ಬೆಂಗಳೂರು: ನಿಯಮ ಮೀರಿ ತಡರಾತ್ರಿವರೆಗೂ ಪಬ್, ಬಾರ್ ನಡೆಸುತ್ತಿದ್ದವರ ಮೇಲೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ 522 ಹೋಟೆಲ್, ರೆಸ್ಟೋರೆಂಟ್‌ಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ನಗರದ ಬ್ರಿಗೇಡ್ ರಸ್ತೆಯ ಬ್ರಿಗೇಡ್ ಗಾರ್ಡನ್, ಪೇಜ್ ತ್ರಿ ಲೇಡಿಸ್ ಪಬ್, ಕೋರಮಂಗಲದ ಜನಪ್ರಿಯ ಪಬ್‌ಗಳು, ಲಲಿತ್ ಅಶೋಕ್ ಹೋಟೆಲ್ ಹಾಗೂ ಗಾಂಧಿನಗರದ ವಿವಿಧ ಬಾರ್ ಮತ್ತು ರೆಸ್ಟೋರೆಂಟ್‌ಗಳು ಸೇರಿ 843 ಪಬ್, ಬಾರ್‌ಗಳು, 42 ಡ್ಯಾನ್ಸ್ ಬಾರ್‌ಗಳು ಮತ್ತು ಕ್ಲಬ್‌ಗಳು, 53 ಮನರಂಜನಾ ಸ್ಥಳಗಳನ್ನು ಪರಿಶೀಲನೆ ನಡೆಸಿದ್ದಾರೆ.
ಪೊಲೀಸ್ ತಂಡಗಳು ವಿವಿಧ ಪ್ರದೇಶಗಳಲ್ಲಿರುವ ಮನರಂಜನಾ ಕೇಂದ್ರಗಳಿಗೆ ತೆರಳಿ ನಿಯಮಗಳ ಪಾಲನೆಯ ಕುರಿತು ತಪಾಸಣೆ ನಡೆಸಿವೆ. ನಿಗದಿತ ಸಮಯದ ನಂತರವೂ ಕಾರ್ಯನಿರ್ವಹಿಸುತ್ತಿದ್ದ ಕೆಲವು ವ್ಯಾಪಾರ ಸ್ಥಳಗಳನ್ನು ಮುಚ್ಚಿಸಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ನಾಖಾಬಂದಿ ನಡೆಸಿ 2,584 ದ್ವಿ-ಚಕ್ರ, 692 ತ್ರಿ-ಚಕ್ರ ವಾಹನಗಳು, 748 ಕಾರು, ನಾಲ್ಕು ಚಕ್ರದ ವಾಹನಗಳನ್ನು ತಪಾಸಣೆ ನಡೆಸಿ, 187 ಬೈಕ್, 2 ತ್ರಿ-ಚಕ್ರ ವಾಹನ ಸೇರಿ 5 ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 292 ಪಿಟಿ ಕೇಸ್, 355 ಕೊಟ್ಪಾ ಪ್ರಕರಣ, 3 ಅಬಕಾರಿ ಪ್ರಕರಣ ಹಾಗೂ 1 ಕೆ.ಪಿ ಆಕ್ಟ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಂಚಾರ ವಿಭಾಗದ ಪೊಲೀಸರು ನಿನ್ನೆ ತಡರಾತ್ರಿವರೆಗೂ ಕಾರ್ಯಾಚರಣೆ ನಡೆಸಿ ಒಟ್ಟು 8,780 ವಾಹನಗಳನ್ನು ತಪಾಸಣೆ ನಡೆಸಿದ್ದಾರೆ. ಆ ಪೈಕಿ 113 ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿರುವ ಪ್ರಕರಣಗಳು, 364 ಏಕಮುಖ ಸಂಚಾರ ಪ್ರಕರಣಗಳು, 34 ನಂಬರ್ ಪ್ಲೆಟ್ ಇಲ್ಲದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಗರದಲ್ಲಿ ಸಾರ್ವಜನಿಕರ ಸುರಕ್ಷತೆ, ಮಹಿಳೆಯರ ಭದ್ರತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಇಲಾಖೆಯ ಪ್ರಮುಖ ಆದ್ಯತೆಯಾಗಿದೆ. ಪಬ್, ಬಾರ್, ಕ್ಲಬ್‌ಗಳು ಹಾಗೂ ಹೋಟೆಲ್ ಮನರಂಜನಾ ಕೇಂದ್ರಗಳ ನಿರ್ವಾಹಕರು ನಿಯಮ, ಷರತ್ತುಗಳನ್ನು ಪಾಲಿಸಬೇಕೆಂದು ಆಯುಕ್ತರು ಸೂಚಿಸಿದರು.
ಪಶ್ಚಿಮ ವಿಭಾಗದ ಜೆ.ಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಸಮಾಜಘಾತುಕ ಶಕ್ತಿಗಳು ಹಾಗೂ ಅಪರಾಧ ಕೃತ್ಯ ನಿಯಂತ್ರಿಸುವ ಉದ್ದೇಶದಿಂದ ಸಿಸಿಬಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ 72 ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದ್ದಾರೆ. ಕೆಲವು ದಾಖಲೆಗಳನ್ನು ವಶಕ್ಕೆ ಪಡೆದು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿ ಆಗದಂತೆ ರೌಡಿಗಳಿಗೆ ಎಚ್ಚರಿಕೆ ನೀಡಿದರು. ಇನ್ನೂ 65 ರೂಢಿಗತ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. 23 ಡ್ರಗ್ಸ್ ಪೆಡ್ಲರ್‌ಗಳು, ಗ್ರಾಹಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.