north-city-corporation 
ಬೆಂಗಳೂರು

ಉತ್ತರ ನಗರ ಪಾಲಿಕೆಯ 50ನೇ 'ಫೋನ್ ಇನ್' ನಾಳೆ

ಪ್ರಮುಖ ಮುಖ್ಯಾಂಶಗಳು

  • ಈವರೆಗೆ 2,962 ಅಹವಾಲು ಆಲಿಸಿರುವ ಆಯುಕ್ತರು
  • ಜನರ ದೂರು ನಿವಾರಣೆಗೆ ಮೊದಲ ಆದ್ಯತೆ ನೀಡಿರುವ ಕಾರ್ಪೋರೇಷನ್
  • ಸಹಾಯ ಪೋರ್ಟಲ್‌ನಲ್ಲಿ 73,579 ದೂರುಗಳ ಸ್ವೀಕಾರ
ಬೆಂಗಳೂರು: ಸಾರ್ವಜನಿಕರ ಅಹವಾಲುಗಳಿಗೆ ತ್ವರಿತವಾಗಿ ಸ್ಪಂದಿಸಿ ಕಾಲಮಿತಿಯೊಳಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪಂಚ ನಗರ ಪಾಲಿಕೆಗಳ ಪೈಕಿ ಉತ್ತರ ಕಾರ್ಪೋರೇಷನ್ ಮುಂಚೂಣಿಯಲ್ಲಿದೆ. ಉತ್ತರ ಪಾಲಿಕೆಯು ಹೊಸದಾಗಿ ಅಸ್ತಿತ್ವಕ್ಕೆ ಬಂದ ಮೊದಲ ತಿಂಗಳಿನಲ್ಲಿಯೇ ನಾಗರಿಕರ ದೂರು-ಸಲಹೆ ಆಲಿಸಲು ಆರಂಭಿಸಲಾದ ಹೊಸ ವ್ಯವಸ್ಥೆ ಜನಮನ ತಲುಪಿದೆ.
ಪ್ರತಿ ಶುಕ್ರವಾರ ಬೆ.7ರಿಂದ ಎರಡು ತಾಸು ನಾಗರಿಕರು ಅಹವಾಲು ಆಲಿಸಲು ಫೋನ್ ಇನ್ ನಡೆಸಲಾಗುತ್ತಿದೆ. ಕರೆಗಳನ್ನು ಸ್ವತ: ಆಯುಕ್ತರೇ ಖುದ್ದು ಸ್ವೀಕರಿಸಿ ದೂರಿನ ವಿವರಗಳನ್ನು ಬರೆದುಕೊಂಡು ಸಂಬಂಧಿಸಿದ ವಿಭಾಗಕ್ಕೆ ರವಾನಿಸಿ ನಿಗದಿತ ಅವಧಿಯಲ್ಲಿ ಪರಿಹಾರ ಒದಗಿಸುವ ವ್ಯವಸ್ಥೆ ಕಲ್ಪಿಸಿದ್ದಾರೆ. ವಿಶೇಷವೆಂದರೆ ಇಂತಹ ಅಹವಾಲುಗಳ ವಿಲೇವಾರಿಗೆ ಒಬ್ಬ ಅಧಿಕಾರಿಗೆ ಹೊಣೆ ನೀಡದೆ ಪಾಲಿಕೆಯ ಎಲ್ಲ 13 ವಿಭಾಗಗಳ ಮುಖ್ಯಸ್ಥರು ತಂಡವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ನಾಗರಿಕರಿಗೆ ಪರಿಹಾರದ ಸೌಲಭ್ಯ ಸಿಗುವಂತಾಗಿದೆ. ಇಂತಹ ಜನಸ್ನೇಹಿ ವೇದಿಕೆ ಕಲ್ಪಿಸಿರುವ ಫೋನ್ ಇನ್ ಶುಕ್ರವಾರ (ಸೆ.4) ತನ್ನ 50ನೇ ಆವೃತ್ತಿಯನ್ನು ಪೂರೈಸಲಿದೆ.


ಶೇ.90 ದೂರುಗಳ ಪರಿಹಾರ:

