garbage-dumped 
ಬೆಂಗಳೂರು

ಕೆರೆಗೆ ಸುರಿದಿರುವ ಕಸ ತೆರವಿಗೆ ಸೂಚನೆ

ಆರ್.ತುಳಸಿಕುಮಾರ್

ಪ್ರಮುಖ ಮುಖ್ಯಾಂಶಗಳು

  • ಪಾದಚಾರಿ ಮಾರ್ಗಗಳನ್ನು ಸುಸ್ಥಿತಿಯಲ್ಲಿಡಲು ನಿರ್ದೇಶನ
  • ಪಶ್ಚಿಮ ಪಾಲಿಕೆ ಆಯುಕ್ತರಿಂದ ವಿವಿಧೆಡೆ ಸ್ಥಳ ಪರಿಶೀಲನೆ
ಬೆಂಗಳೂರು: ಇಟ್ಟಮಡು ಕೆರೆಗೆ (ಚಿಕ್ಕಲಸಂದ್ರ ಕೆರೆ) ಸುರಿದಿರುವ ಕಸವನ್ನು ಕೂಡಲೇ ತೆರವುಗೊಳಿಸುವಂತೆ ಪಶ್ಚಿಮ ನಗರ ಪಾಲಿಕೆ ಆಯುಕ್ತ ಡಾ. ಕೆ.ವಿ.ರಾಜೇಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಾರ್ವಜನಿಕ ದೂರು ಹಿನ್ನೆಲೆಯಲ್ಲಿ ಶನಿವಾರ ಕೆರೆ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳಪರಿಶೀಲನೆ ನಡೆಸಿದ ಆಯುಕ್ತರು, ಸಂಗ್ರಹವಾಗಿರುವ ಕಸವನ್ನು ಕೂಡಲೇ ತೆರವುಗೊಳಿಸಬೇಕು. ಇಂತಹ ಕೃತ್ಯವನ್ನು ಎಸೆಗಿದವರನ್ನು ಪತ್ತೆ ಹಚ್ಚಿ ಶಿಸ್ತುಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಕೆರೆಗೆ ತ್ಯಾಜ್ಯ ತಂದು ಸುರಿಯುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶಿಸಿದರು.
ಇದೇ ವೇಳೆ ಕೆರೆ ವಿಸ್ತೀರ್ಣವನ್ನು ಸರ್ವೆ ಮಾಡುವಂತೆ ಸರ್ವೇಯರ್‌ಗಳಿಗೆ ಸೂಚಿಸಿದ ಆಯುಕ್ತರು, ಕೆರೆ ಸ್ವಚ್ಛಗೊಳಿಸುವ ಜತೆಗೆ ಅಭಿವೃದ್ಧಿಪಡಿಸಿ ಕೆರೆಗೆ ಸುತ್ತ ಬೇಲಿ ಹಾಕಿ, ಬೆಳಕಿನ ವ್ಯವಸ್ಥೆ ಮಾಡಿ, ದಿನದ 24 ಗಂಟೆ ಮಾರ್ಷಲ್‌ಗಳು ನಿಗಾ ವಹಿಸುವಂತೆ, ಸಿಸಿಟಿವಿ ಕೂಡ ಅಳವಡಿಸಿ ನಿಗಾ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಪಾದಚಾರಿ ಮಾರ್ಗ ಪರಿಶೀಲನೆ:

ಕೆರೆ ಪರಿಶೀಲನೆ ಬಳಿಕ ಆಯುಕ್ತರು ಯಡಿಯೂರು ಹಾಗೂ ಬಸವನಗುಡಿ ವಾರ್ಡ್‌ಗಳಲ್ಲಿ ಪಾದಚಾರಿ ಮಾರ್ಗಗಳನ್ನು ಪರಿಶೀಲಿಸಿದರು. ಕೆಲ ಫುಟ್‌ಪಾತ್‌ಗಳು ರಸ್ತೆ ಮಟ್ಟಕ್ಕಿಂತ ಹೆಚ್ಚು ಎತ್ತರವಾಗಿದ್ದು, ಮಕ್ಕಳು, ವೃದ್ಧರು ಹತ್ತಲು/ಇಳಿಯಲು ಕಷ್ಟವಾಗುವಂತಿವೆ. ಅಂತಹ ಸ್ಥಳಗಳಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಿ ಅಲ್ಲಿ ಪಾದಚಾರಿಗಳಿಗೆ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ಒಂದು ತಿಂಗಳ ಅವಧಿಯಲ್ಲಿ ಪ್ರತಿ ವಾರ್ಡ್‌ನಲ್ಲಿ ತಲಾ 10 ಕಿ.ಮೀ. ಉದ್ದದ ಫುಟ್‌ಪಾತ್ ಅಭಿವೃದ್ಧಿಪಡಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸ್ಥಳ ಪರಿಶೀಲನೆ ವೇಳೆ ಮುಖ್ಯ ಅಭಿಯಂತರ ಬಸವರಾಜ ಕಬಾಡೆ, ವಾಕಲೂರು ಎನ್‌ಜಿಒ ಸ್ಥಾಪಕ ಅರುಣ್ ಪೈ ಮತ್ತು ಇತರ ಅಧಿಕಾರಿಗಳು ಹಾಜರಿದ್ದರು.


ಮೋದಿ ಆಸ್ಪತ್ರೆಗೆ ಭೇಟಿ:

ಬಸವನಗುಡಿ ವಾರ್ಡ್‌ನಲ್ಲಿ ಮೋದಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಆಸ್ಪತ್ರೆಯಲ್ಲಿ ಲಭ್ಯರಿರುವ ವೈದ್ಯರು, ರೋಗಿಗಳ ಸಂಖ್ಯೆ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿ ಮಾಹಿತಿ ಪಡೆದು ಆರೋಗ್ಯ ಅಧಿಕಾರಿಗಳಿಗೆ ಕೆಲ ಸೂಚನೆಗಳನ್ನು ನೀಡಿದರು.
ಬಿಜಿಎಸ್ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ:
ಗೋವಿಂದರಾಜನಗರದ ಬಿಜಿಎಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಆಯುಕ್ತರು ಅನಿರೀಕ್ಷಿತ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಆಸ್ಪತ್ರೆಯಲ್ಲಿನ ಸೌಲಭ್ಯ ಮತ್ತು ಸೇವೆಗಳ ಬಗ್ಗೆ ಮಾಹಿತಿ ಪಡೆದರು. ಹೊರರೋಗಿ ಮತ್ತು ಒಳರೋಗಿ ವಿಭಾಗಗಳಿಗೆ ಭೇಟಿ ನೀಡಿ, ರೋಗಿಗಳೊಂದಿಗೆ ಸಂವಾದ ನಡೆಸಿದರು.