right-parking 
ಬೆಂಗಳೂರು

ಕೆ.ಆರ್.ಮಾರುಕಟ್ಟೆ ರೈಟ್ ಪಾರ್ಕಿಂಗ್‌ಗೆ ಜನ ಖುಷ್

ಪ್ರಮುಖ ಮುಖ್ಯಾಂಶಗಳು

  • ಶಾಪಿಂಗ್‌ಗಾಗಿ ವಾಹನದಲ್ಲಿ ಬಂದು ಹೋಗಲು ಅನುಕೂಲ
  • ತಿಂಗಳಲ್ಲೇ ಮಾರ್ಕೆಟ್‌ಗೆ ಆಗಮಿಸುವ ಗ್ರಾಹಕರ ಸಂಖ್ಯೆ ಏರಿಕೆ
ಬೆಂಗಳೂರು: ನಗರದ ಪ್ರಮುಖ ಹಾಗೂ ಹಳೆಯ ವ್ಯಾಪಾರ ಕೇಂದ್ರವಾದ ಕೆ.ಆರ್.ಮಾರುಕಟ್ಟೆಯಲ್ಲಿ ಗಿಜಿಗುಡುವ ಜನಸಂದಣಿಯೊಂದಿಗೆ ಹೂವು, ಹಣ್ಣು-ತರಕಾರಿ ಖರೀದಿಗೆ ಆಗಮಿಸುವವರು ಅಲ್ಲಿನ ಅವ್ಯವಸ್ಥೆಗೆ ಹಿಡಿಶಾಪ ಹಾಕಿ ಹಿಂತಿರುಗುತ್ತಿದ್ದರು. ಆದರೀಗ ಅತ್ಯುತ್ತಮ ಮಟ್ಟದ ವಾಹನ ನಿಲುಗಡೆ ಸೌಕರ್ಯ ಕಲ್ಪಿಸಿರುವ ರೈಟ್ ಪಾರ್ಕಿಂಗ್ ಲಾಟ್‌ನಲ್ಲಿ ವಾಹನ ನಿಲ್ಲಿಸಿ ನಿಶ್ಚಿಂತೆಯಿಂದ ಶಾಪಿಂಗ್ ಮಾಡಿ ವಾಪಸಾಗುವ ವ್ಯವಸ್ಥೆಗೆ ಜನರು ಖುಷಿ ವ್ಯಕ್ತಪಡಿಸಿದ್ದಾರೆ.
ದಶಕಗಳ ಕಾಲ ಸಮರ್ಪಕ ನಿರ್ವಹಣೆ ಇಲ್ಲದೆ ಕೆ.ಆರ್.ಮಾರುಕಟ್ಟೆ ನೆಲಮಹಡಿಯ ಪಾರ್ಕಿಂಗ್ ತಾಣ ಅನೈತಿಕ ಚಟುವಟಿಕೆಯ ತಾಣವಾಗಿತ್ತು. ಇಂತಹ ಜಾಗವು ಈಗ ದುಬೈ ಮಾದರಿಯ ಅಡ್ವಾಸ್ಡ್ ಪಾರ್ಕಿಂಗ್ ಟೆಕ್ನಾಲಜಿ ಅಳವಡಿಸಿಕೊಂಡ ಪರಿಣಾಮ ಮಾಲ್‌ಗಳಲ್ಲಿ ಕಾಣಸಿಗುವ ಸೌಲಭ್ಯವು ಜನಸಾಮಾನ್ಯರಿಗೆ ಸಿಗುತ್ತಿದೆ. ಕೈಗೆಟಕುವ ಶುಲ್ಕದಲ್ಲಿ ಉತ್ತಮ ಸೌಲಭ್ಯ ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ರೈಟ್ ಪಾರ್ಕಿಂಗ್‌ಗೆ ಲಾಟ್‌ನಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಯಶಸ್ಸು ಕಂಡಿದೆ.