2025ರ ಸೆಪ್ಟೆಂಬರ್ 2ನೇ ವಾರದಲ್ಲಿ ಆರಂಭವಾದ ಫೋನ್ ಇನ್ ಕಾರ್ಯಕ್ರಮ ಈವರೆಗೆ ಒಟ್ಟು 2,962 ಅಹವಾಲನ್ನು ನಾಗರಿಕರು ಸಲ್ಲಿಸಿದ್ದಾರೆ. ಈ ಪೈಕಿ ಶೇ.90ರಷ್ಟು ಪರಿಹಾರ ಕಂಡಿದ್ದು, 297 ಮಾತ್ರ ಬಾಕಿ ಇವೆ. ಇವುಗಳಲ್ಲಿ ಅಂತರ್ ಇಲಾಖೆ ಹಾಗೂ ಹೆಚ್ಚಿನ ಅನುದಾನ ಕೋರುವ ಅಹವಾಲು ಆಗಿರುವುದರಿಂದ ಪರಿಹರಿಸಲು ಸಾಧ್ಯವಾಗಿಲ್ಲ. ಫೋನ್ ಇನ್ ಮುಗಿದ ಬಳಿಕ ಒಂದು ಗಂಟೆ ಅವಧಿಯಲ್ಲಿ ಅಹವಾಲುಗಳನ್ನು ವಿಭಾಗವಾರು ವಿಂಗಡಿಸಿ ಅವುಗಳನ್ನು ಆಯಾ ಸೆಕ್ಷನ್‌ಗಳ ಮುಖ್ಯಸ್ಥರಿಗೆ ರವಾನಿಸಲಾಗುತ್ತದೆ. ಇವುಗಳನ್ನು ನಿತ್ಯವೂ ಉಪ ಆಯುಕ್ತರು ಮೇಲ್ವಿಚಾರಣೆ ನಡೆಸಿ ಪರಿಹರಿಸುವ ಮಾಹಿತಿಯನ್ನು ಖಾತರಿಪಡಿಸಿಕೊಂಡು ದೂರುದಾರರಿಗೆ ಎಸ್‌ಎಂಎಸ್ ಸಂದೇಶ ರವಾನಿಸುವ ವ್ಯವಸ್ಥೆ ಅಳವಡಿಸಿಕೊಂಡಿರುವುದು ಸಫಲತೆಗೆ ಕಾರಣ ಎನ್ನುತ್ತಾರೆ ಅಧಿಕಾರಿ ವರ್ಗ.


ಸಹಾಯ ಪೋರ್ಟಲ್‌ನಲ್ಲೂ ದೂರು ವಿಲೇ:

ಉತ್ತರ ಪಾಲಿಕೆಗೆ ಸಂಬಂಧಿಸಿ ಫೋನ್ ಇನ್ ಹೊರತುಪಡಿಸಿ ಸಹಾಯ 2.0 ತಂತ್ರಾಂಶದ ಪೋರ್ಟಲ್ ಮೂಲಕವೂ ನಾಗರಿಕರು ದೂರು ದಾಖಲಿಸಲು ಅವಕಾಶ ಇದೆ. ಕಾರ್ಪೋರೇಷನ್ ಅಸ್ತಿತ್ವಕ್ಕೆ ಬರುವ ಮುನ್ನ 2,962 ದೂರುಗಳು ವಿಲೇವಾರಿಗೆ ಬಾಕಿ ಇತ್ತು. ಆನಂತರ ಇಲ್ಲಿಯವರೆಗೆ 73,579 ದೂರುಗಳನ್ನು ಸ್ವೀಕರಿಸಿದ್ದು, 1135 ಹೊರತುಪಡಿಸಿ ಇನ್ನುಳಿದವುಗಳನ್ನು ಇತ್ಯರ್ಥಪಡಿಸಲಾಗಿದೆ. ಇದು ಇತರ ಪಾಲಿಕೆಗಳಿಗೆ ಹೋಲಿಸಿದರೆ ಉತ್ತರ ಪಾಲಿಕೆ ಹೆಚ್ಚಿನ ಫಲಿತಾಂಶ ದಾಖಲಿಸಿದೆ.
ಫೋನ್ ಇನ್ ಬಗ್ಗೆ ಮಾಹಿತಿ ಪಡೆದಿರುವ ಸಚಿವ ಕೃಷ್ಣಬೈರೇಗೌಡ ಅವರು ಸಾಮಾಜಿಕ ಜಾಲತಾಣವಾದ ಇ-ಮೇಲ್, ವಾಟ್ಸ್‌ಆ್ಯಪ್, ಫೇಸ್‌ಬುಕ್, ಟ್ವಿಟರ್ ಇತ್ಯಾದಿ ವೇದಿಕೆಗಳಲ್ಲಿ ದಾಖಲಾಗುವ ದೂರುಗಳನ್ನು ಸಹಾಯ ಪೋರ್ಟ್‌ಲ್‌ಗೆ ವಿಲೀನಗೊಳಿಸಿ ದೂರು ಪರಿಹಾರ ಇತ್ಯರ್ಥಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ನಾಗರಿಕರು ತಮ್ಮ ಯಾವುದೇ ದೂರು, ಸಲಹೆ ಇದ್ದಲ್ಲಿ ಅವುಗಳನ್ನು ಮನೆಯಿಂದಲೇ ಫೋನ್ ಇನ್ ಅಥವಾ ಸಹಾಯ ಪೋರ್ಟಲ್‌ನಲ್ಲಿ ದಾಖಲಿಸಿದರೆ ಬೇಗನೆ ಪರಿಹಾರ ಒದಗಿಸಲಾಗುತ್ತದೆ ಎಂದು ಉತ್ತರ ಪಾಲಿಕೆ ಆಯುಕ್ತರು ಪ್ರತಿಕ್ರಿಯಿಸಿದ್ದಾರೆ.

