ಬಿ.ಪ್ಯಾಕ್​ನಿಂದ ಬೆಂಗಳೂರು ಸಾರ್ವಜನಿಕ ಶೌಚಗೃಹಗಳ ಸಮೀಾ ವರದಿಯನ್ನು ಬಿಡುಗಡೆಗೊಳಿಸಲಾಯಿತು. ಬಿ.ಪ್ಯಾಕ್​ ಮುಖ್ಯಸ್ಥ ಎಚ್​.ಎಸ್​.ರಾಘವೇಂದ್ರ ಪೂಜಾರಿ ಇತರರು ಇದ್ದರು. 
ಬೆಂಗಳೂರು

ಬೆಂಗಳೂರು ಸಾರ್ವಜನಿಕ ಶೌಚಗೃಹಗಳ ದುಸ್ಥಿತಿ ಬಯಲು!

ಪ್ರಮುಖ ಮುಖ್ಯಾಂಶಗಳು

  • ಶೇ. 26 ಶೌಚಗೃಹಗಳು ಬಂದ್​
  • ಸಾವಿರಕ್ಕೂ ಹೆಚ್ಚು ಹೊಸ ಶೌಚಗೃಹ ನಿಮಾರ್ಣಕ್ಕೆ ಬಿ.ಪ್ಯಾಕ್​ ಒತ್ತಾಯ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಐಟಿ ರಾಜಧಾನಿ ಬೆಂಗಳೂರಿನ ಸಾರ್ವಜನಿಕ ಶೌಚಗೃಹಗಳ ದುಸ್ಥಿತಿಯನ್ನು ಬೆಂಗಳೂರು ಪೊಲಿಟಿಕಲ್​ ಆಕ್ಷನ್​ ಕಮಿಟಿ (ಬಿ.ಪ್ಯಾಕ್​) ನಡೆಸಿದ ಸಮಗ್ರ ಸಮೀಕ್ಷೆ ಬಹಿರಂಗಪಡಿಸಿದೆ. ಗ್ರೇಟರ್​ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ 142 ಸಾರ್ವಜನಿಕ ಶೌಚಗೃಹಗಳ ಸ್ಥಿತಿಗತಿಗಳ ಕುರಿತು ನಾಗರಿಕರು, ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ವಿದ್ಯಾರ್ಥಿ ಸ್ವಯಂಸೇವಕರ ಸಹಯೋಗದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಸ್ವಚ್ಛತೆ, ಸುರಕ್ಷತೆ, ನಿರ್ವಹಣೆ ಹಾಗೂ ಮೂಲಸೌಲಭ್ಯಗಳ ಕೊರತೆ ಬೆಳಕಿಗೆ ಬಂದಿದೆ.
ಇದೇ ವೇಳೆ, ನಗರಕ್ಕೆ ತುರ್ತಾಗಿ 1,000ಕ್ಕೂ ಅಧಿಕ ಆಧುನಿಕ ಸಾರ್ವಜನಿಕ ಶೌಚಗೃಹಗಳ ಅಗತ್ಯವಿದೆ ಎಂದು ಬಿ.ಪ್ಯಾಕ್​ ಸರ್ಕಾರವನ್ನು ಒತ್ತಾಯಿಸಿದೆ.
2026ರ ಏಪ್ರಿಲ್​ ಹಾಗೂ ಮೇ ತಿಂಗಳಲ್ಲಿ ನಡೆದ ಸಮೀಕ್ಷೆಯಲ್ಲಿ ಪರಿಶೀಲಿಸಲಾದ 142 ಶೌಚಗೃಹಗಳ ಪೈಕಿ 37 ಶೌಚಗೃಹಗಳು ಸಂಪೂರ್ಣ ಮುಚ್ಚಿರುವುದು ಕಂಡುಬಂದಿದೆ. ಕೇವಲ ಆರು ಶೌಚಗೃಹಗಳು ಮಾತ್ರ ಸ್ವಚ್ಛವಾಗಿದ್ದು, ಶೇ.58 ಶೌಚಗೃಹಗಳಲ್ಲಿ ತೀವ್ರ ದುರ್ವಾಸನೆ ಇದೆ. ಶೇ.56 ಶೌಚಗೃಹಗಳಲ್ಲಿ ಮಾತ್ರ ಸಮರ್ಪಕ ಬೆಳಕಿನ ವ್ಯವಸ್ಥೆ ಇದ್ದು, ಸುಮಾರು ಶೇ.40 