plot-to-be-returned 
ಬೆಂಗಳೂರು

5 ವರ್ಷದೊಳಗೆ ಮನೆ ನಿರ್ಮಿಸದಿದ್ದಲ್ಲಿ ಸೈಟ್ ವಾಪಸ್

ಆರ್.ತುಳಸಿಕುಮಾರ್

ಪ್ರಮುಖ ಮುಖ್ಯಾಂಶಗಳು

  • ದುಪ್ಪಟ್ಟು ದಂಡ ಅಥವಾ ಬಡ್ಡಿ ಪಾವತಿಸಿ ಸರ್ಕಾರದ ವಶಕ್ಕೆ ಚಿಂತನೆ
  • ತ್ಯಾಜ್ಯದಿಂದ ಸ್ವಾತಂತ್ರ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಿಎಂ ಹೇಳಿಕೆ
  • ಎಲ್ಲೆಂದರಲ್ಲಿ ಕಸ ಸುರಿಯುವ ವಾಹನಗಳ ಮುಟ್ಟುಗೋಲು ಹಾಕಿಕೊಳ್ಳಲು ಸೂಚನೆ

ಬೆಂಗಳೂರು: ಬಿಡಿಎ ಸಹಿತ ವಿವಿಧ ಸಹಕಾರ ಸೊಸೈಟಿಗಳ ಮೂಲಕ ಹಂಚಿಕೆ ಪಡೆದ ನಾಗರಿಕರು ತಮ್ಮ ನಿವೇಶನಗಳಲ್ಲಿ 5 ವರ್ಷದೊಳಗೆ ಮನೆಗಳನ್ನು ನಿರ್ಮಿಸದಿದ್ದಲ್ಲಿ ಅಂತಹ ಸೈಟ್‌ಗಳನ್ನು ಹಿಂಪಡೆಯಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.


ಉತ್ತರ ನಗರ ಪಾಲಿಕೆಯ ಹೆಬ್ಬಾಳದಲ್ಲಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಸೈಟ್ ನೀಡುವುದು ಸೂರು ಕಟ್ಟಿಕೊಳ್ಳಲೆಂದು. ಆದರೆ, ಹಲವರು 20-30 ವರ್ಷವಾದರೂ ಮನೆ ಕಟ್ಟಿಕೊಳ್ಳುವುದಿಲ್ಲ. ಕನಿಷ್ಠ ಪಕ್ಷ ಕಾಂಪೌಂಡ್ ಹಾಕುವುದಿಲ್ಲ. ದೀರ್ಘ ಕಾಲ ಸೈಟ್‌ಗಳನ್ನು ಖಾಲಿ ಇಟ್ಟುಕೊಂಡರೆ ಅಲ್ಲಿ ಕಸದ ಸಮಸ್ಯೆ ಎದುರಾಗುತ್ತದೆ. ಈಗ ಬೆಂಗಳೂರು ಇಂತಹ ಖಾಲಿ ಸೈಟ್‌ಗಳಿಂದ ಭಾರಿ ಸಮಸ್ಯೆ ಎದುರಿಸುತ್ತಿದೆ. ಹಾಗಾಗಿ ನಿಗದಿತ ಅವಧಿಯೊಳಗೆ ಮನೆ ನಿರ್ಮಿಸಿಕೊಳ್ಳದಿದ್ದಲ್ಲಿ ನಿವೇಶನಗಳನ್ನು ವಾಪಸ್ ಪಡೆಯಲಾಗುವುದು ಎಂದರು.
ನಿವೇಶನಗಳನ್ನು ಖಾಲಿಯಾಗಿ ಬಿಟ್ಟು ಅನೈರ್ಮಲ್ಯಕ್ಕೆ ಅವಕಾಶ ಮಾಡಿಕೊಡುವ ಮಾಲೀಕರಿಗೆ ದುಪ್ಪಟ್ಟು ದಂಡ ವಿಧಿಸಲಾಗುವುದು. ಜತೆಗೆ ದೀರ್ಘ ಕಾಲದವರೆಗೆ ಸೂರು ನಿರ್ಮಿಸದಿದ್ದಲ್ಲಿ ಅಂತಹ ಸೈಟ್‌ಗಳನ್ನು ಖರೀದಿಸಿದ ದಿನದ ಮೌಲ್ಯಕ್ಕೆ ಈವರೆಗೆ ಬಡ್ಡಿ ಹಣ ಸೇರಿಸಿ ಸರ್ಕಾರವೇ ಖರೀದಿಸಲಿದೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

