ಬೀದಿನಾಯಿ 
ಬೆಂಗಳೂರು

ಶ್ವಾನ ಅಧ್ವಾನ, ಗುರುತಿಸುವಿಕೆ ಅತಿ ನಿಧಾನ | STRAY DOG SERIES PART 1

ಪವನ್ ಆಚಾರ್ಯ ನೀರ್ಚಾಲು

ಪ್ರಮುಖ ಮುಖ್ಯಾಂಶಗಳು

  • ಕೋಟ್ಯಂತರ ರೂ. ವ್ಯಯ, ಬದ್ಧತೆ ಮಾಯ
  • ಸುಪ್ರೀಂಕೋರ್ಟ್​ ಆದೇಶ ಪಾಲನೆ ತೋರಿಕೆಗೆ?
  • ಜಿಬಿಎ ನಡೆ ಬಗ್ಗೆ ಪ್ರಾಣಿಹಿತೈಷಿಗಳ ಆತಂಕ
ಪವನ್​ ಆಚಾರ್ಯ ನೀರ್ಚಾಲು ಬೆಂಗಳೂರು
ಬೀದಿನಾಯಿಗಳಿಗೆ ಆಶ್ರಯ ನೀಡುವ ನಿಟ್ಟಿನಲ್ಲಿ ಗ್ರೇಟರ್​ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಂತ ಹಂತವಾಗಿ ಹೆಜ್ಜೆ ಇಡುತ್ತಿದೆ. ಸುಪ್ರೀಂಕೋರ್ಟ್​ನ ಆದೇಶದ ಅನ್ವಯ ಶ್ವಾನಗಳ ಸ್ಥಳಾಂತರ ಹಾಗೂ ಆಹಾರ ನೀಡಲು ಕೋಟ್ಯಂತರ ರೂ. ವ್ಯಯಿಸಬೇಕಿದೆ. ಇದರ ಮೊದಲ ಹಂತವಾಗಿ ದಣ ನಗರ ಪಾಲಿಕೆ ವ್ಯಾಪ್ತಿಯ ಎಸ್​. ಬಿಂಗಿಪುರದಲ್ಲಿ ಆಶ್ರಯ ತಾಣ ಹಾಗೂ ಆಹಾರ ನೀಡಲು 1.83 ಕೋಟಿ ರೂ. ಟೆಂಡರ್​ ಕರೆಯಲಾಗಿದೆ. ಇದು ವರ್ಷದ ಅವಧಿಗೆ ಸೀಮಿತವಾಗಿದ್ದು, ಐದೂ ಪಾಲಿಕೆಗಳ ವ್ಯಾಪ್ತಿಯಲ್ಲಿ ನಾಯಿಗಳಿಗಾಗಿಯೇ ವಾರ್ಷಿಕ ಅಂದಾಜು ಐದೂವರೆ ಕೋಟಿ ರೂ. ವ್ಯಯವಾಗಲಿದೆ. ಇದೇ ವೇಳೆ ಸುಪ್ರೀಂಕೋರ್ಟ್​ ಆದೇಶವನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.
ಶಾಲೆ, ಆಸ್ಪತ್ರೆ, ಬಸ್​, ರೈಲು ನಿಲ್ದಾಣ ಹಾಗೂ ಕ್ರೀಡಾಂಗಣಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಅಲೆದಾಡುವ ನಾಯಿಗಳನ್ನು ಶಾಶ್ವತವಾಗಿ ತೆರವುಗೊಳಿಸಿ ಬೇರೆಡೆ ಸ್ಥಳಾಂತರಿಸಬೇಕೆಂದು ಪ್ರಾಥಮಿಕ ಆದೇಶವಾಗಿದ್ದರೂ ಪಾಲಿಕೆಗಳು ಅಂತಹ ನಾಯಿಗಳನ್ನು ಗುರುತಿಸುವಲ್ಲಿ ವಿಲವಾಗುತ್ತಿವೆ. ಇತ್ತೀಚೆಗೆ ಬಿಡುಗಡೆ ಮಾಡಿರುವ ಮಾಹಿತಿ ಅನ್ವಯ ಉತ್ತರ ಪಾಲಿಕೆಯಲ್ಲಿ ಸುಮಾರು 2,339 ಬೀದಿನಾಯಿಗಳನ್ನು ಗುರುತಿಸಲಾಗಿದೆ. ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿ 409, ದಣ& 281, ಪೂರ್ವ& 270, ಪಶ್ಚಿಮ& 209 ಶ್ವಾನಗಳನ್ನು ಗುರುತಿಸಿವೆ. ನಗರದಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಲೆ, ಆಸ್ಪತ್ರೆ ಸೇರಿ ಸಾರ್ವಜನಿಕ ಕೇಂದ್ರಗಳಿದ್ದು, ಒಂದು ಕೇಂದ್ರದಿಂದ ಕನಿಷ್ಠ ಎರಡು ನಾಯಿ ಗುರುತಿಸುವ ಕೆಲಸವೂ ಆಗಿಲ್ಲವೆಂಬ ಆಕ್ಷೇಪ ವ್ಯಕ್ತವಾಗಿದೆ.
ತಾತ್ಕಾಲಿಕ ತಾಣಕ್ಕೆ ವಿರೋಧ: 
