ಸೌತ್ ಯುನೈಟೆಡ್ ಎಫ್​ಸಿ ತಂಡದ ಜತೆ ಸ್ಪೋರ್ಟ್ಸ್ ಮೆಡಿಸಿನ್-ವೈದ್ಯಕೀಯ ಸೇವಾ ಪಾಲುದಾರರಾಗಿ ಹೊಸ್ಮಟ್ ಆಸ್ಪತ್ರೆ ಸಹಭಾಗಿತ್ವ 
ಬೆಂಗಳೂರು

ಸೌತ್ ಯುನೈಟೆಡ್ ಎಫ್​ಸಿ ತಂಡದ ಜತೆ ಸ್ಪೋರ್ಟ್ಸ್ ಮೆಡಿಸಿನ್-ವೈದ್ಯಕೀಯ ಸೇವಾ ಪಾಲುದಾರರಾಗಿ ಹೊಸ್ಮಟ್ ಆಸ್ಪತ್ರೆ ಸಹಭಾಗಿತ್ವ

ಪ್ರಮುಖ ಮುಖ್ಯಾಂಶಗಳು

  • ಸೌತ್ ಯುನೈಟೆಡ್ ಫುಟ್‌ ಬಾಲ್ ಕ್ಲಬ್‌ ನಲ್ಲಿ ಆನ್ ಸೈಟ್ ಸ್ಪೋರ್ಟ್ಸ್ ಮೆಡಿಕಲ್ ಸೆಂಟರ್ ಪ್ರಾರಂಭ
  • ಆನ್ ಗ್ರೌಂಡ್ ಸಮಗ್ರ ವೈದ್ಯಕೀಯ ವ್ಯವಸ್ಥೆ ಜಾರಿ
ಬೆಂಗಳೂರು: ಆರ್ಥೊಪೆಡಿಕ್ಸ್, ಆಪಘಾತ ಚಿಕಿತ್ಸೆ ಮತ್ತು ಕ್ರೀಡಾ ವೈದ್ಯಕೀಯ ಕ್ಷೇತ್ರದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಮುಂಚೂಣಿಯಲ್ಲಿರುವ ಹಾಗೂ ಈಗ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಬೆಳೆಯುತ್ತಿರುವ ಅತ್ಯಂತ ಪ್ರತಿಷ್ಠಿತ ಹೊಸ್ಮಟ್ ಆಸ್ಪತ್ರೆಯು (HOSMAT Hospitals) ಇದೀಗ ಸೌತ್ ಯುನೈಟೆಡ್ ಫುಟ್​ಬಾಲ್ ಕ್ಲಬ್ (South United Football Club) ಜತೆಗೆ ಸ್ಪೋರ್ಟ್ಸ್ ಮೆಡಿಸಿನ್ ಮತ್ತು ವೈದ್ಯಕೀಯ ಸೇವಾ ಪಾಲುದಾರರಾಗಿ ಮೂರು ವರ್ಷಗಳ ಸಹಭಾಗಿತ್ವವನ್ನು ಮಾಡಿಕೊಂಡಿದೆ.
ಬೆಂಗಳೂರಿನ ಹೃದಯಭಾಗದಲ್ಲಿರುವ ಎಸ್.ಯು.ಎಫ್.ಸಿ, (SUFC) ವಿಶ್ವದರ್ಜೆಯ ವಸತಿ ಅಕಾಡೆಮಿ ಮಾದರಿಯನ್ನು ಹೊಂದಿರುವ ವೃತ್ತಿಪರ ಫುಟ್​ಬಾಲ್ ಕ್ಲಬ್ ಆಗಿದ್ದು, ಈ ಪಾಲುದಾರಿಕೆಯಡಿ ಹೊಸ್ಮಟ್ ಆಸ್ಪತ್ರೆಯು ಈ ಕ್ಲಬ್‌ ಗೆ ಸಂಪೂರ್ಣ ಕ್ರೀಡಾ ವೈದ್ಯಕೀಯ ಸೇವೆಗಳು, ತುರ್ತು ಸಿದ್ಧತೆ ಮತ್ತು ಆನ್ ಗ್ರೌಂಡ್ ವೈದ್ಯಕೀಯ ಸೇವೆಯನ್ನು ಒದಗಿಸಲಿದೆ.
