Ranji Trophy: ಕರ್ನಾಟಕ ತಂಡಕ್ಕೆ ದೇವದತ್ ಪಡಿಕ್ಕಲ್ ಹೊಸ ನಾಯಕ!
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಪ್ರತಿಷ್ಠಿತ ರಣಜಿ ಟ್ರೋಫಿ (Ranji Trophy) ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಪ್ರವಾಸಿ ಮಧ್ಯಪ್ರದೇಶ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿ ಇಕ್ಕಟ್ಟಿಗೆ ಸಿಲುಕಿರುವ ಬೆನ್ನಲ್ಲೇ, ಕೊನೇ ಲೀಗ್ ಪಂದ್ಯಕ್ಕೆ ಮುನ್ನ ಕರ್ನಾಟಕ ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಪ್ರಮುಖವಾಗಿ ಅನುಭವಿ ಬ್ಯಾಟರ್ ಮಯಾಂಕ್ ಅಗರ್ವಾಲ್ (Mayank Agarwal) ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿದ್ದು, ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ರನ್ನು (Devdutt Padikkal) ಹೊಸ ನಾಯಕರನ್ನಾಗಿ ನೇಮಿಸಲಾಗಿದೆ.
ಟೀಮ್ ಇಂಡಿಯಾ ಆಟಗಾರರಾದ ಕೆಎಲ್ ರಾಹುಲ್ ಮತ್ತು ವೇಗಿ ಪ್ರಸಿದ್ಧಕೃಷ್ಣ ರಾಜ್ಯ ತಂಡಕ್ಕೆ ಮರಳಿದ್ದರೆ, ಕರುಣ್ ನಾಯರ್ ಗಾಯದಿಂದಾಗಿ ಅಲಭ್ಯರಾಗಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ಆರ್. ಸ್ಮರಣ್ ತಂಡಕ್ಕೆ ಮರಳಿದ್ದರೆ, ನಿಕಿನ್ ಜೋಸ್ ತಂಡದಿಂದ ಹೊರಬಿದ್ದಿದ್ದಾರೆ. ಪ್ರಸಿದ್ಧ ಕೃಷ್ಣಗೆ ಅಭಿಲಾಷ್ ಶೆಟ್ಟಿ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಕರುಣ್ ನಾಯರ್ ಅನುಭವದ ಕೊರತೆಯನ್ನು ರಾಹುಲ್ ನೀಗಿಸಲಿದ್ದಾರೆ. ರಾಹುಲ್ 2018ರ ಬಳಿಕ ಕೇವಲ 2 ರಣಜಿ ಪಂದ್ಯ ಆಡಿದ್ದು, 2025ರ ಜನವರಿಯಲ್ಲಿ ಕೊನೆಯದಾಗಿ ಹರಿಯಾಣ ಎದುರು ಕಣಕ್ಕಿಳಿದಿದ್ದರು. ಪ್ರಸಿದ್ಧಕೃಷ್ಣ ಕೂಡ ಹಾಲಿ ಆವೃತ್ತಿಯಲ್ಲಿ ಮೊದಲ ಬಾರಿ ಆಡಲಿದ್ದಾರೆ.
ಹಾಲಿ ರಣಜಿ ಆವೃತ್ತಿಯಲ್ಲಿ ವೈಫಲ್ಯ ಅನುಭವಿಸಿರುವ ಅಭಿನವ್ ಮನೋಹರ್ರನ್ನೂ ತಂಡದಿಂದ ಕೈಬಿಡಲಾಗಿದ್ದು, ಯುವ ಆಟಗಾರ ಧ್ರುವ ಪ್ರಭಾಕರ್ಗೆ ವಿಜಯ್ ಹಜಾರೆ ಟ್ರೋಫಿಯ ಯಶಸ್ಸಿನ ಬೆನ್ನಲ್ಲೇ ರಣಜಿ ಟ್ರೋಫಿ ತಂಡದಲ್ಲೂ ಮೊದಲ ಬಾರಿಗೆ ಸ್ಥಾನ ಕಲ್ಪಿಸಲಾಗಿದೆ.