ಸುಪ್ರೀಂಕೋರ್ಟ್​ ಆದೇಶ ಮತ್ತು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು ತಪ್ಪಾಗಿ ಅರ್ಥೈಸಿರುವ ಜಿಬಿಎ, "ತಾತ್ಕಾಲಿಕ ಆಶ್ರಯ ಕೇಂದ್ರಗಳಿಗೆ' ಸಾಗಿಸುತ್ತಿರುವುದಕ್ಕೆ ಪ್ರಾಣಿಪ್ರಿಯರು ವಿರೋಧಿಸುತ್ತಿದ್ದಾರೆ. ತಾತ್ಕಾಲಿಕವಾಗಿ ಬೀದಿನಾಯಿಗಳನ್ನು ಸ್ಥಳಾಂತರಿಸಲು ವಿವಿಧ ಪಾಲಿಕೆಗಳು ಆಯ್ಕೆ ಮಾಡಿಕೊಂಡಿರುವ ಎನ್​ಜಿಒಗಳು ಕೆಲವು ವಸತಿ ಪ್ರದೇಶದಲ್ಲಿರುವುದು ಕೂಡ ಒಂದು ಕಾರಣವಾಗಿದೆ. ಅಂತಹ ಕೇಂದ್ರಗಳಿಂದ ಈಗಾಗಲೆ ಜನರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಜಿಬಿಎ ಯೋಜನೆಯಂತೆ ಮತ್ತಷ್ಟು ನಾಯಿಗಳನ್ನು ಸೇರ್ಪಡೆಗೊಳಿಸಿದರೆ ಸಮಸ್ಯೆ ಉಲ್ಬಣಿಸಲಿದೆ ಎಂಬುದು ಆಕ್ಷೇಪಕ್ಕೆ ಪ್ರಮುಖ ಕಾರಣವಾಗಿದೆ. ಆಶ್ರಯ ಕೇಂದ್ರಗಳಲ್ಲಿ ಸಾಕಷ್ಟು ಜಾಗವಿಲ್ಲದಿದ್ದರೆ ನಾಯಿಗಳು ತೀವ್ರ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದೆ. ಅಧಿಕಾರಿಗಳು ನಾವು ಅನುಕೂಲವಾಗುವ ಸಂಖ್ಯೆಯಲ್ಲಿ ಸ್ಥಳಾಂತರಿಸುತ್ತೇವೆ ಎಂದು ಹೇಳುತ್ತಿದ್ದರೂ, ಈಗಾಗಲೆ ಕೇಂದ್ರಗಳಲ್ಲಿರುವ ನಾಯಿಗಳೊಂದಿಗೆ ಸ್ಥಳಾಂತರಿಸುವ ನಾಯಿಗಳನ್ನು ಸೇರಿಸಿದರೆ ಸಂಖ್ಯೆ ಅತ್ಯಧಿಕವಾಗಲಿದೆ. ಒಂದು ಪಾಲಿಕೆ 2&3 ತಾತ್ಕಾಲಿಕ ಕೇಂದ್ರವನ್ನು ಮಾತ್ರ ಗುರುತಿಸಿರುವುದರಿಂದ ಅನಿವಾರ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಶ್ವಾನಗಳನ್ನು ಸಂರಕ್ಷಣೆ ಮಾಡಬೇಕಾಗಿ ಬರುತ್ತದೆ. ಇದರಿಂದ ಅವುಗಳು ಸಾವಿಗೀಡಾಗಬಹುದು ಎಂದು ಪ್ರಾಣಿಹಿತೈಷಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಇಲಿಗಳ ಹಾವಳಿ ಹೆಚ್ಚಳ ಸಾಧ್ಯತೆ
ಬೀದಿನಾಯಿಗಳು ಇಲಿಗಳ ಸಂಖ್ಯೆಯನ್ನು ನಿಯಂತ್ರಿಸುತ್ತವೆ. ಇಲಿಗಳು ಪ್ಲೇಗ್​ ಮತ್ತು ಇತರ ಕಾಯಿಲೆ ಹರಡಲು ಕಾರಣವಾಗುತ್ತವೆ. ನಾಯಿಗಳಂತೆ ಇಲಿಗಳಿಗೆ ಲಸಿಕೆ ಹಾಕಲು ಸಾಧ್ಯವಿಲ್ಲ. ಸಾಮೂಹಿಕವಾಗಿ ನಾಯಿಗಳನ್ನು ಸ್ಥಳಾಂತರ ಮಾಡಿದರೆ ಇಲಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೆ, ನಾಯಿಗಳನ್ನು ಒತ್ತಡದಿಂದ ಸಂರಕ್ಷಣೆ ಮಾಡುವುದರಿಂದ ಅವುಗಳ ವರ್ತನೆಯಲ್ಲಿ ಆಕ್ರಮಣಶೀಲತೆ ಹೆಚ್ಚಾಗಲಿದೆ. ಸಾಮೂಹಿಕ ಸಾವು ಸಂಭವಿಸುವ ಸಾಧ್ಯತೆಯೂ ಇದೆ. ಈ ಸ್ಥಳಗಳ ಸಮೀಪದಲ್ಲಿ ವಾಸಿಸುವ ಮನುಷ್ಯರ ಜೀವನಕ್ಕೂ ಸಮಸ್ಯೆಗಳನ್ನು ತರಲಿವೆ ಎಂದು ಜನರು ಕಳವಳ ವ್ಯಕ್ತಪಡಿಸಿದ್ದಾರೆ.
ವ್ಯಾಕ್ಯೂಮ್​ ಎಫೆಕ್ಟ್​
ಈಗಾಗಲೆ ಸಂತಾನಶಕ್ತಿ ಹರಣಗೊಳಿಸಿದ ಬೀದಿನಾಯಿಗಳನ್ನು ತೆರವುಗೊಳಿಸಿದರೆ ಖಾಲಿ ಸ್ಥಳ ಉಂಟಾಗುತ್ತದೆ. ಇದರಿಂದ ಸಮೀಪದ ಪ್ರದೇಶಗಳಿಂದ ಲಸಿಕೆ ಪಡೆಯದ ನಾಯಿಗಳು ಬಂದು ನೆಲೆಸುವ ಸಾಧ್ಯತೆ ಇದೆ. ಇದರಿಂದ ರೇಬಿಸ್​ ಅಪಾಯ ಹೆಚ್ಚಬಹುದು ಎನ್ನಲಾಗುತ್ತಿದೆ. ಈ ನಿರ್ಧಾರದಿಂದ ಬೀದಿನಾಯಿ ಸಂರಕ್ಷಣೆಯ ಸಾಂಪ್ರದಾಯಿಕ ಕ್ರಮಕ್ಕೆ ಧಕ್ಕೆ ಉಂಟಾಗಲಿದೆ ಎಂಬ ವಾದ ಮುಂದಿಡಲಾಗಿದೆ.

