- ಬಜೆಟ್ ಕುರಿತು ಮಾಜಿ ಮೇಯರ್ಗಳ ಒಲವು
- ನಾಗರಿಕರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಿ
- 5 ಪಾಲಿಕೆಗಳಲ್ಲಿ ಸೌಲಭ್ಯಗಳು ಏಕರೂಪತೆ ಇರಲಿ
ಬೆಂಗಳೂರು: ಪಂಚ ಪಾಲಿಕೆಗಳು ಮಂಡಿಸುತ್ತಿರುವ ಮೊದಲ ಬಜೆಟ್ ನಾಗರಿಕ ಸ್ನೇಹಿ ಆಗಿರಬೇಕು. ಜನರು ಎದುರಿಸುತ್ತಿರುವ ದೈನಂದಿನ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಉತ್ತಮ ಆಡಳಿತ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರುವ ವಾಗ್ದಾನ ಆಯಾ ಕಾರ್ಪೋರೇಷನ್‌ಗಳ ಆಯವ್ಯಯ ಒಳಗೊಂಡಿರಬೇಕು ಎಂದು ನಗರದ ಮಾಜಿ ಮೇಯರ್‌ಗಳು ಆಶಯ ವ್ಯಕ್ತಪಡಿಸಿದ್ದಾರೆ.
ಸತತ ಐದೂವರೆ ವರ್ಷದಿಂದ ಚುನಾಯಿತ ಸದಸ್ಯರಿಲ್ಲದೆ ಪಾಲಿಕೆಯ ಆಡಳಿತ ಹಳಿತಪ್ಪಿದೆ. ಈ ಅವಧಿಯಲ್ಲಿ ಜನರಿಗೆ ಸಿಗಬೇಕಾದ ಸೌಲಭ್ಯಗಳು ಸಮರ್ಪಕವಾಗಿ ತಲುಪಿಲ್ಲ. ಮೂಲಸೌಕರ್ಯ ಯೋಜನೆಗಳು ಕೂಡ ಕುಂಟುತ್ತಾ ಸಾಗಿವೆ. ಇಂತಹ ಜ್ವಲಂತ ಸಮಸ್ಯೆಗಳನ್ನು ಕಾಲಮಿತಿಯೊಳಗೆ ಪರಿಹರಿಸಿ ಕಾರ್ಪೋರೇಷನ್‌ಗಳು ಕೈಗೊಳ್ಳಬೇಕಾದ ಕರ್ತವ್ಯಕ್ಕೆ ಆದ್ಯತೆ ನೀಡಬೇಕು ಎಂದು ಮಾಜಿ ಪುರಪಿತೃಗಳು ಪಂಚ ಪಾಲಿಕೆಗಳನ್ನು ಆಗ್ರಹಿಸಿದ್ದಾರೆ.
ಹೊಸದಾಗಿ ರಚನೆಯಾಗಿರುವ 5 ಪಾಲಿಕೆಗಳಿಗೆ ಆದಾಯದ ಕೊರತೆ ಎದುರಾಗಿದೆ. ಸ್ವಂತ ಸಂಪನ್ಮೂಲವನ್ನು ಹಿಗ್ಗಿಸಿಕೊಳ್ಳಲು ಅವಕಾಶವಿರುವ ಆಯ್ಕೆಯನ್ನು ಪ್ರಥಮ ಬಜೆಟ್‌ನಲ್ಲಿ ಜನರಿಗೆ ತಿಳಿಸಬೇಕು. ಇದರ ಆಧಾರದ ಮೇಲೆ ಆಯಾ ಪಾಲಿಕೆಗಳು ನೇರವಾಗಿ ಜನರಿಗೆ ತಲುಪುವಂತೆ ಕಾರ್ಯಕ್ರಮಗಳನ್ನು ರೂಪಿಸಿ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಇದಕ್ಕೆ ಬೇಕಾದ ಅನುದಾನ, ಸಿಬ್ಬಂದಿ ನಿಯೋಜನೆ ಮಾಡಿ ಜನರಿಗೆ ಸೌಲಭ್ಯ ತಲುಪಿಸುವ ಜವಾಬ್ದಾರಿ ಹೊತ್ತಲ್ಲಿ ಮಾತ್ರ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಕಾರ್ಪೋರೇಷನ್‌ಗಳೀಂದ ಜನಮುಖಿ ಕೆಲಸಗಳನ್ನು ನಿರೀಕ್ಷಿಸಲು ಸಾಧ್ಯ ಎಂದಿದ್ದಾರೆ.
