newcomplaintsystem 
ಬೆಂಗಳೂರು

ಬಿಡಿಎ ಹೊಸ ಅಹವಾಲು ವ್ಯವಸ್ಥೆಗೆ ಜನಸ್ಪಂದನೆ

ಪ್ರಮುಖ ಮುಖ್ಯಾಂಶಗಳು

  • ಕಾಲಮಿತಿಯೊಳಗೆ ಪರಿಹಾರ ಒದಗಿಸಲು ಆದ್ಯತೆ
  • ಖುದ್ದು ಅಧ್ಯಕ್ಷ / ಆಯುಕ್ತರ ಭೇಟಿಗೂ ಅವಕಾಶ
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಪರಿಚಯಿಸಿರುವ ಹೊಸ ಅಹವಾಲು ವ್ಯವಸ್ಥೆಯಾದ ‘ನಾಗರಿಕ ಸಹಾಯವಾಣಿ ಕೇಂದ್ರ’ (ಸಿಎಸಿ) ಮೂಲಕ ಕಾಲಮಿತಿಯೊಳಗೆ ಪರಿಹಾರ ಲಭಿಸುತ್ತಿರುವುದರಿಂದ ನಾಗರಿಕರು ಈ ಪದ್ಧತಿ ಅಡಿಯಲ್ಲೇ ಹೆಚ್ಚಿನ ದೂರುಗಳನ್ನು ಸಲ್ಲಿಸಿ ಪರಿಹಾರ ಪಡೆಯಲು ಮುಂದಾಗಿದ್ದಾರೆ.
24/7 ಮಾದರಿಯಲ್ಲಿ ದಿನದ ಯಾವುದೇ ಹೊತ್ತಿನಲ್ಲಿ ಅಹವಾಲು ಸಲ್ಲಿಕೆಗೆ ಅವಕಾಶ ಕಲ್ಪಿಸಿರುವುದು ನಾಗರಿಕರಿಗೆ ಪ್ರಾಧಿಕಾರದ ಸಮಸ್ಯೆಗಳಿಗೆ ದೂರು/ಸಲಹೆ ನೀಡಲು ವೇದಿಕೆ ಕಲ್ಪಿಸಿದೆ. ಸ್ವೀಕರಿಸಲಾದ ದೂರನ್ನು 30 ದಿನದೊಳಗೆ ಪರಿಹಾರ ನೀಡಲಾಗುತ್ತದೆ. ಒಂದು ವೇಳೆ ಈ ಅವಧಿಯಲ್ಲಿ ಪರಿಹಾರ ಸಿಗದಿದ್ದಲ್ಲಿ ಖುದ್ದು ಪ್ರಾಧಿಕಾರದ ಅಧ್ಯಕ್ಷ/ಆಯುಕ್ತರನ್ನು ಭೇಟಿಯಾಗಲು ದಿನ ನಿಗದಿ ಮಾಡಲಾಗುತ್ತದೆ. ಆ ದಿನ ಅರ್ಜಿದಾರನು ಖುದ್ದು ಹಾಜರಾಗಿ ಸಮಸ್ಯೆ ಹೇಳಿಕೊಂಡ ಕೆಲವೇ ದಿನಗಳಲ್ಲಿ ಪೂರ್ಣವಾಗಿ ಪರಿಹಾರ ನೀಡಲಾಗುತ್ತದೆ.
ಹೊಸ ವ್ಯವಸ್ಥೆಯಿಂದಾಗಿ ಜನರು ಅರ್ಜಿ ಹಿಡಿದು ಬಿಡಿಎ ಕಚೇರಿಗೆ ಬರುವ ಅಗತ್ಯವಿಲ್ಲ. ವ್ಯಾಟ್ಸ್‌ಅಪ್ ಸಂಖ್ಯೆ 9483166622 ಮೂಲಕ ದಾಖಲೆಗಳೊಂದಿಗೆ ದೂರು ಸಲ್ಲಿಸಬಹುದಾಗಿದೆ. ದೂರಿನ ಮಾದರಿ ಪರಿಶೀಲನೆ ನಡೆಸಿ ಆಯಾ ವಿಭಾಗಕ್ಕೆ ರವಾನೆಗೊಂಡು ಸಂಬಂಧಿಸಿದ ಕೇಸ್ ವರ್ಕರ್ ಕಡತ ವಿಲೇವಾರಿ ಮಾಡುತ್ತಾರೆ. ಕೋರ್ಟ್ ಪ್ರಕರಣ ಹೊರತುಪಡಿಸಿ ಉಳಿದೆಲ್ಲ ದೂರುಗಳನ್ನು ನಿರ್ದಿಷ್ಟ ದಿನದೊಳಗೆ ಪರಿಹಾರ ನೀಡಲಾಗುತ್ತಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

