bda-building 
ಬೆಂಗಳೂರು

ಬಿಡಿಎಗೆ ಹೊಸ ಕಟ್ಟಡ ಪ್ರಸ್ತಾಪ ಮತ್ತೆ ಮುನ್ನೆಲೆಗೆ

ಪ್ರಮುಖ ಮುಖ್ಯಾಂಶಗಳು

  • ಬಹುಮಹಡಿ ಮಾದರಿ ನಿರ್ಮಾಣಕ್ಕೆ ಮಂಡಳಿ ಸಭೆ ಒಪ್ಪಿಗೆ
  • ಹಾಲಿ ಕಚೇರಿ ಸ್ಥಳಾಂತರಕ್ಕೆ ನೌಕರರ ಸಂಘ ವಿರೋಧ
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 50 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ, ತನ್ನ ಕೇಂದ್ರ ಕಚೇರಿಯನ್ನು ಕೆಡವಿ ಅದೇ ಜಾಗದಲ್ಲಿ ಬಹುಮಹಡಿ ಮಾದರಿಯ ಕಟ್ಟಡವನ್ನು ನಿರ್ಮಿಸುವ ಪ್ರಸ್ತಾಪ ಮತ್ತೆ ಮುನ್ನೆಲೆಗೆ ಬಂದಿದೆ. ಈ ಪ್ರಸ್ತಾಪಕ್ಕೆ ಆರಂಭದಲ್ಲೇ ಅಪಸ್ವರ ಕೇಳಿಬಂದಿದೆ.
ಪ್ರಾಧಿಕಾರದ ಈ ಪ್ರಸ್ತಾವನೆಯಿಂದ ಕೇಂದ್ರ ಕಚೇರಿಯು ಹಾಲಿ ಕಾರ್ಯನಿರ್ವಹಿಸುತ್ತಿರುವ ಕುಮಾರಪಾರ್ಕ್ ಪಶ್ಚಿಮ ಬಡಾವಣೆಯಿಂದ ನಗರದ ಇತರ ಭಾಗಕ್ಕೆ ಸ್ಥಳಾಂತರಿಸುವುದು ಹಾಗೂ ಹೊಸ ಬಿಲ್ಡಿಂಗ್ ನಿರ್ಮಿಸುವ ನೆಪದಲ್ಲಿ ಹಾಲಿ ಸುಸ್ಥಿತಿಯಲ್ಲಿರುವ ಕಟ್ಟಡವನ್ನು ನೆಲಸಮ ಮಾಡದೆ ಹಾಗೆಯೇ ಉಳಿಸಿಕೊಳ್ಳಬೇಕು ಎಂದು ಬಿಡಿಎ ನೌಕರರ ಸಂಘವು ಪ್ರಾಧಿಕಾರದ ಅಧ್ಯಕ್ಷ ಹಾಗೂ ಆಯುಕ್ತರಿಗೆ ಪತ್ರ ಬರೆದು ಒತ್ತಾಯಿಸಿದೆ.
ಕಳೆದ ಡಿ.30ರಂದು ನಡೆದ ಪ್ರಾಧಿಕಾರದ ಮಂಡಳಿ ಸಭೆಯಲ್ಲಿ ಹಳೆಯ ಕಟ್ಟಡವನ್ನು ನೆಲಸಮಗೊಳಿಸಿ ಪುನರ್‌ನಿರ್ಮಿಸಲು ನಿರ್ಣಯ ಕೈಗೊಳ್ಳಲಾಗಿದೆ. ಹೊಸ ಕಟ್ಟಡವನ್ನು ಹಾಲಿ ಕಾರ್ಯಾಚರಿಸುತ್ತಿರುವ ಜಾಗದಲ್ಲೇ ಬಿಲ್ಡಿಂಗ್ ಪ್ರಾಜೆಕ್ಟ್ ಮೇಲೇಳಲಿದೆ. ಇದಕ್ಕಾಗಿ ಕೇಂದ್ರ ಕಚೇರಿಯನ್ನು ಬೇರೆ ಕಡೆಗೆ ಸ್ಥಳಾಂತರಿಸಲು ಒಪ್ಪಿಗೆ ಪಡೆಯಲಾಗಿದೆ. ಆದರೆ, ಈ ಪ್ರಸ್ತಾಪಕ್ಕೆ ಮುಖ್ಯಮಂತ್ರಿಯವರ ಒಪ್ಪಿಗೆ ಪಡೆಯಲು ಪ್ರಾಧಿಕಾರ ಎದಿರುನೋಡುತ್ತಿದೆ.

