operation-footpath 
ಬೆಂಗಳೂರು

2ನೇ ದಿನವೂ ಆಪರೇಷನ್ ುಟ್‌ಪಾತ್ ಮುಂದುವರಿಕೆ

ಪ್ರಮುಖ ಮುಖ್ಯಾಂಶಗಳು

  • ಐದೂ ಪಾಲಿಕೆಗಳ ವ್ಯಾಪ್ತಿಯಲ್ಲಿ ಜೆಸಿಬಿಗಳ ಗರ್ಜನೆ
  • ಬದಲಿ ಸ್ಥಳ ನಿಗದಿಗೊಳಿಸಲು ವ್ಯಾಪಾರಿಗಳ ಪಟ್ಟು
  • ಹಲವೆಡೆ ಪಾದಚಾರಿ ಮಾರ್ಗಗಳ ತೆರವು, ಸ್ವಚ್ಛತೆ
ಬೆಂಗಳೂರು: ಮಹಾನಗರದಲ್ಲಿ ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಎರಡನೇ ದಿನವಾದ ಗುರುವಾರವೂ ಮುಂದುವರಿಸಿರುವ ಪಂಚ ಪಾಲಿಕೆಗಳು ಇನ್ನಷ್ಟು ಅಭಿಯಾನವನ್ನು ನಡೆಸುವುದಾಗಿ ಘೋಷಿಸಿವೆ. ಯಾವುದೇ ಕಾರಣಕ್ಕೂ ಅನಧಿಕೃತವಾಗಿ ಫುಟ್‌ಪಾತ್ ಒತ್ತುವರಿ ಭಾಗಗಳನ್ನು ಹಾಗೆಯೇ ಬಿಡುವ ಪ್ರಶ್ನೆಯೇ ಇಲ್ಲ. ಸುರಕ್ಷಿತ ಪಾದಚಾರಿ ಮಾರ್ಗದ ಸೌಲಭ್ಯವನ್ನು ನಾಗರಿಕರಿಗೆ ಒದಗಿಸುವುದಾಗಿ ಪಾಲಿಕೆ ಆಯುಕ್ತರು ನಿಲುವು ವ್ಯಕ್ತಪಡಿಸಿದ್ದಾರೆ.
ಗುರುವಾರ ಬೆಳಗ್ಗೆಯಿಂದಲೇ ಐದೂ ಕಾರ್ಪೋರೇಷನ್‌ಗಳ ವ್ಯಾಪ್ತಿಯಲ್ಲಿ ಹಲವು ತಂಡಗಳಾಗಿ ಅಧಿಕಾರಿ ಹಾಗೂ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸಿದರು. ಮೊದಲ ದಿನ ಕೈಗೊಂಡಿದ್ದ ತೆರವು ಸ್ಥಳಗಳನ್ನು ಬಿಟ್ಟು ಹೊಸ ಸ್ಥಳಗಳಲ್ಲಿ ಒತ್ತುವರಿ ಭಾಗಗಳನ್ನು ಜೆಸಿಬಿಯಿಂದ ಒಡೆದು ಹಾಕಲಾಯಿತು. ಬಿಲ್ಡಿಂಗ್ ತ್ಯಾಜ್ಯವನ್ನು ಟ್ರ್ಯಾಕ್ಟರ್‌ಗಳಲ್ಲಿ ತುಂಬಿ ಹೊರಸಾಗಿಸಲಾಯಿತು. ಜತೆಗೆ ಗೂಡಂಗಡಿ, ತಳ್ಳು ಗಾಡಿಗಳ ಮೇಲೆ ಜ್ಯೂಸ್ ತಯಾರಿಸುವ ಯಂತ್ರಗಳ ಸಮೇತ ಗಾಡಿಗಳನ್ನು ಜಪ್ತಿ ಮಾಡಲಾಯಿತು. ಫುಟ್‌ಪಾತ್‌ನಲ್ಲಿ ನಡಿಗೆದಾರರಿಗೆ ಅಡ್ಡಿಯಾದ ವಸ್ತುಗಳನ್ನು ತೆಗೆದುಹಾಕಲಾಯಿತು.
ಪಾಲಿಕೆಗಳ ಕಾರ್ಯಾಚರಣೆ ಮತ್ತೆ ಬಿದಿಬದಿ ವ್ಯಾಪಾರಿಗಳು ಹಾಗೂ ವರ್ತಕ ವೃಂದ ತಮ್ಮ ಆಕ್ರೋಶವನ್ನು ಹೊರಹಾಕಿದರು. ಒತ್ತುವರಿ ಭಾಗಗಳಲ್ಲೆ ನೆರಳಿಗಾಗಿ ಹಾಕಿರುವ ಶೀಟ್‌ಗಳನ್ನು ಅನಗತ್ಯವಾಗಿ ತೆಗೆದುಹಾಕುತ್ತಿರುವುದು ಸರಿಯಲ್ಲ ಎಂದು ವರ್ತಕರು ಅಧಿಕಾರಿಗಳ ಜತೆ ವಾಗ್ವಾದ ನಡೆಸಿದರು. ಆದರೆ, ಅಧಿಕಾರಿಗಳು ಯಾವ ಸಬೂಬು ನೀಡದೆ ತೆರವು ಕಾರ್ಯಾಚರಣೆಯನ್ನು ಮುಂದುವರಿಸಿದರು. ನಾಲ್ಕೈದು ಕಡೆಗಳಲ್ಲಿ ಜಟಾಪಟಿ ನಡೆದಿದ್ದು, ಪೊಲೀಸರು ಮಧ್ಯಪ್ರವೇಶಿಸಿ ವ್ಯಾಪಾರಿಗಳನ್ನು ದೂರ ಕಳುಹಿಸಿದರು.