ಈ ಪಾಲುದಾರಿಕೆಯ ಭಾಗವಾಗಿ, ಹೊಸ್ಮಟ್ ಆಸ್ಪತ್ರೆಯು ಎಸ್.ಯು.ಎಫ್.ಸಿ ಆವರಣದಲ್ಲೇ ಪ್ರತ್ಯೇಕ 'ಆನ್-ಸೈಟ್ ಸ್ಪೋರ್ಟ್ಸ್ ಮೆಡಿಕಲ್ ಸೆಂಟರ್' ಅನ್ನು ಪ್ರಾರಂಭಿಸಿದೆ. ಈ ಕೇಂದ್ರವು ಕ್ಲಬ್‌ ನ ತರಬೇತಿ ಮತ್ತು ಸ್ಪರ್ಧಾತ್ಮಕ ಪರಿಸರದಲ್ಲಿ ಆಸ್ಪತ್ರೆ ದರ್ಜೆಯ ವೈದ್ಯಕೀಯ ವ್ಯವಸ್ಥೆಯನ್ನು ಕಲ್ಪಿಸಿಕೊಡಲಿದೆ. ಹೊಸ್ಮಟ್ ಆಸ್ಪತ್ರೆಯು ಎಸ್.ಯು.ಎಫ್.ಸಿ ಯ ವೈದ್ಯಕೀಯ ಚಿಕಿತ್ಸಾಲಯವನ್ನು ನಿರ್ವಹಿಸಲಿದ್ದು, ತರಬೇತಿ ಮತ್ತು ಚಾಂಪಿಯನ್‌ ಶಿಪ್ ಅವಧಿಯಲ್ಲಿ ಆಟಗಾರರು ಹಾಗೂ ಸಿಬ್ಬಂದಿಯ ಎಲ್ಲಾ ವೈದ್ಯಕೀಯ ಅವಶ್ಯಕತೆಗಳನ್ನು ಪೂರೈಸಲಿದೆ.
ಈ ಸಹಯೋಗವು ಕ್ರೀಡಾ ವೈದ್ಯಕೀಯ ಚಿಕಿತ್ಸೆ ಮತ್ತು ತುರ್ತು ಚಿಕಿತ್ಸೆಯ ಒಂದು ವ್ಯವಸ್ಥಿತ ಚೌಕಟ್ಟನ್ನು ರೂಪಿಸಲಿದ್ದು, ಈ ಚೌಕಟ್ಟಿನಲ್ಲಿ ಮುನ್ನೆಚ್ಚರಿಕೆ ತಪಾಸಣೆ, ತ್ವರಿತ ಪ್ರತಿಸ್ಪಂದನೆ, ವೈದ್ಯಕೀಯ ಸಿದ್ಧತೆ ಮತ್ತು ಮುಂದಿನ ಹಂತದ ಚಿಕಿತ್ಸೆಯ ನಿರಂತರ ಮೇಲುಸ್ತುವಾರಿ ಜವಾಬ್ದಾರಿ ಒಳಗೊಂಡಿರುತ್ತದೆ ಮತ್ತು ಕ್ರೀಡಾ ವ್ಯವಸ್ಥೆಯಲ್ಲಿರುವ ವಿಶ್ವ ಮಟ್ಟದ ಗುಣಮಟ್ಟವನ್ನು ಒದಗಿಸಲಿದೆ. ವಿಶ್ವಾದ್ಯಂತ ವೃತ್ತಿಪರ ಕ್ರೀಡಾ ವ್ಯವಸ್ಥೆಗಳಲ್ಲಿ ಇಂತಹ ಕ್ರೀಡಾ ವೈದ್ಯಕೀಯ ಪಾಲುದಾರಿಕೆಗಳು ಈಗ ಅತ್ಯಗತ್ಯವಾಗುತ್ತಿವೆ.
ಅಂತಾರಾಷ್ಟ್ರೀಯ ಕ್ರೀಡಾ ಆರೋಗ್ಯ ಅಧ್ಯಯನಗಳ ಪ್ರಕಾರ, ವ್ಯವಸ್ಥಿತ ವೈದ್ಯಕೀಯ ಮೇಲ್ವಿಚಾರಣೆ ಮತ್ತು ನಿಯತಕಾಲಿಕ ತಪಾಸಣಾ ಕಾರ್ಯಕ್ರಮಗಳು ತಡೆಗಟ್ಟಬಹುದಾದ ಕ್ರೀಡಾ ಗಾಯಗಳನ್ನು ಶೇ. 30 ರಿಂದ 50 ರಷ್ಟು ಕಡಿಮೆ ಮಾಡುತ್ತವೆ. ಅಲ್ಲದೆ, ಆರಂಭಿಕ ಹಂತದ ಚಿಕಿತ್ಸೆ ಮತ್ತು ಪುನರ್ವಸತಿ ಯೋಜನೆಗಳ ಮೂಲಕ ಕ್ರೀಡಾಪಟುಗಳು ಶೀಘ್ರವಾಗಿ ಮೈದಾನಕ್ಕೆ ಮರಳಲು ಸಹಾಯ ಮಾಡುತ್ತವೆ. ಮೈದಾನದಲ್ಲೇ ವೈದ್ಯಕೀಯ ತಂಡಗಳಿರುವುದರಿಂದ ತುರ್ತು ಸಂದರ್ಭಗಳಲ್ಲಿ ಸ್ಪಂದಿಸುವ ಸಮಯವು ಶೇ. 40 ರಷ್ಟು ಉಳಿತಾಯವಾಗುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ.
