ಬೆಂಗಳೂರು: ಪರಿಮಳ ಗೆಳೆಯರ ಬಳಗ ನೀಡುವ ಪರಿಮಳ ಪ್ರಶಸ್ತಿಗೆ ಚಿತ್ರನಟ ಸುಂದರ್ ರಾಜ್, ಚಿಂತಕ ಲಕ್ಷ್ಮೀಶ ತೋಳ್ಪಾಡಿ ಸೇರಿ 16 ಮಂದಿ ಆಯ್ಕೆಯಾಗಿದ್ದಾರೆ.
ನ್ಯಾಯಾಂಗ ಕ್ಷೇತ್ರದಿಂದ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಉಮೇಶ್ ಎಂ. ಅಡಿಗ, ಪೊಲೀಸ್ ಸೇವೆಗೆ ನಿವೃತ್ತ ಐಪಿಎಸ್ ಅಧಿಕಾರಿ ಅಜಯ್ ಕುಮಾರ್ ಸಿಂಗ್, ನಟನೆ ಕ್ಷೇತ್ರದಿಂದ ಕೆ. ಸುಚೇಂದ್ರಪ್ರಸಾದ್, ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಿಂದ ವೈ. ನರಹರಿ, ವೇದಾಂತ ಕ್ಷೇತ್ರದಿಂದ ನಾರಾಯಣಾಚಾರ್ಯ ಪೂಜಾರ್, ವೈದ್ಯಕೀಯ ಕ್ಷೇತ್ರದಿಂದ ಡಾ.ಪಿ. ವಿಷ್ಣುಮೂರ್ತಿ ಐತಾಳ್, ಆಯುರ್ವೇದ ಕ್ಷೇತ್ರದಿಂದ ಡಾ. ಜಿ. ಗೋಪಾಲಕೃಷ್ಣ, ಪತ್ರಿಕೋದ್ಯಮ ಕ್ಷೇತ್ರದಿಂದ ರಾಘವೇಂದ್ರ ಗಣಪತಿ, ಸುಗಮ ಸಂಗೀತ ಕ್ಷೇತ್ರದಿಂದ ರಾಘಣ್ಣ ಗರ್ತಿಕೆರೆ, ಕರ್ನಾಟಕ ಸಂಗೀತ ಕ್ಷೇತ್ರದಿಂದ ಟಿ.ಆರ್. ಶ್ರೀನಾಥ್, ಪ್ರಾದೇಶಾಚಾರ್ಯ, ಹರಿಕಥೆ ಕ್ಷೇತ್ರದಿಂದ ದೇವಕೀತನಯ ಕೂಡ್ಲು, ದಾಸಸಾಹಿತ್ಯ ಕ್ಷೇತ್ರದಿಂದ ಮಂಜುಳಾ ಗುರುರಾಜಾರಾವ್ ಮತ್ತು ಶಿಲ್ಪಕಲೆ ಕ್ಷೇತ್ರದಿಂದ ಸೂರಾಲು ವೆಂಕಟರಮಣ ಭಟ್ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
15ರಂದು ಸಂಜೆ 5.30ಕ್ಕೆ ಕೆ.ಆರ್. ರಸ್ತೆಯಲ್ಲಿರುವ ಬೆಂಗಳೂರು ಗಾಯನ ಸಮಾಜದ ಸಭಾಂಗಣದಲ್ಲಿ ಪರಿಮಳ ಗೆಳೆಯರ ಬಳಗದ 15ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಅವರು ಸಮಾರಂಭ ಉದ್ಘಾಟಿಸಲಿದ್ದಾರೆ. ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಅವರು ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಹರಿದಾಸ ಸಾಹಿತ್ಯ ಸಂಶೋಧಕ ಎಸ್. ಜಯಸಿಂಹ ರಚಿಸಿರುವ ‘ಶ್ರೀ ಗುರುಗೋವಿಂದ’ ದರ್ಶನ ಕೃತಿಯನ್ನು ಸೋದೆಯ ವಾದಿರಾಜ ಮಠದ ವಿಶ್ವವಲ್ಲಭತೀರ್ಥರು ಇದೇ ವೇಳೆ ಲೋಕಾರ್ಪಣೆ ಮಾಡಲಿದ್ದಾರೆ. ಶ್ರೀಪಾದರಾಜ ಮಠಾಧೀಶ ಶ್ರೀ ಸುಜಯನಿಧಿತೀರ್ಥ ಸ್ವಾಮೀಜಿ, ಭೀಮನಕಟ್ಟೆ ಮಠಾಧೀಶ ಶ್ರೀ ರಘುವರೇಂದ್ರತೀರ್ಥ ಸ್ವಾಮೀಜಿ ಮತ್ತು ಬಾಳಗಾರು ಕಿರಿಯ ಮಠಾಧೀಶ ಶ್ರೀ ಅಕ್ಷೋಭ್ಯ ರಾಮಪ್ರಿಯತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಗಾಯಕ ರಾಯಚೂರು ಶೇಷಗಿರಿದಾಸ್ ತಂಡದವರಿಂದ ದಾಸವಾಣಿ ಕಾರ್ಯಕ್ರಮ ನಡೆಯಲಿದೆ ಎಂದು ಬಳಗ ತಿಳಿಸಿದೆ.