ಬೆಂಗಳೂರು : ರಾಜ್ಯದ ರೈತರು ಭೀಕರ ಬರಗಾಲಕ್ಕೆ ತುತ್ತಾಗಿ ಪರಿತಪಿಸುತ್ತಿರುವ ಹೊತ್ತಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಸ್‌ಐಆರ್ ವಿಷಯದಲ್ಲಿ ರಾಜಕೀಯ ಮಾಡಲು ದಿಲ್ಲಿಗೆ ಹೋಗಿ ಧರಣಿ ಕೂತಿದ್ದಾರೆ
ಎಂದು ಆಕ್ಷೇಪಿಸಿರುವ ವಿಪಕ್ಷ ನಾಯಕ ಆರ್.ಅಶೋಕ್, ದಿಲ್ಲಿ ಬಿಟ್ಟು ಹಳ್ಳಿಗೆ ಬನ್ನಿ ಶಿವ ಎಂದು ಕಾಲೆಳೆದಿದ್ದಾರೆ.
ಮಳೆ, ಬೆಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ರೈತರಿಗೆ ನಯಾಪೈಸೆ ಪರಿಹಾರ ನೀಡದೆ ಕಾಲಹರಣ ಮಾಡಲಾಗುತ್ತಿದೆ. ರೈತರ ಮಧ್ಯೆ ಇದ್ದು ಅವರ ಹಿತ ರಕ್ಷಿಸದಿದ್ದರೆ ನಿಮ್ಮನ್ನು ಅನ್ನದಾತರು ಕ್ಷಮಿಸುವುದಿಲ್ಲ ಎಂದು ಕಿಡಿ ಕಾರಿದ್ದಾರೆ.
ಹೈಕಮಾಂಡ್ ಕೈಗೊಂಬೆಯಾಗಿ ದಿಲ್ಲಿಗೆ ಹೋಗಿ ಧರಣಿ ಕೂರುವ ಬದಲು ರಾಜ್ಯದ ರೈತರ ಅಳಲಿಗೆ ಸ್ಪಂದಿಸುವ ಔದಾರ್ಯ ತೋರಬೇಕು. ದುಡಿವ ಕೈಗಳಿಗೆ ಕೆಲಸ ನೀಡಿ ಕೃಷಿಕರ, ಕೂಲಿಕಾರರ ಗುಳೆ ತಪ್ಪಿಸುವಂತೆ ಆಗ್ರಹಿಸಿದರು.
ರಾಜ್ಯದ ಖಜಾನೆ ಖಾಲಿ ಆಗಿದ್ದರೂ, ಆರ್ಥಿಕ ಇಲಾಖೆ ಹಣಕಾಸು ಸ್ಥಿತಿ ಬಹಿರಂಗಪಡಿಸಿದ್ದರೂ ಸಿಎಂ ಹೋದಲ್ಲಿ - ಬಂದಲ್ಲಿ ಆಶ್ವಾಸನೆಗಳ ಮಳೆ ಸುರಿಸುವ ಸಿಎಂ ಉತ್ತಮ ಆಡಳಿತ ನೀಡುವಲ್ಲಿ ವಿಲರಾಗಿದ್ದಾರೆ ಎಂದು ಆರ್.ಅಶೋಕ್ ಟೀಕಿಸಿದ್ದಾರೆ.
ಕಾವೇರಿ ನೀರು ತಮಿಳುನಾಡಿಗೆ ಹರಿದುಹೋಗುತ್ತಿದೆ, ರೈತರು, ಕೃಷಿ ಕೂಲಿಕಾರರು ಊರು ಬಿಟ್ಟು ವಲಸೆ ಹೋಗುತ್ತಿದ್ದಾರೆ, ಜಾನುವಾರುಗಳನ್ನು ಸಿಕ್ಕ ಬೆಲೆಗೆ ಮಾರಲಾಗುತ್ತಿದೆ. ಕುಡಿಯುವ ನೀರಿನ ಹಾಹಾಕಾರ ಜೋರಾಗಿದೆ.
ಇಷ್ಟೆಲ್ಲ ಜವ್ಲಂತ ಸಮಸ್ಯೆಗಳಿದ್ದರೂ ಕಾಂಗ್ರೆಸ್ ನಾಯಕರು ರಾಜಕೀಯ ಮಾಡಲು, ಹೈಕಮಾಂಡ್‌ನ ಋಣ ತೀರಿಸಲು ದೆಹಲಿಗೆ ಓಡಿ ಹೋಗಿದ್ದಾರೆ. ನಮಗೀಗ ಬೇಕಿರುವುದು ಬೇಕಾಗಿ - ಹಳ್ಳಿಗಳು ಹೀಗಾಗಿ ಹಳ್ಳಿಗಳಿಗೆ ಹೋಗಿ ರೈತರ ಸಂಕಷ್ಟ ಆಲಿಸಿ, ಅವರಿಗೆ ಸಾಂತ್ವನ ಹೇಳಿ ಎಂದಿದ್ದಾರೆ.
ಇಂತಹ ಸಮಯದಲ್ಲೂ ಜವಾಬ್ದಾರಿ ಮರೆತು ವೋಟ್ ಚೋರಿ ಎಂದು ಕೂಗುವುದನ್ನು ನೋಡಿದರೆ ಇದು ರೈತರ ಬೆನ್ನಿಗೆ ಚೂರಿ ಹಾಕಿದ ಸರ್ಕಾರ ಎಂಬುದು ಸಾಬೀತಾಗಿದೆ ಎಂದು ಟೀಕಿಸಿದ್ದಾರೆ.