ತಿಂಗಳಲ್ಲೇ ಆಕರ್ಷಣೆಯ ಕೇಂದ್ರ:

ಕೆ.ಆರ್.ಮಾರುಕಟ್ಟೆಯಲ್ಲಿ ರೈಟ್ ಪಾರ್ಕಿಂಗ್ ಸೌಲಭ್ಯ ಮೇ 1ರಂದು ಉದ್ಘಾಟನೆ ಕಂಡಿತು. ಮರುದಿನದಿಂದಲೇ ಸಾರ್ವಜನಿಕರು ವಾಹನ ನಿಲುಗಡೆ ಸೌಲಭ್ಯವನ್ನು ಬಳಸಿಕೊಳ್ಳುತ್ತಿದ್ದಾರೆ. ಪಾರ್ಕಿಂಗ್ ಲಾಟ್‌ಗೆ ವಾಹನದೊಂದಿಗೆ ಆಗಮಿಸಿಕೊಡನೆ ಅಲ್ಲಿರುವ ಸ್ವಯಂಚಾಲಿತ ಯಂತ್ರದ ಬಟನ್ ಒತ್ತಿದರೆ ರಶೀದಿ ಕೈಸೇರುತ್ತದೆ. ಅದನ್ನು ಪಡೆದು ಒಳಪ್ರವೇಶಿಸಿ ನಿಗದಿತ ಸ್ಥಳದಲ್ಲಿ ವಾಹನ ನಿಲ್ಲಿಸಿ ಶಾಪಿಂಗ್‌ಗೆ ತೆರಳಬಹುದು. ವಾಪಸ್ ಹೋಗುವಾಗ ನಿರ್ಗಮನದ ಸ್ಥಳದಲ್ಲಿ ರಶೀದಿ ನೀಡಿ ಶುಲ್ಕ ಪಾವತಿಸಿ ತೆರಳಬಹುದು. ಪಾರ್ಕಿಂಗ್ ಮಾಡಲು ಸಿಬ್ಬಂದಿ ಸಹಾಯ ಮಾಡುತ್ತಾರೆ. ಮಹಿಳೆಯರು ಹಾಗೂ ಅಂಗವಿಕಲರಿಗೆ ಪ್ರತ್ಯೇಕ ಜಾಗ ನಿಗದಿಪಡಿಸಿದ್ದು ಅಲ್ಲಿಯೇ ವಾಹನ ನಿಲುಗಡೆ ಮಾಡಬಹುದು.
ಪಾರ್ಕಿಂಗ್ ಲಾಟ್‌ನಲ್ಲಿ 62 ಸಿಸಿ ಕ್ಯಾಮರಾ ಇದ್ದು, ಎಐ ತಂತ್ರಜ್ಞಾನ ಬಳಸಿಕೊಂಡು ಅವುಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಹಾಗಾಗಿ ಯಾರು ಎಲ್ಲಿ ಎಂತಹ ವಾಹನವನ್ನು ನಿಲುಗಡೆ ಮಾಡಿದರು ಹಾಗೂ ಆ ವಾಹನ ನಿರ್ಗಮನದ ಸಮಯವನ್ನು ಕರಾರುವಕ್ಕಾಗಿ ತಿಳಿಸುವ ಸಾಧನದಿಂದ ನಿಲುಗಡೆ ಶುಲ್ಕವನ್ನು ಲೆಕ್ಕಹಾಕಲಾಗುತ್ತದೆ. ದಿನದ 24 ಗಂಟೆಯೂ 50 ಸಿಬ್ಬಂದಿ ಪಾಳಿಯಲ್ಲಿ ಕೆಲಸ ಮಾಡುವುದರಿಂದ ಯಾವುದೇ ಸಮಯದಲ್ಲೂ ಜನರು ಪಾರ್ಕಿಂಗ್ ಸೌಲಭ್ಯ ಪಡೆಯಬಹುದಾಗಿದೆ. ಸ್ಟಾರ್ ಹೋಟೆಲ್‌ನಲ್ಲೂ ಕಾಣಸಿಗದ ಸೌಲಭ್ಯ, ಸ್ವಚ್ಛತೆ ಹಾಗೂ ಅಚ್ಚುಕಟ್ಟುತನ ನಮಗೆ ಹೊಸ ಅನುಭವ ನೀಡಿತು ಎಂದು ಕೆಲ ನಾಗರಿಕರು ಪ್ರತಿಕ್ರಿಯಿಸಿದ್ದಾರೆ.

