bda property 
ಬೆಂಗಳೂರು

ಬಿಡಿಎಯಿಂದ 10 ಕೋಟಿ ಮೌಲ್ಯದ ಆಸ್ತಿ ವಶ

ಪ್ರಮುಖ ಮುಖ್ಯಾಂಶಗಳು

  • ಅಗ್ರಹಾರ ದಾಸರಹಳ್ಳಿಯಲ್ಲಿ ಕಾರ್ಯಾಚರಣೆ
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಗುರುವಾರ ಅಗ್ರಹಾರ ದಾಸರಹಳ್ಳಿಯಲ್ಲಿ 10.50 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಯಶವಂತಪುರ ಹೋಬಳಿಯ ಅಗ್ರಹಾರ ದಾಸರಹಳ್ಳಿ ಗ್ರಾಮಕ್ಕೆ ಸೇರಿದ ಸ್ವತ್ತಿನಲ್ಲಿ ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಕಾಂಪೌಂಡ್ ಹಾಕಿಕೊಂಡು ಸ್ವಂತಕ್ಕೆ ಬಳಸಿಕೊಂಡಿದ್ದರು. ಸ್ಥಳ ತೆರವುಗೊಳಿಸುವಂತೆ ಪದೇ ಪದೆ ಸೂಚಿಸಿದರೂ, ಆ ವ್ಯಕ್ತಿಗಳಿಂದ ಯಾವುದೇ ಸ್ಪಂದನೆ ಬರಲಿಲ್ಲ. ಹಾಗಾಗಿ ಕಾನೂನು ಮೂಲಕ ದಾಖಲೆಗಳನ್ನು ದೃಢಪಡಿಸಿಕೊಂಡು ಅತಿಕ್ರಮಿಸಿದ್ದ ಸ್ವತ್ತನ್ನು ವಶಕ್ಕೆ ಪಡೆಯಲಾಯಿತು. ಈ ಸ್ವತ್ತಿಗೆ ತಂತಿ ಬೇಲಿ ಹಾಕಿ ಭದ್ರಪಡಿಸುವ ಕೆಲಸವನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯನ್ನು ಪ್ರಾಧಿಕಾರದ ಕಾರ್ಯಪಡೆಯ ಆರಕ್ಷಕ ಅಧೀಕ್ಷಕರು, ಪಶ್ಚಿಮ ವಿಭಾಗದ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ನೆರವೇರಿಸಲಾಯಿತು.