- 10 ವರ್ಷದಿಂದ ಬಳಕೆಯಲ್ಲಿಲ್ಲದ ವಾಟರ್‌ಟ್ಯಾಂಕ್
- ಹೂಡಿ ವಾರ್ಡ್‌ನ ಬೈರತಿ ಬಂಡೆ ಪ್ರದೇಶದಲ್ಲಿದ್ದ ಶಿಥಿಲ ರಚನೆ
ಬೆಂಗಳೂರು: ಹೂಡಿ ವಾರ್ಡ್‌ನ ಬೈರತಿ ಬಂಡೆ ಪ್ರದೇಶದಲ್ಲಿದ್ದ ಶಿಥಿಲಗೊಂಡ ಓವರ್‌ಹೆಡ್ ನೀರಿನ ಟ್ಯಾಂಕ್‌ಅನ್ನು ಶನಿವಾರ ಸುರಕ್ಷಿತವಾಗಿ ತೆರವುಗೊಳಿಸುವಲ್ಲಿ ಪೂರ್ವ ನಗರ ಪಾಲಿಕೆ ಯಶಸ್ವಿಯಾಗಿದೆ.
ಅಪಾಯಕಾರಿ ಸ್ಥಿತಿಯಲ್ಲಿರುವ ಶಿಥಿಲಗೊಂಡ ಕಟ್ಟಡ, ಗೋಡೆ ಸೇರಿ ಇತರ ರಚನೆಗಳನ್ನು ಗುರುತಿಸಿ ತೆರವುಗೊಳಿಸುವ ಕೆಲಸವನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದೆ. ಸುಮಾರು 4 ದಶಕಗಳ ಹಿಂದೆ ನಿರ್ಮಾಣವಾಗಿದ್ದ ಈ ಓವರ್‌ಹೆಡ್ ನೀರಿನ ಟ್ಯಾಂಕ್ ಕಳೆದ 10 ವರ್ಷಗಳಿಂದ ಬಳಕೆಯಲ್ಲಿರಲಿಲ್ಲ. ನಿರ್ವಹಣೆ ಕೊರತೆಯಿಂದಾಗಿ ಟ್ಯಾಂಕ್‌ನ ಪಿಲ್ಲರ್‌ಗಳಲ್ಲಿ ಬಿರುಕು ಉಂಟಾಗಿದ್ದು, ಕಬ್ಬಿಣದ ರಾಡ್‌ಗಳು ಹೊರಗೆ ಗೋಚರಿಸುತ್ತಿತ್ತು. ತಾಂತ್ರಿಕ ಅಧಿಕಾರಿಗಳು ನಡೆಸಿದ ಪರಿಶೀಲನೆಯಲ್ಲಿ ಈ ಟ್ಯಾಂಕ್ ಕುಸಿಯುವ ಸಾಧ್ಯತೆ ಇರುವುದಾಗಿ ವರದಿಯಾಗಿದ್ದು, ಸಾರ್ವಜನಿಕರ ಸುರಕ್ಷತೆಯನ್ನು ಪರಿಗಣಿಸಿ ತಕ್ಷಣ ತೆರವುಗೊಳಿಸಲಾಯಿತು ಎಂದು ಪೂರ್ವ ಪಾಲಿಕೆಯ ಆಯುಕ್ತ ಡಿ.ಎಸ್. ರಮೇಶ್ ತಿಳಿಸಿದ್ದಾರೆ.
ಸಾರ್ವಜನಿಕರ ಸುರಕ್ಷತೆಗೆ ಮೊದಲ ಆದ್ಯತೆ:
ನಾಗರಿಕರಿಗೆ ಅಪಾಯ ಅಥವಾ ಸಮಸ್ಯೆಯನ್ನು ಉಂಟುಮಾಡುವ ಶಿಥಿಲ ಕಟ್ಟಡಗಳನ್ನು ಗುರುತಿಸಿ ಹಂತ ಹಂತವಾಗಿ ತಾಂತ್ರಿಕ ಪರಿಶೀಲನೆ ನಡೆಸಿ ತೆರವಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಬೈರತಿ ಬಂಡೆ ಬಳಿಯಿದ್ದ ಟ್ಯಾಂಕ್ ಆಸುಪಾಸು ವಾಸಿಸುತ್ತಿದ್ದ 50ಕ್ಕೂ ಅಧಿಕ ಕುಟುಂಬಗಳ ಸುರಕ್ಷತೆಯನ್ನು ಗಮನದಲ್ಲಿರಿಸಿ ಕೆಲ ಇಲಾಖೆಗಳ ಸಮನ್ವಯದೊಂದಿಗೆ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು. ಈ ವೇಳೆ ಯಾವುದೇ ಅನಾಹುತ ಸಂಭವಿಸದಂತೆ ತಜ್ಞರ ಮೇಲ್ವಿಚಾರಣೆಯಲ್ಲಿ ತೆರವು ಕಾರ್ಯವನ್ನು ಪೂರ್ಣಗೊಳಿಸಲಾಯಿತು ಎಂದು ಆಯುಕ್ತರು ತಿಳಿಸಿದ್ದಾರೆ.
ಸಾರ್ವಜನಿಕರು ತಮ್ಮ ಪ್ರದೇಶದಲ್ಲಿರುವ ಶಿಥಿಲ ಕಟ್ಟಡ, ಹಳೆಯ ನೀರಿನ ಟ್ಯಾಂಕ್ ಅಥವಾ ಅಪಾಯಕಾರಿಯಾದ ಸಾರ್ವಜನಿಕ ರಚನೆ ಕಂಡುಬಂದಲ್ಲಿ ತಕ್ಷಣ ಪಾಲಿಕೆಯ ಗಮನಕ್ಕೆ ತರಬೇಕು. ಸಾರ್ವಜನಿಕರ ಸಹಕಾರದೊಂದಿಗೆ ನಗರವನ್ನು ಮತ್ತಷ್ಟು ಸುರಕ್ಷಿತ ಹಾಗೂ ಸುಸ್ಥಿರವಾಗಿಸುವ ನಿಟ್ಟಿನಲ್ಲಿ ಪಾಲಿಕೆ ನಿರಂತರವಾಗಿ ಕಾರ್ಯನಿರ್ವಹಿಸಲಿದೆ.
- ಡಿ.ಎಸ್. ರಮೇಶ್, ಪೂರ್ವ ಪಾಲಿಕೆ ಆಯುಕ್ತ