ಸುಪ್ರೀಂಕೋರ್ಟ್​ ಆದೇಶದ ಪ್ರಕಾರ, ತಾತ್ಕಾಲಿಕ ಕೇಂದ್ರಗಳಲ್ಲಿ ಬೀದಿನಾಯಿಗಳನ್ನು ಸಂರಕ್ಷಣೆ ಮಾಡುವಂತಿಲ್ಲ. ಪ್ರಾರಂಭದಿಂದಲೇ ಜಿಬಿಎ ಈ ಯೋಜನೆಯಲ್ಲಿ ಎಡವಿದೆ. ನಗರವನ್ನು ದೊಡ್ಡ ಶೆಲ್ಟರ್​ಗಳ ಮಾದರಿಯತ್ತ ತಳ್ಳುವುದರಿಂದ ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಪರಿಣಾಮ ಉಂಟಾಗುತ್ತದೆ. ಬೀದಿನಾಯಿಗಳು ನಮ್ಮ ನಗರ ಪರಿಸರ ವ್ಯವಸ್ಥೆಗೆ ಬಹಳ ಮುಖ್ಯವಾಗಿವೆ. ವಿದೇಶಿ ನಾಯಿಗಳನ್ನು ಲಾಂತರ ರೂಪಾಯಿಗೆ ಕೊಂಡುಕೊಳ್ಳುವವರಿದ್ದಾರೆ. ಆದರೆ ಇನ್ನೊಂದು ಜಾತಿಯ ನಮ್ಮ ದೇಶದ ನಾಯಿಗಳ ಮೇಲೆ ಮಾತ್ರ ದ್ವೇಷ ಯಾಕೆ?

ಮುಖ್ಯಾಂಶಗಳು

* ಕಳ್ಳತನ, ಅಪರಾಧ ಚಟುವಟಿಕೆ ತಡೆಗೆ ಬೀದಿನಾಯಿಗಳು ಪೂರಕ
* ಶ್ವಾನಗಳ ಸಂಖ್ಯೆಗೆ ಅನುಗುಣವಾಗಿ ಎಬಿಸಿ ಕೇಂದ್ರಗಳ ಹೆಚ್ಚಳ ಅಗತ್ಯ
* ನಗರದಲ್ಲಿ ಎಬಿಸಿಗೆ ಜಾಗ ಇಲ್ಲ, ಹಾಲಿ 5 ಪಾಲಿಕೆಗಳಿಂದ ಜಾಗ ಗುರುತಿಸಲು ಕ್ರಮ
* ನಗರದ ಹೊರವಲಯದಿಂದ ನಾಯಿಗಳು ಬರುತ್ತಲೇ ಇರುತ್ತವೆ
* ರೇಬಿಸ್​ ಪ್ರಕರಣ ನಿಯಂತ್ರಣ, ಸಹಾಯವಾಣಿ ಅಗತ್ಯ