ಗುಂಡೇಟು ತಿಂದ ಕಾಮುಕ 
ಬೆಂಗಳೂರು

ಕಾಮುಕನ ಕಾಲಿಗೆ ಖಾಕಿ ಗುಂಡೇಟು

ಮಹಿಳಾ ಪಿಜಿಗೆ ಅಕ್ರಮವಾಗಿ ನುಗ್ಗಿ ಕಿರುಕುಳ ಕೊಡುತ್ತಿದ್ದ. ರೋಡಲ್ಲಿ ಒಂಟಿಯಾಗಿ ಓಡಾಡುವ ಯುವತಿಯರನ್ನು ತಬ್ಬಿ ಮುದ್ದಾಡ್ತಿದ್ದ. ಬಂಧನ ವೇಳೆ ಪೊಲೀಸರ ಮೇಲೂ ಹಲ್ಲೆ ಮಾಡಿದ್ದ.

ಬೆಂಗಳೂರು: ಮಹಿಳೆಯರ ಪಿಜಿಗಳಿಗೆ ಅಕ್ರಮವಾಗಿ ನುಗ್ಗುವ ಜತೆಗೆ ಅಲ್ಲಿದ್ದ ಯುವತಿಯರಿಗೆ ಖಾಸಗಿ ಅಂಗಾಂಗ ಪ್ರದರ್ಶಿಸಿ, ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಕಾಲಿಗೆ ಗುಂಡೇಟು ಹೊಡೆದು ಬಂಧಿಸಲಾಗಿದೆ.

ಆಂಧ್ರಪ್ರದೇಶ ಮದನಪಲ್ಲಿ ನಿವಾಸಿ ಬೆಟ್ಟನರೇಶ್ (34) ಗುಂಡೇಟು ತಿಂದ ಆರೋಪಿ. ಈತನು ಶುಕ್ರವಾರದಂದು ಚಿಕ್ಕಜಾಲ ಸಮೀಪದ ಹುಣಸಮಾರನಹಳ್ಳಿ ಹಾಗೂ ಯಲಹಂಕದಲ್ಲಿರುವ 3 ಮಹಿಳಾ ಪಿಜಿಗಳಿಗೆ ನುಗ್ಗಿ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ. ಈ ಸಂಬಂಧ ಚಿಕ್ಕಜಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮೊದಲಿಗೆ ಹುಣಸಮಾರನಹಳ್ಳಿಯಲ್ಲಿದ್ದ ಪಿಜಿಗೆ ನುಗ್ಗಿದ್ದ ನರೇಶ್, ಯುವತಿಯೊಬ್ಬಳಿಂದ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸುವ ಜತೆಗೆ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದ. ಈ ವೇಳೆ ಆಕೆಯ ಕಿರುಚಾಟ ಕೇಳಿ ಸ್ಥಳಕ್ಕೆ ಅಕ್ಕಪಕ್ಕದವರು ಬಂದಿದ್ದರು. ಆಗ ನರೇಶ್ ಪರಾರಿಯಾಗಿದ್ದ.

ಮತ್ತೊಂದು ಪ್ರಕರಣದಲ್ಲಿ ಬೇರೆ ಪಿಜಿಗೆ ನುಗ್ಗಿದ್ದ ಆತನು ಮತ್ತೊಬ್ಬ ಯುವತಿಯ ಮೊಬೈಲ್ ಕಸಿದುಕೊಂಡು ಆಕೆಯ ಮುಂದೆಯೇ ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದ. ಪ್ರತ್ಯೇಕ ಪ್ರಕರಣದಲ್ಲಿ ನರೇಶ್, ಯುವತಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಶಂಕೆಯೂ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಡರಾತ್ರಿ ಯುವತಿಯರು ತಮ್ಮ ವಸತಿಗೆ ತೆರಳುತ್ತಿದ್ದ ವೇಳೆ ಏಕಾಏಕಿ ಅವರ ಬಳಿ ತೆರಳಿ ಲೈಂಗಿಕ ಕಿರುಕುಳ ನೀಡಿರುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಸದ್ಯ ಆ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿರುವ ತನಿಖಾಧಿಕಾರಿಗಳು, ಕೃತ್ಯ ನಡೆದಿರುವ ನಿಖರ ಘಟನೆಗಳ ಸರಣಿಯನ್ನು ಪತ್ತೆಹಚ್ಚುತ್ತಿದ್ದಾರೆ. ಬೆಂಗಳೂರಿನ ಇತರೆಡೆಗಳಲ್ಲಿಯೂ ಆರೋಪಿ ಇದೇ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆಯೇ ಎಂಬ ಬಗ್ಗೆಯೂ ತನಿಖೆ ಮುಂದುವರಿದಿದೆ.

ಕಾನ್‌ಸ್ಟೇಬಲ್‌ಗಳ ಮೇಲೆ ಹಲ್ಲೆ, ಕಾಮುಕನ ಕಾಲಿಗೆ ಗುಂಡು..!

