ಬೆಂಗಳೂರು

ಪ್ರಜ್ವಲ್ ರೇವಣ್ಣ ಹಿಂಡಲಗಾ ಜೈಲಿಗೆ ಸ್ಥಳಾಂತರ, ತುಮಕೂರು ವರೆಗೆ ಹೋಗಿ ಬೆಂಗಳೂರಿಗೆ ವಾಪಸ್.!

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿ ಪ್ರಜ್ವಲ್ ರೇವಣ್ಣನನ್ನು ಬೆಳಗಾವಿ ಹಿಂಡಲಗಾ ಜೈಲಿಗೆ ಸ್ಥಳಾಂತರಿಸುವ ಪ್ರಕ್ರಿಯೆ ಕೊನೆ ಕ್ಷಣದಲ್ಲಿ ರದ್ದಾಗಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.

ಜೈಲು ನಿಯಮ ಉಲ್ಲಂಘನೆ ಮಾಡಿದ ಕಾರಣ ಅವರನ್ನು ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲು ಆದೇಶ ಹೊರಡಿಸಲಾಗಿತ್ತು. ಅದರನ್ವಯ ಭಾನುವಾರ ತಡರಾತ್ರಿ ಅಪರಾಧಿಯನ್ನು ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ ಪೊಲೀಸ್ ಬೆಂಗಾವಲು ವಾಹನದಲ್ಲಿ ಬೆಳಗಾವಿ ಮಾರ್ಗವಾಗಿ ಕರೆದೊಯ್ಯಲಾಗುತ್ತಿತ್ತು.

ಮೂಲಗಳ ಪ್ರಕಾರ ಬೆಂಗಾವಲು ವಾಹನ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗಡಿ ದಾಟಿತ್ತು. ಆಗ ಏಕಾಏಕಿ ವಾಹವನ್ನು ನಿಲ್ಲಿಸಿ, ಶಿರಾದಿಂದ ಮತ್ತೆ ವಾಹನವನ್ನು ಬೆಂಗಳೂರಿನತ್ತ ತಿರುಗಿಸಿ, ಬೆಳಗಿನ ಜಾವ 3 ಗಂಟೆ ವೇಳೆಗೆ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೇ ವಾಪಸ್ ಕರೆತಂದು ಒಪ್ಪಿಸಿದೆ.

ಹೆಚ್ಚಿನ ಭದ್ರತಾ ಕಾರಣಗಳು ಮತ್ತು ಮಾರ್ಗದಲ್ಲಿನ ಸಮಸ್ಯೆಗಳ ಹಿನ್ನೆಲೆಯಲ್ಲಿ ವಾಪಸ್ ಅಪರಾಧಿಗೆ ಕರೆತರುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಜೈಲು ಇಲಾಖೆ ಹೇಳುತ್ತಿದ್ದರೂ ಸಹ ಒಳಗಿನ ಮೂಲಗಳು ಬೇರೆಯೇ ಕಥೆ ಹೇಳುತ್ತಿವೆ.

ಸ್ಥಳಾಂತರ ವಾಹನ ಶಿರಾ ತಲುಪಿದ ಸಂದರ್ಭದಲ್ಲೇ ಪ್ರಭಾವಿ ರಾಜಕಾರಣಿಯೊಬ್ಬರಿಂದ ಉನ್ನತ ಮಟ್ಟದ ಫೋನ್ ಕರೆ ಬಂದಿದೆ. ಆ ಫೋನ್ ಕರೆ ಒತ್ತಡದ ನಂತರವೇ ಸ್ಥಳಾಂತರ ಪ್ರಕ್ರಿಯೆಯನ್ನು ರದ್ದುಗೊಳಿಸಲಾಗಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ.

ಅಧಿಕಾರಿಗಳ ಈ ಹಠಾತ್ ನಿರ್ಧಾರ ಸಾಕಷ್ಟು ಅನುಮಾನಕ್ಕೆ ಗುರಿಯಾಗಿಸಿದ್ದಲ್ಲದೆ, ತಡರಾತ್ರಿ ಶಿರಾ ವರೆಗೆ ಕರೆದೊಯ್ದು ವಾಪಸ್ ಕರೆತರುವ ಅಗತ್ಯವಾದರೂ ಏನಿತ್ತು ಎಂಬ ಪ್ರಶ್ನೆ ಎದ್ದಿದೆ.