ಕಳ್ಳತನಕ್ಕೆ ಬ್ರೇಕ್, ಸ್ವಚ್ಚತೆಗೆ ಆದ್ಯತೆ:

ಪಾರ್ಕಿಂಗ್ ಸೌಲಭ್ಯ ಆರಂಭಗೊಂಡು ತಿಂಗಳು ಪೂರ್ಣವಾಗುತ್ತಿದ್ದು, ಈವರೆಗೆ ಒಂದೂ ಕಳ್ಳತನ ಪ್ರಕರಣ ನಡೆದಿಲ್ಲ. ಹೆಲ್ಮೆಟ್ ಕಳೆದುಹೋಯಿತು ಎಂಬ ದೂರು ಬಂದಿಲ್ಲ. 62 ಸಿಸಿ ಕ್ಯಾಮರಾಗಳ ಮೇಲೆ ನಿರಂತರ ಕಣ್ಗಾವಲು ಇಡಲಾಗಿದೆ. ಪ್ರತೀ ಗಂಟೆಗೊಮ್ಮೆ ಪಾರ್ಕಿಂಗ್ ಲಾಟ್ ಸ್ವಚ್ಚಗೊಳಿಸುತ್ತಿದ್ದು, ನೈರ್ಮಲ್ಯಕ್ಕೆ ಆದ್ಯತೆ ನೀಡಲಾಗಿದೆ.

ಪಾರ್ಕಿಂಗ್ ಶುಲ್ಕದ ವಿವರ (ರೂ.ಗಳಲ್ಲಿ):

ಅವಧಿ ದ್ವಿಚಕ್ರ ವಾಹನ ಕಾರು
1 ಗಂಟೆವರೆಗೆ 15 25
1ರಿಂದ 2 ಗಂಟೆ 25 45
2ರಿಂದ 4 ಗಂಟೆ 45 85
4ರಿಂದ 6 ಗಂಟೆ 65 125
6ರಿಂದ 8 ಗಂಟೆ 85 165
8ರಿಂದ 10 ಗಂಟೆ 105 205
10ರಿಂದ 12 ಗಂಟೆ 125 245
12ರಿಂದ 24 ಗಂಟೆ 175 275

ಗ್ರಾಹಕರಿಗೆ ಯಾವ ಸೌಲಭ್ಯ ಲಭ್ಯ?:

