- ಕಾರ್ಪೋರೇಷನ್‌ಗಳನ್ನು ಕೈಹಿಡಿಯದಿದ್ದಲ್ಲಿ ದಿವಾಳಿ ಸಾಧ್ಯತೆ
- ಸಿಎಂಗೆ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಬಹಿರಂಗ ಪತ್ರ
ಬೆಂಗಳೂರು: ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ರಾಜ್ಯ ಬಜೆಟ್‌ನಲ್ಲಿ ಕಡಿಮೆ ಮೊತ್ತವನ್ನು ನಿಗದಿಪಡಿಸಿದ್ದು, ಅಭಿವೃದ್ಧಿ ಕಾರ್ಯ ಹಾಗೂ ಆಡಳಿತ ನಡೆಸಲು ಸಾಧ್ಯವಾಗದು. ಹಾಗಾಗಿ ಕಾರ್ಪೋರೇಷನ್‌ಗಳಿಗೆ 16 ಸಾವಿರ ಕೋಟಿ ರೂ. ಗ್ರ್ಯಾಂಟ್ ಬಿಡುಗಡೆ ಮಾಡಬೇಕು ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಅವರು ಸಿಎಂ ಸಿದ್ಧರಾಮಯ್ಯಗೆ ಬಹಿರಂಗ ಪತ್ರ ಬರೆದು ಆಗ್ರಹಿಸಿದ್ದಾರೆ.
2026-27ರ ಸಾಲಿನ ರಾಜ್ಯ ಆಯವ್ಯಯದಲ್ಲಿ ಬೆಂಗಳೂರು ಅಭಿವೃದ್ಧಿಗೆ 7 ಸಾವಿರ ಕೋಟಿ ರೂ. ಮಾತ್ರ ನಿಗದಿಯಾಗಿದೆ. ಈ ಮೊತ್ತ ರಾಜಧಾನಿ ಅಭಿವೃದ್ಧಿಗೆ ಕಡಿಮೆಯಾಗಲಿದೆ. ಪ್ರಸ್ತುತ 5 ಪಾಲಿಕೆಗಳು ಮತ್ತು ಜಿಬಿಎ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ / ನೌಕರರು 2,818 ಮಂದಿ ಇದ್ದು, ವಾರ್ಷಿಕ 1,200 ಕೋಟಿ ರೂ. ಬೇಕಿದ್ದು, ಪಾಲಿಕೆಗಳ 6,350 ಅಧಿಕಾರಿ/ಸಿಬ್ಬಂದಿಗೆ ವಾರ್ಷಿಕ 3,000 ಕೋಟಿ ರೂ. ಬೇಕಾಗುತ್ತದೆ. ಇದೇ ರೀತಿ ಪೌರ ಕಾರ್ಮಿಕರ ವೇತನಕ್ಕೆ 450 ಕೋಟಿ ರೂ., ತ್ಯಾಜ್ಯ ವಿಲೇವಾರಿಗೆ 700 ಕೋಟಿ ರೂ., ಬೀದಿ ದೀಪಗಳ, ಉದ್ಯಾನ, ರಾಜಕಾಲುವೆ, ಕೆರೆ ಹಾಗೂ ಪಾಲಿಕೆ ಕಟ್ಟಡಗಳ ನಿರ್ವಹಣೆಗೆ 2,100 ಕೋಟಿ ರೂ. ವೆಚ್ಚವಾಗಲಿದೆ. ಇದಲ್ಲದೆ ರಸ್ತೆ, ಚರಂಡಿ, ುಟ್‌ಪಾತ್ ಅಭಿವೃದ್ಧಿ/ನಿರ್ವಹಣೆ ಮತ್ತು ರಸ್ತೆಗುಂಡಿ ಮುಚ್ಚುವ ಸಿವಿಲ್ ಕಾರ್ಯಕ್ಕೆ 8,000 ಕೋಟಿ ರೂ. ಅವಶ್ಯಕತೆ ಇದೆ. ಹೀಗೆ ವಿವಿಧ ಬಾಬ್ತಿಗೆ ಪಾಲಿಕೆಗಳಿಗೆ ವಾರ್ಷಿಕ 15,700 ಕೋಟಿ ರೂ. ಬೇಕಾಗುತ್ತದೆ. ಇದನ್ನು ಗಮನಿಸಿ ಅತ್ಯಧಿಕ ಅನುದಾನ ಬಿಡುಗಡೆ ಮಾಡಬೇಕು ಇಲ್ಲವೇ ಪಾಲಿಕೆಗಳು ವರ್ಷದೊಳಗೆ ದಿವಾಳಿ ಅಂಚಿಗೆ ತಲುಪುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಆದಾಯದ ಶೇ.4.1 ಭಾಗವಷ್ಟೇ ಬಿಡುಗಡೆ:
2024-25ರ ಸಾಲಿನಲ್ಲಿ ಬೆಂಗಳೂರು ನಗರದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವಿವಿಧ ತೆರಿಗೆ ಮೂಲಕ 1.70 ಲಕ್ಷ ಕೋಟಿ ರೂ. ಸಂದಾಯವಾಗಿದೆ. ಇದರಲ್ಲಿ ಅಬಕಾರಿ ತೆರಿಗೆ (35,530 ಕೋಟಿ ರೂ.), ರಸ್ತೆ ತೆರಿಗೆ (11,745 ಕೋಟಿ ರೂ.), ರಾಜ್ಯ ಜಿಎಸ್‌ಟಿ (39,577 ಕೋಟಿ ರೂ.) ಹಾಗೂ ಇಂಧನ ಮಾರಾಟ ತೆರಿಗೆ (23,904 ಕೋಟಿ ರೂ.) ಬಾಬ್ತು ಸೇರಿದೆ. ಆದರೆ, ಈ ಒಟ್ಟು ಮೊತ್ತದ ಶೇ.4.1ರಷ್ಟು ಅನುದಾನ ಮಾತ್ರ ಬೆಂಗಳೂರು ಅಭಿವೃದ್ಧಿಗೆ ನೀಡಲಾಗಿದೆ. ಇದನ್ನಾಧರಿಸಿ ಪಾಲಿಕೆ ಸೇರಿದಂತೆ ರಾಜಧಾನಿ ಅಭಿವೃದ್ಧಿಗೆ 16 ಸಾವಿರ ಕೋಟಿ ರೂ. ಅನುದಾನವನ್ನು ಮರು ನಿಗದಿಗೊಳಿಸಬೇಕು ಎಂದು ಸಿಎಂ ಅವರನ್ನು ಎನ್.ಆರ್. ರಮೇಶ್ ಆಗ್ರಹಿಸಿದ್ದಾರೆ.