ಶೌಚಗೃಹಗಳಲ್ಲಿ ಮಾತ್ರ ನಿರಂತರ ನೀರಿನ ಸೌಲಭ್ಯ ಇದೆ. ಯಾವುದೇ ಶೌಚಗೃಹದಲ್ಲೂ ಸಾಬೂನು ಹಾಗೂ ಕಸದ ಬುಟ್ಟಿಗಳ ವ್ಯವಸ್ಥೆ ಇಲ್ಲದಿರುವುದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಂಗವಿಕಲ ಸ್ನೇಹಿ ಸೌಲಭ್ಯಗಳ ಕೊರತೆಯೂ ಸಮೀಕ್ಷೆಯಲ್ಲಿ ಬಹಿರಂಗವಾಗಿದ್ದು, ಕೇವಲ ಒಂಬತ್ತು ಶೌಚಗೃಹಗಳಲ್ಲಿ ಮಾತ್ರ ವೀಲ್​ಚೇರ್​ ರ್ಯಾಂಪ್​ ನಿರ್ಮಿಸಲಾಗಿದೆ. ಮಹಿಳಾ ಸಿಬ್ಬಂದಿ ಕೇವಲ ಶೇ.15 ಶೌಚಗೃಹಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಮಂಗಳಮುಖಿಯರಿಗಾಗಿ ಪ್ರತ್ಯೇಕ ಶೌಚಗೃಹಗಳೇ ಇಲ್ಲ. ಕೆಲವು ಶೌಚಗೃಹಗಳ ಸ್ನಾನಗೃಹಗಳನ್ನು ಅಡುಗೆಗೆ ಬಳಸುತ್ತಿರುವುದು ಹಾಗೂ ಬಹುತೇಕ ಶೌಚಗೃಹಗಳು ಧೂಮಪಾನ ತಾಣಗಳಾಗಿ ಮಾರ್ಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.
ನಗರದ ಜನಸಂಖ್ಯೆ ಹಾಗೂ ವಿಸ್ತರಣೆಯನ್ನು ಗಮನದಲ್ಲಿಟ್ಟುಕೊಂಡು ಬಸ್​ ನಿಲ್ದಾಣ, ಮೆಟ್ರೋ ನಿಲ್ದಾಣ, ಮಾರುಕಟ್ಟೆ, ಉದ್ಯಾನ, ಪ್ರವಾಸಿ ತಾಣ ಹಾಗೂ ಜನಸಂದಣಿ ಪ್ರದೇಶಗಳಿಗೆ ಆದ್ಯತೆ ನೀಡಿ 1,000ಕ್ಕೂ ಹೆಚ್ಚು ಆಧುನಿಕ ಸಾರ್ವಜನಿಕ ಶೌಚಗೃಹಗಳನ್ನು ನಿರ್ಮಿಸಬೇಕೆಂದು ಬಿ.ಪ್ಯಾಕ್​ ಮುಖ್ಯಸ್ಥ ಎಚ್​.ಎಸ್​.ರಾಘವೇಂದ್ರ ಪೂಜಾರಿ ಸರ್ಕಾರ ಹಾಗೂ ಜಿಬಿಎಗೆ ಮನವಿ ಮಾಡಿದ್ದಾರೆ.
ಶಿಫಾರಸ್ಸುಗಳೇನು?
ಈ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸದ ಶೌಚಗೃಹಗಳನ್ನು 30 ದಿನಗಳೊಳಗೆ ದುರಸ್ತಿಗೊಳಿಸುವುದು, ಏಕೀಕೃತ ಸಾರ್ವಜನಿಕ ಶೌಚಗೃಹ ನಿರ್ವಹಣಾ ಘಟಕ ಸ್ಥಾಪಿಸುವುದು, ಐದು ವರ್ಷದ 'ಆಪರೇಟ್​ ಆ್ಯಂಡ್​ ಮೆಂಟೇನ್​ ಮಾದರಿ ಜಾರಿಗೊಳಿಸುವುದು, ಅಂಗವಿಕಲ ಸ್ನೇಹಿ ಹಾಗೂ ಮಹಿಳೆಯರು ಮತ್ತು ತೃತೀಯಲಿಂಗ ಸಮುದಾಯಕ್ಕೆ ಅನುಕೂಲಕರ ಶೌಚಗೃಹಗಳನ್ನು ನಿರ್ಮಿಸುವಂತೆ ಬಿ.ಪ್ಯಾಕ್​ ಶಿಫಾರಸು ಮಾಡಿದೆ.