ಅಭಿವೃದ್ಧಿಪಡಿಸಿದ ಫುಟ್‌ಪಾತ್ ಪರಿಶೀಲಿಸಿ:

ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅವುಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು. ನಂತರ ಸ್ಥಳೀಯ ನಾಗರಿಕರೊಂದಿಗೆ ಅಭಿವೃದ್ಧಿಪಡಿಸಿದ ಫುಟ್‌ಪಾತ್‌ಗಳ ಪರಿಶೀಲಿಸಿ, ಸಾರ್ವಜನಿಕರ ಅಭಿಪ್ರಾಯವನ್ನೂ ಪಡೆಯಬೇಕು ಎಂದು ಸಚಿವರು ಸೂಚಿಸಿದ್ದಾರೆ.

ಯಾವ ಪಾಲಿಕೆಯಲ್ಲಿ ಎಲ್ಲಿ, ಏನು ತೆರವು:

ಉತ್ತರ ಪಾಲಿಕೆ: ಒಟ್ಟು 12.70 ಕಿ.ಮೀ. ಉದ್ದದ ಪಾದಚಾರಿ ಮಾರ್ಗ ಅತಿಕ್ರಮಣ ಮುಕ್ತ. ಕಾರ್ಯಾಚರಣೆಯಲ್ಲಿ 9 ಜೆಸಿಬಿ, 28 ಟ್ರ್ಯಾಕ್ಟರ್, 1 ಟಿಪ್ಪರ್, 1 ಇತರೆ ಯಂತ್ರ, 108 ಕಾರ್ಮಿಕರ ಬಳಕೆ. 25 ಅಂಗಡಿ, 124 ತಳ್ಳುವ ಗಾಡಿಗಳು, 59 ಶೀಟ್/ ಮೇಲ್ಛಾವಣಿ , 23 ಮೆಟ್ಟಿಲು, 130 ಅನಧಿಕೃತ ಜಾಹೀರಾತು ನಾಮಫಲಕ, 4 ತಾತ್ಕಾಲಿಕ ಶೆಡ್‌ಗಳು, ತ್ಯಾಜ್ಯ ಮತ್ತು ಇತರೆ 18 ಟನ್ ತೆರವು. ಪುಲಿಕೇಶಿನಗರ, ಬ್ಯಾಟರಾಯನಪುರ, ದಾಸರಹಳ್ಳಿ, ಹೆಬ್ಬಾಳ, ಸರ್ವಜ್ಞನಗರ ಮತಕ್ಷೇತ್ರಗಳ ವಿವಿಧೆಡೆ ಕಾರ್ಯಾಚರಣೆ.
