ಸೆಪ್ಟೆಂಬರ್ ಅಂತ್ಯದೊಳಗೆ ಪ್ರಾಯೋಗಿಕ ಕಾರ್ಯಾಚರಣೆ ಆರಂಭಿಸುವ ಗುರಿ ಹೊಂದಲಾಗಿದೆ.
ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶವಾಗಿ ಘೋಷಿತವಾಗಿರುವ ಯಲಹಂಕ ಪುಟ್ಟೇನಹಳ್ಳಿ ಕೆರೆ, ಸುತ್ತಮುತ್ತಲಿನ ಪ್ರದೇಶಗಳಿಂದ ಹರಿದು ಬರುತ್ತಿದ್ದ ಕೊಳಚೆ ನೀರಿನಿಂದ ತೀವ್ರ ಮಾಲಿನ್ಯಕ್ಕೆ ಒಳಗಾಗಿತ್ತು. ಇದೀಗ ಕೈಗೊಂಡಿರುವ ಈ ಯೋಜನೆಯಿಂದ ಕೆರೆಯ ಪರಿಸರ ಸಂರಕ್ಷಣೆ ಹಾಗೂ ನೀರಿನ ಗುಣಮಟ್ಟ ಸುಧಾರಣೆಗೆ ನೆರವಾಗುವ ನಿರೀಕ್ಷೆಯಿದೆ.
* 2051ರವರೆಗಿನ ಕೊಳಚೆ ನೀರಿನ ಪ್ರಮಾಣ ನಿರ್ವಹಿಸುವ ಸಾಮರ್ಥ್ಯದ ಒಳಚರಂಡಿ ಪೈಪ್ಲೈನ್ ಪೂರ್ಣ
* ಸೆಪ್ಟೆಂಬರ್ ಅಂತ್ಯದೊಳಗೆ ಎಸ್ಟಿಪಿ ಪ್ರಾಯೋಗಿಕ ಕಾರ್ಯಾಚರಣೆ