ಬೆಂಗಳೂರು: ತಾಲೂಕು - ಜಿಲ್ಲಾ ಪಂಚಾಯಿತಿ ಚುನಾವಣೆ ಮೀಸಲು ನಿಗದಿಯಲ್ಲಿ ಆಡಳಿತ ಪಕ್ಷಕ್ಕೆ ಅನುಕೂಲ ಮಾಡಿಕೊಳ್ಳಲು ಗೊಂದಲ ಸೃಷ್ಟಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಪಾದಿಸಿದರು.
ಮೀಸಲು ಗೊಂದಲ ಗಮನಿಸಿದರೆ ರಾಜ್ಯ ಸರ್ಕಾರಕ್ಕೆ ಚುನಾವಣೆ ನಡೆಸುವ ಇಚ್ಛಾಶಕ್ತಿ ಇದೆಯೇ- ಇಲ್ಲವೆ ಎಂಬ ಅನುಮಾನ ಕಾಡುತ್ತಿದೆ ಎಂದು ಬಿಜೆಪಿ ಕೋರ್ ಕಮಿಟಿ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ಈಗಾಗಲೇ ಮೀಸಲು ಪ್ರಕಟಿಸಿರುವ ಸರ್ಕಾರ ಯಾವುದಾದರೂ ನೆಪ ಒಡ್ಡಿ ಚುನಾವಣೆ ಮುಂದೂಡುವ ಕುತಂತ್ರ ಮಾಡದಂತೆ ಆಗ್ರಹಿಸಿದರು.
ಕಾಯಂ ನಿವಾಸಿ ದೃಢೀಕರಣ ಪತ್ರ ನೀಡಲು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಮುನ್ಸಿಪಲ್ ಕಮಿಷನರ್‌ಗಳಿಗೆ ಅಧಿಕಾರ ಕೊಟ್ಟಿದ್ದಕ್ಕೆ ಆಕ್ಷೇಪಿಸಿ ಕೂಡಲೇ ಈ ಅಧಿಕಾರ ಹಿಂಪಡೆಯುವಂತೆ ಆಗ್ರಹಿಸಿದರು.
ತಹಸೀಲ್ದಾರ್ ಮತ್ತು ಅವರ ಮೇಲ್ಪಟ್ಟ ಅಧಿಕಾರಿಗಳಿಗೆ ಈ ಅಧಿಕಾರ ಕೊಡಬೇಕು. ಈ ಸಂಬಂಧ ಚುನಾವಣೆ ಆಯೋಗಕ್ಕೂ ಪತ್ರ ಬರೆಯಲು ನಿರ್ಧರಿಸಿದ್ದೇವೆ ಎಂದು ವಿಜಯೇಂದ್ರ ಮಾಹಿತಿ ನೀಡಿದರು.
ಸ್ಟಿಂಗ್- ಡಿಂಗ್ ವಿಷಯದಲ್ಲಿ ಆಡಳಿತ ಪಕ್ಷದ ಶಾಸಕ-ಸಚಿವರೇ ತಗಲಾಕಿಕೊಂಡಿದ್ದಾರೆ. ಆಂತರಿಕ ಕಚ್ಚಾಟಕ್ಕೆ ಬಿದ್ದು ಅವರವರೇ ಸ್ಟಿಂಗ್ ಆಪರೇಷನ್ ಮಾಡಿಕೊಂಡಿದ್ದಾರೆಂಬ ಚರ್ಚೆ ಚಾಲ್ತಿಯಲ್ಲಿದೆ ಎಂದರು.
ಮುಖ್ಯಮಂತ್ರಿ ಸೇರಿ ಕ್ಯಾಬಿನೆಟ್ ಸಚಿವರ ಮುಖದಲ್ಲಿ ಆತಂಕ ಮೂಡಿರುವುದಂತೂ ಸತ್ಯ. ಇನ್ನಷ್ಟು ಅಂಶಗಳು ಹೊರಬರಲು ಸೂಕ್ತ ತನಿಖೆ ನಡೆಸಬೇಕು.ಉಪ್ಪು ತಿಂದವರು ನೀರು ಕುಡಿಯುತ್ತಾರೆ ಎಂದು ಮಾರ್ಮಿಕವಾಗಿ ತಿಳಿಸಿದರು.