ಆದ್ಯತಾ ವಲಯಕ್ಕೆ ಮಣೆ ಹಾಕಲಿ:
ತೆರಿಗೆದಾರರ ಹಣದಲ್ಲಿ ಕಾರ್ಯನಿರ್ವಹಿಸುವ ಕಾರ್ಪೋರೇಷನ್‌ಗಳು ಆದ್ಯತಾ ವಲಯಗಳಾದ ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ, ಮೂಲಸೌಕರ್ಯ ಅನುಷ್ಠಾನಕ್ಕೆ ವಿಶೇಷ ಒತ್ತು ನೀಡಬೇಕು. ಇದಕ್ಕಾಗಿ ಪಾಲಿಕೆ ಶಾಲೆಗಳನ್ನು ಮೇಲ್ದರ್ಜೆಗೇರಿಸಿ ಪದವಿವರೆಗೂ ಉಚಿತ ಶಿಕ್ಷಣ ನೀಡಬೇಕು. ನಮ್ಮ ಕ್ಲಿನಿಕ್, ಪಿಎಚ್‌ಸಿ, ಹೆರಿಗೆ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಒದಗಿಸಬೇಕು. ಕಸಮುಕ್ತ ಬೆಂಗಳೂರು ನಿರ್ಮಿಸಲು ತ್ಯಾಜ್ಯದ ಸಮಸ್ಯೆಯನ್ನು ನಿವಾರಿಸುವ ಜತೆಗೆ ಗುಂಡಿಗಳನ್ನು ಮುಚ್ಚಿ ಉತ್ತಮ ರಸ್ತೆಗಳನ್ನು ನಿರ್ಮಿಸಬೇಕು. ಈ ಎಲ್ಲ ಕಾರ್ಯಕ್ಕೆ ಬೇಕಾದ ಸಂಪನ್ಮೂಲವನ್ನು ಸಂಗ್ರಹಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಲ್ಲಿ ಅನುದಾನದ ಕೊರತೆ ಉಂಟಾಗದು. ಆದರೆ, ಯಾವುದೇ ಹೊಸ ತೆರಿಗೆ ವಿಧಿಸದೆ ಪಾಲಿಕೆಗಳು ತಮ್ಮ ಆದಾಯ ಮೂಲವನ್ನು ವೃದ್ಧಿಸಿಕೊಳ್ಳಬೇಕು ಎಂದು ಮಾಜಿ ಮೇಯರ್‌ಗಳು ಸಲಹೆ ನೀಡಿದ್ದಾರೆ.
ಸಲಹೆ ಸ್ವೀಕರಿಸದಿದ್ದಕ್ಕೆ ಸಿಟ್ಟು:
ಹಿಂದೆಲ್ಲಾ ಪಾಲಿಕೆ ಬಜೆಟ್ ರೂಪಿಸುವ ವೇಳೆ ಮಾಜಿ ಮೇಯರ್/ಉಪಮೇಯರ್‌ಗಳ ಸಭೆ ನಡೆಸಿ ಸಲಹೆ ಸೂಚನೆ ಪಡೆಯಲಾಗುತ್ತಿತ್ತು. ಇದರಿಂದ ನಗರ ಅಭಿವೃದ್ಧಿಗೆಗೆ ಒಟ್ಟಾಭಿಪ್ರಾಯ ರೂಪಿಸಲು ಸಾಧ್ಯವಾಗುತ್ತಿತ್ತು. 5 ವರ್ಷದಿಂದ ಚುನಾವಣೆ ನಡೆಯದ ಕಾರಣ ಕಾರ್ಪೋರೇಷನ್ ಬಜೆಟ್ ಅರ್ಥ ಕಳೆದುಕೊಂಡಿದೆ. ಅಧಿಕಾರಿಗಳ ದರ್ಬಾರ್‌ನಲ್ಲಿ ಮೂಗಿನ ನೇರಕ್ಕೆ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಕನಿಷ್ಠಪಕ್ಷ ಮಾಜಿ ಮೇಯರ್‌ಗಳನ್ನು ಆಹ್ವಾನಿಸಿ ಸಲಹೆ ಆಲಿಸುವ ಕನಿಷ್ಠ ಸೌಜನ್ಯವೂ ಇಲ್ಲದಿರುವುದು ಪ್ರಜಾಪ್ರಭುತ್ವದ ಅಣಕ ಎಂದು ಕೆಲ ಪುರಪಿತೃಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಪಾಲಿಕೆಗಳು ತಮ್ಮ ವರಮಾನದ ಪೂರ್ಣ ಮಾಹಿತಿಯನ್ನು ಜನರ ಮುಂದಿಡಬೇಕು. ಆಸ್ತಿತೆರಿಗೆ ಸೇರಿ ಹೊಸ ಆದಾಯಮೂಲವನ್ನು ಈಗಲೇ ಗುರುತಿಸಿ ಅದರಿಂದ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಬೇಕು. ಪಾಲಿಕೆಗಳ ಸೇವೆಗಳು ಇನ್ನಷ್ಟು ಜನಸ್ನೇಹಿ ಆಗಿರಬೇಕು. ಎಲ್ಲ ಪಾಲಿಕೆಗಳ ವ್ಯಾಪ್ತಿಯಲ್ಲಿ ಸ್ಕೈವಾಕ್, ಫುಟ್‌ಪಾತ್ ಸೇರಿ ಇತರ ಸೌಲಭ್ಯಗಳು ಏಕರೂಪತೆ ಹೊಂದುವ ವ್ಯವಸ್ಥೆಗೆ ಹೆಚ್ಚಿನ ಗಮನ ನೀಡಬೇಕು. ಮಕ್ಕಳಲ್ಲಿ ಪರಿಸರ, ಆರೋಗ್ಯ ಕಾಳಜಿ ಬಗ್ಗೆ ಅರಿವು ಮೂಡಿಸಲು ಈಗಿನಿಂದ ಕ್ರಮ ಕೈಗೊಳ್ಳುವುದು ಯುಕ್ತ.
- ಪಿ.ಆರ್. ರಮೇಶ್, ಮಾಜಿ ಮೇಯರ್
ರಾಜಧಾನಿಯಲ್ಲಿನ ಜೀವನಮಟ್ಟ ದುಬಾರಿ ಆಗುತ್ತಿದ್ದು, ಬಡವರು, ಮಧ್ಯಮ ವರ್ಗದವರಿಗೆ ಉಚಿತ ಶಿಕ್ಷಣ, ಆರೋಗ್ಯ ಸೌಲಭ್ಯ ಒದಗಿಸಬೇಕು. ಬಿಗಡಾಯಿಸುತ್ತಿರುವ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಹುಡಕಬೇಕು. ರಸ್ತೆಅಗೆತ, ಗುಂಡಿಗಳಿಲ್ಲದ ಉತ್ತಮ ರಸ್ತೆಜಾಲವನ್ನು ವಿಸ್ತರಿಸಬೇಕು. ವಾರ್ಡ್ ಮಟ್ಟದಲ್ಲಿ ಸಂಬಂಧಪಟ್ಟ ಇಂಜಿನಿಯರ್‌ಗಳು ಕಚೇರಿಗಳಲ್ಲಿ ಇರುವಂತೆ ವ್ಯವಸ್ಥೆಗೆ ಒತ್ತು ನೀಡಿದ್ದಲ್ಲಿ ಜನರ ಅಹವಾಲು ಆಲಿಕೆ ಸುಲಭವಾಗಲಿದೆ. ಅಧಿಕಾರಿಗಳು ಜನಮುಖಿ ಕಾರ್ಯಕ್ರಮಗಳ ಜಾರಿಗೆ ಆದ್ಯತೆ ನೀಡಲಿ.
- ಕಟ್ಟೆ ಸತ್ಯನಾರಾಯಣ, ಮಾಜಿ ಮೇಯರ್
ಕಾರ್ಪೋರೇಷನ್ ಸ್ಕೂಲ್‌ಗಳತ್ತ ವಿದ್ಯಾರ್ಥಿಗಳನ್ನು ಸೆಳೆಯುವಂತಹ ಕಾರ್ಯಕ್ರಮಕ್ಕೆ ಪ್ರಥಮ ಆದ್ಯತೆ ಸಿಗಬೇಕಿದೆ. ಮಹಿಳೆಯರಿಗೆ ಹೊಲಿಗೆಯಂತ್ರ, ತ್ರಿಚಕ್ರ ವಾಹನ, ಒಂಟಿಮನೆ ಇತ್ಯಾದಿ ಸೌಲಭ್ಯ ಒದಗಿಸುವ ಕಲ್ಯಾಣ ಕಾರ್ಯಗಳು 3 ವರ್ಷದಿಂದ ಸ್ಥಗಿತಗೊಂಡಿದ್ದು, ಅವುಗಳನ್ನು ಪುನಾರಂಭಿಸಬೇಕು. ಕಸದ ಸಮಸ್ಯೆಯಿಂದ ಗಾರ್ಡನ್ ಸಿಟಿ ಖ್ಯಾತಿಯ ಬೆಂಗಳೂರು ಗಾರ್ಬೇಜ್ ಸಿಟಿ ಆಗುತ್ತಿದ್ದು, ಈ ಸಮಸ್ಯೆಗೆ ಬಜೆಟ್‌ನಲ್ಲಿ ಪರಿಹಾರದ ಯೋಜನೆ ಪ್ರಕಟಿಸಲಿ.
