ಬೆಂಗಳೂರು

ಕರೆನ್ಸಿಯಲ್ಲಿ ಗಾಂಧೀಜಿ ಜತೆ ಅಂಬೇಡ್ಕರ್ ಫೋಟೋಗೆ ಖಾಸಗಿ ವಿಧೇಯಕ

ಭಾರತೀಯ ಕರೆನ್ಸಿ ನೋಟುಗಳಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಫೋಟೋ ದೊಂದಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಮುದ್ರಿಸುವಂತೆ ಒತ್ತಾಯಿಸುವ ಖಾಸಗಿ ವಿಧೇಯಕ ಕುರಿತು ಬಿಸಿನೆಸ್​ ಅಡ್ವೈಸರಿ ಕಮಿಟಿಯಲ್ಲಿ ಚರ್ಚಿಸಲಾಗುವುದು. ಒಪ್ಪಿಗೆ ದೊರೆತರೆ ಮಂಡಿಸಲಾಗುವುದು ಎಂದು ವಿಧಾನ ಪರಿಷತ್​ ಸಭಾಪತಿ ಸಲೀಂ ಅಹಮದ್ ತಿಳಿಸಿದ್ದಾರೆ.

ಬೆಂಗಳೂರು : ಭಾರತೀಯ ಕರೆನ್ಸಿ ನೋಟುಗಳಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಫೋಟೋ ದೊಂದಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಮುದ್ರಿಸುವಂತೆ ಒತ್ತಾಯಿಸಲು ಖಾಸಗಿ ವಿಧೇಯಕ ಮಂಡನೆಗೆ ವಿಧಾನ ಪರಿಷತ್ ಸದಸ್ಯ ಮಳವಳ್ಳಿ ಶಿವಣ್ಣ ಅವಕಾಶ ಕೋರಿದ್ದಾರೆ ಎಂದು ಸಭಾಪತಿ ಸಲೀಂ ಅಹಮದ್ ತಿಳಿಸಿದ್ದಾರೆ.

ವಿಧಾನ ಪರಿಷತ್ ಕಾರ್ಯಕಲಾಪಗಳ ಸಮಿತಿ ಸಭೆಯಲ್ಲಿ ವಿಧೇಯಕದ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು. ಸಮಿತಿಯಲ್ಲಿ ಒಪ್ಪಿಗೆ ದೊರೆತರೆ ಬಿಲ್ ಮಂಡನೆಯಾಗಲಿದೆ. ಇಲ್ಲಿ ಅನುಮೋದನೆ ನೀಡಿ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಸಭಾಪತಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಉತ್ತರ ಕರ್ನಾಟಕದ ಸಮಸ್ಯೆಗೆ ಸಮಯ ಮೀಸಲು

ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಉತ್ತರಕರ್ನಾಟಕದ ಜ್ವಲಂತ ಸಮಸ್ಯೆ ಹಾಗೂ ಸವಾಲುಗಳ ಕುರಿತ ಚರ್ಚೆಗೆ ಸದಸ್ಯರಿಗೆ ಹೆಚ್ಚಿನ ಸಮಯ ನಿಗದಿಪಡಿಸಲಾಗುವುದು ಎಂದು ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮದ್ ತಿಳಿಸಿದರು.

ಉತ್ತರ ಕರ್ನಾಟಕದ ಬೆಳಗಾವಿ ಸುವರ್ಣಸೌಧದಲ್ಲಿ ಅಧಿವೇಶನ ನಡೆಯುವ ಕಾರಣ ಆ ಭಾಗದ ಸಮಸ್ಯೆಗಳ ಪರಿಹಾರಕ್ಕೆ ಸಮಯ ನೀಡಿ ಅರ್ಥಪೂರ್ಣ ಚರ್ಚೆಗೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಸುಗಮ ಕಲಾಪಕ್ಕೆ ವಿನಂತಿ

ಡಿಸೆಂಬರ್ 2 ರಿಂದ 11 ರವರೆಗೆ ಅಧಿವೇಶನ ನಡೆಯಲಿದೆ. ಇದನ್ನೊಂದು ಸಾಂಪ್ರದಾಯಿಕ ಕಲಾಪ ಆಗಿಸದೆ ರಾಜ್ಯದ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಪ್ರಗತಿ ಹಾಗೂ ಸಾರ್ವಜನಿಕ ಸಮಸ್ಯೆಗಳ ನಿವಾರಣೆಗೆ ಆಡಳಿತ- ವಿರೋಧ ಪಕ್ಷಗಳು ಜವಾಬ್ದಾರಿಯುತವಾಗಿ ಚರ್ಚಿಸಬೇಕು ಹಾಗೂ ಸುಗಮ ಕಲಾಪಕ್ಕೆ ಸಹಕರಿಸಲು ಸಲೀಂ ಅಹಮದ್ ವಿನಂತಿಸಿದ್ದಾರೆ.

839 ಪ್ರಶ್ನೆಗಳ ಸ್ವೀಕಾರ

ವಿಧಾನ ಪರಿಷತ್‌ನಲ್ಲಿ ಸಾರ್ವಜನಿಕ ಸಮಸ್ಯೆಗಳಿಗೆ ಸಂಬಂಧಿಸಿದ ಒಟ್ಟು 839 ಪ್ರಶ್ನೆಗಳನ್ನು ಸ್ವೀಕರಿಸಲಾಗಿದೆ. ಇದರಲ್ಲಿ 60 ಚುಕ್ಕೆ ಗುರುತಿನ ಹಾಗೂ 779 ಚುಕ್ಕೆ ಗುರುತಿಲ್ಲದ ಪ್ರಶ್ನೆಗಳು ಸೇರಿವೆ ಎಂದು ಸಭಾಪತಿ ಮಾಹಿತಿ ನೀಡಿದರು.