commercial-areas 
ಬೆಂಗಳೂರು

ವಾಣಿಜ್ಯ ಪ್ರದೇಶಗಳಲ್ಲಿ ಸಂಜೆ ಕಸ ಸಂಗ್ರಹಣೆಗೆ ಚಿಂತನೆ

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ನಗರ ಪಾಲಿಕೆ ಆಯುಕ್ತ ಜಿ.ಜಗದೀಶ್ ಹೇಳಿಕೆ
  • ನಾಗರಿಕರ ಸೇವಾ ಸಂಘಗಳ ಪ್ರತಿನಿಧಿಗಳೊಂದಿಗೆ ಸಂವಾದ
ಬೆಂಗಳೂರು: ನಗರದ ವಾಣಿಜ್ಯ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಉದ್ದೇಶದಿಂದ ಸಂಜೆ ವೇಳೆಯಲ್ಲಿ ಕಸ ಸಂಗ್ರಹಣೆ ವ್ಯವಸ್ಥೆ ಜಾರಿಗೊಳಿಸುವ ಸಾಧ್ಯತೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ಕೇಂದ್ರ ನಗರ ಪಾಲಿಕೆ ಆಯುಕ್ತ ಜಿ.ಜಗದೀಶ್ ತಿಳಿಸಿದರು.
ಬಿ.ಪ್ಯಾಕ್ ಸಹಯೋಗದೊಂದಿಗೆ ಕೇಂದ್ರ ಪಾಲಿಕೆ ವ್ಯಾಪ್ತಿಯ ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ನಾಗರಿಕರ ಸೇವಾ ಸಂಘಗಳ ಪ್ರತಿನಿಧಿಗಳೊಂದಿಗೆ ಶನಿವಾರ ಎಂ.ಜಿ. ರಸ್ತೆಯಲ್ಲಿರುವ ಆಯುಕ್ತರ ಕಚೇರಿಯಲ್ಲಿ ನಡೆದ ಸಂವಾದ ಸಭೆಯಲ್ಲಿ ಅವರು ಈ ವಿಷಯವನ್ನು ಪ್ರಕಟಿಸಿದರು.
ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿ ಶೇ.100ರಷ್ಟು ಮನೆ ಮನೆ ಕಸ ಸಂಗ್ರಹಣೆ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ. ಪ್ರತಿ ವಾರ್ಡ್‌ನಲ್ಲೂ ನಿಯಮಿತವಾಗಿ ಕಸ ಸಂಗ್ರಹಣೆ ನಡೆಯುವಂತೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಲಾಗಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ನಗರದ ಆಡಳಿತದಲ್ಲಿ ಸ್ಥಳೀಯ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳುವುದು ಹಾಗೂ ಆಡಳಿತ ಮತ್ತು ನಾಗರಿಕರ ನಡುವಿನ ಸಮನ್ವಯವನ್ನು ಮತ್ತಷ್ಟು ಬಲಪಡಿಸುವುದು ಸಭೆಯ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಸಂವಾದ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುವುದು ಎಂದು ಆಯುಕ್ತರು ಭರವಸೆ ನೀಡಿದರು.

ತ್ವರಿತ ಪರಿಹಾರ ಒದಗಿಸಲು ಮನವಿ:

ಸಭೆಯಲ್ಲಿ ನಿವಾಸಿಗಳ ಸಂಘಗಳ ಪ್ರತಿನಿಧಿಗಳು ಮಾತನಾಡಿ, ಘನತ್ಯಾಜ್ಯ ಸಮರ್ಪಕ ನಿರ್ವಹಣೆ, ನೈರ್ಮಲ್ಯ, ನಗರ ಪರಿಸರ ಹಾಗೂ ರಸ್ತೆ ಗುಂಡಿ, ಪಾದಚಾರಿ ಮಾರ್ಗಗಳ ಅಭಿವೃದ್ಧಿ ಹಾಗೂ ಒತ್ತುವರಿ ತೆರವು, ಪಾರ್ಕ್‌ಗಳ ನಿರ್ವಹಣೆ, ಬ್ಲ್ಯಾಕ್ ಸ್ಪಾಟ್‌ಗಳಿಂದ ನಗರ ಮುಕ್ತಗೊಳಿಸುವುದು, ಬೀದಿ ದೀಪಗಳ ನಿರ್ವಹಣೆ ಹಾಗೂ ಇನ್ನಿತರ ಮೂಲಸೌಕರ್ಯ ಒದಗಿಸುವ ವಿಚಾರವಾಗಿ ತ್ವರಿತ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಕಂದಾಯ ಅಪರ ಆಯುಕ್ತ ಕೆ.ರಂಗನಾಥ್, ಜಂಟಿ ಆಯುಕ್ತ ಹೇಮಂತ್ ಶರಣ್, ಆರೋಗ್ಯಾಧಿಕಾರಿ ಶಿವಕುಮಾರ್, ಘನತ್ಯಾಜ್ಯ ನಿರ್ವಹಣೆ ವಿಭಾಗದ ಡಿಜಿಎಂ ಭೀಮೇಶ್ ನಾಯಕ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

ಅತಿಕ್ರಮಣ ತೆರವು ಬಳಿಕ ಫುಟ್‌ಪಾತ್‌ಗಳ ದುರಸ್ತಿ:

ಈಗಾಗಲೇ ಅರ್ಟಿರಿಯಲ್ ಹಾಗೂ ಸಬ್ ಅರ್ಟಿರಿಯಲ್ ರಸ್ತೆಗಳಲ್ಲಿನ ಪಾದಚಾರಿ ಮಾರ್ಗಗಳ ಮೇಲಿನ ಅತಿಕ್ರಮಣ ತೆರವು ಕಾರ್ಯಾಚರಣೆಯನ್ನು ಕೈಗೊಳ್ಳಲಾಗುತ್ತಿದೆ. ಕಾರ್ಯಚರಣೆ ವೇಳೆ ಹಾನಿಗೊಳಗಾದ ಪಾದಚಾರಿ ಮಾರ್ಗಗಳನ್ನು ತ್ವರಿತವಾಗಿ ದುರಸ್ತಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಹೊಸದಾಗಿ ನಿರ್ಮಿಸುವ ಫುಟ್‌ಪಾತ್‌ಗಳ ಎತ್ತರವನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಲು ಕ್ರಮ ವಹಿಸುವುವ ಜತೆಗೆ ಹಿರಿಯ ನಾಗರಿಕರು ಮತ್ತು ದಿವ್ಯಾಂಗರ ಸುಗಮ ಸಂಚಾರಕ್ಕಾಗಿ ಅಗತ್ಯ ಸ್ಥಳಗಳಲ್ಲಿ ರಾಂಪ್/ಲ್ಯಾಂಡಿಂಗ್ ವ್ಯವಸ್ಥೆಯನ್ನು ಕಡ್ಡಾಯವಾಗಿ ನಿರ್ಮಿಸುವಂತೆ ಆಯುಕ್ತರು ಇಂಜಿನಿಯರ್‌ಗಳಿಗೆ ನಿರ್ದೇಶಿಸಿದರು.