- ಕರ್ನಾಟಕ ಮಾಹಿತಿ ಆಯೋಗ ಆದೇಶ
- ಮಾಹಿತಿ ನೀಡದಿದ್ದರೆ ದಂಡ, ಶಿಸ್ತುಕ್ರಮದ ಎಚ್ಚರಿಕೆ
ಬೆಂಗಳೂರು: ನಗರದ ಹೊರವಲಯದಲ್ಲಿ ಸಕಲ ಸೌಲಭ್ಯಗಳೊಂದಿಗೆ ಸ್ವತಂತ್ರ ನಿರ್ವಹಣೆ ಅಧಿಕಾರ ಹೊಂದಿರುವ ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರೀಯಲ್ ಟೌನ್‌ಶಿಪ್ ಅಥಾರಿಟಿ (ಎಲ್‌ಸಿಟಾ) ಇನ್ನುಮುಂದೆ ಸಾರ್ವಜನಿಕ ಪ್ರಾಧಿಕಾರ ವ್ಯಾಪ್ತಿಗೆ ಒಳಪಡುತ್ತದೆ ಎಂದು ಕರ್ನಾಟಕ ಮಾಹಿತಿ ಆಯೋಗ ಆದೇಶ ಹೊರಡಿಸಿದೆ.
ಎಲ್‌ಸಿಟಾ ಕೈಗೊಂಡಿದ್ದ ಕೆಲ ಕಾಮಗಾರಿಗಳಿಗೆ ಸಂಬಂಧಿಸಿ ಟೆಂಡರ್ ವಿವರಗಳನ್ನು ಅರ್ಜಿದಾರ ಎಂ.ಗಣೇಶ್‌ಕುಮಾರ್ ಕೋರಿದ್ದರು. ಇದನ್ನು ಎಲ್‌ಸಿಟಾ ಅಧಿಕಾರಿಗಳು ಮಾನ್ಯ ಮಾಡದೆ ಮಾಹಿತಿ ಒದಗಿಸಲು ನಿರಾಕರಿಸಿದ್ದರು. ಈ ನಡೆ ಪ್ರಶ್ನಿಸಿದ ಅರ್ಜಿದಾರರು ಆಯೋಗದ ಮೆಟ್ಟಿಲು ಏರಿದ್ದರು. ಕಳೆದ ವರ್ಷದ ಫೆಬ್ರವರಿಯಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಪರಾಮರ್ಶಿಸಿ ಡಿಸೆಂಬರ್‌ನಲ್ಲಿ ಪ್ರತಿವಾದಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿದ ಬಳಿಕ, ಆಯೋಗವು ಎಲ್‌ಸಿಟಾಅನ್ನು ಸಾರ್ವಜನಿಕ ಪ್ರಾಧಿಕಾರವೆಂದು ದೃಢಪಡಿಸಿದೆ.
ರಾಜ್ಯ ಸರ್ಕಾರದ ಕಿಯೋನಿಕ್ಸ್ ಸಂಸ್ಥೆಯು ಎಲೆಕ್ಟ್ರಾನಿಕ್ಸ್ ಸಿಟಿಯನ್ನು ಅಭಿವೃದ್ಧಿಪಡಿಸಿದೆ (1970ರಲ್ಲಿ). ಅಭಿವೃದ್ಧಿ ಬಳಿಕ 1997ರಲ್ಲಿ ಆ ಪ್ರದೇಶದ ನಿರ್ವಹಣೆಯನ್ನು ಎಲ್‌ಸಿಟಾಗೆ ವಹಿಸಿದೆ. 2013ರಲ್ಲಿ ಟೌನ್‌ಶಿಪ್ ಪ್ರಾಧಿಕಾರ ರಚಿಸಿ ನಾಗರಿಕ ಸೌಲಭ್ಯ ಒದಗಿಸುವ ನಿರ್ವಹಣೆಯ ಹೊಣೆ ವಹಿಸಿದೆ. 2021ರಲ್ಲಿ ತೆರಿಗೆ ಸಂಗ್ರಹಿಸುವ ಜವಾಬ್ದಾರಿಯನ್ನು ಎಲ್‌ಸಿಟಾಗೆ ನೀಡಲಾಗಿದೆ. ಹಾಗಾಗಿ ಟೌನ್‌ಶಿಪ್ ಪ್ರಾಧಿಕಾರವು ಶಾಸನಬದ್ಧ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಕಾರಣ ನಾಗರಿಕರಿಗೆ ಮಾಹಿತಿ ಒದಗಿಸುವುದು ಸಂಸ್ಥೆಯ ಹೊಣೆಗಾರಿಕೆ ಆಗಿದೆ ಎಂದು ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ವಿಚಾರಣಾ ಆದೇಶದಲ್ಲಿ ನಮೂದಿಸಿದ್ದಾರೆ.
ಮಾಹಿತಿ ಒದಗಿಸಲು ಫೆ.15ರ ಗಡುವು:
ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ವೇಳೆ ತಾನು ಸಾರ್ವಜನಿಕ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುಸುವುದಿಲ್ಲ. ಹಾಗಾಗಿ ಮಾಹಿತಿ ನೀಡಲಾಗದು ಎಂದು ಎಲ್‌ಸಿಟಾ ವಾದಿಸಿತ್ತು. ಈ ಸಮರ್ಥನೆಯನ್ನು ಒಪ್ಪದ ಆಯೋಗವು, ರಾಜ್ಯ ಸರ್ಕಾರದ ಕಾನೂನು ಹಾಗೂ ವಿವಿಧ ಅಧಿಸೂಚನೆ ಹೊರಡಿಸಿ ಎಲ್‌ಸಿಟಾ ಅಸ್ತಿತ್ವಕ್ಕೆ ಬಂದಿದೆ. ಜತೆಗೆ ಸರ್ಕಾರದಿಂದ ಆರ್ಥಿಕ ನೆರವನ್ನೂ ಪಡೆಯಲಾಗುತ್ತಿದೆ. ತೆರಿಗೆ ಸಂಗ್ರಹಿಸುವ ಅಧಿಕಾರವನ್ನು ವಿಶೇಷ ಅಧಿಸೂಚನೆ ಹೊರಡಿಸಿ ಅವಕಾಶ ಮಾಡಿಕೊಡಲಾಗಿದೆ. ಹಾಗಾಗಿ ಸಾರ್ವಜನಿಕ ಪ್ರಾಧಿಕಾರ ಅಲ್ಲವೆಂದು ನುಣಚಿಕೊಳ್ಳುವಂತಿಲ್ಲ ಎಂದು ಎಲ್‌ಸಿಟಾ ಪರ ವಕೀಲರಿಗೆ ಮನವರಿಕೆ ಮಾಡಿಕೊಡಲಾಗಿದೆ. ಜತೆಗೆ ಅರ್ಜಿದಾರರು ಕೋರಿರುವ ಮಾಹಿತಿಯನ್ನು ಬೇಗನೆ ಒದಗಿಸಿ ಅದರ ದೃಡೀಕರಿಸಿದ ಮಾಹಿತಿಯನ್ನು ಫೆ.15ರೊಳಗೆ ಸಲ್ಲಿಸಬೇಕು. ಇಲ್ಲದಿದ್ದಲ್ಲಿ ಶಿಸ್ತುಕ್ರಮ ಕೈಗೊಳ್ಳುವ ಜತೆಗೆ ದಂಡ ಹಾಕುವುದಾಗಿ ಎಚ್ಚರಿಕೆ ನೀಡಿದೆ.