ಬೆಂಗಳೂರು: ನಮ್ಮ ಮೆಟ್ರೋ ನೇರಳೆ ಮಾರ್ಗದ -ಕಬ್ಬನ್ ಪಾರ್ಕ್ ನಿಲ್ದಾಣದ ಸಂಚಾರದಲ್ಲಿ ಉಂಟಾಗಿದ್ದ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲಾಗಿದ್ದು, ನೇರಳೆ ಮಾರ್ಗ ಮೆಟ್ರೋ ರೈಲು ಸೇವೆಗಳು ಬುಧವಾರ ಬೆಳಗ್ಗೆ 5 ಗಂಟೆಯಿಂದ ನಿಯಮಿತ ವೇಳಾಪಟ್ಟಿಯ ಪ್ರಕಾರ ಪುನರಾರಂಭಗೊಂಡಿದೆ.
ನೇರಳೆ ಮಾರ್ಗದಲ್ಲಿ ಆಗಿದ್ದ ತಾಂತ್ರಿಕ ದೋಷವನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಕಾರ್ಯಾಚರಣೆ ಮತ್ತು ನಿರ್ವಹಣಾತಂಡಗಳು ಯಶಸ್ವಿಯಾಗಿ ಸರಿಪಡಿಸಿವೆ.
ಮಂಗಳವಾರ ಸಂಜೆ 6.30ಕ್ಕೆ ನೇರಳೆ ಮಾರ್ಗದಲ್ಲಿನ ಕಬ್ಬನ್ ಪಾರ್ಕ್ ನಿಲ್ದಾಣದ ಬಳಿ ಮೆಟ್ರೋದ ಮೂರನೇ ರೈಲು ವ್ಯವಸ್ಥೆಯ ಪ್ರಸ್ತುತ ಕಲೆಕ್ಟರ್ ಶೂನಲ್ಲಿ ತಾಂತ್ರಿಕ ದೋಷ ಸಂಭವಿಸಿದೆ. ಇದು ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ ಮತ್ತು ಎಂ.ಜಿ. ರಸ್ತೆಯ ನಡುವಿನ ಪ್ರಮುಖ ನಿಲ್ದಾಣಗಳಲ್ಲಿ ರೈಲುಸೇವೆಗಳನ್ನು ಅಡ್ಡಿಪಡಿಸಿದೆ.
ಪೀಕ್ ಅವಧಿಯಲ್ಲಿ ಸಮಸ್ಯೆ ಸಂಭವಿಸಿದ್ದರಿಂದ ಸಾವಿರಾರು ಪ್ರಯಾಣಿಕರು ಪರದಾಡಿದ್ದಾರೆ. ಆಟೋ, ಕ್ಯಾಬ್ಗಳು ದುಬಾರಿಯಾಗಿ ಕೆಲವರು ಟ್ರಕ್ಗಳು ಮತ್ತು ಸರಕು ವಾಹನಗಳನ್ನು ಏರಿ ಪ್ರಯಾಣ ಬೆಳೆಸಿದ್ದರು. ರೈಲಿನಲ್ಲಿ ಸಿಲುಕಿಕೊಂಡಿದ್ದ ಜನರನ್ನು ಅರ್ಧ ಗಂಟೆಯ ಬಳಿಕ ಸ್ಥಳಾಂತರಿಸಲಾಯಿತು. ರಾತ್ರಿಯ ಕೊನೆಯ ರೈಲಿನ ನಂತರವೂ ದುರಸ್ತಿ ಕಾರ್ಯವನ್ನು ಮುಂದುವರಿಸಿದ್ದ ಬಿಎಂಆರ್ಸಿಎಲ್ನ ತಂಡಗಳು ಬೆಳಗಿನ ಜಾವ 3.30ರ ಸುಮಾರಿಗೆ ಸಮಸ್ಯೆಯನ್ನು ಬಗೆಹರಿಸಿದೆ.