ದಕ್ಷಿಣ ಪಾಲಿಕೆ: ಒಟ್ಟು 10.40 ಕಿ.ಮೀ. ಒತ್ತುವರಿ ತೆರವು. 4 ಜೆಸಿಬಿ, 30 ಟ್ರ್ಯಾಕ್ಟರ್, 127 ಸಿಬ್ಬಂದಿ ಬಳಕೆ. ಜಯನಗರ, ಪದ್ಮನಾಭನಗರ, ಬೊಮ್ಮನಹಳ್ಳಿ, ಬಿಟಿಎಂ ಲೇಔಟ್ ಹಾಗೂ ಆನೇಕಲ್ ಮತಕ್ಷೇತ್ರಗಳಲ್ಲಿ ತೆರವು ಕಾರ್ಯಾಚರಣೆ ನಡೆಯಿತು.
ಕೇಂದ್ರ ಪಾಲಿಕೆ: ಒಟ್ಟು 11 ರಸ್ತೆಗಳ 8.55 ಕಿ.ಮೀ. ಫುಟ್‌ಪಾತ್ ಒತ್ತುವರಿಮುಕ್ತ. ತೆರವು ಕಾರ್ಯಕ್ಕೆ 6 ಜೆಸಿಬಿ ಯಂತ್ರ, 20 ಟ್ರ್ಯಾಕ್ಟರ್, 5 ಟಿಪ್ಪರ್ ಹಾಗೂ 80 ಕಾರ್ಮಿಕರ ಬಳಕೆ. 35 ಪೆಟ್ಟಿ ಅಂಗಡಿ, 83 ತಳ್ಳುಗಾಡಿ, 34 ಜಾಹೀರಾತುಲಕ, 24 ಮಳಿಗೆಗಳ ಮೇಲ್ಛಾವಣಿ, 19 ಶೆಡ್ ಹಾಗೂ 80 ಟನ್ ಕಟ್ಟಡ ತ್ಯಾಜ್ಯ ತೆರವುಗೊಳಿಸಲಾಗಿದೆ. ಗಾಂಧಿನಗರ, ಶಿವಾಜಿನಗರ, ಶಾಂತಿನಗರ, ಸಿ.ವಿ.ರಾಮನ್‌ನಗರ, ಚಿಕ್ಕಪೇಟೆ, ಚಾಮರಾಜಪೇಟೆ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಪೂರ್ವ ಪಾಲಿಕೆ: ಒಟ್ಟು 8.8 ಕಿ.ಮೀ. ಉದ್ದದ ುಟ್‌ಪಾತ್ ಒತ್ತುವರಿ ತೆರವು. 20 ಲೋಡ್ ಮಣ್ಣು ಮಿಶ್ರಿತ ಕಸ ಹಾಗೂ 9 ಟನ್ ತ್ಯಾಜ್ಯ ತೆರವು. 20 ತಳ್ಳುಗಾಡಿಗಳು, 25 ನಾಮಲಕ, ಗೂಡಂಗಡಿ ಹಾಗೂ ಫುಟ್‌ಪಾತ್ ಮೇಲೆ ಚಾಚಿದ್ದ ಮೆಟ್ಟಿಲುಗಳ ತೆರವುಗೊಳಿಸಲಾಗಿದೆ. ಕೆ.ಆರ್.ಪುರ, ಮಹದೇವಪುರ, ವೈಟ್‌ಫೀಲ್ಡ್, ಮಾರತ್‌ಹಳ್ಳಿ, ದೊಡ್ಡನೆಕ್ಕುಂದಿಯಲ್ಲಿ ಕಾರ್ಯಾಚರಣೆ.