750 ಅಹವಾಲು ಸ್ವೀಕಾರ:

ಕಳೆದ ಅಕ್ಟೋಬರ್‌ನಿಂದ ಆರಂಭವಾಗಿರುವ ಸಿಎಸಿಗೆ 750ಕ್ಕೂ ಹೆಚ್ಚು ಅಹವಾಲು ಸಲ್ಲಿಕೆಯಾಗಿವೆ. ಇವುಗಳಲ್ಲಿ ಸೈಟ್ ಹಾಗೂ ಫ್ಲ್ಯಾಟ್‌ಗಳಿಗೆ ಸಂಬಂಧಿಸಿ ಅಧಿಕ ದೂರುಗಳಾಗಿವೆ. ದೂರು ಸ್ವೀಕರಿಸಿದ ದಿನವೇ ಅರ್ಜಿದಾರರ ಮೊಬೈಲ್‌ಗೆ ಎಸ್‌ಎಂಎಸ್ ಮೂಲಕ ದೂರು ಸಂಖ್ಯೆ ರವಾನೆಯಾಗುತ್ತದೆ. ಜತೆಗೆ ಅಹವಾಲು ಆಯಾ ವಿಭಾಗಗಳಿಗೆ ರವಾನೆಯಾಗಿ ಸಿಬ್ಬಂದಿಗಳಿಂದ ಕಡತ ಪರಿಶೀಲನೆ ಮಾಡಲು ಚಾಲನೆ ನೀಡಲಾಗುತ್ತದೆ. ಕ್ಲಿಷ್ಟ ಸಮಸ್ಯೆ ಇಲ್ಲದಿದ್ದಲ್ಲಿ ಕೆಳ ಹಂತದಲ್ಲೇ ಪರಿಹಾರ ನೀಡಲಾಗುತ್ತಿದೆ. ಹಿರಿಯ ಅಧಿಕಾರಿಗಳ ಹಂತದಲ್ಲಿ ಒಪ್ಪಿಗೆ ಬೇಕಿದದಲ್ಲಿ ಅಂತಹವರಿಗೆ ಅಧ್ಯಕ್ಷ/ಆಯುಕ್ತರ ಭೇಟಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಈವರೆಗೆ ಶೇ.80 ದೂರುಗಳನ್ನು (600) ವಿಲೇವಾರಿ ಮಾಡಲಾಗಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ತ್ವರಿತ ಪರಿಹಾರಕ್ಕೆ ತಂತ್ರಾಂಶ ಸಾಥ್:

ನಾಗರಿಕರ ಅಹವಾಲು ಆಲಿಕೆಗೆ ತ್ವರಿತ ಪರಿಹಾರ ಒದಗಿಸುವ ವ್ಯವಸ್ಥೆಗೆ 'ಐಪಿಜಿಆರ್ ವೆಬ್ ಆ್ಯಪ್' ಎಂಬ ತಂತ್ರಾಂಶವನ್ನು ಬಳಸಿಕೊಳ್ಳಲಾಗುತ್ತಿದೆ. ದೂರುದಾರರ ದಾಖಲೆಪತ್ರ ಸಹಿತ ಎಲ್ಲ ದತ್ತಾಂಶವನ್ನು ಆಯಾ ವಿಭಾಗದ ಮುಖ್ಯಸ್ಥರಿಗೆ ರವಾನೆ/ವಿಲೇವಾರಿ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಯಾವುದೇ ದೂರು ದೀರ್ಘ ಕಾಲ ಪ್ರಾಧಿಕಾರದಲ್ಲಿ ಉಳಿಯದು. ತಾಂತ್ರಿಕ ಕಾರಣದಿಂದ ಪರಿಹಾರ ವಿಳಂಬವಾದಲ್ಲಿ ಹಿರಿಯ ಅಧಿಕಾರಿಗಳೇ ಆಸ್ಥೆ ವಹಿಸಿ 1 ತಿಂಗಳ ಗಡುವಿನ ಬಳಿಕ ಪ್ರಕರಣವನ್ನು ಇತ್ಯರ್ಥಪಡಿಸಲಿದ್ದಾರೆ.