ಬೆಂಗಳೂರು: ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳಲ್ಲಿ ಏಕಕಾಲದಲ್ಲಿ ಆಯೋಜಿಸಿರುವ ‘ನನ್ನ ಇ-ಖಾತಾ, ನನ್ನ ಹಕ್ಕು’ ಕಾರ್ಯಕ್ರಮದಡಿ ಐದೂ ಕಾರ್ಪೋರೇಷನ್ಗಳಲ್ಲಿ ಸಾರ್ವಜನಿಕರಿಂದ 500ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಆಯಾ ನಗರ ಪಾಲಿಕೆಯ ವಿವಿಧ ಉಪವಿಭಾಗಗಳ ಸಹಾಯಕ ಕಂದಾಯ ಅಧಿಕಾರಿಗಳ (ಎಆರ್ಒ) ಕಚೇರಿಗಳಲ್ಲಿ (ಒಟ್ಟು 62 ಕಡೆಗಳಲ್ಲಿ) ಮೇಳ ನಡೆದಿದ್ದು, ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸೇವೆಯನ್ನು ಪಡೆದರು.
ಸಾರ್ವಜನಿಕರು ತಮ್ಮ ಆಸ್ತಿಗಳಿಗೆ ಸಂಬಂಧಿಸಿದ ಇ-ಖಾತಾ ಸೇವೆಯನ್ನು ಸುಲಭವಾಗಿ ಪಡೆಯಲು ಹಾಗೂ ಇ-ಖಾತಾ, ಖಾತಾ ವರ್ಗಾವಣೆ, ಖಾತಾ ತಿದ್ದುಪಡಿ, ಬಿ ಖಾತಾದಿಂದ ಎ ಖಾತೆಗೆ ವರ್ಗಾವಣೆ ಮತ್ತು ಹೊಸ ಖಾತೆ ಸೇರಿ ವಿವಿಧ ಸೇವೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈ ಮೇಳವನ್ನು ಆಯೋಜಿಸಲಾಗಿತ್ತು. ಹಲವು ವಾರಗಳಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಈ ಕಾರ್ಯಕ್ರಮಕ್ಕೆ ಜನರಿಂದ ಬೇಡಿಕೆ ಇದ್ದ ಕಾರಣ ಜಿಬಿಎ ತನ್ನ ಕಂದಾಯ ವಿಭಾಗದ ಸಾಫ್ಟ್ವೇರ್ಅನ್ನು ಮೇಲ್ದರ್ಜೆಗೇರಿಸಿ ಮರುಚಾಲನೆ ನೀಡಿದೆ.
ಉತ್ತರ ಪಾಲಿಕೆಯಲ್ಲಿ 68 ಅರ್ಜಿಗಳು ಸಲ್ಲಿಕೆಯಾಗಿದ್ದು, ಹಳೆಯವು ಸೇರಿ ಒಟ್ಟು 55 ಅರ್ಜಿಗಳು ವಿಲೇವಾರಿ ಆಗಿವೆ. ದಕ್ಷಿಣ ಪಾಲಿಕೆಯಲ್ಲಿ 254 ಅರ್ಜಿಗಳು ಸಲ್ಲಿಕೆಯಾಗಿದ್ದು, 93 ಅರ್ಜಿಗಳು ವಿಲೇವಾರಿ ಮಾಡಲಾಯಿತು. ಪಶ್ಚಿಮ ಪಾಲಿಕೆ ವ್ಯಾಪ್ತಿಯಲ್ಲೂ 100ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಪೂರ್ವ ಪಾಲಿಕೆ ಹಾಗೂ ಕೇಂದ್ರ ಪಾಲಿಕೆಗಳಲ್ಲಿ ಕಡಿಮೆ ಸಂಖ್ಯೆಯ ಅರ್ಜಿಗಳು ಸಲ್ಲಿಕೆಯಾಗಿವೆ.