ಈ ಒಪ್ಪಂದದ ಅಡಿಯಲ್ಲಿ, ಹೊಸ್ಮಟ್ ಈ ಕೆಳಗಿನ ಸೇವೆಗಳನ್ನು ನೀಡಲಿದೆ:
ವಾರ್ಷಿಕ ಸಮಗ್ರ ಆರೋಗ್ಯ ತಪಾಸಣೆ ಮತ್ತು ಕ್ರೀಡೆಗೆ ಸಂಬಂಧಿಸಿದ ವಿಶೇಷ ವೈದ್ಯಕೀಯ ತಪಾಸಣೆ.
ಚಾಂಪಿಯನ್‌ಷಿಪ್‌ ಗಳು ಮತ್ತು ಪ್ರಮುಖ ಪಂದ್ಯಗಳ ಸಮಯದಲ್ಲಿ ತರಬೇತಿ ಪಡೆದ ವೈದ್ಯಕೀಯ ತಂಡದೊಂದಿಗೆ ಮೀಸಲಾದ ಆಂಬುಲೆನ್ಸ್ ಸೇವೆ.
ಎಸ್.ಯು.ಎಫ್.ಸಿ ಆನ್- ಸೈಟ್ ಸ್ಪೋರ್ಟ್ಸ್ ಮೆಡಿಕಲ್ ಸೆಂಟರ್‌ ನಲ್ಲಿ ಸಂಪೂರ್ಣ ವೈದ್ಯಕೀಯ ವ್ಯವಸ್ಥೆ ನಿರ್ವಹಣೆ ಮತ್ತು ಶುಶ್ರೂಷೆ ಬೆಂಬಲ.
ಎಸ್.ಯು.ಎಫ್.ಸಿ ಆಟಗಾರರು ಮತ್ತು ಸಿಬ್ಬಂದಿಗೆ ಹೊಸ್ಮಟ್ ಆಸ್ಪತ್ರೆಯಲ್ಲಿ ಒಳರೋಗಿ ಮತ್ತು ಹೊರರೋಗಿ ಚಿಕಿತ್ಸಾ ಸೇವೆಗಳ ಮೇಲೆ ವಿಶೇಷ ರಿಯಾಯಿತಿ.
ಆನ್- ಸೈಟ್ ಕ್ಲಿನಿಕ್‌ ಗೆ ಅಗತ್ಯವಿರುವ ವೈದ್ಯಕೀಯ ಸಾಮಗ್ರಿಗಳನ್ನು ಉಚಿತವಾಗಿ ಪೂರೈಸುವುದು.
ಸುಧಾರಿತ ಆರ್ಥೊಪೆಡಿಕ್, ಆಘಾತ ಚಿಕಿತ್ಸೆ ಮತ್ತು ಪುನರ್ವಸತಿ ಚಿಕಿತ್ಸೆಗಾಗಿ ಸುಲಭ ಶಿಫಾರಸು ವ್ಯವಸ್ಥೆ.
ಈ ಸಮಗ್ರ ಮಾದರಿಯು ಕ್ರೀಡಾಪಟುವಿನ ಸಂಪೂರ್ಣ ಪ್ರಯಾಣದಲ್ಲಿ, ಅಂದರೆ ತಡೆಗಟ್ಟುವಿಕೆ ಮತ್ತು ತಪಾಸಣೆಯಿಂದ ಹಿಡಿದು ತುರ್ತು ಆರೈಕೆ ಮತ್ತು ಪುನರ್ವಸತಿಯವರೆಗೆ, ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ಸಂಪೂರ್ಣ ವೈದ್ಯಕೀಯ ಸೇವೆ ಲಭ್ಯವಿರುವಂತೆ ನೋಡಿಕೊಳ್ಳುತ್ತದೆ.