ಫೋನ್ ಇನ್‌ಗೆ ಹೆಚ್ಚಾಗಿ ಬರುವ ದೂರು ವಿಧ:

ರಸ್ತೆ ನಿರ್ವಹಣೆ, ಬೀದಿ ದೀಪ, ಚರಂಡಿ, ಕಸ ವಿಲೇವಾರಿ, ನಾಯಿಗಳ ಹಾವಳಿ, ಇ-ಖಾತಾ ಸೇವೆ, ಬಿದ್ದ ಮರಗಳ ತೆರವುಗೊಳಿಸಲು, ಒಎಫ್​ಸಿ ಕೇಬಲ್​​ನಿಂದ ಸಂಚಾರಕ್ಕೆ ಅಡ್ಡಿ, ಪಾರ್ಕ್‌ಗಳ ನಿರ್ವಹಣೆ, ಫ್ಲೆಕ್ಸ್ ಹಾವಳಿ.

ಅಹವಾಲು ಸ್ವೀಕಾರ, ವಿಲೇ ವಿವರ:

* ಸ್ವೀಕಾರ - 2,962
* ಇತ್ಯರ್ಥ - 2,665
* ಬಾಕಿ - 297

ಅಂತರ್ ಇಲಾಖೆ ಸಮನ್ವಯಕ್ಕೆ ಒಪ್ಪಿಗೆ:

ಫೋನ್ ಇನ್ ವೇಳೆ ಉತ್ತರ ಪಾಲಿಕೆಗೆ ಸಂಬಂಧಿಸಿದ ದೂರು ನಿವಾರಣೆಗೆ ವೇದಿಕೆ ಕಲ್ಪಿಸಿದೆ. ಇದರ ಹೊರತಾಗಿಯೂ ಜನರು ಅನ್ಯ ಇಲಾಖೆಗೆ ಸೇರಿದ ದೂರುಗಳನ್ನು ದಾಖಲಿಸುವುದುಂಟು. ಸದ್ಯ ಇಂತಹ ದೂರುಗಳನ್ನು ಆಯಾ ಇಲಾಖೆಗೆ ಪ್ರತ್ಯೇಕವಾಗಿ ಕಳುಹಿಸಿಕೊಡಲಾಗುತ್ತಿದೆ. ಸಹಾಯ ಪೋರ್ಟಲ್ ಮೂಲಕ ದೂರು ವರ್ಗಾಯಿಸಲು ಅವಕಾಶ ಇಲ್ಲದಿರುವುದನ್ನು ಪಾಲಿಕೆಯು ಸರ್ಕಾರದ ಗಮನಕ್ಕೆ ತಂದಿದೆ. ಇದನ್ನಾಧರಿಸಿ ಶೀಘ್ರವೇ ಅಂತರ್ ಇಲಾಖೆ ಸಮನ್ವಯ ಸಾಧಿಸುವಂತಹ ತಂತ್ರಾಂಶ ಅಭಿವೃದ್ಧಿಪಡಿಸಲು ಜಿಬಿಎ ಮುಂದಾಗಿದೆ.
"

ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಕಿವಿಯಾಗಲು ಫೋನ್ ಇನ್ ಆರಂಭಿಸಲಾಯಿತು. ತ್ವರಿತ ಪರಿಹಾರ ಒದಗಿಸುವ ಜತೆಗೆ ಈ ಕಾರ್ಯಕ್ರಮದಿಂದ ಜನರು ದೈನಂದಿನ ದಿನಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿಯಲು ಸಾಧ್ಯವಾಗಿದೆ. ಜತೆಗೆ ಅಧಿಕಾರಿ, ಸಿಬ್ಬಂದಿಗಳ ಕೆಲಸದ ಬಗ್ಗೆ ರಿಯಾಲಿಟಿ ಚೆಕ್ ನಡೆಸಲು ಸಾಧ್ಯವಾಗಿದೆ. ನಮ್ಮ ಅಧಿಕಾರಿ ವರ್ಗದ ಸಾಮೂಹಿಕ ಕಾರ್ಯದಿಂದ ಜನರಿಗೆ ಬೇಗನೆ ಪರಿಹಾರ ನೀಡಲಾಗುತ್ತಿದೆ.

- ಪಿ.ಸುನೀಲ್‌ಕುಮಾರ್, ಉತ್ತರ ಪಾಲಿಕೆ ಆಯುಕ್ತ