ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಪಶು ಹಾಗೂ ಕುಕ್ಕುಟ ಆಹಾರ ಉತ್ಪಾದಕರ ಸಭೆ ಸೋಮವಾರ ನಡೆಯಿತು. ಸಚಿವರು, ಅಧಿಕಾರಿಗಳು, ಉದ್ಯಮ ಪ್ರತಿನಿಧಿಗಳು ಇದ್ದರು. 
ಬೆಂಗಳೂರು

ಮೆಕ್ಕೆಜೋಳ ಖರೀದಿಗೆ ಕುಕ್ಕುಟ ಉದ್ಯಮ ಷರತ್ತು

ಮೃತ್ಯುಂಜಯ ಕಪಗಲ್

ಪ್ರಮುಖ ಮುಖ್ಯಾಂಶಗಳು

  • ಐದು ಲಕ್ಷ ಟನ್ ಖರೀದಿಗೆ ಸಿಎಂ ಸಿದ್ದರಾಮಯ್ಯ ಸೂಚನೆ
  • ಕ್ವಿಂಟಾಲ್‌ಗೆ 2,400 ರೂ., ಸಾಗಣೆ ವೆಚ್ಚ ಸರ್ಕಾರದಿಂದ ಭರ್ತಿ
  • ಹೆಚ್ಚು ಉತ್ಪಾದನೆ, ಬೆಲೆ ಕುಸಿತದಿಂದ ರೈತಾಪಿ ವರ್ಗಕ್ಕೆ ಸಂಕಷ್ಟ
ಬೆಂಗಳೂರು: ಹೊರರಾಜ್ಯಗಳ ಮೆಕ್ಕೆಜೋಳ, ಮೊಟ್ಟೆ ಮಾರಾಟಕ್ಕೆ ನಿರ್ಬಂಧ, ಉತ್ತಮಗುಣಮಟ್ಟ ಷರತ್ತುಗಳನ್ನು ವಿಧಿಸಿ ರೈತರಿಂದ ಮೆಕ್ಕೆಜೋಳ ನೇರ ಖರೀದಿಗೆ ಕುಕ್ಕುಟ ಉದ್ಯಮ (Poultry industry) ಒಪ್ಪಿಕೊಂಡಿದೆ.
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಪಶು ಮತ್ತು ಕುಕ್ಕುಟ ಆಹಾರ ಉತ್ಪಾದಕರ ಸಂಘದ ಪ್ರತಿನಿಧಿಗಳ ಸಭೆ ಸೋಮವಾರ ನಡೆದು, ಮೆಕ್ಕೆಜೋಳ ಬೆಲೆ ಮುಕ್ತ ಮಾರುಕಟ್ಟೆಯಲ್ಲಿ ಕುಸಿತ, ರೈತರ ಸಮಸ್ಯೆ ವಿಸ್ತೃತವಾಗಿ ಚರ್ಚೆಯಾಯಿತು.
ರಾಜ್ಯ ಸರ್ಕಾರದ ಕಳಕಳಿ, ರೈತರ ಸಂಕಷ್ಟಕ್ಕೆ ಸ್ಪಂದಿಸಲು ಸಿದ್ಧರಿದ್ದೇವೆ. ಆದರೆ ಮೂರು ಪ್ರಮುಖ ಷರತ್ತುಗಳನ್ನು ಸರ್ಕಾರ ಈಡೇರಿಸಬೇಕು ಎಂದು ಕುಕ್ಕುಟ ಉದ್ಯಮದ ಪ್ರತಿನಿಧಿಗಳು ಕೋರಿದರು.
ಈ ಮನವಿಗೆ ಸಿಎಂ ಸಿದ್ದರಾಮಯ್ಯ ನಿರ್ದಿಷ್ಟವಾಗಿ ಏನನ್ನೂ ಹೇಳಲಿಲ್ಲ. ಆದರೆ ಕುಕ್ಕುಟ ಉದ್ಯಮಕ್ಕೆ ಯಾವುದೇ ತೊಂದರೆಯಾಗದಂತೆ ರಾಜ್ಯ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ ಎಂಬ ಭರವಸೆ ನೀಡಿದರು.