ಸ್ಥಳಾವಕಾಶ ಕೋರಿ ಬಿಎಂಟಿಸಿಗೆ ಮೊರೆ:

ಮಂಡಳಿ ಸಭೆಯಲ್ಲಿ ಪ್ರಸ್ತಾಪವಾಗಿರುವಂತೆ ಕೇಂದ್ರ ಕಚೇರಿಯಲ್ಲಿರುವ ಅಧಿಕಾರಿ ಹಾಗೂ ಸಿಬ್ಬಂದಿ ಕಚೇರಿಗಾಗಿ ಹೊಸ ಜಾಗದ ಅವಶ್ಯಕತೆ ಇದೆ. ಇದಕ್ಕಾಗಿ ಪ್ರಾಧಿಕಾರದ ಆಯುಕ್ತರು ಕಳೆದ ಮೇ 20ರಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು ಶಾಂತಿನಗರ, ಜಯನಗರ ಹಾಗೂ ಕಲಾಸಿಪಾಳ್ಯದಲ್ಲಿರುವ ಬಿಎಂಟಿಸಿಯ ಟಿಟಿಎಂಸಿಯಲ್ಲಿ 95,747 ಚದರ ಅಡಿ ವಿಸ್ತೀರ್ಣದ ಜಾಗ ಲಭ್ಯವಿದ್ದು, ಅದನ್ನು ಬಾಡಿಗೆ ರೂಪದಲ್ಲಿ ಕೊಡುವಂತೆ ಮನವಿ ಮಾಡಿದ್ದರು. ಇದಕ್ಕೆ ಮೇ 22ರಂದು ಮಾರುತ್ತರ ಬರೆದಿದ್ದ ಬಿಎಂಟಿಸಿ ಮುಖ್ಯಸ್ಥರು, ಟಿಟಿಎಂಸಿಯಲ್ಲಿ ಲಭ್ಯವಿರುವ ಜಾಗಕ್ಕೆ ಮಾಸಿಕ 63.53 ಲಕ್ಷ ರೂ. ಬಾಡಿಗೆ ನೀಡಬೇಕಾಗುತ್ತದೆ ಎಂದು ತಿಳಿಸಿದ್ದರು. ಇದಲ್ಲದೆ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿದರೆ ಅಲ್ಲಿನ ಒಳಾಂಗಣ ಕಾಮಗಾರಿ, ವಿದ್ಯುತ್ ಸೌಲಭ್ಯ, ಪೀಠೋಪಕರಣ ಸೇರಿ ಇತರ ಕೆಲಸಕ್ಕಾಗಿ 10 ಕೋಟಿ ರೂ. ವೆಚ್ಚ ಮಾಡಲು ಪ್ರಾಧಿಕಾರದ ಅಧ್ಯಕ್ಷರು ಹಾಗೂ ಆಯುಕ್ತರಿಗೆ ಅಧಿಕಾರವನ್ನು ನೀಡಲಾಗಿದೆ.
ಆದರೆ, ಕೇಂದ್ರ ಕಚೇರಿಯನ್ನು ಬೇರೆಡೆ ಸ್ಥಳಾಂತರಿಸಿದರೂ, ಮೂರು ಬೇರೆ ಬೇರೆ ಜಾಗಗಳಲ್ಲಿ ಕಾರ್ಯನಿರ್ವಹಿಸುವುದು ಅಷ್ಟು ಸೂಕ್ತವಾಗದು. ಇದರಿಂದ ಸಾರ್ವಜನಿಕರಿಗೆ ಅನನುಕೂಲವಾಗುವ ಸಾಧ್ಯತೆ ಇದೆ. ಹಾಗಾಗಿ ಒಂದೇ ವಿಶಾಲವಾದ ಜಾಗಕ್ಕೆ ಸ್ಥಳಾಂತರ ಮಾಡುವುದು ಸೂಕ್ತ ಎಂಬ ಇಂಗಿತ ಮಂಡಳಿ ಸಭೆಯಲ್ಲಿ ವ್ಯಕ್ತವಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಬಿಡಿಎ ಅಧ್ಯಕ್ಷ ಹಾಗೂ ಆಯುಕ್ತರನ್ನು ಸಂಪರ್ಕಿಸಿದರೂ, ಅವರಿಬ್ಬರೂ ಕರೆ ಸ್ವೀಕರಿಸಲಿಲ್ಲ.

ಹಿಂದಿನ ಪ್ರಸ್ತಾಪಕ್ಕೆ ಕೊಕ್:

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಡಿಎ ಕೇಂದ್ರ ಕಚೇರಿಯನ್ನು ಕೆಡವಿ ಹೊಸ ಬಿಲ್ಡಿಂಗ್ ನಿರ್ಮಿಸಲು ಪ್ರಸ್ತಾವನೆ ಸಿದ್ಧಗೊಂಡಿತ್ತು. ಆಗ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಎಸ್.ಆರ್. ವಿಶ್ವನಾಥ್ ಮಂಡಳಿ ಸಭೆಯಲ್ಲಿ ಪ್ರಸ್ತಾವನೆ ಮಂಡಿಸಿ 10 ಅಂತಸ್ತಿನ ಕಟ್ಟಡವನ್ನು ನಿರ್ಮಿಸಲು ಒಪ್ಪಿಗೆ ಪಡೆದಿದ್ದರು. ಆದರೆ, ನಂತರದಲ್ಲಿ ಆ ಪ್ರಸ್ತಾಪ ಸರ್ಕಾರದ ಮಟ್ಟದಲ್ಲೇ ಉಳಿಯಿತು. ಆ ಬಳಿಕ ಬಂದ ಕಾಂಗ್ರೆಸ್ ಸರ್ಕಾರ ಹೊಸ ಕಟ್ಟಡ ನಿರ್ಮಾಣ ಯೋಜನೆಗೆ ಕೊಕ್ ನೀಡಿತು.

