uttarahalli-lake 
ಬೆಂಗಳೂರು

ಉತ್ತರಹಳ್ಳಿ ಕೆರೆಗೆ ತ್ಯಾಜ್ಯ ನೀರು ಹರಿಯದಂತೆ ತಡೆಯಿರಿ

ಪ್ರಮುಖ ಮುಖ್ಯಾಂಶಗಳು

  • ದಕ್ಷಿಣ ನಗರ ಪಾಲಿಕೆ ಆಯುಕ್ತರಿಂದ ಅಧಿಕಾರಿಗಳಿಗೆ ಸೂಚನೆ
ಬೆಂಗಳೂರು: ಉತ್ತರಹಳ್ಳಿ ಕೆರೆಗೆ ಸಮೀಪದ ರಾಜಕಾಲುವೆ ಹಾಗೂ ಒಳಚರಂಡಿ ನೀರು ಹರಿಯುತ್ತಿರುವುದರಿಂದ ಕೆರೆನೀರು ಮಲಿನಗೊಳ್ಳುತ್ತಿದ್ದು, ಇದಕ್ಕೆ ತಕ್ಷಣವೇ ಸೂಕ್ತ ಪರಿಹಾರ ಕೈಗೊಳ್ಳುವಂತೆ ದಕ್ಷಿಣ ನಗರ ಪಾಲಿಕೆಯ ಆಯುಕ್ತ ಕೆ.ಎನ್. ರಮೇಶ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಾರ್ವಜನಿಕರಿಂದ ಪದೇ ಪದೆ ದೂರು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಉತ್ತರಹಳ್ಳಿ ಕೆರೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಆಯುಕ್ತರು, ಜಲಮೂಲಗಳಿಗೆ ಕಲುಷಿತ ನೀರು ಹರಿಯುತ್ತಿರುವುದನ್ನು ಕಂಡು ಹೌಹಾರಿದರು. ಕೆರೆಗಳಿಗೆ ಒಳಚರಂಡಿ ನೀರು ಹರಿಸದಂತೆ ಸುಪ್ರೀಂಕೋರ್ಟ್ ಆದೇಶಿಸಿದ್ದರೂ, ಮುಂಜಾಗ್ರತೆ ಕೈಗೊಳ್ಳದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಒಳಚರಂಡಿ ನೀರು ಕೊಳವೆ ಮೂಲಕ ತ್ಯಾಜ್ಯ ನೀರು ಸಂಸ್ಕರಣ ಘಟಕಕ್ಕೆ (ಎಸ್‌ಟಿಪಿ) ರವಾನಿಸಿ, ಅಲ್ಲಿ ಸಂಸ್ಕರಿಸಿದ ನೀರು ಕೊಳವೆ ಮೂಲಕವೇ ಕೆರೆ ಹೊರಭಾಗದಲ್ಲಿರುವ ಮಳೆ ನೀರುಗಾಲುವೆ ಸೇರುವಂತೆ ತುರ್ತಾಗಿ ಕ್ರಮ ಕೈಗೊಳ್ಳಬೇಕು. ಜತೆಗೆ ಕಲುಷಿತ ನೀರು ತಡೆಗಟ್ಟಲು ಹಾನಿಗೊಳಗಾದ ತಡೆಗೋಡೆಯನ್ನು ಸರಿಪಡಿಸುವಂತೆ ನಿರ್ದೇಶಿಸಿದರು.

ಕೆರೆ ನೀರಿನ ಸ್ವಚ್ಛತೆ ಕಾಪಾಡಿ

ಕೆರೆಯ ಅಭಿವೃದ್ಧಿ ಕಾಮಗಾರಿಯ ಸಂಪೂರ್ಣ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಗೊಳ್ಳುವವರೆಗೂ ಸ್ಥಳಿಯ ನಾಗರಿಕರಿಗೆ ತೊಂದರೆ ಉಂಟಾಗದಿರಲು ಕೆರೆಯಲ್ಲಿನ ಗಿಡಗಳನ್ನು ತೆರವುಗೊಳಿಸಬೇಕು. ಮಲಿನಗೊಂಡಿರುವ ಕೆರೆಯಿಂದ ದುರ್ವಾಸನೆ ಬಾರದಿರಲು ಜೈವಿಕ ಶುದ್ಧೀಕರಣ ದ್ರಾವಣ ಬಳಸಬೇಕು. ರಾಜಕಾಲುವೆಯ ಹೂಳೆತ್ತುವಿಕೆ ಕೈಗೊಳ್ಳಲು ಹಾಗೂ ಕಾಲುವೆಗೆ ಅಡ್ಡಲಾಗಿ ಕಟ್ಟಿರುವ ತಡೆಗೋಡೆಯನ್ನು ತೆರವುಗೊಳಿಸಿ ನೀರಿನ ಸರಾಗ ಹರಿವಿಗೆ ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸ್ಥಗಿತಗೊಂಡಿರುವ ಎಸ್‌ಟಿಪಿ ಪುನರಾರಂಭಿಸಿ:

ಕೆರೆ ಪ್ರದೇಶದಲ್ಲಿರುವ ಎಸ್‌ಟಿಪಿ ಕೆಲಸ ಸ್ಥಗಿತವಾಗಿರುವುದನ್ನು ಗಮನಿಸಿದ ಆಯುಕ್ತರು, ಒಳಚರಂಡಿ ನೀರು ನೇರವಾಗಿ ಸಂಸ್ಕರಣಾ ಘಟಕಕ್ಕೆ ಬರಲು ಇರುವ ಸಣ್ಣ ವ್ಯಾಸದ ಕೊಳವೆ ಬದಲು ದೊಡ್ಡ ವ್ಯಾಸದ ಪೈಪ್ ಅಳವಡಿಸಲು ಮತ್ತು ಎಸ್‌ಟಿಪಿ ಪುನರಾರಂಭಿಸುವಂತೆ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಪಾಲಿಕೆಯ ಕಾರ್ಯಪಾಲಕ ಅಭಿಯಂತರರಾದ ರಾಜಣ್ಣ, ರೇಖಾ, ಹಿರಿಯ ತೋಟಗಾರಿಕೆ ನಿರ್ದೇಶಕ ಚನ್ನೇಗೌಡ ಮತ್ತು ಇನ್ನಿತರ ಅಧಿಕಾರಿಗಳು ಹಾಜರಿದ್ದರು.

ಸಿಎ ಸೈಟ್ ಒತ್ತುವರಿದಾರರಿಗೆ ನೋಟಿಸ್:

ಕೆರೆಯ ಮುಂಭಾಗದಲ್ಲಿರುವ ಸಿಎ ಸೈಟ್‌ಗಳಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿರುವುದು ಹಾಗೂ ನರ್ಸರಿ ನಡೆಸುತ್ತಿರುವ ಚಟುವಟಿಕೆಯನ್ನು ತಕ್ಸಣವೇ ಸ್ಥಗಿತಗೊಳಿಸಿ ಒತ್ತುವರಿದಾರರಿಗೆ ನೋಟೀಸ್ ನೀಡಿ ತೆರವುಗೊಳಿಸುವಂತೆ ಆಯುಕ್ತರು ಸೂಚಿಸಿದರು.