- ಗಂಗಾಂಬಿಕೆ ಮಲ್ಲಿಕಾರ್ಜುನ್, ಮಾಜಿ ಮೇಯರ್
ಪಾಲಿಕೆಯ ನಮ್ಮ ಕ್ಲಿನಿಕ್‌ಗಳು ಜನರಿಂದ ದೂರವಾಗುತ್ತಿದ್ದು, ಇಲ್ಲಿ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಬೇಕು. ಕಸದ ಸಮಸ್ಯೆ ಬೃಹದಾಕಾರವಾಗಿದ್ದು, ಬ್ಲ್ಯಾಕ್ ಸ್ಪಾಟ್‌ಗಳು ಹೆಚ್ಚಾಗದಂತೆ ನಿಗಾ ಇಡಬೇಕು. ಕಟ್ಟಡಗಳಿಗೆ ಸ್ವಾಧೀನ ಪತ್ರ (ಒಸಿ) ವಿತರಣೆ ಸಮಸ್ಯೆಗೆ ಸ್ಪಷ್ಟ ಪರಿಹಾರ ಅಗತ್ಯ. ನಿರ್ವಹಣೆಯಿಂದ ಸೊರಗಿರುವ ಪಾರ್ಕ್, ಕೆರೆ, ಫುಟ್‌ಪಾತ್‌ಗಳನ್ನು ಜನಸ್ನೇಹಿ ರೂಪ ನೀಡಲು ಅಗತ್ಯ ಅನುದಾನವನ್ನು ಆಯವ್ಯಯದಲ್ಲೇ ನಮೂದಿಸಿದರೆ ಸಮಸ್ಯೆಗೆ ಪರಿಹಾರ ಸಿಗಲಿದೆ.
- ಪದ್ಮನಾಭ ರೆಡ್ಡಿ, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ
ಬಜೆಟ್‌ಗೆ ಮಾಜಿ ಪುರಪಿತೃಗಳ ಸಲಹೆಗಳಿವು:
* ಪಾಲಿಕೆ ಕಚೇರಿಗಳಲ್ಲಿ ಜನರಿಗೆ ಉತ್ತಮ ಸೇವೆ ಸಿಗಬೇಕು
* ಆನ್‌ಲೈನ್ ಸೇವೆ ಜತೆಗೆ ಡಿಜಿಟಲ್ ಸಾಕ್ಷರರಲ್ಲದವರಿಗೆ ಕಚೇರಿಗಳಲ್ಲೇ ಸೌಲಭ್ಯ ನೀಡಬೇಕು
* ಪಾಲಿಕೆ ಶಾಲೆಗಳನ್ನು ಸಿಎಸ್‌ಆರ್ ನಿಧಿ ಬಳಸಿ ಮೇಲ್ದರ್ಜೆಗೆ ವಿಶೇಷ ಕಾರ್ಯಕ್ರಮ
* ಉದ್ಯಾನ, ಕೆರೆ-ಕುಂಟೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು
* ಫುಟ್‌ಪಾತ್, ರಸ್ತೆ, ಚರಂಡಿ, ಬೀದಿ ದೀಪ, ಚಿತಾಗಾರಗಳ ನಿರ್ವಹಣೆಗೆ ಒತ್ತು ಇರಲಿ
* ಕಸ ಸಂಗ್ರಹ, ವಿಲೇವಾರಿ ಸಮಸ್ಯೆ ನಿವಾರಿಸಲು ತ್ಯಾಜ್ಯದಿಂದ ಇಂಧನ ಉತ್ಪಾದನೆಗೆ ಒತ್ತು
* ರಸ್ತೆಗುಂಡಿಗಳಿಗೆ ಮುಕ್ತಿ ನೀಡಿ ಜನ, ವಾಹನ ಸಂಚಾರಯೋಗ್ಯ ರಸ್ತೆಜಾಲ ಹೆಚ್ಚಿಸಬೇಕು.