ಹಾಲಿ ಆವೃತ್ತಿಯ 6 ಪಂದ್ಯಗಳಲ್ಲಿ 298 ರನ್ ಮಾತ್ರ ಗಳಿಸಿ ಬ್ಯಾಟಿಂಗ್ನಲ್ಲಿ ವೈಲ್ಯ ಅನುಭವಿಸಿರುವ ಮಯಾಂಕ್ ಅಗರ್ವಾಲ್ ಮೇಲಿನ ನಾಯಕತ್ವದ ಭಾರವನ್ನು ಇಳಿಸಲು ಅಮಿತ್ ವರ್ಮ ನೇತೃತ್ವದ ನೂತನ ಆಯ್ಕೆ ಸಮಿತಿ ನಿರ್ಧರಿಸಿದೆ. ವಿಜಯ್ ಹಜಾರೆ ಟ್ರೋಫಿಯಲ್ಲಿ 4 ಶತಕಗಳ ಸಹಿತ 700ಕ್ಕೂ ಅಧಿಕ ರನ್ ಸಿಡಿಸಿದ ಬಳಿಕ ಮಧ್ಯಪ್ರದೇಶ ವಿರುದ್ಧ ಎರಡೂ ಇನಿಂಗ್ಸ್ಗಳಲ್ಲಿ ಸೊನ್ನೆ ಸುತ್ತಿದ ನಡುವೆಯೂ ಪಡಿಕ್ಕಲ್ಗೆ ಮೊದಲ ಬಾರಿ ರಾಜ್ಯ ತಂಡದ ನಾಯಕತ್ವ ವಹಿಸಲಾಗಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ 96, 15 ರನ್ ಗಳಿಸಿದ್ದ ಪಡಿಕ್ಕಲ್, ನಂತರ ಭಾರತ ಟೆಸ್ಟ್ ತಂಡದಲ್ಲಿದ್ದ ಕಾರಣ ನಂತರದ 4 ಲೀಗ್ ಪಂದ್ಯಗಳಲ್ಲಿ ಆಡಿರಲಿಲ್ಲ.
ಕರ್ನಾಟಕ ತಂಡ ಜನವರಿ 29ರಿಂದ ಫೆಬ್ರವರಿ 1ರವರೆಗೆ ಮೊಹಾಲಿಯಲ್ಲಿ ನಡೆಯಲಿರುವ 7ನೇ ಹಾಗೂ ಕೊನೇ ಲೀಗ್ ಪಂದ್ಯದಲ್ಲಿ ಆತಿಥೇಯ ಪಂಜಾಬ್ ತಂಡವನ್ನು ಎದುರಿಸಲಿದೆ. ನಾಕೌಟ್ ಹಂತಕ್ಕೇರಲು ಕರ್ನಾಟಕ ತಂಡ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಕರ್ನಾಟಕ ತಂಡ: ದೇವದತ್ ಪಡಿಕ್ಕಲ್ (ನಾಯಕ), ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್, ಅನೀಶ್ ಕೆವಿ, ಆರ್. ಸ್ಮರಣ್, ಶ್ರೇಯಸ್ ಗೋಪಾಲ್, ಕೃತಿಕ್ ಕೃಷ್ಣ (ವಿ.ಕೀ), ವೆಂಕಟೇಶ್ ಎಂ, ವಿದ್ಯಾಧರ್ ಪಾಟೀಲ್, ವಿದ್ವತ್ ಕಾವೇರಪ್ಪ, ಪ್ರಸಿದ್ಧಕೃಷ್ಣ, ಮೊಹ್ಸಿನ್ ಖಾನ್, ಶಿಖರ್ ಶೆಟ್ಟಿ, ಕೆಎಲ್ ಶ್ರೀಜಿತ್ (ವಿ.ಕೀ), ಧ್ರುವ ಪ್ರಭಾಕರ್.