ಈ ಪಾಲುದಾರಿಕೆಯ ಕುರಿತು ಮಾತನಾಡಿದ ಹೊಸ್ಮಟ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಅನಿಶಾ ಚಾಂಡಿ ಎಕ್ಕಾರ್ಡ್ ಅವರು, “ಆಧುನಿಕ ಕ್ರೀಡಾ ಕ್ಷೇತ್ರಕ್ಕೆ ವ್ಯವಸ್ಥಿತ ವೈದ್ಯಕೀಯ ವ್ಯವಸ್ಥೆಯ ಅಗತ್ಯವಿದೆ. ಈ ವ್ಯವಸ್ಥೆಯು ಕೇವಲ ತುರ್ತು ಸ್ಪಂದನೆಯಷ್ಟೇ ಅಲ್ಲದೆ, ಗಾಯಗಳನ್ನು ತಡೆಗಟ್ಟುವುದು, ನಿರಂತರ ಮೇಲ್ವಿಚಾರಣೆ ಮತ್ತು ಚೇತರಿಕೆಯ ಪ್ರಕ್ರಿಯೆಗಳನ್ನು ಒಳಗೊಂಡಿರಬೇಕು. ಹೊಸ್ಮಟ್ ನಲ್ಲಿ ಕ್ರೀಡಾ ವೈದ್ಯಕೀಯ ಸೇವೆಯು ದಶಕಗಳ ಅವಧಿಯ ಶ್ರೇಷ್ಠ ಆರ್ಥೊಪೆಡಿಕ್, ಆಘಾತ ಚಿಕಿತ್ಸೆ ಮತ್ತು ಪುನರ್ವಸತಿ ಚಿಕಿತ್ಸೆಯ ಮೇಲೆ ನಿರ್ಮಾಣವಾಗಿದೆ. ಸೌತ್ ಯುನೈಟೆಡ್ ಫುಟ್‌ ಬಾಲ್ ಕ್ಲಬ್ (ಎಸ್.ಯು.ಎಫ್.ಸಿ) ಜೊತೆಗಿನ ನಮ್ಮ ಪಾಲುದಾರಿಕೆ ಮತ್ತು ಆನ್ ಸೈಟ್ ಸ್ಪೋರ್ಟ್ಸ್ ಮೆಡಿಕಲ್ ಸೆಂಟರ್ ಸ್ಥಾಪನೆಯು, ಕ್ರೀಡಾ ಕ್ಷೇತ್ರದಲ್ಲಿ ಆಸ್ಪತ್ರೆ ದರ್ಜೆಯ ವೈದ್ಯಕೀಯ ವ್ಯವಸ್ಥೆಯನ್ನು ಪರಿಚಯಿಸಿದೆ. ಈ ಕೇಂದ್ರವು ತುರ್ತು ಸ್ಪಂದನೆಯ ಸಮಯವನ್ನು ಕಡಿಮೆ ಮಾಡುತ್ತದೆ, ಗಾಯಗಳಿಂದ ಶೀಘ್ರವಾಗಿ ಚೇತರಿಸಿಕೊಳ್ಳಲು ಸಹಕರಿಸುತ್ತದೆ ಮತ್ತು ಕ್ರೀಡಾಪಟುವಿನ ವೃತ್ತಿಜೀವನ ದೀರ್ಘಕಾಲ ಮುಂದುವರಿಯಲು ಬೆಂಬಲ ನೀಡುತ್ತದೆ.
ಕೇಂದ್ರ ಬಜೆಟ್‌ ನಲ್ಲಿ ತುರ್ತು ಚಿಕಿತ್ಸೆಯ ವಿಸ್ತರಣೆ, ಅಲೈಡ್ ಹೆಲ್ತ್ ಸಾಮರ್ಥ್ಯ ಮತ್ತು ವಿಕೇಂದ್ರೀಕೃತ ವೈದ್ಯಕೀಯ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಿರುವುದು, ನಾವು ಅಳವಡಿಸಿಕೊಂಡಿರುವ ಈ ವೈದ್ಯಕೀಯ ಮಾದರಿಗೆ ಪೂರಕವಾಗಿದೆ. ನಾವು ಈ ಪಾಲುದಾರಿಕೆಯನ್ನು ಕ್ರೀಡಾ ಸಾಮರ್ಥ್ಯವನ್ನು ಹೆಚ್ಚಿಸುವ ಹಾಗೂ ಸರ್ಕಾರದ ನೀತಿಗಳಿಗೆ ಅನುಗುಣವಾದ ಕ್ರಮವಾಗಿ ನೋಡುತ್ತೇವೆ” ಎಂದು ಹೇಳಿದರು.