ಒಟ್ಟಾರೆ ಇ-ಖಾತಾ, ಬಿ ಖಾತಾದಿಂದ ಎ ಖಾತೆಗೆ ವರ್ಗಾವಣೆ ಹಾಗೂ ಹೊಸ ಖಾತೆಗಳಿಗೆ ಸಂಬಂಧಿಸಿದಂತೆ 68 ಹೊಸ ಅರ್ಜಿಗಳು ಸ್ವೀಕೃತವಾಗಿದ್ದು, 55 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 26 ಅರ್ಜಿಗಳು ಬಾಕಿ ಇವೆ. ಮೇಳದ ಸಂದರ್ಭದಲ್ಲಿ 8 ಇ-ಟಿಕೆಟ್ಗಳನ್ನು ದಾಖಲಿಸಲಾಗಿದೆ.
ಉತ್ತರ ಪಾಲಿಕೆಯ ಬ್ಯಾಟರಾಯನಪುರ, ವಿದ್ಯಾರಣ್ಯಪುರ, ಪುಲಿಕೇಶಿನಗರ, ಮಾರುತಿ ಸೇವಾನಗರ, ಎಚ್ಬಿಆರ್. ಲೇಔಟ್, ದಾಸರಹಳ್ಳಿ, ಯಶವಂತಪುರ, ಶೆಟ್ಟಿಹಳ್ಳಿ, ಹೆಬ್ಬಾಳ, ಜೆ.ಸಿ. ನಗರ, ಯಲಹಂಕ ಮತ್ತು ಯಲಹಂಕ ಉಪನಗರ ಸೇರಿ ವಿವಿಧ ಉಪವಿಭಾಗಗಳ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಗಳಲ್ಲಿ (ಎಆರ್ಒ) ಇ-ಖಾತಾ ಮೇಳ ನಡೆಯಿತು.
ದಕ್ಷಿಣ ಪಾಲಿಕೆಯ ವ್ಯಾಪ್ತಿಯ ಅಂಜನಾಪುರ, ಯಲಚೇನಹಳ್ಳಿ, ಉತ್ತರಹಳ್ಳಿ, ಬೇಗೂರು, ಜೆ.ಪಿ. ನಗರ, ಪದ್ಮನಾಭನಗರ, ಜಯನಗರ, ಬೊಮ್ಮನಹಳ್ಳಿ, ಕೋರಮಂಗಲ, ಬಿಟಿಎಂ ಲೇಔಟ್, ಅರಕೆರೆ ಮತ್ತು ಎಚ್ಎಸ್ಆರ್ ಲೇಔಟ್ ಸೇರಿ ಜಯನಗರ ಹಾಗೂ ಬೊಮ್ಮನಹಳ್ಳಿ ವಲಯಗಳ ಒಟು 12 ಉಪವಿಭಾಗಗಳ ಕೇಂದ್ರಗಳಲ್ಲಿ ಇ-ಖಾತಾ ಮೇಳ ಯಶಸ್ವಿಯಾಗಿ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ನನ್ನ ಇ-ಖಾತಾ, ನನ್ನ ಹಕ್ಕು ಕಾರ್ಯಕ್ರಮ’ದ ಮೂಲಕ ನಾಗರಿಕರಿಗೆ ಆಸ್ತಿ ಸಂಬಂಧಿತ ಸೇವೆಗಳನ್ನು ಪಾರದರ್ಶಕವಾಗಿ, ಕಾಲಮಿತಿಯೊಳಗೆ ಒದಗಿಸಲಾಗುವುದು. ಈ ವೇಳೆ ಅರ್ಜಿದಾರರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸುವುದು ಪಾಲಿಕೆಯ ಮುಖ್ಯ ಉದ್ದೇಶವಾಗಿದೆ. ಈ ಕಾರ್ಯಕ್ಕೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿದ್ದು, ವಿಳಂಬವಿಲ್ಲದೆ ಕೆಲಸ ಸಾಗಲಿದೆ.
- ಕೆ.ಎನ್. ರಮೇಶ್, ದಕ್ಷಿಣ ಪಾಲಿಕೆ ಆಯುಕ್ತ