* ಮಹಿಳೆಯರು/ಅಂಗವಿಕರಿಗೆ ಪ್ರತ್ಯೇಕ ಪಾರ್ಕಿಂಗ್ ಜಾಗ ನಿಗದಿ
* ವಾಹನಗಳಲ್ಲಿ ಆಗಮಿಸುವವರಿಗೆ ವ್ಹೀಲ್‌ಚೇರ್ ಸೌಕರ್ಯ
* ದಿನದ 24 ಗಂಟೆಗಳ ವಾಹನ ಸುರಕ್ಷತೆಗೆ ಖಾತ್ರಿ
* ಉಚಿತ ವೈಫೈ, ಆರ್.ಒ. ವಾಟರ್, ಶೌಚಾಲಯದ ಸೌಲಭ್ಯ
* ಮಹಿಳೆಯರ ಸುರಕ್ಷತೆಗೆ ಪ್ಯಾನಿಕ್ ಬಟನ್
* ಇ - ವಾಹನಗಳಿಗೆ ಚಾರ್ಜಿಂಗ್ ಪಾಯಿಂಟ್
* ವಾಹನಗಳ ಚಕ್ರಕ್ಕೆ ಉಚಿತ ಗಾಳಿ ತುಂಬುವ ಸೌಲಭ್ಯ
* ಮಳೆನೀರಿನಿಂದ ಸಮಸ್ಯೆ ಉಂಟಾಗದಿರಲು ಪ್ರತ್ಯೇಕ ವ್ಯವಸ್ಥೆ
* ಕಾಫಿ/ಟೀ ಸ್ಟಾಲ್, ುಡ್ ಕೋರ್ಟ್ (ಶೀಘ್ರ ಆರಂಭ)
ದುಬೈ ಮಾದರಿ ಪಾರ್ಕಿಂಗ್ ತಂತ್ರಜ್ಞಾನ ಅಳವಡಿಸಿಕೊಂಡಿರುವುದು ಗ್ರಾಹಕರಿಗೆ ಗರಿಷ್ಠ ಸೌಲಭ್ಯ ಹಾಗೂ ಸೇವೆ ಒದಗಿಸಲು ಕಾರಣವಾಗಿದೆ. ಹಬ್ಬದ ಸೀಸನ್‌ನಲ್ಲಿ ಹೆಚ್ಚುವರಿ ಪ್ರವೇಶ/ನಿರ್ಗಮನಕ್ಕಾಗಿ ಸೌಲಭ್ಯ ಒದಗಿಸಲಾಗುವುದು. ಸದ್ಯ ಅರ್ಧದಷ್ಟು ಸೌಲಭ್ಯವನ್ನು ಜನರು ಬಳಸಿಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವಿಸ್ತರಣೆಯಾಗುವ ನಿರೀಕ್ಷೆ ಇದೆ.
- ಎಚ್.ಎನ್.ಕುಮಾರ್, ಎಂಡಿ, ರೈಟ್ ಪಾರ್ಕಿಂಗ್ ಕಂಪನಿ
ಹೊಸ ಪಾರ್ಕಿಂಗ್ ಸೌಲಭ್ಯ ಆರಂಭವಾದ ಬಳಿಕ ಮಾರುಕಟ್ಟೆಗೆ ಬರುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಗ್ರಾಹಕರು, ವ್ಯಾಪಾರಿಗಳು ಹಾಗೂ ಹೊರಗಿನ ಜನರಿಗೆ ಮಾರ್ಕೆಟ್ ಪ್ರವೇಶ ಸುಲಭವಾಗಿದೆ. ಈ ಸೌಲಭ್ಯವನ್ನು ಇನ್ನಿತರ ನಾಗರಿಕರು ಪಡೆದುಕೊಳ್ಳಲಿ.
- ಎಂ.ಶಿವಣ್ಣ, ಕೆ.ಆರ್.ಮಾರುಕಟ್ಟೆಯ ವರ್ತಕ
"

ಕೆ.ಆರ್.ಮಾರ್ಕೆಟ್‌ನಲ್ಲಿ ಇಂತಹದೊಂದು ಜನಸ್ನೇಹಿ ಪಾರ್ಕಿಂಗ್ ವ್ಯವಸ್ಥೆ ಕಂಡು ಅಚ್ಚರಿಯಾಯಿತು. ಹಿಂದೆಲ್ಲಾ ಖರೀದಿಗೆ ಬಂದರೆ ವೆಹಿಕಲ್ ನಿಲ್ಲಿಸಲು ಜಾಗವೇ ಸಿಗುತ್ತಿರಲಿಲ್ಲ. ಈಗ ಹೊಸ ಬಗೆಯ ಪಾರ್ಕಿಂಗ್ ತಾಣ ನಮಗೆ ಇಷ್ಟವಾಯಿತು. ಇಂತಹ ಸೌಲಭ್ಯ ನಗರದ ಇತರೆಡೆಯೂ ಸಿಗುವಂತಾಗಲಿ.

- ತಾರಾನಾಥ್ ದಂಪತಿ, ಗಿರಿನಗರ