ಕಸ ಸುರಿದರೆ ವಾಹನ ಮುಟ್ಟುಗೋಲು:

ಬೆಂಗಳೂರು ಸರ್ಕಾರದ ಆಸ್ತಿಯಲ್ಲ, ಜನರ ಆಸ್ತಿ. ಇದನ್ನು ಕಾಪಾಡಲು ಅಭಿಯಾನವನ್ನು ಆರಂಭಿಸಲಾಗಿದೆ. ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯುವ ವಾಹನಗಳಿಗೆ ನೋಟೀಸ್ ಕೊಡಲಾಗಿತ್ತು. ಕ್ಯಾಮೆರಾ ಕಣ್ಗಾವಲು ಇಟ್ಟಿದ್ದರೂ, ಈಗ ಮತ್ತೆ ಯಥಾಸ್ಥಿತಿಗೆ ಬಂದಿದೆ. ಇನ್ನು ಮುಂದೆ ಎಲ್ಲೆಂದರಲ್ಲಿ ಕಸ ಸುರಿಯುವ ವಾಹನಗಳನ್ನು ಮುಲಾಜಿಲ್ಲದೇ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸಿಎಂ ಅವರು ಪೊಲೀಸರಿಗೆ ನಿರ್ದೇಶಿಸಿದರು.
ಮಹಾನಗರವನ್ನು ಸ್ವಚ್ಛವಾಗಿಸುವ ನಿಟ್ಟಿನಲ್ಲಿ ಸ್ವಯಂಸೇವಾ ಸಂಘಟನೆ (ಎನ್‌ಜಿಒ), ನಾಗರಿಕರ ಸಂಘ-ಸಂಸ್ಥೆಗಳು 3-4 ರಸ್ತೆಗಳ ಸ್ವಚ್ಛತಾ ಮೇಲ್ವಿಚಾರಣೆ ಹೊತ್ತುಕೊಂಡರೆ ಆ ಪ್ರದೇಶಗಳು ಶುಚಿಯಾಗುತ್ತವೆ. ಹಾಗಾಗಿ ನಾಗರಿಕರು ಅಭಿಯಾನಕ್ಕೆ ಸಹಕಾರ ನೀಡಬೇಕು ಎಂದು ಸಿಎಂ ಮನವಿ ಮಾಡಿದರು.

ಸಿಬ್ಬಂದಿ ಮೇಲಲ್ಲ, ಸರ್ಕಾರದ ಮೇಲಿನ ದಾಳಿ:

ಇತ್ತೀಚಿಗೆ ಶಿವಾಜಿನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ವೇಳೆ ಪಾಲಿಕೆ ಸಿಬ್ಬಂದಿ ಮೇಲೆ ದಾಳಿ ನಡೆಯಿತು. ಇದನ್ನು ಅಧಿಕಾರಿಗಳ ಮೇಲೆ ದಾಳಿ ಎಂದು ಭಾವಿಸಿದ್ದರೆ ಅದು ಅವರ ಭ್ರಮೆ. ಇದು ಸರ್ಕಾರ, ಸಚಿವರು ಹಾಗೂ ಶಾಸಕರ ಮೇಲಿನ ದಾಳಿ ಎಂದೇ ನಾವು ಭಾವಿಸುತ್ತೇವೆ. ಎಲ್ಲ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ತೆರವು ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದೇವೆ. ಬೀದಿ ಬದಿ ವ್ಯಾಪಾರಿಗಳಿಗೆ ಬೇರೆ ಜಾಗವನ್ನು ಗುರುತಿಸಲು ಅವಕಾಶ ಕಲ್ಪಿಸಲಾಗುವುದು. ಆದರೆ, ವರ್ತಕರು ಪಾದಚಾರಿಗಳು ಹಾಗೂ ವಾಹನ ಸಂಚಾರಕ್ಕೆ ತೊಂದರೆ ಮಾಡುವಂತಿಲ್ಲ ಎಂದು ಸಿಎಂ ಡಿ.ಕೆ. ಶಿವಕುಮಾರ್​​ ಖಡಕ್ ಸಂದೇಶ ರವಾನಿಸಿದರು.

ಡೆಬ್ರಿಸ್ ಸಾಗಣೆಗೆ 200 ವಾಹನ:

ತ್ಯಾಜ್ಯದಿಂದ ಸ್ವಾತಂತ್ರ್ಯ ಕಾರ್ಯಕ್ರಮದ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರ ಜಿಬಿಎ ಕಟ್ಟಡ ತ್ಯಾಜ್ಯ, ಮಣ್ಣು, ಕಲ್ಲು, ಮುರಿದ ಕಂಬ, ಹಳೆಯ ಪೈಪ್ ಸೇರಿ ಅನುಪಯುಕ್ತ ತ್ಯಾಜವನ್ನಷ್ಟೇ ಹೊರಹಾಕುತ್ತೇವೆ. ನಾಗರಿಕರು ತಮ್ಮ ಖಾಲಿ ಸೈಟ್‌ಗಳಲ್ಲಿ ಬೆಳೆದಿರುವ ಕಳೆಸಸ್ಯ ಸಹಿತ ಕಸವನ್ನು ಆ.15ರೊಳಗೆ ಸ್ವಚ್ಛಗೊಳಿಸಬೇಕು. ತಪ್ಪಿದ್ದಲ್ಲಿ ಅಂತಹ ಸೈಟ್‌ಗಳಲ್ಲಿ ಪಾಲಿಕೆಯೆ ಶುಚಿ ಮಾಡಿ ಅದಕ್ಕೆ ತಗಲುವ ವೆಚ್ಚವನ್ನು ಮಾಲೀಕರಿಂದ ವಸೂಲು ಮಾಡಲಿದೆ. ಸದ್ಯ ತ್ಯಾಜ್ಯ ಸಾಗಣೆಗೆ 70 ವಾಹನಗಳನ್ನು ಪಡೆದಿದ್ದು, ಇದನ್ನು 200ಕ್ಕೆ ಹೆಚ್ಚಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ವಿವಿಧ ಪಾಲಿಕೆಗಳಲ್ಲೂ ಅಭಿಯಾನಕ್ಕೆ ಚಾಲನೆ:

ಉತ್ತರ ನಗರ ಪಾಲಿಕೆಯ ಹೆಬ್ಬಾಳದಲ್ಲಿ ತ್ಯಾಜ್ಯದಿಂದ ಸ್ವಾತಂತ್ರ್ಯ ಕಾರ್ಯಕ್ರಮಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಹಸಿರುನಿಶಾನೆ ನೀಡಿದ ಬಳಿಕ ವಿವಿಧ ಪಾಲಿಕೆಗಳ ವ್ಯಾಪ್ತಿಯಲ್ಲಿ ಅಲ್ಲಿನ ಆಯುಕ್ತರು ಹಾಗೂ ಜನಪ್ರತಿನಿಧಿಗಳು ಚಾಲನೆ ನೀಡಿದರು. ದಕ್ಷಿಣ ಪಾಲಿಕೆಯ ಎಚ್‌ಎಸ್‌ಆರ್ ಲೇಔಟ್‌ನ 4ನೇ ಸೆಕ್ಟರ್‌ನಲ್ಲಿ ಶಾಸಕ ಸತೀಶ್ ರೆಡ್ಡಿ ಹಾಗೂ ಆಯುಕ್ತ ಕೆ.ಎನ್. ರಮೇಶ್ ವಾಹನಕ್ಕೆ ಮಣ್ಣು ತುಂಬುವ ಮೂಲಕ ಚಾಲನೆ ನೀಡಿದರು. ಪಶ್ಚಿಮ ಪಾಲಿಕೆಯ ಗೋವಿಂದರಾಜನಗರದಲ್ಲಿ ಆಯುಕ್ತ ಡಾ. ಕೆ.ವಿ. ರಾಜೇಂದ್ರ, ಕೇಂದ್ರ ಪಾಲಿಕೆಯ ಮಾವಳ್ಳಿಯಲ್ಲಿ ಆಯುಕ್ತ ಜಿ.ಜಗದೀಶ್ ಹಾಗೂ ಪೂರ್ವ ಪಾಲಿಕೆಯ ದೊಡ್ಡನೆಕ್ಕುಂದಿಯಲ್ಲಿ ಶಾಸಕಿ ಮಂಜುಳಾ ಮತ್ತು ಆಯುಕ್ತ ಡಿ.ಎಸ್​​. ರಮೇಶ್​​ ಅವರು ಕಾರ್ಯಕ್ರಮಕ್ಕೆ ಹಸಿರುನಿಶಾನೆ ತೋರಿಸಿದರು.
ಕಾರ್ಯಕ್ರಮದಲ್ಲಿ ಸಚಿವ ಕೆ.ಜೆ. ಜಾರ್ಜ್, ಶಾಸಕರಾದ ಎಸ್.ಆರ್. ವಿಶ್ವನಾಥ್, ಎ.ಸಿ. ಶ್ರೀನಿವಾಸ್, ನಗರಾಭಿವೃದ್ಧಿ ಇಲಾಖೆಯ ಎಸಿಎಸ್ ತುಷಾರ್ ಗಿರಿನಾಥ್, ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್, ಉತ್ತರ ಪಾಲಿಕೆ ಆಯುಕ್ತ ಪಿ.ಸುನೀಲ್‌ಕುಮಾರ್, ಬಿಎಸ್‌ಡಬ್ಲ್ಯುಎಂಎಲ್‌ನ ಸಿಇಒ ಕರಿಗೌಡ, ಜಲಮಂಡಳಿ ಎಂಡಿ ಎನ್.ಮಂಜುಳಾ, ಬೆಸ್ಕಾಂ ಎಂಡಿ ಡಾ. ಶಿವಶಂಕರ್, ಕೆ-ರೈಡ್ ಎಂಡಿ ಲಕ್ಷ್ಮಣ್ ಸಿಂಗ್, ನಗರ ಪೊಲೀಸ್ ಕಮಿಷನರ್ ಸೀಮಂತ್‌ಕುಮಾರ್ ಸಿಂಗ್ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
"

ಬೆಂಗಳೂರಿನಲ್ಲಿ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಜಿಬಿಎ ಕ್ರಮ ಸ್ವಾಗತಾರ್ಹ. ಕಸದ ಆಟೋಗಳು ಮನೆಗಳ ಬಳಿ ಬಾರದ ಕಾರಣ ಬೀದಿಗೆ ತ್ಯಾಜ್ಯ ಎಸೆಯುತ್ತಿದ್ದೇವೆ ಎಂದು ಜನ ಹೇಳುತ್ತಿದ್ದಾರೆ. ಬಿಲ್ಡಿಂಗ್ ಡೆಬ್ರಿಸ್ ಹಾಕಲು ಸ್ಥಳದ ವಿವರವನ್ನು ಜನರಿಗೆ ನೀಡಬೇಕು. ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು.

- ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