ಚಿಕ್ಕಜಾಲ ಪೊಲೀಸರು ಆರೋಪಿಯ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದ್ದರು. ಆರೋಪಿ ಮತ್ತೆ ಕೃತ್ಯ ಎಸಗುವ ಸಾಧ್ಯತೆ ಹಿನ್ನೆಲೆಯಲ್ಲಿ ಶನಿವಾರ ಮುಂಜಾನೆ ಪೊಲೀಸರು ಗಸ್ತು ತಿರುಗುತ್ತಿದ್ದರು. ಈ ವೇಳೆ ನರೇಶ್ ಪತ್ತೆಯಾಗಿದ್ದಾನೆ. ಕೂಡಲೇ ಆತನನ್ನು ವಶಕ್ಕೆ ಪಡೆಯಲು ಮುಂದಾದಾಗ ಇಬ್ಬರು ಕಾನ್‌ಸ್ಟೇಬಲ್‌ಗಳ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್ ಗುಂಡು ಹಾರಿಸಿದ್ದು, ನರೇಶ್ ಕಾಲಿಗೆ ಗುಂಡು ತಗುಲಿದೆ. ಕುಸಿದು ಬಿದ್ದಿದ್ದ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರು ಉತ್ತರ ತಾಲೂಕಿನ ತರಹುಣಸೆ ಟೆರ್ರಾಫಾರ್ಮ್‌ನ ಬಳಿ ಶನಿವಾರ ಫೈರಿಂಗ್ ಕಾರ್ಯಾಚರಣೆ ನಡೆದಿದೆ.

ನರೇಶ್ ಬಂಧನಕ್ಕೆ ಆಂಧ್ರದಲ್ಲೂ ವಾರಂಟ್ ಜಾರಿ..!

10ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿರುವ ನರೇಶ್‌ಗೆ 12 ವರ್ಷಗಳ ಹಿಂದೆ ಮದುವೆಯಾಗಿತ್ತು. ಆದರೆ ಆತನ ವರ್ತನೆಯಿಂದ ಬೇಸತ್ತ ಪತ್ನಿ ಆತನಿಂದ ದೂರವಾಗಿದ್ದಳು ಎನ್ನಲಾಗಿದೆ. ಬೆಂಗಳೂರಿನಲ್ಲಿ ಹಲವು ಪ್ರಕರಣಗಳನ್ನು ಎದುರಿಸುತ್ತಿರುವುದರ ಜತೆಗೆ, ಆತನ ಸ್ವಂತ ಊರಾದ ಮದನಪಲ್ಲಿಯಲ್ಲಿಯೂ ಈತನ ಬಂಧನಕ್ಕಾಗಿ ವಾರಂಟ್ ಜಾರಿಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಬೈಕ್‌ನಲ್ಲೇ ಬೆಂಗಳೂರಿಗೆ ಬಂದಿದ್ದ..!

ನರೇಶ್, ಆಂಧ್ರಪ್ರದೇಶದಿಂದ ತನ್ನ ಸ್ವಂತ ಬೈಕ್‌ನಲ್ಲೇ ಬೆಂಗಳೂರಿಗೆ ಬಂದು ಇಲ್ಲಿರುವ ಮಹಿಳಾ ಪಿಜಿಗಳಿಗೆ ನುಗ್ಗಿ ಕಳ್ಳತನ ಮತ್ತು ಲೈಂಗಿಕ ಕಿರುಕುಳ ನೀಡುತ್ತಿದ್ದ. ಜತೆಗೆ ಸರಗಳ್ಳತನ, ಮೊಬೈಲ್ ಕಳ್ಳತನ ಮಾಡುತ್ತಿದ್ದ. ಈತನನ್ನು ಬಂಧಿಸಿದಾಗ ಆತನ ಬ್ಯಾಗ್‌ನಲ್ಲಿ ಒಟ್ಟು 9 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಡಿಸಿಪಿ ಮಿಥುನ್ ತಿಳಿಸಿದ್ದಾರೆ.

ನರೇಶ್ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಿರುಕುಳ, ಲೈಂಗಿಕ ದೌರ್ಜನ್ಯ ಹಾಗೂ ದರೋಡೆ ಸೇರಿ 15ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 231 ದಿನ ಜೈಲಿನಲ್ಲಿದ್ದು, ಕೇವಲ 8 ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದ. ಹಳೇ ಚಾಳಿ ಮುಂದುವರಿಸಿದ್ದ ಆತನ ಕಾಲಿಗೆ ಗುಂಡೇಟು ಹೊಡೆದು ಬಂಧಿಸಲಾಗಿದೆ.
- ಕೆ.ಮಿಥುನ್ ಕುಮಾರ್ ಡಿಸಿಪಿ, ಈಶಾನ್ಯ ವಿಭಾಗ