ನವೀಕರಣಕ್ಕೆ 15 ಕೋಟಿ ರೂ. ಖರ್ಚು:

ಹಾಲಿ ಬಿಡಿಎ ಕೇಂದ್ರ ಕಚೇರಿಯಲ್ಲಿ ವರ್ಷದಿಂದೀಚಿಗೆ ನವೀಕರಣ, ದುರಸ್ತಿ, ಒಳಾಂಗಣ ವಿನ್ಯಾಸ ಬದಲಾವಣೆ, ವಿವಿಧ ಕಟ್ಟಡಗಳಿಗೆ ಸುಣ್ಣಬಣ್ಣ, ಲಾನ್ ನಿರ್ಮಾಣ ಸೇರಿ ಇತರ ಕಾಮಗಾರಿಗಾಗಿ 15 ಕೋಟಿ ರೂ. ಖರ್ಚು ಮಾಡಲಾಗಿದೆ. ಇದರಲ್ಲಿ ಅಧ್ಯಕ್ಷ ಹಾಗೂ ಆಯುಕ್ತರ ಕಚೇರಿಯ ನವೀಕರಣದ ಕೆಲಸವೂ ಸೇರಿದೆ. ಇಷ್ಟೊಂದು ದೊಡ್ಡ ಮೊತ್ತವನ್ನು ಖರ್ಚು ಮಾಡಿರುವಾಗ ಹೊಸ ಕಟ್ಟಡ ನಿರ್ಮಿಸುವ ಪ್ರಮೇಯ ಇಲ್ಲ. ಹಾಲಿ ಜಾಗವನ್ನು ಸದ್ಬಳಕೆ ಮಾಡಿಕೊಂಡು ಸುವ್ಯವಸ್ಥಿತವಾಗಿ ನಿರ್ವಹಿಸಬಹುದು ಎನ್ನುತ್ತಾರೆ ಸಂಘದ ಪದಾಧಿಕಾರಿಗಳು.

ಖಾಸಗಿಯವರು ಬಂದಲ್ಲಿ ಸಮಸ್ಯೆ:

ಉದ್ದೇಶಿತ ಪ್ರಸ್ತಾವನೆಯಂತೆ 30 ಮಹಡಿಗಳ ಬೃಹತ್ ಸಮುಚ್ಛಯವನ್ನು ನಿರ್ಮಿಸುವ ಆಲೋಚನೆ ಇದೆ. ನೂತನ ಬಿಲ್ಡಿಂಗ್‌ನಲ್ಲಿ ಪ್ರಾಧಿಕಾರಕ್ಕೆ ಬೇಕಿರುವಷ್ಟು ಜಾಗವನ್ನು ಬಳಸಿಕೊಂಡು ಉಳಿದ ಜಾಗವನ್ನು ಖಾಸಗಿಯವರಿಗೆ ಬಿಟ್ಟುಕೊಡಲಾಗುತ್ತದೆ. ಸರ್ಕಾರಿ ಕಚೇರಿಗಳಿರುವೆಡೆ ಖಾಸಗಿ ಕಂಪನಿಗಳ ಕಾರ್ಯನಿರ್ವಹಣೆ ಸರಿಯಲ್ಲ. ಇದರಿಂದ ಸಂಸ್ಥೆ ಹಾಗೂ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತದೆ ಎಂಬ ಆಕ್ಷೇಪ ಕೇಳಿಬಂದಿದೆ.
"

ಬಿಡಿಎ ಕೇಂದ್ರ ಕಚೇರಿಯನ್ನು ನೆಲಸಮ ಮಾಡಿ ಅದೇ ಜಾಗದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಬೃಹತ್ ಬಹುಮಹಡಿ ಕಟ್ಟಡವನ್ನು ನಿರ್ಮಿಸುವ ಅಗತ್ಯವಿಲ್ಲ. ಇದರಿಂದ ಪ್ರಾಧಿಕಾರದ ಹಣ ವೃಥಾ ಪೋಲಾಗುತ್ತದೆ. ಇದರ ಬದಲು ಬೇರೆ ಜಾಗದಲ್ಲಿ ಕಟ್ಟಡ ನಿರ್ಮಿಸಿ ಸಂಸ್ಥೆಗೆ ಆದಾಯದ ದಾರಿ ಕಂಡುಕೊಳ್ಳಬಹುದು. ಈ ಪ್ರಸ್ತಾವನೆಯನ್ನು ಕೈಬಿಡದಿದ್ದಲ್ಲಿ ಸಂಘವು ಸಿಎಂ ಅವರ ಮೊರೆ ಹೋಗಲಿದೆ.

- ಆರ್​.ಮಂಜುನಾಥ್, ಬಿಡಿಎ ನೌಕರರ ಸಂಘ