ಖರೀದಿಗೆ ಸೂಚನೆ

ರೈತರಿಗೆ ನೆರವಾಗುವ ಉದ್ದೇಶದಿಂದ ರಾಜ್ಯ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.
ಕೇಂದ್ರ ಸರ್ಕಾರ ನಿಗದಿಪಡಿಸಿರುವ ರೂ. 2400 ರ ಕನಿಷ್ಠ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳವನ್ನು ಪಶು ಹಾಗೂ ಕುಕ್ಕುಟ ಆಹಾರ ಉತ್ಪಾದಕರು ಖರೀದಿಸಬೇಕು ಎಂದು ಸೂಚಿಸಿದರು.
ಪಶು ಮತ್ತು ಕುಕ್ಕುಟ ಆಹಾರ ಉತ್ಪಾದನಾ ವಲಯ ಇಂಡೆಂಟ್ ನೀಡಿ ಐದು ಲಕ್ಷ ಟನ್ ಖರೀದಿ ಪ್ರಕ್ರಿಯೆ ತಕ್ಷಣ ಪ್ರಾರಂಭಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ನಿರ್ದೇಶಿಸಿದರು.
ಕರ್ನಾಟಕ ಮಾರುಕಟ್ಟೆ ಫೆಡರೇಶನ್ ಮೂಲಕ ರೈತರಿಂದ ಮೆಕ್ಕೆಜೋಳ ಖರೀದಿಸಿ ಸರಬರಾಜು ಮಾಡಲಾಗುವುದು. ಸಾಗಾಣಿಕೆ ವೆಚ್ಚ, ಲೋಡಿಂಗ್, ಅನ್ಲೋಡಿಂಗ್ ವೆಚ್ಚವನ್ನು ಸರ್ಕಾರವೇ ಭರಿಸಲಿದೆ.
ಈಗಾಗಲೇ ಡಿಸ್ಟಿಲರಿಗಳು ಏಳು ಲಕ್ಷ ಟನ್ ಮೆಕ್ಕೆಜೋಳ ಖರೀದಿಸುವ ಪ್ರಕ್ರಿಯೆ ಪ್ರಾರಂಭಿಸಿವೆ. ಕೆಎಂಎಫ್ 50 ಸಾವಿರ ಟನ್ ಮೆಕ್ಕೆಜೋಳ ಖರೀದಿಗೆ ಚಾಲನೆ ನೀಡಿದೆ ಎಂದು ಸಿಎಂ ತಿಳಿಸಿದರು.

ಅರ್ಧದಷ್ಟು ಬಳಕೆ

ಮುಂಗಾರು ಹಂಗಾಮಿನಲ್ಲಿ 17.6 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದ್ದು, 53.8 ಲಕ್ಷ ಮೆಕ್ಕೆಜೋಳ ಉತ್ಪಾದನೆ ಅಂದಾಜಿಸಲಾಗಿದೆ. ಇದರಲ್ಲಿ ಶೇ.50-60ರಷ್ಟು ಮೆಕ್ಕೆಜೋಳವನ್ನು ಕೋಳಿ ಮತ್ತು ಪಶು ಆಹಾರಕ್ಕಾಗಿ ಉಪಯೋಗಿಸಲಾಗುತ್ತದೆ.
ಪ್ರತಿವರ್ಷ ಅಂದಾಜು 25.89 ಲಕ್ಷ ಟನ್ ಮೆಕ್ಕೆಜೋಳವನ್ನು ಕೋಳಿ ಮತ್ತು ಪಶು ಆಹಾರಕ್ಕಾಗಿ ಉಪಯೋಗಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.