ಈ ಕುರಿತು ಮಾತನಾಡಿದ ಸೌತ್ ಯುನೈಟೆಡ್ ಫುಟ್‌ ಬಾಲ್ ಕ್ಲಬ್‌ ನ (ಎಸ್.ಯು.ಎಫ್.ಸಿ) ಸಿಇಓ ಮಹಮ್ಮದ್ ರಫೀಕ್ ಅವರು, “ಇಂದಿನ ಸ್ಪರ್ಧಾತ್ಮಕ ಕ್ರೀಡಾ ವ್ಯವಸ್ಥೆಯಲ್ಲಿ ಆಟಗಾರರ ಸುರಕ್ಷತೆ ಮತ್ತು ವೈದ್ಯಕೀಯ ಸಿದ್ಧತೆಯು ಬಹಳ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಕ್ರೀಡಾ ಗಾಯಗಳು, ಆರ್ಥೊಪೆಡಿಕ್ಸ್ ಮತ್ತು ಆಘಾತ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿರುವ ಹೊಸ್ಮಟ್ ಆಸ್ಪತ್ರೆ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿರುವುದು ನಮಗೆ ಮೈದಾನದ ಒಳಗೆ ಮತ್ತು ಹೊರಗೆ ಹೆಚ್ಚಿನ ವೈದ್ಯಕೀಯ ಬಲ ದೊರೆತಂತಾಗಿದೆ. ಆನ್ ಸೈಟ್ ಸ್ಪೋರ್ಟ್ಸ್ ಮೆಡಿಕಲ್ ಸೆಂಟರ್, ವೈದ್ಯಕೀಯ ನಾಯಕತ್ವ, ಸಜ್ಜುಗೊಂಡ ಆಂಬುಲೆನ್ಸ್ ಮತ್ತು ಮುನ್ನೆಚ್ಚರಿಕೆಯ ವೈದ್ಯಕೀಯ ತಪಾಸಣೆಗಳ ಮೂಲಕ ನಾವು ನಮ್ಮ ಕ್ರೀಡಾಪಟುಗಳ ಚಿಕಿತ್ಸಾ ವ್ಯವಸ್ಥೆಯನ್ನು ಜಾಗತಿಕ ಗುಣಮಟ್ಟಕ್ಕೆ ಏರಿಸುತ್ತಿದ್ದೇವೆ. ಮುಖ್ಯವಾಗಿ, ಈ ವೈದ್ಯಕೀಯ ಸೌಲಭ್ಯವು ಕೇವಲ ನಮ್ಮ ವೃತ್ತಿಪರ ತಂಡಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ನಮ್ಮ ಫುಟ್‌ ಬಾಲ್ ಅಕಾಡೆಮಿ, ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಎಸ್.ಯು.ಎಫ್.ಸಿ ಮೈದಾನದಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳಿಗೆ ಬೆಂಬಲ ನೀಡಲಿದೆ. ಅಂಬೆಗಾಲಿಡುವ ಮಕ್ಕಳಿಂದ ಹಿಡಿದು ತಳಮಟ್ಟದ ಆಟಗಾರರು, ಹವ್ಯಾಸಿಗಳು ಹಾಗೂ ವೃತ್ತಿಪರ ಆಟಗಾರರವರೆಗೆ ಎಲ್ಲರಿಗೂ ವೈದ್ಯಕೀಯ ವ್ಯವಸ್ಥೆ ಲಭ್ಯವಿರುತ್ತದೆ. ಇಡೀ ಫುಟ್‌ ಬಾಲ್ ಸಮುದಾಯಕ್ಕೆ ಇಂತಹ ವ್ಯವಸ್ಥಿತ ವೈದ್ಯಕೀಯ ಬೆಂಬಲವನ್ನು ನೀಡುತ್ತಿರುವ ಕೆಲವೇ ಕೆಲವು ಕ್ಲಬ್‌ ಗಳಲ್ಲಿ ಎಸ್.ಯು.ಎಫ್.ಸಿ ಕೂಡ ಒಂದಾಗಿದೆ. ತಕ್ಷಣದ ಪ್ರಥಮ ಚಿಕಿತ್ಸೆ, ಗಾಯಗಳ ನಿರ್ವಹಣೆ ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಲು ನಮ್ಮ ಮೈದಾನದಲ್ಲಿ ಫಿಸಿಯೋಥೆರಪಿಸ್ಟ್ ಮತ್ತು ತರಬೇತಿ ಪಡೆದ ಪುರುಷ ವೈದ್ಯಕೀಯ ಸಿಬ್ಬಂದಿ ಸದಾ ಲಭ್ಯವಿರುತ್ತಾರೆ” ಎಂದು ಹೇಳಿದರು.